ಮುದ್ದಾದ
ಕುರಿಮರಿಯ ತರುವೆ
ಬೆಳೆಸುವೆ ಕಕ್ಕುಲತೆಯಲಿ
ಕೇಳೀತೆ ಹಸಿವೆಂದು
ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು
ಮೊರೆದೀತೆ ದೇಹಾಲಸ್ಯವೆಂದು
ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು.
ಸಗಣಿ ಬಾಚುವೆ
ಮೈಯ ತೊಳೆಯುವೆ
ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ
ಒಂದು ಹೆಸರೂ ಕರೆಯುವೆ
ಅಕ್ಕರೆ ತೋರುವೆ ಹಲವು ಹತ್ತು ರೀತಿಯಲಿ.
ಕಣ್ಣಿಟ್ಟು ಕಾಯುವೆ
ಎತ್ತೆಂದರತ್ತ ಬಿಡದೆ
ನಾಯಿ, ತೋಳಗಳ ಬಾಯಿಗೆ ಕೊಡದೆ
ಘಾಸಿಗೆಡೆ ಕೊಡದೆ
ಸ್ನೇಹ ಪಾರಮ್ಯದಲಿ;
ಚರ್ಬಿ ಬಲಿಯುವತನಕ
ಉಬ್ಬುಬ್ಬಿ ಬೆಳೆದಂತೆ ಅದು
ಹಿಗ್ಗುವೆ ಒಡಲಲ್ಲಿ
ಬರಲಿರುವ ಹಬ್ಬದ ದಿನವ ನೆನೆದು.
ಯಾಕಯ್ಯಾ… !
ಬದಲಾಗುವೆ ನಂಬಿಕೆಯಲಿ ?
ನಿನ್ನ ತೆರನದೆ ರಕ್ತ ಮಾಂಸದ
ನಿನ್ನಂತಹುದೇ ಆದ
ನಿನ್ನಲ್ಲೇ ಜೀವವಿರಿಸಿದೊಂದು ಜೀವವ
ಎಳೆದೊಯ್ದು
ಹೊಯ್ಗುಡುಲಿಗಿಡಿದಾಗ
ತಲೆ ಕತ್ತರಿಸಿ ಕೆಡೆದಾಗ
ಸಾವ ನೋವಿನಲದು ಬಾಯಿ ಬಾಯಿ ಬಿಡುವಾಗ
ರಕ್ತ ಮಡುವಾಗಿ ಹರಿವಾಗ
ಮುಂಡ ಪಟ ಪಟ ಒದರಾಡುವಾಗ.
ನಿನಗೆ ಏನೂ ಅನ್ನಿಸದು ?
ಬದಲಿಗೆ ನಿನ್ನ ಕಣ್ಣಲ್ಲಿ ಮಿಂಚು ಸೆಲೆಯೊಡೆಯುವುದು.
ಸಾಲದೆಂಬಂತೆ
ತಲೆಯ ಹೆಕ್ಕಿ
ದೇವರೆಂಬುದರ ಮುಂದಿಕ್ಕಿ
ನೀರ ಹನಿಸಿ
ಹರಕೆ ಕೇಳುವೆ
ಬಾಯಿಬಿಟ್ಟ ಸಂಖ್ಯೆಯಾಧರಿಸಿ
ಒಳಿತಾಗುವುದೆಂದು ಭಾವಿಸುವೆ.
ಏಕೆ ?
ಜಿಹ್ವಾ ಕ್ಷುದ್ರತೆಗೆ ವಶವಾಗಿ
ಕುರಿತು ಚಿಂತಿಸದೆ ನೈಜ ಪಾಶಗಳ ಬಗೆಗೆ
ಎಳೆವೆ ಬರೆ
ಹಸಿ ಶಿಶು ಹೃದಯದ ಮೇಲೆ.
ಬಿಡು !
ನೀಡುವುದೊಂದು, ಬೇಡುವುದಿನ್ನೊಂದರ
ನೀಛಾಗ್ರೇಸರರ ಸಂಗಕ್ಕಿಂತ ನಿಸೂರಾಯಿತು.
*****