ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ
ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ||
ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ
ಜೋರ್‍ಜೋರು ಚಪ್ಪಲ್ಲು ಮಂಗಮಾಯಾ
ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು
ಚಂದುಳ್ಳ ನನಭಕುತಿ ಚೂರುಚಾರಾ ||೧||
ಸಾಮೇರ ಗುರುಪಾದ ಗ್ಹುಕ್ಕೆಂದು ನಕ್ಕೀತ
ಕಿಸ್ಸಂತ ಕಿಸಮಂಗ ಆದೆನಲ್ಲ
ಮೂಗ್ನ್ಯಾಗ ಮೆಣಸಿಂಡಿ ಬಾಯಾಗ ಹಿಡಿಸುಂಠಿ
ಕಣ್ಣಾಗ ಖಾರ್ಪೂಡಿ ಬಿದ್ದಿತಲ್ಲ ||೨||
ತೇರ್‍ಮ್ಯಾಲೆ ತೇರಾತ ಜೋರ್‍ಮ್ಯಾಲೆ ಜೋರಾತ
ಕಾರ್‍ಮ್ಯಾಲೆ ಕಾರಾತ ಪೊಂವ್ವ ಪೊಂವ್ವ
ಯಾತಕ್ಕ ಬಂದಿದ್ದೆ ಯಾತಕ್ಕ ತಂಗಿದ್ದೆ
ಯಾತಕ್ಕ ಬೊಗಳಾಟ ಬೊವ್ವ ಬೊವ್ವ ||೩||
ಭಕುತೀಗಿ ಬೋಗೂಣಿ ಮುಕುತೀಗಿ ಹಂಡೇವು
ಯುಕುತೀಗಿ ಸರಸೋತಿ ಬಸರಾದಳ
ಪಡಿಚಿಂತಿ ಪಡಜಂತಿ ಮಠದಾಗ ಮಾಸಂತಿ
ಫಜೀತಿ ಪಾರೋತಿ ಹೆಸರಾದಳ ||೪||
ಮಠಮಠ ಮಧ್ಯಾನ್ಹ ಮಠದಾನ ದೆವ್ವಾದೆ
ಸಾಮೇರ ಲಿಂಗಕ್ಕೆ ಬಡಕೊಂಡೆ
ಮಠದಾನ ತೊಲಿಕಂಬ ಕಡಕೊಂಡು ಬಿದ್ದಾಗ
ಘಟದಿಂದ ಘನಲಿಂಗ ಪಡಕೊಂಡೆ ||೫||
*****
ಮಠ = ಸಂಸಾರ
ಘಟ = ದೇಹ
ಚಪ್ಪಲ್ಲು = ಚರ್ಮದೇಹದ ಅಭಿಮಾನ (Lower Consciousness)
ಐವತ್ತು ರೂಪಾಯಿ = ಹಳೆ ಸಂಸ್ಕಾರಗಳು
ಸರಸೋತಿ = ಶಾಸ್ತ್ರಬುದ್ದಿ (Intellectual egoism)
ಬಸರಾಗು = ಆತ್ಮಜ್ಞಾನಿಯಾಗು
ಲಿಂಗಕ್ಕ ಬಡಕೊ= ಸಾಕ್ಷಾತ್ಕಾರ