ಮಳೆ ಹನಿಯ ಬಿಡು ಹೂಗಳಲಿ, ಮರ
ಗಳ ಹಸುರು ಹಚ್ಚೆಯಲಿ, ಕಡಲಿನ
ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ,
ಹೊಳೆವ ಹೊಳೆಗಳ ಗಳದ ಸರದಲಿ
ಝಳದ ಹಿಮಗಿರಿಮಕುಟದಲ್ಲಿ ಥಳ
ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ!
ಹೊತ್ತಿಸಿದೆನೌ ಮುಂಚಿನಾಳಕೆ
ವೆತ್ತ ಬೀರರ ಪೂರ್ವದರಸರ
ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ
ಹೆತ್ತ ನಿನ್ನೀಬಸುರು, ನನ್ನನು
ಹೆತ್ತು ಹಡೆಯಿತು ವಿಷವ; ಸೀಗೆಯ
ಬಿತ್ತು ಮೊಳೆತಂತಾಯ್ತು ಬಾಳೆಯ ಬುಡದಿ ನನ್ನಿಂದ!
ಕತ್ತಿವೀರರು ನಿನ್ನ ಹಗೆತಲೆ
ಯೊತ್ತಿ, ರಣದಲಿ ಜಯಿಸಿ, ಕುಂಕುಮ
ನೆತ್ತರಿನ ಬೊಟ್ಟಿಟ್ಟು ಶೌರ್ಯದ ಹಣೆಯ ನಡುವಿನಲಿ,
ಮತ್ತೆ ಕೀರ್ತಿಯ ಕಾಲ್ಗೆ ಗೆಜ್ಜೆಯ
ಸುತ್ತಿ ಬೆಳಗಿದ ನಿನ್ನ ಮುಖದಲಿ
ಬಿತ್ತು ನನ್ನೆದೆಯೊಳಗೆ ತುಂಬಿದ ಕತ್ತಲೆಯ ನೆರಳು.
ಮೆರೆದೆನೌ ಹೊಂಗೋಳ ಕೈಯಲಿ
ಮೆರೆದೆನೌ ಮಾಯೆಯಲಿ ಹೊಟ್ಟೆಯ
ಹೊರೆದೆನೌ, ನನ್ನೆಲುಬು ಮಾಂಸವ ನಾನೆ ಉಂಡುಂಡು!
ತೊರೆದೆನೌ ನನ್ನವರ ಮುಟ್ಟಿದೆ
ಒರೆದೆನೌ ಪರತಂತ್ರ ಪಾಠವ
ಬರೆದೆನೌ ನಿನ್ನಯ ಲಲಾಟದಿ ದಾಸ್ಯಮುದ್ರೆಯನು!
ಕದ್ದ ಕಳ್ಳನು ಕೆಡುಕನಾದರು
ಮುದ್ದು ಮಗನಲೆ ತಾಯಿಗಾತನ
ನೊದ್ದು ಬಿಡುವಳೆ? ತಾಯೆ! ನೋಡೌ ಕರುಣದಿಂದೀಗ!
ನಿದ್ದೆಯಿಂದೆಚ್ಚೆತ್ತೆ, ಹೋ! ಹೋ!
ತಿದ್ದಿಕೊಳ್ಳಲು ಹೊತ್ತಿದೇ! ನೀ
ನಿದ್ದು ಕೈಗೊಟ್ರೆನಗೆ ಕಲಿಸೌ ನಿನ್ನ ಸೇವೆಯನು!
ನನ್ನ ಹಸಿ ಮೈದೊಗಲ ಜೋಡನು
ನಿನ್ನಡಿಗೆ ಜೋಡಿಸುವೆ; ಗುಡಿಸುವೆ
ನನ್ನ ಕೂದಲ ಚೌರಿಯಲಿ ನಿನ್ನಡಿಯ ಧೂಳಿಯನು;
ನನ್ನ ಮನದಲ್ಲಿ ಹಿಡಿವೆ ನಿನ್ನನು!
ಇನ್ನು ಕುಳ್ಳಿರ್ದೀ ಮನೋರಥ
ವನ್ನು ಬೇಗನೆ ನೂಕಿ ನಡೆವೆನು ಸುಖವ ಮೇರುವಿಗೆ!
ಎಲ್ಲಿ ಸಾಹಸ ಸತ್ವದಳತೆಗೆ
ಬಳ್ಳವಾಗದೊ ಮೈಯ ಬಣ್ಣವು,
ಎಲ್ಲಿ ಅನ್ಯಾಯಕ್ಕೆ ಕತ್ತಿಯು ಕೊಡದೊ ಬೆಂಬಲವ,
ಎಲ್ಲಿ ಆತ್ಮೋನ್ನತಿಯ ಹಾದಿಗೆ
ಕಲ್ಲು ಮುಳ್ಳನ್ನಿಡಿರೊ, ಆ ಸುಖ
ಸಲ್ಲಲಿತ ಸಮ ಸತ್ಯ ಸೀಮೆಗೆ ತಾಯೆ ನಡಿಸೆನ್ನಾ!
*****