ಹಕ್ಕಿಗಳೇ
ವಿಸ್ಮಯದ ಗೂಡುಗಳೇ
ತಿಳಿಸಿ, ತಣಿಸಿ
ನಿಮ್ಮ ಬದುಕ ಬಗೆಗಿನ ಪ್ರೀತಿ ಕುತೂಹಲವ.
ನಿಮ್ಮ ಶಿರ, ಶರೀರ
ರೆಕ್ಕೆ, ಪುಕ್ಕ, ಕೊಕ್ಕು, ಕಾಲು, ಕಣ್ಣು, ಸೂಕ್ಷ್ಮ ಸೂಕ್ಷ್ಮ!
ಸೂಕ್ಷ್ಮವಾದುದಕೆಲ್ಲ ಶಕ್ತಿ ಜಾಸ್ತಿಯೇನು ?
ಬೆಳಕ ಹರಿವಿಗೆ ಹೊರಡುವಿರಿ
ಹಾರುವಿರಿ ಎಲ್ಲಿಗೆಲ್ಲಿಗೋ
ಸಾಧನಗಳಿಲ್ಲ, ಸೌಕರ್ಯಗಳಿಲ್ಲ
ಸಂಜೆಗೆ ಬಂದು ಸೇರುವಿರಿ ಇದ್ದಲ್ಲಿಗೆ.
ಮನೆ, ಮಠಗಳಿಲ್ಲ
ಸಂಚಯನ ಸೊಲ್ಲಿಲ್ಲ
ಬಯಲ ಬಾಳಿಗರು ನೀವು
ನಿಮಗೆ ನೀವೇ ಎಲ್ಲಾ !
ನಿನ್ನೆ ನಾಳೆಗಳಿಲ್ಲ
ಕಾಲಗಳ ಗಣನೆಯಿಲ್ಲ
ಆರೋಗ್ಯ ಆತಂಕಗಳ ಕೊರಗಿಲ್ಲ
ನಿರಾಳ, ನಿರ್ಧಾರಿತ ಬಾಳ ಪ್ರತೀಕರು ನೀವು.
ಜೀವ ಸಹಜ ಮಿತ ಭಾವಗಳ ವಿನಃ
ಅತಿಯಾದುದೊಂದಿಲ್ಲ
ನಿಮ್ಮ ಲೋಕವ ನಿರ್ದೇಶಿಸುವ ನಂಬಿಕೆ, ಶಕ್ತಿಯ
ಹಿರಿದೆನ್ನದೆ ವಿಧಿಯಿಲ್ಲ.
*****