ಶಬರಿ – ೧೭

ಶಬರಿ – ೧೭

ಶಬರಿಗೆ ಒಂದೊಂದು ಮರವನ್ನೂ ತಬ್ಬಿಕೊಳ್ಳಬೇಕನ್ನಿಸಿತು. ಹತ್ತಾರು ಮರಗಳನ್ನು ತಬ್ಬಿಕೊಂಡಳು. ಒಂದು ಮರದ ಹತ್ತಿರ ತಬ್ಬಿ ನಿಂತುಬಿಟ್ಟಳು. ಬಿಟ್ಟು ಕೂಡಲಾರೆನೆಂಬ ಭಾವ. ಮುಚ್ಚಿದ ಕಣ್ಣೊಳಗೆ ಮೂಡಿನಿಂತ ಸೂರ್ಯ ಚೈತನ್ಯ.

“ಏಯ್ ಶಬರಿ”
ತಿರುಗಿ ನೋಡಿದಳು;
ಗಡಸು ದನಿಯಲ್ಲಿ ಗದರಿದ ಗೂಳಿ.
ಹೆಡೆಯೆತ್ತಿ ನಿಂತ ಒಡೆಯ.
“ಮರ ಯಾಕ್ ಅಂಗ್ ತಬ್ಕಂಡ್ ನಿಂತ್ಕಬ್ತೀಯ. ಎದ್ರಿಗ್ ನಾನ್ ಇಲ್ವ?”
ಶಬರಿಗೆ ಅಸಹ್ಯವೆನ್ನಿಸುವ ಮಾತು.
ಮರುಮಾತಾಡದೆ ಹೊರಟಳು.
ಫಕ್ಕನೆ ಕೈಹಿಡಿದ-ನರ-ಸಿಂಹ-ರಾಯಪ್ಪ!
ಕೈ ಕೊಸರಿದಳು; ಸಿಟ್ಟು ಸಂಕಟಗಳಿಂದ ಸುಟ್ಟುಬಿಡುವಂತೆ ನೋಡಿದಳು.
“ನಿನ್ ಸೀರೆ ಕಿತ್ತು ಅದನ್ನೇ ಚಾಪೆ ಮಾಡ್‌ತೀನಿ. ಆದ್ರ್ ಮ್ಯಾಲ್ ನಿನ್ನ ಮಲಗ್ಸಿ…”
“ಸಾಕ್ ನಿಲ್ಸು ನಾನ್ ಸತ್ತೇನೇ ವೊರ್‍ತು ನನ್ ಮೈಕೊಡಾಕಿಲ್ಲ ನಿಂಗೆ.”
“ಕಣ್ಣಾಗ್ ಎಣ್ಣೆ ಆಕ್ಕಂಡ್ ಕಾದ್ರೂ ಆ ಸೂರ್ಯ ಬರಾಕಿಲ್ಲ. ನವಾಬ ಯಾವಾಗ್ ನೆಗದ್ ಬೀಳ್ತಾನೊ ಗೊತ್ತಿಲ್ಲ. ಇವಾಗಾರ ನನ್ ಕೂಡ್ಕ. ಇಲ್ದಿದ್ರೆ ನಿನ್ ಏನ್ ಮಾಡ್ತೀನಿ ಅಂಬ್ತ ನಂಗೇ ಗೊತ್ತಿಲ್ಲ.”

ಶಬರಿ ಶಕ್ತಿಯಾದಳು; ಹಿಡಿದ ಕೈ ಕೊಡವಿ ಒಡೆಯನನ್ನು ಸುಡುವಂತೆ ನೋಡುತ್ತ- “ನಂಗೀರಾದ್ ಒಬ್ನೇ ಗಂಡ; ಸೂರ್ಯ! ನಾನ್ ಸತ್ತರೂ ಸರೀನೇ, ನನ್ ಗಂಡ ಸೂರ್ಯ!” ಎಂದು ಹೇಳಿ ಅಲ್ಲಿಂದ ರಭಸವಾಗಿ ಹೂರಟಳು.

ಒಡೆಯ ಒಂದು ಕ್ಷಣ ತಬ್ಬಿಬ್ಬಾದರೂ ಕೂಗಿ ಹೇಳಿದ- “ಇವತ್ತಲ್ಲ ನಾಳೆ ನೀನು ನನ್ ಮಗ್ಗಲಾಗ್ ಮಲುಗ್ಲೇಬೇಕು. ನೋಡ್ತಾ ಇರು.”

ತಾತ್ಸಾರದಿಂದ ತಿರುಗಿನೋಡಿದ ಶಬರಿ ತನ್ನ ದಾರಿ ತಾನು ಹಿಡಿದಳು- ತನ್ನ ಗಂಡ ಸೂರ್ಯ, ಸೂರ್ಯನೊಬ್ಬನೇ ಎಂದು ಮೊಟ್ಟಮೊದಲ ಸಲ ಬಹಿರಂಗವಾಗಿ ಹೇಳಿದ್ದಳು.

‘ಇಹಕ್ಕೂಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?’

ಹೊಟ್ಟೆಯ ಮೇಲೆ ಕೈಯ್ಯಿಟ್ಟುಕೊಂಡೇ ಹಟ್ಟಿಗೆ ಬಂದಳು; ಒಳಗೆ ಹೋದಳು.
ಸೂರ್ಯನ ಫೋಟೋವನ್ನು ನೋಡುತ್ತ ಮನಸ್ಸನ್ನು ನೆಟ್ಟಳು.
ಕಳವಳವ ಕಳೆದುಕೊಂಡಳು.

ಒಳಗೆ ಭೂಮಿ ಸೂರ್ಯನ ಬಿಂಬ.
ಹೊರಗೆ ಆಕಾಶ ಸೂರ್ಯನ ಬಿಸಿಲ ಬೇಗೆ.
ಕತ್ತಲು ಬೆಳಕಿನ ಜೋಡಿನಡಿಗೆ.

ಬರುತ್ತಾನೆ; ಬಂದೇ ಬರುತ್ತಾನೆ ಸೂರ್ಯ; ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕಲ್ಲವೆ?

ತಿಮ್ಮರಾಯಿ ಒಳಗೆ ಬಂದು ಶಬರಿಯ ಸೂರ್ಯನೋಟವನ್ನು ಗಮನಿಸಿದ. “ಸೂರ್ಯ ಬತ್ತಾನೆ ಕಣವ್ವ ನೀನೇನೂ ಸಿಂತೆ ಮಾಡ್‌ಬ್ಯಾಡ” ಎಂದು ಸಮಾಧಾನಿಸಿದ. ಶಬರಿ ನಿಟ್ಟುಸಿರು ಬಿಟ್ಟು “ಉಂಬಾಕ್ ಬಾರಪ್ಪ” ಎಂದು ಗಂಗಳ ತಂದಿಟ್ಟಳು. “ನೀನೂ ಉಣ್ಣವ್ವ” ಎಂದ ತಿಮರಾಯಿ. “ಯಾಕೊ ಎಲ್ಡ್‍ದಿನ್ದಿಂದ ಉಂಬಾಕ್ ಸೇರಾದೇ ಇಲ್ಲ ಕಣಪ” ಎಂದಳು.

“ಯಾವಾಗ್ಲೂ ಸಿಂತೆ ಮಾಡೀರಂಗೇಯ” ಎಂದ.
“ಅಂಗೇನಿಲ್ಲ. ಯಾಕೊ ವೊಟ್ಟೆ ತೂಳಿಸ್ದಂಗಾಯ್ತದೆ.”
“ವೊಟ್ಟೆ ಕಟ್ಟೀರಿನ್ನೇನಾಯ್ತದೆ? ವೊತ್ತಿಗ್ ಸರ್‍ಯಾಗ್ ಉಣ್‌ಬೇಕು.”
“ನೀನ್ಯಾವಾಗ್ಲೂ ಇಂಗೇಯ. ನಾನೊಂದ್ ಯೇಳಿರೆ ನೀನೊಂದ್ ಯೇಳ್ತೀಯ.”

“ನಂಗ್ ತೋಚಿದ್ ನಾನ್ ಯೇಳ್ತೀನಿ. ವೊಟ್ಟೆಗೇನೂ ಆಕ್ದೆ ಇದ್ರೆ ತೊಳುಸ್ದೆ ಇನ್ನೇನಾಯ್ತದವ್ವ? ಅದ್ಕೆ ನಾನ್ ಯೇಳಾದು; ಇದ್ದಾಗಾನ ವೊತ್ತಿಗ್ ಸರ್‍ಯಾಗ್ ಉಣ್‍ಬೇಕು. ಇಲ್ದಾಗ್ ಉಪಾಸ ಬೀಳಾದ್ ಇದ್ದೇ ಇರ್‍ತೈತೆ.

“ಆಯ್ತು ಇವಾಗುಣ್ಣು ನೀನು.”

ಶಬರಿ ಇಟ್ಟ ಮುದ್ದೆಯನ್ನು ತಿಮ್ಮರಾಯಿ ಉಣ್ಣ ತೊಡಗಿದ. ಎದುರು ಕೂತಿದ್ದ ಶಬರಿಗೆ ಇದ್ದಕ್ಕಿದ್ದಂತೆ ವಾಕರಿಕೆ ಬಂತು.

ಅಲ್ಲಿಂದ ಎದ್ದಳು; ತಿಮ್ನರಾಯಿ ಏನಾಯಿತೆಂಬಂತೆ ನೋಡುತ್ತಿದ್ದ. ವಾಕರಿಕೆ ತಡೆಯಲಾಗದೆ ಹೊರಬಂದ ಶಬರಿ ವಾಂತಿ ಮಾಡಿಕೊಂಡಳು.

ತನ್ನ ಗುಡಿಸಲ ಹೊರಗೆ ರಾಗಿಕಲ್ಲು ಬೀಸುತ್ತ ಕೂತಿದ್ದ ಸಣ್ಣೀರನ ಹೆಂಡತಿ ಲಕ್ಷ್ಮಕ್ಕ ಇದನ್ನು ಗಮನಿಸಿದಳು.

ಹೊರಬಂದ ತಿಮ್ಮರಾಯಿ “ಲಚ್ಮವ್ವ, ಯಾಕೊ ಎಲ್ಡ್‌ಮೂರ್‍ದಿನ್‌ದಿಂದ ವಾಕ್ರಿಕೆ ಅಂಬ್ತೈತೆ. ಒಸಿ ನೋಡವ್ವ ನನ್ ಮಗಳನ್ನ” ಎಂದ.

ಶಬರಿ “ಅಂತಾದೇನು ಆಗಿಲ್ಲ ಬಿಡಪ್ಪ. ಈಟಕ್ಕೆಲ್ಲ ಎದ್ರಿಕಂಡ್ರಾಯ್ತದ” ಎಂದರೂ ತಿಮ್ಮರಾಯಿ ಸುಮ್ಮನಾಗಲಿಲ್ಲ.

“ವೂತ್ತಿಗ್ ಸರ್‍ಯಾಗ್ ಉಂಬಾಕಿಲ್ಲ; ಸಿಂತೆ ಮಾಡಾದ್ ಬಿಡಾಕಿಲ್ಲ. ಇನ್ನೇನ್ ಆಗ್ತೈತೆ” ಎಂದು ಮತ್ತೆ ಬೇಜಾರು ಮಾಡಿಕೊಂಡ. “ಬಾ ಲಚ್ಮವ್ವ, ಒಸಿ ನೋಡಿ, ನೀನಾರ ಬುದ್ದಿ ಯೇಳು” ಎಂದು ಒತ್ತಾಯಿಸಿದ.

ಲಕ್ಷ್ಮವ್ವ ಬಂದಳು. ಶಬರಿಯ ಮೈ ಮುಟ್ಟಿ ನೋಡಿದಳು. “ಜರ-ಗಿರ ಏನೂ ಇಲ್ಲ” ಎಂದು ಹೊಟ್ಟೆಯನ್ನು ಒತ್ತಿದಳು. ಮತ್ತೆ ಒತ್ತಿದಳು. ಶಬರಿಯ ಮುಖ ದಿಟ್ಟಿಸಿದಳು. ಹಾಗೇ ಜೋಲುಬಿದ್ದ ಸೆರಗಿನ ಕಡೆ ನೋಡಿದಾಗ ತುದಿಯಲ್ಲಿ ಏನ್ನೋ ಇಟ್ಟು ಗಂಟು ಹಾಕಿರುವುದು ಕಂಡಿತು.

“ಏನ್ ಸ್ಯಬರಿ ಅದು” ಎಂದು ಸರಗಿನ ತುದಿಯ ಗಂಟನ್ನು ಬಿಚ್ಚಿದಳು.
ಹುಣಿಸೇಕಾಯಿಗಳು!
ಹೂಟ್ಟೆ ಒತ್ತಿದಾಗ ಮೂಡಿದ ಅನುಮಾನಕ್ಕೆ ಸಾಕ್ಷಿ!
“ಬಾ ಇಲ್ಲಿ” ಎಂದು ತನ್ನ ಗುಡಿಸಲಿನ ಒಳಗೆ ಕರೆದೊಯ್ದಳು. ಲಕ್ಷ್ಮಕ್ಕ ಸೂಲಗಿತ್ತಿಯೂ ಹೌದೆಂದು ಶಬರಿಗೆ ಗೊತ್ತಿತ್ತು. ಆಕೆ “ಏನೂ ಆಗಿಲ್ಲ ಬಿಡಕ್ಕ” ಎಂದರೂ ಕೇಳದೆ ಕರೆದೊಯ್ದಳು. ತಿಮ್ಮರಾಯಿಗೆ ತಡೆಯಲಾಗಲಿಲ್ಲ. ಯಾಕೆ ಕರೆದೊಯ್ದಳೆಂದು ಗೊತ್ತಿರಲಿಲ್ಲ. ಹಿಂದೆಯೇ ಹೋದ. ಈತ ಹೋಗುವುದರೊಳಗೆ ಲಕ್ಷ್ಮಕ್ಕ ಬಾಗಿಲನ್ನು ಮುಂದು ಮಾಡಿದ್ದಳು. ತಿಮ್ಮರಾಯಿ ಬಾಗಿಲ ಬಳಿ ಹೂರಗೇ ನಿಂತ.

ಲಕ್ಷ್ಮಕ್ಕ “ಇಂಗ್ ಮಲೀಕ” ಎಂದಳು.
ಶಬರಿ ಮಲಗಿಕೊಂಡಳು. ಎಲ್ಲ ನೋಡಿದ ಲಕ್ಷ್ಮಕ್ಕ ಕೇಳಿದಳು-
“ಯಾಕೆ ಇಂಗ್ ಮಾಡ್ಕಂಡೆ?”
“ಏನಾಗೈತವ್ವ?”
ಏನಾಗೈತೆ ಅಂಬ್ತ ನನ್ನೇ ಕೇಳ್ತೀಯ? ನಿನ್ ವೊಟ್ಟೆ ಒಳ್ಗಡೆ ಕೂಸ್ ಬೆಳೀತಾ ಐತೆ ಕೂಸು!”
ಹೊರಗೆ ನಿಂತಿದ್ದ ತಿಮ್ಮರಾಯಿ ಬೆಚ್ಚಿದ.
ಶಬರಿಯ ಬಾಯಿಂದ ಯಾವ ಮಾತೂ ಬರಲಿಲ್ಲ.
“ಯಾಕ್ ಸುಮ್ಕಿದ್ದೀಯ? ಯಾರ್‍ದೇ ಈ ಕೂಸು?”
“ಸೂರ್ಯಂದು”- ಶಬರಿ ನಿರ್ವಿಕಾರವಾಗಿ ಹೇಳಿದಳು.
“ಏಟ್ ಸಲೀಸಾಗ್ ಯೇಳ್ತಾ ಇದ್ದೀಯ? ಇವಾಗೇನ್ ಮಾಡಾದು?”
“ಏನ್ ಮಾಡಾದು ಅಂದ್ರೆ? ಸೂರ್ಯ ಬರಾವರ್‍ಗೂ ಕಾಯಾದು; ಮದ್ವೇ ಆಗಾದು.”
“ಸೂರ್ಯಪ್ಪ ಯಾವತ್ ಬತ್ತಾನೊ ಏನ್ ಪಾಡೊ. ಈಗ್ ಯಾರ್‍ಗೂ ಗೊತ್ತಿಲ್ಲ. ಮದ್ದು ಮಾಡ್‌ಕೂಡ್ತೀನಿ. ಎಲ್ಲಾ ಸರ್‍ಯಾಗ್ತೈತೆ.”
“ಬ್ಯಾಡ ಕಣಕ್ಕ. ನನ್ನ ಕೂಸ್ನ ನಾನ್ ಕೂಲೆ ಮಾಡಾಕಿಲ್ಲ.”-ಶಬರಿ ಉಕ್ಕಿ ಬರುವ ಅಳುವನ್ನು ತಡೆಯುತ್ತ ಹೇಳಿದಳು.

“ಈಗೇನ ಅದು ಬೆಳ್ದಿಲ್ಲ. ಏಟೊ ಜನ ಅಂಗ್ ಮಾಡಿಸ್ಕಂಬ್ತಾರ. ಕಂಡೋರ್ ಬಾಯಿಗ್ ಬೀಳಾದ್ ತಪ್‍ತೈತೆ. ನನ್‌ಮಾತ್ ಕೇಳೇ ಸ್ಯಬರಿ”- ಲಕ್ಷ್ಮಕ್ಕ ಒತ್ತಾಯಿಸಿದಳು.

ತಿಮ್ಮರಾಯಿ ಖಿನ್ನನಾಗಿದ್ದ. ಒಳಹೋಗಿ ಲಕ್ಷಕ್ಕನ ಮಾತಿಗೆ ಒಪ್ಪು ಎಂದು ಶಬರಿಯನ್ನು ಒತ್ತಾಯಿಸಬೇಕೆಂದುಕೊಂಡ. ಆದರೆ ಒಳಗೆ ಹೋಗಲಾಗದೆ ಅಲ್ಲೇ ನಿಂತ.

ನಾನು ಸೂರ್ಯಂಗಾಗಿ ಕಾಯ್ತೀನಿ ಕಣಕ್ಕ. ಸೂರ್ಯ ನಂಗೆಂದೂ ಮೋಸ ಮಾಡಾಕಿಲ್ಲ. ಬಂದೇ ಬರ್‍ತಾನೆ. ಬಂದಾನೆ ಮದ್ವೆ ಆಗ್ತಾನೆ. ಅಲ್ಲೀಗಂಟ ಬಸುರಿ ಆಗಿರಾ ವಿಸ್ಯ ಯಾರ್‍ಗೂ ಯೇಳಲ್ಲ ಅಂಬ್ತ ಮಾತ್ ಕೊಡಕ್ಕ.”

ಶಬರಿ ಲಕ್ಷ್ಮಕ್ಕನ ಮುಂದೆ ಕೈ ನೀಡಿದಳು.

ಕಣ್ತುಂಬಿಕೊಂಡ ಲಕ್ಷ್ಮಕ್ಕ ಶಬರಿಯ ಕೈಮೇಲೆ ಕೈಯ್ಯಿಟ್ಟು ಹೇಳಿದಳು. “ನನ್ ಗಂಡನ್ ಮ್ಯಾಗೆ ಆಣೆ ಇಟ್ ಯೇಳ್ತೀನಿ. ನಾನ್ ಯಾರ್‍ಗೂ ಯೇಳಾಕಿಲ್ಲ. ದ್ಯಾವ್ರ್ ಮನ್ಸ್ ಮಾಡಿ ಸೂರ್ಯಪ್ಪನ್ನ ಬ್ಯಾಗ್ ಕರೆಸ್ಕಂಬಂಗಾಗ್ಲಿ ಕಣವ್ವ. ತಡ ಆದ್ರೆ ವೊಟ್ಟೆ ಮುಂದಕ್ ಬಂದು ಎಲ್ರಿಗೂ ಗೊತ್ತಾಗ್ತೈತೆ.”

“ಅಂಗೇನಾರ ಆದ್ರೆ ನಾನ್ ಮಗ ಅಡಿತೀನಿ ಕಣಕ್ಕ, ಸೂರ್ಯನ್ ಯಸ್ರೇಳ್ಕಂಡ್ ಸಾಕ್ತೀನಿ”- ಶಬರಿಯ ಮಾತು ಕೇಳಿ ಲಕ್ಷ್ಮಕ್ಕ “ನನ್ನವ್ನ, ಎಂತಾ ಮನ್ಸೇ ನಿಂದು” ಎಂದು ಅಪ್ಪಿಕೊಂಡಳು. ಅಳುತ್ತ ಸಮಾಧಾನಿಸಿದಳು.

ಅತ್ತು ಸಾಕಾದ ಮೇಲೆ ಇಬ್ಬರೂ ಎದ್ದರು.

ಲಕ್ಷ್ಮಕ್ಕ “ನೀನ್ ನನ್ ತಂಗಿ ಇದ್ದಂಗೆ ಸ್ಯಬರಿ. ಎಲ್ಲಾ ಒಳ್ಳೇದಾಯ್ತದೆ” ಎಂದಳು.

ತಿಮ್ಮರಾಯಿ ಕಣ್ಣೀರು ಒರೆಸಿಕೊಳ್ಳುತ್ತ ಹೂರಟುಹೋದ.
ಶಬರಿ ಅಳುವಿನಲ್ಲೇ ನಕ್ಕು ಹೊರಬಂದಳು.
ಲಕ್ಷ್ಮಕ್ಕನೂ ಹೂರಬಂದಳು.
ಬಾಗಿಲು ಮುಂದು ಮಾಡಿದಳು.
ಶಬರಿ ಒಬ್ಬಳೇ ಒಳಗೆ ಕೂತಳು.
ಕೈಯ್ಯಲ್ಲಿ ಸೂರ್ಯನ ಭಾವಚಿತ್ರ.
ಕರೆದತ್ತ ಕೊಂಡೊಯ್ಯುವ ನೆನಪಿನ ಚಕ್ರ.

ಒತ್ತಿ ಬರುವ ನೆನಪಲ್ಲಿ ಅತ್ತಳು.
ಸಂಕಟದ ಸೆಳೆತದಲ್ಲಿ ಎದ್ದಳು.
ತೋಪಿನತ್ತ ಹೊರಟಳು.
ಹೊಂಗೆ ಹುಣಿಸೆಗಳ ತೋಪು
ಫಲಭರಿತ ಮರಗಳ ಗುಂಪು
ಜೀವಶಕ್ತಿಯ ಹುರುಪು.
ಶಬರಿ ಬಂದಳು ಒಳಗೆ ಅಳುತ್ತ.
ಅಡವಿಯಂಥ ತೋಪು ಹೊಕ್ಕಳು.

“ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಅವು ನೀಡಿದಳು ತಮ್ಮ ಲಿಂಗಕ್ಕೆಂದು’

ಒಳಗೆಲ್ಲ ಓಡಾಡಿದಳು. ಮರಗಿಡಗಳ ಮುಟ್ಟಿದಳು.
ಕಳವಳದ ಕನಸು ಕಟ್ಟಿದಳು.

ಕೊಂಬ ತುದಿಯ ಹಕ್ಕಿಗಳನ್ನು. ಹಾರಾಡುವ ಆಸಗಳನ್ನು,
ನಡೆದಾಡುವ ಕಣ್ಣುಗಳನ್ನು, ಕೇಳಿದಳು.

‘ಚಿಲಿಪಿಲಿ ಎಂದೋದುವ ಗಿಳಿಗಳಿರಾ!
ನೀವು ಕಾಣಿರೇ? ನೀವು ಕಾಣಿರೇ?
ಸರವೆತ್ತಿ ಪಾಡುವ ಕೋಗಿಲೆಗಳಿರಾ?
ನೀವು ಕಾಣಿರೇ? ನೀವು ಕಾಣಿರೇ?
ಎರಗಿ ಬಂದಾಡುವ ತುಂಬಿಗಳಿರಾ!
ನೀವು ಕಾಣಿರೇ? ನೀವು ಕಾಣಿರೇ?
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ!
ನೀವು ಕಾಣಿರೇ? ನೀವು ಕಾಣಿರೇ?’

ಶಬರಿಯು ಮರಮರದಲ್ಲೂ ಜೀವಕಂಡಳು. ಮುಟ್ಟಿದಳು.
ಮುಟ್ಟದ್ದೇ ಮಾತು. ಮಾತೆಲ್ಲ ಮೌನ.

‘ವನವೆಲ್ಲ ನೀವೆ
ವನದೊಳಗಣ ದೇವ ತರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
ಸರ್ವಭರಿತವಾಗಿ ಎನಗೇಕೆ ಮುಖದೋರೆ?’

ಶಬರಿಯ ಭಾವದ ಒಡಲು ತುಂಬುತ್ತಿತ್ತು
ಉಕ್ಕುವ ಸಿಕ್ಕುಗಳು; ಕಾಡುವ ಬೆಕ್ಕುಗಳು.
ಒಂಟಿಜೀವವೇ ಒಳಗೆಂಥ ಚಿತ್ತಾರ!
ಸೂರ್ಯನ ಉತ್ತರ.

ಶಬರಿ ಮರವೊಂದರ ಬುಡದಲ್ಲಿ ಕೂತಳು.
ಬೇರುಬಿಗಿದಪ್ಪಿ ಕನಸಿನ ಪ್ರಶ್ನೆಗಳು;
ಒತ್ತರಿಸಿ ಬಂದ ಉತ್ತರದಲ್ಲಿ ಕಣ್ಣು ಮುಚ್ಚಿಕೊಂಡಳು.

“ಕಾಣುತ್ತ ಕಾಣುತ್ತ
ಕಂಗಳ ಮುಚ್ಚಿದೆ ನೋಡವ್ವ!
ಕೇಳುತ್ತ ಕೇಳುತ್ತ
ಮೈಮರೆದೊರಗಿದೆ ನೋಡವ್ವ!
ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವ!
……………….
ಕೂಡುವ ಕೂಟವ ನಾನೇನಂದರಿಯದೆ
ಮೆರೆದೆ ಕಾಣವ್ವ!’

“ಸ್ಯಬರಿ….. ಸ್ಯಬರಿ…..”
ಶಬರಿ ಮುಚ್ಚಿದ ಕಣ್ಣು ತೆರೆಯಲಿಲ್ಲ.
“ಸ್ಯಬರವ್ವ ಸ್ಯಬರವ್ವ” ಎಂದು ಯಾರೊ ಮೃದುವಾಗಿ ಮೈಮುಟ್ಟಿ ಅಲುಗಾಡಿಸಿದ ಅನುಭವ.
ಶಬರಿ ಕಣ್ಣು ತೆರೆದಳು.
ಎದುರಿಗೆ ಅಪ್ಪ ಕೂತಿದ್ದ!
“ಯಪ್ಪ ಯಾವಾಗ್ ಬಂದೆ?”
“ಆಗ್ಲೇ ಬಂದೇ ಕಣವ್ವ. ಯಾಕವ್ವ ಮಗ್ಳೆ, ಇಂಗೊಬ್ಳೇ ಕುಂತಿದ್ದೀಯಾ?” ಶಬರಿಗೆ ಮಾತನಾಡಲು ಆಗಲಿಲ್ಲ. ಅಳತೊಡಗಿದಳು.
“ಅಳ್‌ಬ್ಯಾಡ ಕಣವ್ವ. ಅಳ್‌ಬ್ಯಾಡ. ವೂಟ್ಟೇಗ್ ಸರ್‍ಯಾಗ್ ತಿನ್ನಲ್ಲ ನೋಡು. ಅದಕ್ಕೆ ತೊಳಿಸ್ದಂಗಾಗಿರ್‍ತೈತೆ. ನೀನೇನೂ ಸಿಂತೆ ಮಾಡ್‌ಬ್ಯಾಡ ಕಣವ್ವ. ನಿನ್ ಜತೇಗ್ ನಾನಿವ್ನಿ”- ತಿಮ್ಮರಾಯಿ ಸಮಾಧಾನಿಸಿದ.
ಅಪ್ಪನ ಅಕ್ಕರೆಯಲ್ಲಿ ಗಳಗಳನೆ ಅತ್ತಳು.
“ಯೇ ಇದಕ್ಕೆಲ್ಲ ಅಳ್ತಾರೇನವ್ವ, ಸೂರ್ಯಪ್ಪ ಬಂದೇ ಬತ್ತಾನೆ. ಬಾ ಎದ್ದೇಳು” ಎಂದು ಕೈ ಹಿಡಿದು ಏಳಿಸಿದ.

ಶಬರಿಯನ್ನು ಮರಗಳ ನಡುವೆ ಕರೆತಂದ.
ಹುಣೆಸಮರವೊಂದರ ಬಳಿ ನಿಂತ; ನೋಡಿದ.

ಶಬರಿಯು ಇಲ್ಲಿ ನಿಂತದ್ದೇಕೆಂದು ಕೇಳುವ ಮುನ್ನವೇ ಐದಾರು ಎಳೆ ಹುಣಿಸೆಕಾಯಿಗಳನ್ನು ಕಿತ್ತ. ಶಬರಿ ನೋಡುತ್ತಿದ್ದಳು.

“ಎಳೆ ಉಣಿಸೇಕಾಯಿ; ಬೋಲ್ ಚಂದ. ತಿನ್ನವ್ವ” ಎಂದು ಅಕಗೆ ಕೊಟ್ಟ.
ಏನು ಹೇಳಬೇಕೆಂದು ತೋಚಲಿಲ್ಲ ಅವಳಿಗೆ.
ತೋಪಿನ ತುಂಬ ತಳಮಳಗೊಂಡ ಮನಸ್ಸು.
“ಆಮ್ಯಾಕ್ ತಿಂತೀನಿ ಕಣಪ್ಪ” ಎಂದಳು.
“ವೋಗ್ಲಿ. ಸೆರಿಗ್ನಾಗ್ ಕಟ್ಕಳವ್ವ”
ಸೆರಗಿನಲ್ಲಿ ಕಟ್ಟಿಕೊಳ್ಳುತ್ತಲೇ ಒಂದು ಹುಣಿಸೇಕಾಯನ್ನು ಹಾಗೇ ಇಟ್ಟುಕೊಂಡಳು. ಅಪ್ಪ ನೋಡುತ್ತಿರುವಂತೆ ತಿನ್ನತೊಡಗಿದಳು.

ಮಗಳು ಬಾಯಿ ಚಪ್ಪರಿಸಿ ತಿನ್ನುವುದನ್ನು ನೋಡಿದ ತಿಮ್ಮರಾಯಿಗೆ ಕೊರೆಯುವ ಸಂತೋಷ; ಖಿನ್ನತೆಯ ಹೊರವೇಷ.

ಶಬರಿಯನ್ನು ಹಟ್ಟಿಯವರೆಗೆ ಬಿಟ್ಟು ತಿಮ್ಮರಾಯಿ “ನಾನಾಮ್ಯಾಕ್ ಬತ್ತೀನಿ” ಎಂದು ಹೊರಟ.

ತಿಮ್ಮರಾಯಿ ಕತ್ತಲಾದ ಮೇಲೆ ಬಂದ.
ಕತ್ತಲಾಗಿ ಬರಲಿಲ್ಲ; ಬೆಳಕಾಗಿ ಬರಲಿಲ್ಲ.
ಕತ್ತಲುಬೆಳಕುಗಳ ತುಯ್ದಾಟದಂತೆ ತೂರಾಡುತ್ತ ಬಂದ.
ಶಬರಿಗೆ ಗೊತ್ತಾಯಿತು- ಅಪ್ಪ ಕುಡಿದು ಬಂದಿದ್ದಾನೆ.
ಆಕೆ ಏನೂ ಮಾತಾಡಲಿಲ್ಲ.
ಊಟಕ್ಕೆ ಇಟ್ಟಳು. ಮಾತಾಡದೆ ಊಟ ಮಾಡಿದ.
ಮೂಲೆಗೆ ಹೋಗಿ ಹರಿದ ದುಪ್ಪಟಿ ಹೊದ್ದುಕೊಂಡು ಮಲಗಿದ.

“ವೂಟ್ಟೆ ತುಂಬ ಉಂಡ್ ಮಲೀಕಳವ್ವ. ಬರೀವೊಟ್ಟೇಗಿರ್‌ಬ್ಯಾಡ. ಸೂರ್ಯ ಬಂದೇ ಬತ್ತಾನೆ. ಉಂಡ್ ಮಲೀಕ”-ತಿಮ್ಮರಾಯಿ ಮಮತೆಯ ಮಾತಾಡಿ ಮಲಗಿಕೊಂಡ.

ಶಬರಿ ದೀಪದ ಬೆಳಕು ನೋಡುತ್ತ ಕೂತಳು.
ಹೂರಗೆ ಗಾಳಿಯ ಸದ್ದು.
ಸದ್ದಿಲ್ಲದೆ ಉರಿಯುವ ದೀಪ
ಶಬರಿಯ ನೋಟದೊಳಗೆ ಸೂರ್ಯನ ಕೂಟ.
ಕೂಟದ ನೆನಪಲ್ಲಿ ಕೂತ ಶಬರಿ.
ಲಕ್ಷ್ಮಕ್ಕ ಬಂದು ಕೂಗಿದಾಗ ಎಚ್ಚರ.
“ಬಾರಕ್ಕ”-ಶಬರಿ ಕರೆದಳು.
ಹತ್ತಿರ ಬಂದು ಕೂತ ಲಕ್ಷಕ್ಕ “ಉಂಡೇನವ್ವ” ಎಂದು ಕೇಳಿದಳು.
ಶಬರಿಯ ಮೌನ.
“ಇಂಗೆಲ್ಲ ಉಪಾಸ ಇರ್‌ಬಾರ್‍ದು ಕಣವ್ವ” ಎಂದ ಲಕ್ಷಕ್ಕ ತಾನೇ ಎದ್ದು ಹೋಗಿ ಮುದ್ದೆ ಸಾರು ತಂದು ಮುಂದಿಟ್ಟಳು. “ತಗಾ ತಿನ್ನವ್ವ” ಎಂದು ಒತ್ತಾಯಿಸಿದಳು.

ಅಕ್ಕನ ಅಕ್ಕರೆ; ಶಬರಿ ಮರು ಮಾತಾಡದೆ ತಿಂದಳು.
ಉಂಡಿದ್ದಾದ ಮೇಲೆ ಲಕ್ಷ್ಮಕ್ಕ “ಯಾವ್ದುಕ್ಕೂ ಸಿಂತೆ ಮಾಡ್‌ಬ್ಯಾಡ. ಏನಿದ್ರೂ ನನ್ತಾವ್ ಯೇಳ್ಕ. ಏನು?” ಎಂದಳು. “ನೀನಿರ್‍ವಾಗ ನಂಗೇನ್ ಬಯ ಬಿಡಕ್ಕ” ಎಂದಳು ಶಬರಿ.
“ಇನ್‌ಮ್ಯಾಕೆ ಇಂಗೆಲ್ಲ ಉಪಾಸ ಇರ್‌ಬಾರ್‍ದು. ತಿಳೀತ?”
“ತಿಳೀತು.”

“ಇವಾಗ್ ಸುಮ್ಕೆ ಮಲೀಕ. ಸೂರ್ಯಪ್ಪ ಬಂದೇ ಬತ್ತಾನೆ. ಅವ್ನನ್ನೇ ನೆಪ್ತಿ ಮಾಡ್ಕಂಡು ನಿದ್ದೆ ವೋಗು. ದ್ಯಾವ್ರ್‌ತರಾ ಕನಸ್ನಾಗ್ ಬಂದು ಬಯಬೀಳ್‌ಬ್ಯಾಡ ಬತ್ತೀನಿ-ಅಂಬ್ತ ಯೇಳ್ತಾನೆ.”
ಶಬರಿ ನಕ್ಕಳು.
ಲಕ್ಷ್ಮಕ್ಕ ತಲೆ ನೇವರಿಸಿ ಹೊರಟಳು.
ಶಬರಿ ಬಾಗಿಲು ಮುಂದು ಮಾಡಿ ಬಂದಳು. ಲಕ್ಷ್ಮಕ್ಕನ ಕೂನೆಯ ಮಾತು ಮನಸ್ಸಿನಲ್ಲಿ ನೆಟಿತ್ತು. ದೀಪ ಆರಿಸಿ ಮಲಗಿದಳು.

ಬೆಳಗ್ಗೆ ಎದ್ದಾಗ ತಿಮ್ಮರಾಯಿ ಇರಲಿಲ್ಲ. ಹೊರಗೆ ಇರಬಹುದೆಂದು ಬಂದು ನೋಡಿದಳು; ಇರಲಿಲ್ಲ. ಕಟ್ಟೆ ಮೇಲೆ ಕೂತಿದ್ದ ಸಣ್ಣೀರ “ನವಾಬಣ್ಣ ಇವತ್ತೇನಾರ ಬರ್‌ಬವ್ದಲ್ಲೇನವ್ವ?” ಎಂದು ಕೇಳಿದ. “ಇವತ್ತೊ ನಾಳೇನೂ ಬತ್ತಾನೆ” ಎಂದು ತಿಮ್ಮರಾಯಿ ಎಲ್ಲಿರಬಹುದೆಂದು ಅತ್ತಿತ್ತ ನೋಡಿದಳು.

“ತಿಮ್ಮರಾಯಪ್ಪ ತೋಪಿನ್‌ತಾವೋಗ್ತೀನಿ ಅಂಬ್ತ ವೋದಕಣ್ರವ್ವ’- ಇನ್ನೊಬ್ಬ ಹೇಳಿದ. ಸಣ್ಣೀರನೂ ಅದನ್ನೇ ಹೇಳಿ ಒಂದು ಮಾತು ಕೇಳಿದ- “ಇವತ್ತು ಒಡೇರು ಕೂಲಿಕೆಲ್ಸಕ್ ಬರೇಳವ್ರೆ, ವೋಗಾನ ಅಲ್ವೇನವ್ವ?”

“ಅವ್ರೇ ಕರುದ್‌ಮ್ಯಾಗೆ ಇಲ್ಲ ಅಂಬಾದ್ಯಾಕೆ? ಅದೂ ಮಾಡ್ಬೇಕು ಇದೂ ಮಾಡ್ಬೇಕು. ಅವ್ರೇ ಬರ್‌ಬ್ಯಾಡ್ರಿ ಅಂದಾಗ ಅದೇನಾಗ್ತೈತೊ ನೋಡಾನ” ಎಂದು ಶಬರಿ ಒಳಗೆ ಹೋದಳು.

ಶಬರಿಯ ಹಿಂದಯೇ ಲಕ್ಷ್ಮಕ್ಕ ಬಂದಳು.
“ತಗಾ. ರಾಗಿ ಗಂಜಿ ಮಾಡಿವ್ನಿ. ಒಳ್ಳೇದು; ವೊಟ್ಟೇಗ್ ತಂಪು; ಕುಡಿ” ಎಂದು ಕುಡಿಕೆಯನ್ನು ಕೈಗಿತ್ತಳು.
ಭಾವ ತುಂಬಿದ ಕುಡಿಕೆ.
ಮಾತಿಲ್ಲದೆ ತಗೆದುಕೊಂಡಳು; ಕುಡಿದಳು.
“ನಿದ್ದೆ ಚಂದಾಗ್ ಮಾಡ್ದೇನವ್ವ?”
“ಊ ಕಣಕ್ಕ”
“ಕನಸ್ನಾಗೆಲ್ಲ ಸೂರ್ಯಪ್ಪ! ಅಲ್ವಾ?”
“ವೋಗಕ್ಕ”-ಶಬರಿ ನಾಚಿಕೊಂಡಳು.
“ಯಾವಾಗ್ಲೂ ಇಂಗಿರ್‌ಬೇಕು ನೋಡು. ಎಲ್ಲಿ ಯೇಳು; ಏನಾತು ಕನಸ್ಸಾಗೆ.”
“ವೋಗಕ್ಕ ಅಂದ್ರೆ”-ಮತ್ತೆ ನಾಚಿಕೆ.
ಲಕ್ಷ್ಮಕ್ಕ ಶಬರಿಯ ಕೆನ್ನೆ ನೇವರಿಸಿ “ಏನ್ ಕನಸ್‍ಬಿತ್ತು ಯೇಳೇ ತಂಗೆವ್ವ” ಎಂದಳು.

ಶಬರಿ ಒಳಗಿಳಿದಳು.
‘ಅಕ್ಕ ಕೇಳವ್ವ, ಅಕ್ಕಯ್ಯ, ನಾನೊಂದು ಕನಸ ಕಂಡೆ!
ಅಕ್ಕಿಯಡಕೆ ಓಲೆ ತೆಂಗಿನಕಾಯ ಕಂಡೆ!
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ!
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿವೆನು!’

“ಯಾಕ್ ಅಂಗ್ ಸುಮ್ಕೆ ನಿಂತ್ಕಂಡೆ. ಏನಾತು ಯೇಳು ಕನಸ್ನಾಗೆ?”- ಲಕ್ಷ್ಮಕ್ಕ ಮತ್ತೆ ಕೇಳಿದಾಗ ಶಬರಿ ಎಚ್ಚೆತ್ತಳು.
“ನೀನೇ ಯೇಳಿದ್ದಲ್ಲ ಸೂರ್ಯ ಕನಸ್ನಾಗೆ ದ್ಯಾವ್ರ ತರಾ ಬತ್ತಾನೆ ಅಂಬ್ತ…”
ಶಬರಿ ಹೇಳುತ್ತಿರುವಾಗಲೇ ಲಕ್ಷ್ಮಕ್ಕ “ನಾನೇಳಿದ್ದು ದಿಟ ಆತೋ ಇಲ್ಲೋ?” ಎಂದು ತುಂಟ ನಗೆ ಬೀರಿದಳು. “ವೋಗ್ಲಿ. ಕನಸ್ನಾಗೆ ಏನೇನಾತು ಯೇಳವ್ವ?”
“ಅದೆಂಗ್ ಎಲ್ಲಾ ಯೇಳಾಕಾಯ್ತದೆ!”
“ಅಂಗಾರ್ ಯೇಳಾಕಾಗ್ದೆ ಇರಾದೆಲ್ಲ ಆಗೈತೆ ಅನ್ನು.”
“ವೋಗಕ್ಕ; ನಿಂದೊಳ್ಳೆ ನಗ್ಸಾರಾಟ ಆತು.”
“ಯಾಕವ್ವ? ಅಂಗೆಲ್ಲ ಕೇಳ್ದೆ ಅಂಬ್ತ ಬ್ಯಾಸ್ರಾನಾ?”
“ಬಿಡ್ತು ಅನ್ನು. ಅಂಗಂದ್ರೆ ನನ್ ನಾಲ್ಗೆ ಬಿದ್ದೊಗ್ಲಿ.”
“ಅಂಗೆಲ್ಲ ಯಾಕೆ ಅಂಬ್ತೀಯ ನನ್ನವ್ವ. ನೀನ್ ಚಂದಾಗಿದ್ರೆ ಆಟೇ ಸಾಕು.”
“ನಿನ್ನಂತ ಅಕ್ಕಯ್ಯ ಇರ್‍ವಾಗ ಚಂದಾಗೇ ಇರ್‍ತೀನಿ.”
“ಅಂಗಿರ್‌ಬೇಕು ನೋಡು. ಕನಸ್ನಾಗೆ ಸೂರ್ಯಪ್ಪ ಚಂದಾಗೇ ನಡಿಸ್ಕಂಡಿರ್‍ಬೇಕು” ಎಂದು ಮತ್ತೆ ತಮಾಷೆ ಮಾಡಿದಳು.

ಕನಸಿನ ಕೂಟದ ಮಾತು ಮನಸಲ್ಲೇ ಇತ್ತು.
ಹೇಳಲು ಹಾತೊರೆದರೂ ನಾಲಿಗೆ ನಾಚಿಕೊಂಡಿತ್ತು.
‘ಎನ್ನ ಮನವ ಮಾರುಗೊಂಡನವ್ವ!
ಎನ್ನ ತನುವ ಸೂರೆಗೊಂಡನವ್ವ!
ಎನ್ನ ಸುಖವನ್ನೊಪ್ಪುಗೊಂಡನವ್ವ!
ಎನ್ನಿರವನಿಂಬುಗೊಂಡನವ್ವ!

ಶಬರಿಯ ಮುಖದಲ್ಲೇ ಮಾತುಗಳನ್ನು ಓದಿಕೊಂಡ ಲಕ್ಷ್ಮಕ್ಕ “ಯಾವಾಗ್ಲೂ ಇಂಗೇ ಇರ್‍ಬೇಕು. ಯಾಕ್ ಗೊತ್ತೇನವ್ವ? ಕನಸಿಲ್ದೆ ಕಾಯಾಕಾಗಲ್ಲ ಕಣವ್ವ!” ಎಂದು ತಲೆ ನೇವರಿಸಿ ಹೊರಟಳು.

ಶಬರಿ ಭಾವುಕಳಾಗಿದ್ದಳು.
ಅಪ್ಪನಿಗೆಂದು ಅಡುಗೆ ಮಾಡಿಟ್ಟಳು. ಅಪ್ಪ ಬರಲಿಲ್ಲ. ಹುಚ್ಚೀರ ಬಂದ. ಆತನನ್ನು ಅಪ್ಪ ಎಲ್ಲೆಂದು ಕೇಳಿದಳು. ಗೊತ್ತಿಲ್ಲವೆಂದ. ಆತನೊಂದಿಗೆ ಹೊರಟಳು.
ಬಂದು ನೋಡಿದರೆ ತಿಮ್ಮರಾಯಿ ತೋಪಿನಲ್ಲಿದ್ದ.
ತೋಪಿನೊಳಗೆ ಬಂದ ಕೂಡಲೇ ಶಬರಿಗೆ ವಿಚಿತ್ರ ಅನುಭವ. ‘ನೀವು ಕಾಣಿರೇ ನೀವು ಕಾಣಿರೇ’ ಎಂದು ಮರವನ್ನು ಅಪ್ಪಿಕೊಳ್ಳುವ ಕಾತರ; ಕಳವಳ.
ತಿಮ್ಮರಾಯಿ “ಯಾಕವ್ವ ಇಲ್ಲೀಗಂಟ ಬಂದೆ. ನಾನೇ ಬತ್ತಿದ್ದೆ” ಎಂದು ತನ್ನಾರಕ್ಕೆ ತಾನು ಕೂತ.
ತಿಮ್ಮರಾಯಿ ಮಾತಾಡಲಿಲ್ಲ.
“ಯಾಕಪ್ಪ ಇಂಗಿದ್ದೀಯ?”- ಶಬರಿ ಕೇಳಿದಳು.
“ನಂಗೇನಾಗೈತವ? ಗುಂಡ್‌ಕಲ್ಲಿದ್ದಂಗಿವ್ನಿ”- ತಿಮ್ಮರಾಯಿ ನಗುತ್ತ ಹೇಳಿದ. ಆದರೆ ಆ ನಗುವಿನಲ್ಲಿ ಸಹಜತೆ ಇರಲಿಲ್ಲ; ಕೊರೆಯುವ ಚಳಿಗೆ ಹೂದ್ದುಕೊಂಡ ಹಳೇ ದುಪ್ಪಟಿಯಂತಿತ್ತು.

ತಾನು ಒಡೆಯನಿಗೆ-ಸೂರ್ಯನೇ ನನ್ನ ಗಂಡ-ಎಂದು ಹೇಳಿದ್ದು ಅಪ್ಪನಿಗೆ ಗೊತ್ತಾಗಿರಬಹುದೆ? ಒಡೆಯ ಮತ್ತೆ ಒತ್ತಾಯ ತಂದಿರಬಹುದೆ?-ಹೀಗೆ ಶಬರಿಗೆ ಹತ್ತಾರು ಯೋಚನೆ.

“ಊರಾಕೇನಾರ ವೋಗಿದ್ದೇನಪ್ಪ?”- ಕೇಳಿದಳು.
“ನಂಗೇನೈತವ್ವ ಕೆಲ್ಸ ಅಲ್ಲಿ?”
“ಓಡೇರ್ ವೂಲತ್ತಾವೇನಾರ ವೋಗಿದ್ದ?”
“ಈ ತೋಪ್ ಬಿಟ್ಟು ಎಲ್ಲೂ ವೋಗಿಲ್ಲ ಕಣವ್ವ”
“ತೋಪ್‌ಗೆ ಯಾರಾನ ಬಂದಿದ್ರಾ?”
“ಒಂದ್ ನರಪಿಳ್ಳೇನೂ ಸುಳ್ದಿಲ್ಲ.”
ಶಬರಿಗೆ ಖಚಿತವಾಯಿತು. ಅಪ್ಪನಿಗೆ ಯಾವುದೂ ಗೊತ್ತಿಲ. ಒಡೆಯ ಏನೂ ಹೇಳಿಲ್ಲ. ಇದು ಖಾತರಿಯಾಯಿತು. ಮತ್ತೊಂದು ಪ್ರಶ್ನೆ ಕಾಯುತ್ತಿತ್ತು.
“ಲಚ್ಮಕ್ಕ ಏನಾರ ಯೇಳ್ತೇನಪ್ಪ?”
ತಿಮ್ಮರಾಯಿ ಶಬರಿಯ ಮುಖನೋಡಿ ಮೌನವಾದ. ಸುಂಕಟಕಟ್ಟಯಲ್ಲಿ ಸಂಕಟಪಡುವ ಸರುಹೊತ್ತು-ಮಾತು! “ಯಾಕಪ್ಪ ಸುಮ್ಕಾದೆ?”
“ಯಾಕೂ ಇಲ್ಲವ್ವ, ಇವತ್ ಯಾಕ್ ಇಂಗೆಲ್ಲ ಕೇಳ್ತಾ ಇದ್ದೀಯ ಅಂಬ್ತ ಯೋಚ್ನೆ ಬಂತು. ಆಟೇಯ?”.
“ಯಾರಾನ ಮಾತಾಡಿ ನಿಂಗ್ ಬ್ಯಾಸ್ರ ಮಾಡವ್ರೇನೊ ಅಂಬ್ತ ಕೇಳ್ದೆ ಕಣಪ್ಪ. ಲಚ್ಮಕ್ಕ ನಂಗ್ ಆ ಕಾಯ್ಲೆ ಈ ಕಾಯ್ಲೆ ಅಂಬ್ತ ಏನಾರ ಎದ್ರಿಸೈತೇನೊ ಅಂಬ್ತ…”
“ಇಲ್ಲ ಕಣವ್ವ, ನಂಗ್ ಯಾರೂ ಎದ್ರಿಸಿಲ್ಲ. ಇದು ನಮ್ ಯಿರೇರ್ ಬೆಳ್ಸಿದ್ ತೋಪಲ್ವ, ಅದ್ಕೇ ಬಂದ್ ಕುಂತ್ಕಂಡೆ. ನಡೀ ವೋಗಾನ” ಎಂದು ಎದ್ದ.

ಹೋಗುವುದಕ್ಕೆ ಮುಂಚೆ ಮರವೊಂದನ್ನು ಬಲವಾಗಿ ತಬ್ಬಿಕೊಂಡ. ಇದನ್ನು ಕಂಡ ಹುಚ್ಚೀರ ತಾನೂ ಒಂದು ಮರವನ್ನು ತಬ್ಬಿಕೊಂಡ.

ಶಬರಿ ಇಬ್ಬರನ್ನೂ ನೋಡುತ್ತ ನಿಂತಳು.
ಈ ತೋಪಿನಲ್ಲೇ ಕೈ ಹಿಡಿದಿದ್ದನಲ್ಲ ಆ ಚಂಡಾಳ.
ಆಸ್ತಿ, ಅಂತಸ್ತಿನ ಅಹಂಕಾರ; ಅಧಿಕಾರ.
ಮರುಳಾಗುತೇನೆಂದು ನಂಬಿದ ಮರುಳ!
ತನ್ನೊಳಗೆ ತಾನು ನಕ್ಕಳು ಶಬರಿ.
“ಯಪ್ಪಾ”
ಶಬರಿಯ ಆಪ್ತ ದನಿಯಿಂದ ಏಚ್ಚೆತ್ತ ತಿಮ್ಮರಾಯಿ ಮರವನ್ನು ಬಿಟ್ಟು ಮಗಳ ಹತ್ತಿರ ಬಂದ. ಆಕೆಯ ಜೊತೆ ಮೌನವಾಗಿ ಹೆಜ್ಜೆ ಹಾಕಿದ.

ಹುಚ್ಚೀರ ತೋಪಿನೊಳಗೆ ನಿಂತಿದ್ದ.
ತೋಪು ತಳಮಳವಾಗಿತ್ತು.
ಶಬರಿ ಕೂಗಿದಳು.
ಹುಚ್ಚೀರ ಹಜ್ಜೆ ಕಿತ್ತಿಡುತ್ತ ಬಂದ.
ಮಾತಿಲ್ಲ. ಕತಯಿಲ್ಲ; ಮೌನದ ನಡಿಗೆ.
* * *

ಮಾರನೇ ದಿನ ಬಳಗ್ಗೆ; ಹೂರಗೆ ಹೋಗಿದ್ದ ಹುಡುಗರು ಓಡೋಡಿ ಬಂದರು. ನಾ ಮುಂದು ತಾ ಮುಂದು ಎಂಬಂತೆ ಕಿರುಚಿದರು-

“ತೋಪೆಲ್ಲ ಕಡ್ಡ್ ಆಕವ್ರೆ. ಒಂದ್ ಮರಾನೂ ಇಲ್ಲ. ಗಿಡಾನೂ ಇಲ್ಲ.” ಗಾಬರಿಯಿಂದ ಎಲ್ಲ ಬಂದರು. ಶಬರಿ ಕಂಗಾಲಾಗಿ ಕೇಳಿದಳು- “ಎನ್ಲಾ ನೀವೇಳ್ತಿರಾದು. ಏನಾಗೈತ್ರೊ ನಮ್ ತೋಪ್ಗೆ?”

“ಎಲ್ಲಾ ಕಡ್ಡಾಕವ್ರೆ ಕಣಕ್ಕ. ಒಂದ್ ಮರಾನೂ ಬಿಟ್ಟಲ್ಲ.”
ಏದುಸಿರು ಬಿಡುತ್ತ ಒಬ್ಬ ಹುಡುಗ ಹೇಳಿದ.
“ಏನಗೈತೆ ನೋಡಾನ” ಎಂದ ಪೂಜಾರಪ್ಪ.
ತಿಮ್ಮರಾಯಿ ಮಾತಾಡದೆ ಮುಂದಡಿಯಿಟ್ಟ.
ಶಬರಿ ರಭಸವಾಗಿ ಹೊರಟಳು. ಎಲ್ಲರೂ ಬರುವಂತೆ ಕರೆದಳು.
ಒಟ್ಟಿಗೇ ಹೂರಟರು. ಬಂದು ನೋಡಿದರು.

ನಿಜ; ತೋಪು ನಾಶವಾಗಿತ್ತು! ಒಂದೇ ರಾತ್ರಿಯಲ್ಲಿ ನಾಶವಾಗಿತ್ತು! ಮರಗಳನ್ನು ಸಾಗಿಸಲಾಗಿತ್ತು. ಮರವನ್ನು ಕೊಯ್ದ ಮಿಷಿನ್‌ಗಳು ಮದಹತ್ತಿ ನಿಂತಿದ್ದವು! ಜೊತೆಗೆ ಪೋಲಿಸರ ದಂಡು.

ಶಬರಿಯಾದಿಯಾಗಿ ಎಲ್ಲರೂ ಗರಬಡಿದಂತೆ ನಿಂತರು.
ನೋಡುನೋಡುತ್ತಿದ್ದಂತೆ ಕಣ್ಣುಗಳು ತುಂಬಿನಿಂತವು.

ಶಬರಿ ಮರಗಳನ್ನು ಉದ್ದೇಶಿಸಿ ಸೂರ್ಯನ ನೆನಪಲ್ಲಿ ‘ನೀವು ಕಾಣಿರೆ ನೀವು ಕಾಣಿರೆ’ ಎಂದಿದ್ದಳು. ಈಗ ಪೋಲಿಸರನ್ನು ಉದ್ದೇಶಿಸಿ ಮರಗಳನ್ನು ‘ನೀವು ಕಾಣಿರೆ ನೀವು ಕಾಣಿರೆ’ ಎಂದು ಕೇಳುವ ಸ್ಥಿತಿ. ಅವರು ನೆಟ್ಟಿದ್ದ ಬೋರ್‍ಡೊಂದರ ಕಡೆ ಬೊಟ್ಟು ಮಾಡಿ ತೋರಿಸಿದರು.

ಅದು ಬಹುರಾಷ್ಟ್ರೀಯ ಕಂಪನಿಯೊಂದರ ನಾಮಫಲಕ!
“ಆ ಒಡೆಯ ಎಲ್ಲಿ?”- ಶಬರಿ ಕೇಳಿದಳು.
“ಯಾವ್ ಒಡೆಯರು?”- ಪೋಲಿಸ್ ಅಧಿಕಾರಿ ಕೇಳಿದ- “ಊರ್‍ನಲ್ಲಿರೊ ಹಳೆ ಒಡಯಾರನೊ ಈ ಬೋರ್ಡ್ ಹಾಕಿರೊ ಹೊಸ ಒಡೆಯಾನೊ?”

“ಯಾರೋ ಒಬ್ಬ; ಈ ತೋಪಿನ್ ಜೀವ ತೆಗ್ದೋನು”- ಶಬರಿ ಸಂಕಟದಿಂದ ಸ್ಫೋಟಿಸಿದಳು.
“ಹಾಗೆಲ್ಲ ಅವ್ನು ಇವ್ನು ಅಂತ ಮಾತಾಡ್‌ಬೇಡ.”
“ಇನ್ನೇನ್ ದ್ಯಾವ್ರು ಅಂಬ್ತ ಆರತಿ ಮ್ಯಾಡ್‌ಬೇಕ?”
“ಬಾಯಿಗ್ ಬಂದಂಗ್ ಮಾತಾಡಿದ್ರೆ ಕಂಬಿ ಎಣಿಸ್ಬೇಕಾಗುತ್ತೆ ಕಂಬಿ. ನಮಗೆ ಕಾನೂನ್ ಮುಖ್ಯ.”
“ಮಾತಾಡ್ ಬಾರುದ್ದೇನ್ ಮಾತಾಡಿವ್ನೀ ನಾನು?”
“ನಿನ್ಗೆಲ್ಲ ವಿವರಣೆ ಕೊಡೋದು ನಮ್ ಕೆಲ್ಸ ಅಲ್ಲ.”

ಮಾತುಕತೆ ಆಗುತ್ತಿದ್ದಾಗಲೇ ಉಳಿದವರಲ್ಲಿ ಆವೇಶ ಆವರಿಸುತ್ತಿತ್ತು. ಸಣ್ಣೀರ “ಸುಮ್ಕೆ ಯಾಕವ್ವ ಮಾತಾಡಾದು? ಮುಂದೇನ್ ಮಾಡ್‌ಬೇಕೊ ಅದನ್ ಮಾಡಾನ. ಯೇಳವ್ವ ಏನ್ ಮಾಡ್‌ಬೇಕು” ಎಂದು ಕೇಳಿದ.

“ಅಳೇ ಒಡಯಾನೊ ವೊಸಾ ಒಡೆಯಾನೊ, ಯಾರಾನ ಬರಾವರ್‍ಗೂ ಇಲ್ಲೇ ಕುಂತ್ಕಮಾನ. ಅದೇನ್ ಮಾಡ್ತಾರೂ ಮಾಡ್ಲಿ” ಎಂದು ಶಬರಿ ನಿರ್‍ಧಾರಕವಾಗಿ ನುಡಿದಳು.

“ಮತ್ತೇನ್ ಕಣಿಕೇಳಾದು. ಕಡ್ದಿರಾ ಬುಡಾ ಐದಾವಲ್ಲ. ಅಲ್ಲೆ ಕುಂತ್ಕಮಾನ ನಡೀರಿ” ಎಂದು ಸಣ್ಣೀರ ಹುರಿದುಂಬಿಸಿದ.

ಶಬರಿ ಮುನ್ನುಗ್ಗುತ್ತಿದ್ದಂತೆ ಎಲ್ಲರೂ ಹೆಜ್ಜಯಿಟ್ಟರು. ಅಷ್ಟರಲ್ಲಿ ನೂರಾರು ಪೋಲಿಸರು ಅಡ್ಡನಿಂತರು.

“ಮುಂದಕ್ ಹೆಜ್ಜೆ ಇಟ್ರೆ ಎಲ್ರನ್ನೂ ಎತ್‌ಹಾಕ್ಕಂಡ್ ಹೋಗ್ತೀನಿ” ಎಂದು ಅಧಿಕಾರಿ ಘೋಷಿಸಿದ. ಅದೇ ಉಸಿರಿನಲ್ಲಿ ಪೋಲಿಸರು ಎಲ್ಲರನ್ನೂ ಹಿಂದಕ್ಕೆ ನೂಕಿದರು. ಶಬರಿ ಎಲ್ಲರಿಗೂ ಹೇಳಿದಳು- “ಇವ್ರ್ ಬುಡುತ್ತಾವ್ ಬಿಡ್ದೇ ಇದ್ರೆ ಇಲ್ಲೇ ಕುಂತ್ಕಮನ. ಕುಂತ್ಕಳ್ರಿ.”

ಎಲ್ಲರೂ ಕೂತರು. “ಈ ಭೂಮಿ ನಮ್ಮದು” ಹಾಡು ಹೇಳತೂಡಗಿದರು. ಪೋಲಿಸ್ ಅಧಿಕಾರಿ ಎಚ್ಚರಿಸಿದಷ್ಟೂ ಇವರ ಹಾಡು ಎತ್ತರಕ್ಕೇರಿತು. ಕಡಗೆ ಅಧಿಕಾರಿ ಅಧೀನ ಇನ್ಸ್‌ಪೆಕ್ಟರ್ ಒಬ್ಬನನ್ನು ಕರೆದು ಕಿವಿಯಲ್ಲಿ ಏನೋ ಹೇಳಿದ. ಆತ ಜೀಪ್‌ನಲ್ಲಿ ಹೊರಟ.

ಹಾಡು ಹೇಳುತ್ತ ಕೂತೇ ಇದ್ದರು.

ಹೋದ ಜೀಪ್ ವಾಪಸ್ ಬಂದಿತು. ಇನ್ಸ್‌ಪೆಕ್ಟರ್ ಮೇಲಧಿಕಾರಿಗೆ ವರದಿ ಒಪ್ಪಿಸಿದ. ಆಮೇಲೆ ಅಧಿಕಾರಿ ಹೇಳಿದ-

“ನನ್ ಮಾತ್ ಕೇಳ್ರಿ. ನಿಮ್ಮೂರ್ ಒಡೆಯರು ಊರಲ್ಲಿಲ್ಲ. ಎಲ್ಲಾ ಒಟ್ಟಿಗೆ ಬೆಂಗಳೂರಿಗೆ ಹೋಗಿದಾರೆ. ನೀವಿಲ್ಲಿ ಎಷ್ಟು ಹೊತ್ತು ಕೂತ್ರೂ ಏನೂ ಆಗೋದಿಲ್ಲ. ನಾನ್ ಅವ್ರಿಗೆ ಏನ್ ನಡೀತು ಅಂತ ತಿಳುಸ್ತೀನಿ. ಈಗ ಎದ್ ಹೋಗಿ ನಾಳೆ ಅವ್ರ್ ಬಂದಾಗ ಮಾತಾಡಿ.”

ಶಬರಿಯ ಸುತ್ತಮುತ್ತ ಸಣ್ಣೀರ, ಪೂಜಾರಪ್ಪ ಮುಂತಾದವರೆಲ್ಲ ಕೂತು ಸಮಾಲೋಚಿಸಿದರು. ಪೂಜಾರಪ್ಪ “ಎಂಗಿದ್ರೂ ಇವತ್ತೊ ನಾಳೇನೊ ನವಾಬ್ ಬತ್ತಾನೆ. ಆಮೇಲ್ ಏನ್ ಮಾಡಾದು ಅಂಬ್ತ ಕೇಳ್ಕಮಾನ. ಅಲ್ಲೀಗಂಟ ಸುಮ್ಕಿರಾನ.” ಎಂದು ಕೊಟ್ಟ ಸಲಹ ಅನೇಕರಿಗೆ ಸರಿಯನ್ನಿಸಿತು. ಶಬರಿ ಮಾತ್ರ ಮಾತಾಡಲಿಲ್ಲ. ಸೂರ್ಯ, ನವಾಬ ಇಲ್ಲದಾಗ ತಮಗೆ ತೋಚಿದಂತೆ ಮಾಡುವುದು ಸರಿಯಲ್ಲವೆಂಬ ಅಭಿಪ್ರಾಯಕ್ಕೆ ಎಲ್ಲರೂ ಬಂದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತು ಹಾಯ್ಕುಗಳು
Next post ಅರ್‍ಥವಾಗುತ್ತಿಲ್ಲ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…