ಹಣ್ಣು ತಿನ್ನುವುದಿರಲಿ ನಿನ್ನ ಸ್ನೇಹಕ್ಕೆ ಸೋತು
ಮಣ್ಣು ತಿಂದೇನು ಅಂದಿದ್ದೆ, ಅಲ್ಲವ ಹೇಳು?
ಅಂದಿದ್ದೆ ಹೌದು ಒಂದಾನೊಂದು ಕಾಲದಲಿ
ಬುದ್ದಿಯಿದ್ದದ್ದೆಲ್ಲ ಆಗಿನ್ನು ಬಾಲದಲಿ
ಕೈಯಾರೆ ಬೆಳೆಸಿದ್ದ ಚಂದ್ರ ಹಲಸಿನ ಗಿಡ
ಬುಡಕ್ಕೆ ಗೆದ್ದಲು ಹಿಡಿದು
ಒಲೆಗೆ ಬಿದ್ದಿದೆ ಈಗ ಇದ್ದಿಲಾಗುತ್ತ,
ಹೂಬಿಟ್ಟ ಸ್ನೇಹ ಛೂಬಿಟ್ಟ ನಾಯಾಗಿ
ಹಾರಿ ಬರುತಿದೆ ಮೇಲೆ ಜೋರು ಬೊಗಳುತ್ತ
ಸತ್ತ ಗಾಯದ ಕಲೆಯ ಸಂತೈಕೆ ಅಳಿಸೀತ?
ಎಷ್ಟು ಆರೈಕೆ ಮಾಡಿದರೇನು ಎದೆಯಲ್ಲಿ
ಸಾಕಿ ದೊಡ್ಡ ತುಪಾಕಿ?
ಎಷ್ಟು ಕುದಿಸಿದರೇನು ಸಾರನ್ನು
ಎಸರಿಗೆ ಮೊದಲು ಉಪ್ಪು ಹಾಕಿ?
ಹಾಲು ಬತ್ತಿದ ಮೇಲೂ ಕೆಚ್ಚಲನ್ನ ಹಿಂಡಿ
ನೆತ್ತರನು ತೆಗೆಯುವುದು ಸಾಕು.
ವ್ಯಾಘ್ರನಖ ಹಾಕಿ ತೋಳಲ್ಲಿ ತೋಳವ ಸಾಕಿ
ಅಪ್ಪಿಕೊಳ್ಳುವುದಂತೆ ಈಗ!
ಅದೇನು ಒಪ್ಪಂದಕ್ಕೆ ಸಹಿ ಹಾಕಿದೆವಂತ
ಒದೆಸಿಕೊಂಡು ನಗುತ್ತಿರಬೇಕ?
*****