ಆನೆ ಬಂತೊಂದಾನೆ ಆನೆ ಬಂತೇನೆ
ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ
ಭಾರಿ ಕಂಭಗಳಂತೆ ಅದರ ಕೈಕಾಲು
ಸೊಂಡಿಲೆಂದರೆ ತೂಗಿ ತೊನೆವ ಬಿಳಲು
ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು
ಏನೊ ಹೇಳಲು ಬಯಸುವಂಥ ಕಿರುಗಣ್ಣು
ನೋಡಿದರೆ ಎಲ್ಲರೂ ಹೊರಬೀದಿಗಿಳಿದು
ಎಂದಿನಿಂದಲೊ ನಾವು ನೋಡಬಯಸಿದುದು
ಮೋಡದಲಿ ತೇಲುತಿಹ ಚಿನ್ನದಂಬಾರಿ
ಅದರೊಳಗೆ ರತ್ನದಂತಹ ರಾಜಕುವರಿ
ಬಂತು ಬಾಗಲಿಗೆ ಬಂತು ಬೀದಿಯ ಕೊನೆಗೆ
ಮಾಯವಾಯತು ಕಣ್ಣ ತೆರಯುವುದರೊಳಗೆ
ಏನ ತಂದಿತದು ಏನನೊಯ್ದಿತೊ ಕಾಣೆ
ಒಬ್ಬೊಬ್ಬರಿಗು ಅವರ ಪ್ರತ್ಯೇಕ ಆನೆ!
ಹೊರಲಾರದ ಕನಸುಗಳೊ ಬಡವಾದ ನೆನಸುಗಳೊ
ಅಥವ ಕೇವಲ ಗುರುತು ಬಿಟ್ಟ ಗೊರಸುಗಳೊ!
*****