ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ
ನೋಡೀಕಿ ಸಣ್ಣಾಕಿ ನಕ್ಕಾಳಾ
ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ
ಚನ್ನಂಗಿ ಹೂವಾಗಿ ಹೊಕ್ಕಾಳಾ ||೧||
ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ
ಈ ಹುಡಿಗಿ ಬೆಣ್ಯಾಗಿ ಜಿಗದಾಳಾ
ಕೊಕ್ಹೊಕ್ಕ ಕ್ಯಾಕೀಯ ಯಕ್ಕೀಯ ಕೊಕ್ಕೀಯ
ಹಾಕ್ಯಾಳ ಕೌವ್ವಂತ ಕೂಗ್ಯಾಳಾ ||೨||
ಎದಿತುಂಬ ತತ್ರಾಣಿ ಉತ್ತಮರ ಉತ್ರಾಣಿ
ಚಂದುಳ್ಳಿ ಬೋಗೂಣಿ ಈ ಹೆಣ್ಣಾ
ಹೊಸಗಿಣ್ಣ ವಡಿಬಣ್ಣ ಅವಲಕ್ಕ ಬವಲಕ್ಕ
ಚವಲಕ್ಕ ಡವಲಕ್ಕ ಈ ಕಣ್ಣಾ ||೩||
ಕೊರಳಾಗ ಕಾಳಿಂಗಿ ಹೆಳಲಸಿಂಬಿಯ ಸಂಗಿ
ನಾರಂಗಿ ಬೋರಂಗಿ ಕುಕ್ಕ್ಯಾಳಾ
ಹಕ್ಕಿ ಇಕ್ಕುಳ ಮೂಗು ಢಿಕ್ಕಿ ಎದಿಗಳ ಕೂಗು
ಢಿಕ್ಕಾಗಿ ಢಿಕಢಿಕ್ಕ ಹಾದಾಳಾ ||೪||
ಎಣ್ಯಾನ ಗಾರ್‍ಈಗಿ ಗಿರ್ರೆಂದು ಎದ್ದಾಂಗ
ಕಣ್ಣಾನ ಗಾಲೀಯ ತಿರುವ್ಯಾಳಾ
ಹೆಳಲು ನೀರಲ ತೋಳು ಟೊಂಕ ಬೂರಲ ಹೋಳು
ನೀಹೇಳು ಹೆಸರೇನು ಹೇಳ್ಯಾಳಾ ||೫||
*****