ರಂಗಣ್ಣನ ಕನಸಿನ ದಿನಗಳು – ೮

ರಂಗಣ್ಣನ ಕನಸಿನ ದಿನಗಳು – ೮

ಮೇಷ್ಟ್ರು ಮುನಿಸಾಮಿ

ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ ಮಾಡಿ ಕೊಂಡು ಮಧ್ಯಾಹ್ನದ ಹೊತ್ತಿಗೆ ಊರನ್ನು ಬಂದು ಸೇರುತ್ತೇನೆ’ ಎಂದು ಹೇಳಿ ಬೈಸ್ಕಲ್ ಹತ್ತಿಕೊಂಡು ಹೊರಟನು. ದಾರಿಯಲ್ಲಿ ಎರಡು ಪಾಠಶಾಲೆಗಳನ್ನು ನೋಡಿದ ಮೇಲೆ ಸ್ವಲ್ಪ ಅಡ್ಡದಾರಿ ತಿರುಗಿ ತೀರ ಒಳನಾಡಿನ ಬೈರಮಂಗಲದ ಪಾಠಶಾಲೆಯನ್ನು ನೋಡೋಣವೆಂಬ ಒಂದು ಹುಚ್ಚು ಆಲೋಚನೆ ಹುಟ್ಟಿಕೊಂಡಿತು. ಬೈಸ್ಕಲ್ ತಿರುಗಿಸಿ ಕಾಲ ರಸ್ತೆಯಲ್ಲಿ ಹೊರಟನು. ಆದರೆ ದಾರಿ ಬಹಳ ಒರಟಾಗಿದ್ದಿತು. ಹಳ್ಳ ಕೊಳ್ಳಗಳ ಜೊತೆಗೆ ಕಲ್ಲುಗಳು ಹೆಚ್ಚಾಗಿದ್ದುವು. ಆದ್ದರಿಂದ ಅಲ್ಲಲ್ಲಿ ಬೈಸ್ಕಲ್ಲಿಂದ ಇಳಿದಿಳಿದು ಅದನ್ನು ತಳ್ಳಿಕೊಂಡು ಹೋಗಬೇಕಾಗಿತ್ತು. ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗದೆ ಇದೇನು ಕಷ್ಟವನ್ನು ತಲೆಗೆ ಕಟ್ಟಿಕೊಂಡೆ ? ಎಂದು ಪೇಚಾಡುತ್ತ, ಮುಖದಿಂದ ಇಳಿಯುತ್ತಿದ್ದ ಬೆವರನ್ನು ಒರಸಿಕೊಳ್ಳುತ್ತ ಹೋಗುತ್ತಿದ್ದನು. ರಸ್ತೆ ಸ್ವಲ್ಪ ಏರಾಗಿತ್ತು. ಆಗ ಎದುರು ಕಡೆಯಿಂದ ಒಬ್ಬ ಹಳ್ಳಿಯ ಮುದುಕನು – ಅರುವತ್ತು ವರ್ಷ ವಯಸ್ಸು ಮೀರಿದವನು – ನಿಧಾನವಾಗಿ ನಡೆದು ಬರುತ್ತಿದ್ದನು. ಆ ಗೌಡ ಹತ್ತಿರಕ್ಕೆ ಬರುತ್ತಲೂ, ‘ಯಾವೂರ್ ಸೋಮಿ?’ ಎಂದು ಕೇಳಿದನು.

‘ನಮೂರು ಜನಾರ್ದನಪುರ.’

‘ಮತ್ತೆ ಈ ಕಾಡ ದಾರೀಲಿ ಬರ್ತಿವ್ರಿ.’

‘ಇಲ್ಲಿ ಸ್ಕೂಲ್ ನೋಡೋಣ ಎಂದು ಹೊರಟಿದ್ದೇನೆ.’

‘ಇಸ್ಕೋಲ್ ಇನ್ ಚ್‍ಪೆಟ್ರಾ ! ಸರಿ ಸೋಮಿ, ಅಂಗೆ ಕಾಲ ಗಾಡಿ ಅತ್ತಿಕೊಂಡು ತುಳೀತಿದ್ರೆ ಅಂಡು ಉರಿಯಾಕಿಲ್ವಾ? ಏನು ಸೋಮಿ?’

ರಂಗಣ್ಣನಿಗೆ ನಗು ಬಂತು. ಕಾವ್ಯಗಳಲ್ಲಿ ಹೇಳುವಂತೆ ಸಂಸ್ಕೃತ ಪದ ಉಪಯೋಗಿಸಿದರೆ ಗಂಭೀರವಾಗಿರುತ್ತದೆ, ಮೋಹಕವಾಗಿರುತ್ತದೆ. ಹಳ್ಳಿಯವನು ಕನ್ನಡದ ಮಾತನ್ನೇ ಆಡಿದನು!

‘ಉರೀತೈತಪ್ಪಾ ! ಏನು ಮಾಡೋದು ಹೇಳು ಮೇಷ್ಟ್ರು ಸರಿಯಾಗಿ ಬರುತ್ತಾರೋ ಇಲ್ಲವೋ, ಪಾಠ ಹೇಗೆ ಮಾಡ್ತಾರೋ ಏನೋ, ನೋಡ ಬೇಕೋ ಬೇಡವೋ ? ನಮ್ಮ ಕೆಲಸ ನಾವು ಮಾಡ ಬೇಡವೇ?’

ಅದ್ಯಾಕ್ಸೋಮಿ ನೀನು ಆಂಡುರಿಸಿಕೊಂಡು ಅಂಗೆಲ್ಲ ಸುತ್ತಾಡೋದು ? ಮೇಷ್ಟ್ರೇನು ಕಳ್ರಾ? ಕೆಲಸ ಮಾಡ್ತವ್ರೆ. ನಮ್ಮೂರಾಗೂ ಒಬ್ಬ ಮೇಷ್ಟ್ರು ಅವ್ರೆ. ಬೆಳಗಾನ ಆರು ಗಂಟೆಗೆಲ್ಲ ಬಾಕಲ್ ತಕೊಂಡು ಕಲ್ಸ ಮಾಡ್ತರೆ.’

ರಂಗಣ್ಣನಿಗೆ ಏನು ಉತ್ತರ ಕೊಡ ಬೇಕೆಂಬುದು ಗೊತ್ತಾಗಲಿಲ್ಲ. ‘ಮೇಷ್ಟ್ರು ಸ್ಕೂಲಿನಲ್ಲಿದ್ದಾರೋ?’ ಎಂದು ಕೇಳಿದನು.

‘ಹುಂ ಸೋಮಿ ಆವ್ರೆ’. ನಡಕೊಂಡೇ ಹೋಗಿ ಸೋಮಿ ; ಬೈಸ್ಕೋಲ್ ಹೆಚ್ಚಾಗಿ ತುಳಿದ್ರೆ ದೇಹಕ್ಕೆ ಉಷ್ಣಾ ಆಗ್ತೈತೆ, ಮೈ ಗೊಳ್ಳೇದಲ್ಲ.’ ಎಂದು ಹೇಳಿ ಗೌಡನು ಮುಂದಕ್ಕೆ ಹೊರಟನು.

ದಾರಿ ಚೆನ್ನಾಗಿಲ್ಲದ್ದರಿಂದ ರಂಗಣ್ಣ ನಡೆದುಕೊಂಡೇ ಹೋಗಬೇಕಾಯಿತು. ಆ ಮುದುಕ ಹೇಳಿದ ಬುದ್ಧಿವಾದ ರಂಗಣ್ಣನಿಗೆ ಕಣ್ಣು ಬಿಡಿಸಿತು, ‘ಹಳ್ಳಿಯ ಜನ ಅನ್ನುತ್ತೇವೆ. ಅವರಲ್ಲಿ ಎಷ್ಟು ವಿವೇಕವಿದೆ ? ಮೇಷ್ಟ್ರ್‍ಏನು ಕಳ್ರಾ? ಎಂದು ನನಗೆ ಹೇಳಿದನಲ್ಲಾ. ನಮ್ಮ ಮನಸ್ಸಿನಲ್ಲಿರೋದು ಅದೇ ಭಾವನೆ ತಾನೆ? ಮನಕ್ಕೆ ಮನವೇ ಸಾಕ್ಷಿ. ಉಪಾಧ್ಯಾಯರನ್ನು ಗೌರವದಿಂದ ಕಾಣಬೇಕು ಎಂದು ಉಪದೇಶ ಮಾಡುವ ನಾನು ಕಳ್ಳತನದ ಪತ್ತೆಗೆ ಹೊರಟ ಪೊಲೀಸಿನವನಾದೆ. ಇದು ನೀಚ ಕೆಲಸ, ಆದರೆ ಕೆಲವರು ಕಳ್ಳಾಟ ಆಡುತ್ತಾರಲ್ಲ, ಅದನ್ನು
ತಪ್ಪಿಸುವುದು ಹೇಗೆ ? ಏನಾದರೂ ಉಪಾಯ ಮಾಡಬೇಕಲ್ಲ – ಎಂದು ಆಲೋಚನೆ ಮಾಡುತ್ತ ಆ ಬೋರೆಯನ್ನು ಇಳಿದು ನಾಲ್ಕು ಫರ್‍ಲಾಂಗು ದೂರ ಹೋದನು. ಎದುರಿಗೆ ಎರಡು ಫರ್ಲಾಂಗು ದೂರದಲ್ಲಿ ಸ್ಕೂಲು ಕಟ್ಟಡ ಕಂಡಿತು, ಮುಂದುಗಡೆ ಹುಡುಗರು ಬಿಸಿಲಿನಲ್ಲಿ ಆಟ ವಾಡುತ್ತಿದ್ದರು. ಬೆಳಗಿನ ವಿರಾಮಕಾಲವಾದ್ದರಿಂದ ಆ ಹುಡುಗರು ಹೊರಕ್ಕೆ ಬಂದಿದ್ದರು. ಇನ್ನು ಒಂದು ಫರ್ಲಾಂಗು ಹೋದಾಗ ಸ್ಕೂಲ್ ಮುಂದಿದ್ದ ಹುಡುಗರು ಕೆಲವರು ಇನ್‌ಸ್ಪೆಕ್ಟರ್‌ ಬರುವುದನ್ನು ನೋಡಿ ಸ್ಕೂಲೊಳಕ್ಕೆ ಓಡಿಹೋಗಿ ಮೇಷ್ಟರಿಗೆ ವರ್ತಮಾನ ಕೊಟ್ಟು ಬಿಟ್ಟರು. ಕೂಡಲೇ ಸ್ಕೂಲಿನ ಗಂಟೆಯನ್ನು ಬಾರಿಸಿದ ಸದ್ದು ಕೇಳಿ ಬಂತು. ಹೊರಗಿದ್ದ ಮಕ್ಕಳೆಲ್ಲ ಬುಡುಬುಡನೆ ಒಳಕ್ಕೆ ಹೊರಟು ಹೋದರು. ರಂಗಣ್ಣ ಕಟ್ಟಡದ ಸಮೀಪಕ್ಕೆ ಬರುವ ಹೊತ್ತಿಗೆ ಒಳಗಿನಿಂದ ನಾಲ್ಕು ಜನ ಹಳ್ಳಿಯವರು ತಲೆಗೆ ಮುಸುಕಿಟ್ಟು ಕೊಂಡು ಹೊರಕ್ಕೆ ಬಂದವರು ಓಡಿ ಹೋದರೆಂದೇ ಹೇಳಬೇಕು; ಅಷ್ಟು ವೇಗವಾಗಿ ಹೊರಟುಹೋದರು. ತಾನು ಬರುವುದನ್ನು ತಿಳಿದು ಪಲಾಯನ ಮಾಡಿದರೆಂದು ರಂಗಣ್ಣ ತಿಳಿದುಕೊಂಡು ಪಾಠಶಾಲೆಯೊಳಕ್ಕೆ ಪ್ರವೇಶಿಸಿದನು. ಮಕ್ಕಳು ಮೌನವಾಗಿ ಎದ್ದು ನಿಂತು ನಮಸ್ಕಾರಮಾಡಿ ಸ್ವಾಗತಿಸಿದರು. ಮೇಷ್ಟ್ರು ಸಹ ವಂದಿಸಿ ದೂರದಲ್ಲಿ ನಿಂತುಕೊಂಡನು. ರಂಗಣ್ಣನು ಮಕ್ಕಳನ್ನು ಕುಳಿತು ಕೊಳ್ಳ ಹೇಳಿ ಗಡಿಯಾರವನ್ನು ನೋಡಿದನು. ಇನ್ನೂ ಆಟದ ವಿರಾಮ ಹತ್ತು ನಿಮಿಷಗಳಿದ್ದುವು. ಅಷ್ಟರಲ್ಲಿ ಮಕ್ಕಳೆಲ್ಲ ಆಟ ಬಿಟ್ಟು ಒಳಕ್ಕೆ ಬಂದರಲ್ಲ ಎಂದು ಯೋಚಿಸಿ ಪುನಃ ಅವರನ್ನೆಲ್ಲ ಆಟಕ್ಕೆ ಕಳಿಸಿದನು. ಬಳಿಕ ಕುರ್ಚಿಯ ಮೇಲೆ ಕುಳಿತು ಮೇಜಿನ ಅರೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಆ ಮೇಜು ತಿರುಗಮುರುಗಾಗಿತ್ತು! ಸೆಳೆಖಾನೆ ಆಚೆಯ ಬದಿಗಿತ್ತು! ಮೇಷ್ಟ್ರೆ! ಹಾಜರಿ ರಿಜಿಸ್ಟರ್ ಇತ್ತ ಕೊಡಿ. ಇದೇಕ ಮೇಜನ್ನು ತಿರುಗಿಸಿ ಹಾಕಿದ್ದೀರಿ ? ಸರಿಯಾಗಿ ಹಾಕಿ.’

‘ಸ್ವಾಮಿ ! ಸೆಳೆಖಾನೆ ಆಚೆ ಕಡೆಗೆ ಬಂದರೆ ಸ್ವಾಮಿಯವರಿಗೆ ತೊಂದರೆ, ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಳ್ಳಬೇಕಾಗುತ್ತೆ. ಸ್ವಾಮಿಯವರಿಗೆ ನಾನೇ ತೆಗೆದುಕೊಡ್ತೇನೆ’ ಎಂದು ಹೇಳಿ ಮತ್ತು ಒಳಗಿದ್ದ ಹಾಜರಿ ರಿಜಿಸ್ಟರನ್ನು ತೆಗೆದು ಮೇಜಿನ ಮೇಲಿಟ್ಟನು.

ರಂಗಣ್ಣ ಅದನ್ನು ತನಿಖೆ ಮಾಡಿದಾಗ ಹಾಜರಿಯೆಲ್ಲ ಗುರ್ತಿಸಿತ್ತು. ಸರ್ಕ್ಯುಲರಿನಂತೆ ಮೇಷ್ಟ್ರು ನಡೆದು ಕೊಂಡಿದ್ದನು. ರಂಗಣ್ಣನಿಗೆ ಸಂತೋಷವಾಗಿ ಮೇಷ್ಟರ ಮುಖವನ್ನು ನೋಡಿ ಮುಗುಳುನಗೆ ಸೂಸಿದನು. ಪ್ರಸನ್ನರಾಗಿದ್ದ ಇನ್ಸ್‍ಪೆಕ್ಟರನ್ನು ನೋಡಿ ಮೇಷ್ಟ್ರು ತನ್ನ ಗಡ್ಡವನ್ನು ಸವರಿಕೊಳ್ಳುತ್ತ’ ‘ಸ್ವಾಮಿಯವರಿಗೆ ! ಸ್ವಲ್ಪ, ಸ್ವಾಮಿಯವರಿಗೆ!’ ಎಂದನು. ರಂಗಣ್ಣನಿಗೆ ಅರ್ಥವಾಗಲಿಲ್ಲ. ‘ಅಡ್ಮಿಷನ್ ರಿಜಿಸ್ಟರ್ ಕೊಡಿ ಮೇಷ್ಟ್ರೆ’ ಎಂದು ಕೇಳಿದನು, ಪೆಟ್ಟಿಗೆಯಿಂದ ಅದನ್ನು ಮೇಷ್ಟ್ರು ತೆಗೆದು ಕೊಟ್ಟಿದ್ದಾಯಿತು. ಅದನ್ನು ತನಿಖೆಮಾಡುತ್ತ ಮತ್ತೊಮ್ಮೆ ಮೇಷ್ಟರನ್ನು ನೋಡಿದಾಗ, ‘ಸ್ವಾಮಿಯವರಿಗೆ ! ಸ್ವಲ್ಪ !’ ಎಂದು ಮೊದಲಿನಂತೆಯೇ ಗಡ್ಡವನ್ನು ಸವರಿಕೊಂಡು ಮೇಷ್ಟ್ರು ಹೇಳಿದನು. ‘ಏನು ಮೇಷ್ಟ್ರೆ’ ಸ್ವಾಮಿ ಯವರಿಗೇನು ? ಸ್ವಲ್ಪ ಏನು ?’ ಎಂದು ರಂಗಣ್ಣ ಕೇಳಿದನು.

‘ಸ್ವಾಮಿಯವರಿಗೆ ಗಡ್ಡ ಸ್ವಲ್ಪ…….’

‘ಗಡ್ಡ ಏನಾಗಿದೆ ಮೇಷ್ಟ್ರೆ? ಸ್ವಲ್ಪ ಬೆಳೆದಿದೆ. ಇವೊತ್ತು ನಾನು ಕ್ಷೌರ ಮಾಡಿಕೊಂಡು ಹೊರಡಲಿಲ್ಲ. ಊರು ಸೇರಿದ ಮೇಲೆ ಕ್ಷೌರ ಮಾಡಿಕೊಂಡು ಸ್ನಾನ ಮಾಡುತ್ತೇನೆ. ನಿಮಗೇಕೆ ಅದರ ವಿಚಾರ ?’

‘ಸ್ವಾಮಿಯವರಿಗೆ, ಅಪ್ಪಣೆ ಯಾದರೆ……..’

‘ಏನು ಅಪ್ಪಣೆಯಾದರೆ ?…. ಸಂಬಳ ಬಟವಾಡೆ ರಿಜಿಸ್ಟರ್ ಇಲ್ಲಿ ಕೊಡಿ’

‘ಎಲ್ಲಾ ರೋಜಿಸ್ಟರ್ ಪಕ್ಕಾ ಮಡಗಿದ್ದೀನಿ ! ಸ್ವಾಮಿಯವರಿಗೆ, ಅಪ್ಪಣೆಯಾದರೆ….’ ಎಂದು ಪುನಃ ಗಡ್ಡವನ್ನು ಸವರಿಕೊಳ್ಳುತ್ತ ಆ ಮೇಷ್ಟು ನಿಂತುಕೊಂಡನು.

‘ಅಪ್ಪಣೆಯಾದರೆ ಏನು ಮಾಡ್ತೀರಿ ಮೇಷ್ಟ್ರೆ? ಕ್ಷೌರದವನನ್ನು ಕರೆಸುತ್ತಿರಾ?’

‘ಅದ್ಯಾಕೆ ಸ್ವಾಮಿ ಹೊರಗಿನವನು ? ಒಂದು ಲಾಜಾದೊಳಗೆ ಮೈಸೂರು ಸೋಪು ಹಚ್ಚಿ ನುಣ್ಣಗೆ ಮಾಡಿ ಬಿಡ್ತನೆ!’

ರಂಗಣ್ಣ ಕಕ್ಕಾಬಿಕ್ಕಿಯಾಗಿ ‘ಏನ್ ಮೇಷ್ಟೇ ! ನೀವು ಕ್ಷೌರದವರೇನ್ರ್‍ಏ?’ ಎಂದು ಕೇಳಿದನು.

‘ತಮ್ಮ ಶಿಷ್ಯ ಸಾರ್ ! ನನ್ನ ಗುರುಗಳು ತಾವು !’

ರಂಗಣ್ಣ ಹಾಗೆಯೇ ದುರುಗುಟ್ಟಿಕೊಂಡು ಆ ಮೇಷ್ಟರನ್ನು ನೋಡಿದನು. ಮುಖದ ಛಾಯೆ ಎಲ್ಲಿಯೋ ನೋಡಿದ ಜ್ಞಾಪಕ.

‘ತಾವು ಮರೆತುಹೋಗಿದ್ದೀರಿ ಸಾರ್. ನಾನು ಮುನಿಸಾಮಿ. ತುಮಕೂರು ನಾರ್‍ಮಲ್ ಸ್ಕೂಲಿನಲ್ಲಿ ತಮ್ಮ ಶಿಷ್ಯ.’

ಆಗ ಸಮಸ್ಯೆ ಬಗೆಹರಿಯಿತು. ಒಳ್ಳೆಯ ಶಿಷ್ಯ ! ಒಳ್ಳೆಯ ಗುರು ! ಹಜಾಮರ ಗುರು ! ದೊಡ್ಡ ಹಜಾಮನ ಪಟ್ಟ ತನಗೆ ಬಂದ ಹಾಗಾಯಿತು. ಒಂದು ನಿಮಿಷ ಹಾಗೆಯೇ ಆಲೋಚನಾ ಮಗ್ನನಾಗಿದ್ದು, ‘ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಹಜಾಮತ್ ಮಾಡುವ ಪರೀಕ್ಷಕರು ದೊಡ್ಡ ಹಜಾಮರಲ್ಲದೆ ಮತ್ತೆ ಏನು ? ನಾನು ಸಹ ಆ ಹಜಾಮನ ಕೆಲಸ ಮಾಡಿದ್ದೆನಲ್ಲ’ ಎಂದು ಹೇಳಿಕೊಂಡನು. ಈಗೇನು ಮಾಡಲಿ ಮೇಷ್ಟ್ರೇ ? ನಿಮ್ಮ ಸ್ಕೂಲ್ ತನಿಖೆ ಮಾಡಲೇ ಬೇಡವೇ?’

ಅಗತ್ಯ ಮಾಡಿ ಸಾರ್, ಈ ದಿನ ಇಲ್ಲೆ ಮೊಕ್ಕಾಂ ಮಾಡಿ ಸ್ನಾನ, ಊಟ ಮುಗಿಸಿಕೊಂಡು ಸಾಯಂಕಾಲ ಊರು ಸೇರಬಹುದು. ಶ್ಯಾನುಭೋಗರು ಒಳ್ಳೆಯವರು ಎಲ್ಲಾ ಏರ್ಪಾಟು ಮಾಡ್ತಾರೆ’ ಎಂದು ಹೇಳಿ ಗೋಡೆಗೆ ಹಾಕಿದ ನೀಲಿಬಟ್ಟೆಯ ಪರದೆಯನ್ನು ಮೇಷ್ಟ್ರು ಎಳೆದನು, ಸೊಗಸಾದ ದೊಡ್ಡ ಕನ್ನಡಿ! ರಂಗಣ್ಣನ ಮುಖ ಸೊಗಸಾಗಿ ಅದರಲ್ಲಿ ಕಂಡು ಬರುತ್ತಿತ್ತು. ತಾವು ಕ್ರಾಪ್ ಬಿಟ್ಟಿದ್ದೀರಿ ಸಾರ್. ಒಳ್ಳೆ ಫ್ರೆಂಚ್ ಕಟ್ ಮಾಡುತ್ತೇನೆ, ಶಿಷ್ಯನ ಕೈವಾಡ ಸ್ವಲ್ಪ ನೋಡಿ!’

‘ಮೇಷ್ಟೇ ! ಇದೇನು? ಹೊರಗೆ ನೋಡಿದರೆ ಪ್ರಾಥಮಿಕ ಶಾಲೆ, ಒಳಗೆ ನೋಡಿದರೆ ಹಜಾಮತ್ ಶಾಲೆ!’

‘ಅದರ ಕಥೆ ಸ್ವಾಮಿಯವರಿಗೆ ಅರಿಕೆ ಮಾಡಿಕೊತೀನಿ, ಕಾಪಾಡಿ ಕೊಂಡು ಬರಬೇಕು ! ಶಿಷ್ಯನ ಮೇಲೆ ಅನುಗ್ರಹ ತೋರಿಸಬೇಕು!’ ಎಂದು ಹೇಳಿದ್ದೇ ತಡ, ಮೇಷ್ಟ್ರು ಹೊರಕ್ಕೆ ಬಂದು ಹುಡುಗರಿಗೆಲ್ಲ ‘ಇನ್‍ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಎಲ್ಲಾರೂ ಊಟಾ ಮಾಡಿಕೊಂಡು ಒಳ್ಳೆಯ ಬಟ್ಟೆ ಹಾಕಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬಂದುಬಿಡಿ’ ಎಂದು ಹೇಳಿದನು. ಮಕ್ಕಳು ಒಳಕ್ಕೆ ಬಂದು ತಂತಮ್ಮ ಸ್ಲೇಟು ಪುಸ್ತಕಗಳನ್ನೆತ್ತಿಕೊಂಡು ಓಡಿದರು. ಶ್ಯಾನುಭೋಗರ ಹುಡುಗನಿಗೆ, ‘ಇನ್‌ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಬಂದು ಕಾಣಬೇಕು ಎಂದು ನಿಮ್ಮ ತಂದೆಗೆ ತಿಳಿಸು’ ಎಂದು ಹೇಳಿ ಕಳುಹಿಸಿದನು.

ರಂಗಣ್ಣ ಒಳಗಿನ ಏರ್‍ಪಾಟನ್ನು ಪರೀಕ್ಷಿಸುತ್ತಿದ್ದಾನೆ. ದೂರದಲ್ಲಿ ಒಂದು ಮೂಲೆಯಲ್ಲಿ ಮುಕ್ಕಾಲು ನಿಲುವು, ಪಿಂಗಾಣಿ ಬೇಸಿನ್ ಮತ್ತು ಟವಲ್ಲುಗಳಿವೆ. ಇತ್ತ ಗೋಡೆಗೆ ಒಳ್ಳೆಯ ಕನ್ನಡಿ ಇದೆ. ಆದರೆ ಕನ್ನಡಿಯನ್ನು ಬೇಕಾದಾಗ ಮುಚ್ಚುವಂತೆ ತೆರೆ ಇದೆ. ಮೇಷ್ಟ್ರು ಮುನಿಸಾಮಿ ಏನು ಮಾಡುತ್ತಾನೋ ನೋಡೋಣ; ಅವನ ಕಥೆ ತಿಳಿದು ಕೊಳ್ಳೋಣ ಎಂದು ರಂಗಣ್ಣನು ಕುತೂಹಲಾವಿಷ್ಟನಾಗಿ ಕುಳಿತಿದ್ದನು. ಮೇಷ್ಟ್ರು ಮೇಜಿನ ಸೆಳೆಖಾನೆಯಿಂದ ಸೊಗಸಾದ ರೇಜರ್, ಕ್ರಾಸ್ ಮೆಷಿನ್, ಹೊಸದಾದ ಸೋಪು ಬಿಲ್ಲೆ – ಇವುಗಳನ್ನು ತೆಗೆದು ಮೇಜಿನ ಮೇಲಿಟ್ಟನು. ಬೇರೆ ಒಂದು ಪೆಟ್ಟಿಗೆಯಿಂದ ಮಡಿ ಮಾಡಿದ್ದ ದೊಡ್ಡ ಬಿಳಿಯ ವಸ್ತ್ರವನ್ನು ತೆಗೆದನು. ಹಿಂಭಾಗದ ತನ್ನ ಮನೆಯಿಂದ ಬಿಸಿ ನೀರನ್ನು ತಂದು ಬ್ರಷನ್ನು ಚೆನ್ನಾಗಿ ತೊಳೆದನು. ಶುಭ್ರವಾದ ಗಾಜಿನ ಬಟ್ಟಲಿನಲ್ಲಿ ಬಿಸಿ ನೀರನ್ನು ತಂದಿಟ್ಟು ಕೊಂಡು, ‘ಸ್ವಾಮಿಯವರು ರುಮಾಲು ಕೋಟು ತೆಗೆದಿಡಬೇಕು’ ಎಂದನು. ಅಷ್ಟು ಹೊತ್ತಿಗೆ ಶ್ಯಾನುಭೋಗರ ಹುಡುಗ ಒಗೆದ ಒಳ್ಳೆಯ ಪಂಚೆಯನ್ನೂ ಒಂದು ಟವಲನ್ನೂ ತಂದು ಕೊಟ್ಟನು. ರಂಗಣ್ಣ ಪಂಚೆಯನ್ನುಟ್ಟು ಕೊಂಡು ಅಂಗಿ ಷರಾಯಿ ಮೊದಲಾದ ಉಡುಪುಗಳನ್ನೆಲ್ಲ ತೆಗೆದು ಕುರ್ಚಿಯಲ್ಲಿ ಕುಳಿತುಕೊಂಡನು. ರಂಗಣ್ಣನ ಕೊರಳಿಗೆ ಮೇಷ್ಟ್ರು ವಸ್ತ್ರವನ್ನು ಇಳಿ ಬಿಟ್ಟು ಕಟ್ಟಿ ತನ್ನ ಕಸುಬಿನ ಕೈ ಚಳಕವನ್ನು ತೋರಿಸಲು ಮೊದಲು ಮಾಡಿದನು. ರಂಗಣ್ಣನಿಗೆ ತಾನು ಸ್ಕೂಲು ಬಳಿ ಬಂದಾಗ ಒಳಗಿಂದ ತಲೆಗೆ ಮುಸುಕು ಹಾಕಿಕೊಂಡು ಹೊರಕ್ಕೆ ಓಡಿ ಹೋದ ನಾಲ್ವರ ಜ್ಞಾಪಕ ಬಂತು! ಎಲ್ಲವೂ ಅರ್ಥವಾಯಿತು. ತಿರುಗುಮುರಗಾಗಿಟ್ಟಿದ್ದ ಮೇಜಿನ ಅರ್ಥವೂ ಆಯಿತು. ಮುನಿಸಾಮಿ ಸೋಪನ್ನು ಹಚ್ಚಿದ ಠೀವಿಯೇ ಠೀವಿ. ಇನ್‍ಸ್ಪೆಕ್ಟರ್ ಸಾಹೇಬರಿಗೆ ಮೇಷ್ಟ್ರು ಕ್ಷೌರ ಮಾಡುವ ದೃಶ್ಯ, ಗುರುವಿಗೆ ಶಿಷ್ಯನೊಬ್ಬನು ಕ್ಷೌರ ಮಾಡುವ ದೃಶ್ಯ – ಆ ವಿಶ್ವಾಸ, ಆ ಭಕ್ತಿ, ಆ ಸಂತೋಷಗಳನ್ನು ಈ ಬಡ ಲೇಖನಿಗೆ ಚಿತ್ರಿಸಲು ಸಾಧ್ಯವಿಲ್ಲ. ಮುನಿಸಾಮಿ ತನ್ನ ಕಥೆ ಹೇಳತೊಡಗಿದನು :

‘ನಾನು ಪುನಃ ಈ ಕಸುಬಿಗೆ ಕೈ ಹಾಕುತ್ತಿರಲಿಲ್ಲ ಸಾರ್, ಎಂತಿದ್ದರೂ ಮಿಡಲ್ ಸ್ಕೂಲ್ ಪರೀಕ್ಷೆ ಆಯಿತು. ತಮ್ಮ ದಯದಿಂದ ಟ್ರೈನಿಂಗ್ ಪರೀಕ್ಷೆಯೂ ಆಯಿತು. ಬ್ರಾಹ್ಮಣ ಮೇಷ್ಟರ ಹಾಗೆ ಹುಡುಗರಿಗೆ ಪಾಠ ಹೇಳಿಕೊಂಡು ಗುರು ಎಂದು ಗೌರವ ಪಡೆದು ಕೊಂಡಿರೋಣ. ನನ್ನಪ್ಪನೊಂದಿಗೇನೆ ಈ ಕಸಬು ಕೊನೆಗಾಣಲಿ ಎಂದು ನಾನಿದ್ದೆ, ಆದರೆ ಇಲಾಖೆಯಲ್ಲಿ ಸಂಬಳ ಬಹಳ ಕಡಮೆ ಸಾರ್! ಇಷ್ಟು ವರ್ಷ ಸರ್ವೀಸ್ ಮಾಡೀನೂ ಹದಿನೈದೇ ರೂಪಾಯಿ ಸಂಬಳ! ನನಗೂ ಮೂರು ಮಕ್ಕಳಾದರು. ಜೊತೆಗೆ ತಮ್ಮ ಇದ್ದಾನೆ. ಹೆಂಡತಿ, ಮಕ್ಕಳು, ತಮ್ಮ, ನಾನೂ – ಈ ಸಂಸಾರ ಹದಿನೈದು ರೂಪಾಯಿ ಸಂಬಳದಲ್ಲಿ ಪೂರೈ ಸೋದಿಲ್ಲ. ಒಂದು ದಿನ ಕೈಯ್ಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ರಾಗಿ ಇರಲಿಲ್ಲ.’

‘ಮತ್ತೆ ಕೂಳಿಗೆ ಏನು ಮಾಡಿದಿರಿ ನೀವೆಲ್ಲ?’
‘ನಾನೇನು ಮಾಡಲಿ ಸಾರ್! ಹೇಗಾದರೂ ಸುಧಾರಿಸು ; ರೈತರ ಮನೆಗೆ ಹೋಗಿ ರಾಗಿ ಸಾಲ ತೆಗೆದು ಕೊಂಡು ಬಾ; ಇಲ್ಲವಾದರೆ ಒಂದು ರೂಪಾಯಿ ಸಾಲ ತರ್ತೆನೆ ; ರಾಗಿ ತಂದುಕೊಳ್ಳೋಣ ಎಂದು ಹೆಂಡತಿಗೆ ಹೇಳಿದೆ.’
‘ಸಾಲ ತಂದುಕೊಂಡಿರೊ?’

‘ಇಲ್ಲ ಸಾರ್ ! ನನ್ನ ಹೆಂಡತಿ ಯವಾರಕ್ಕೆ ಬಂದಳು. ಈ ಇಸ್ಕೊಲ್ ಕೆಲಸ ಯಾಕಾಯ್ತೋ ನಿಮ್ಗೆ! ದಿನಕ್ಕೆ ಎಂಟಾಣೆ ಕೂಲಿ, ಕುಂತ ಕಡೆ ನಾಲ್ಕು ಜನಕ್ಕೆ ತಲೆ ಕೆರೆದರೆ ಎಂಟಾಣೆ ಬರಾಕಿಲ್ವಾ? ಒಂದು ರೂಪಾಯಿ ಸಾಲ ತರ್ತಿವ್ನಿ ಅಂತ ಹೊರಟೀರಾ ! ಸಾಲ ತೀರೋದೆಂಗೆ ? ಅಲ್ಲಿ ಕುಕ್ಕರಿಸಿಕೊಂಡು ನಾಲ್ಕು ಜನಕ್ಕೆ ತಲೆ ಕೆರೀರಿ; ಎಂಟಾಣೆ ಬರ್ತೈತೆ. ನಿಮ್ಮ ಆಳಿಸ್ಕೋಲ್ಗೆ ಬೆಂಕೀ ಬೀಳಾ-ಎಂದು ತರಾಟೆಗೆ ತೆಗೆದು ಕೊಂಡಳು. ನಾನೇನು ಮಾಡಲಿ ಸಾರ್? ಮಕ್ಕಳು- ಹಸಿವೋ ಎಂದು ಅಳುತ್ತಾ ನಿಂತುಕೊಂಡವು.’

‘ಕಡೆಗೆ ಹೇಗೆ ಫೈಸಲ್ ಆಯ್ತು ನಿಮ್ಮ ಯವಾರ?’

‘ಹೇಗೆ ಎಂತ ಹೇಳಲಿ ಸಾರ್? ನಮ್ಮ ಈ ಹಳ್ಳಿಯಲ್ಲಿ ಹೈ ಸ್ಕೂಲ್ ಓದಿದ ಹುಡುಗರು ಕೆಲವರು, ಪೇಟೆ ಹೋಟಲಿಗೆ ಹಾಲು ಮಾರೋ
ಯುವಕರು ಕೆಲವರು ಇದ್ದಾರೆ. ಊರ ಪೇಟೆ ಕಂಡವರು. ಇಬ್ಬರು ಹುಡುಗರು ನಮ್ಮ ಕೂಗಾಟ ಕೇಳಿ ಇತ್ತ ಬಂದರು. ನಾನು ತಮಾಷೆಗೆ – ಏಕೆ ಬಂದಿರಣ್ಣಾ ಇಲ್ಲಿಗೆ ? ಕ್ರಾಪ್ ಗ್ರೀಪ್ ಹೊಡೀಬೇಕಾ ನಿಮಗೆ ? ಎಂದು ಕೇಳಿದೆ. ಅವರೂ ತಮಾಷೆಗೆ – ಹುಂ, ಕ್ರಾಪ್ ಕತ್ತರಿಸೋರು ನಮ್ಮ ಹಳ್ಳೀಲಿ ಯಾರಿದ್ದಾರೆ? ತಲೆ ಏನೋ ಬೆಳೆದಿದೆ-ಎಂದರು. ನಾನು – ಅಮೇರಿಕನ್ ಕಟ್ಟಿಗೆ ನಾಲ್ಕಾಣೆ, ಫ್ರೆಂಚ್ ಕಟ್ಟಿಗೆ ಆರಾಣೆ. ಕುಳಿತುಕೊಂಡು ನೋಡಿ ಪರಮಾಯಿಷಿನ-ಎಂದೆ, ಆ ಹುಡುಗರು ಷೋಕಿ ಮೇಲೆ ಕುಳಿತೇ ಬಿಟ್ಟರು ಸಾರ್, ಒಬ್ಬನಿಗೆ ಅಮೇರಿಕನ್ ಕಟ್ ಮತ್ತೊಬ್ಬನಿಗೆ ಫ್ರೆಂಚ್ ಕಟ್ ಕ್ರಾಪು ಕತ್ತರಿಸಿದೆ. ಅವರು ಹತ್ತಾಣೆ ಕೊಟ್ಟರು. ಎಲ್ಲಿ ಕಲಿತೆ ಮುನಿಸಾಮಿ ? ಒಳ್ಳೆಯ ಪಳಗಿದ ಕೈ ನಿನ್ನದು; ಬೆಂಗಳೂರಿನಲ್ಲಿ ಕೂಡ ಇಂಥ ಕ್ರಾಪ್ ಕಟ್ ಕಾಣೆವು- ಎಂದು ಮೆಚ್ಚಿಕೊಂಡು ಹೊರಟು ಹೋದರು. ಆ ಮೇಲೆ ನನ್ನ ಹೆಂಡತಿಯ ಕೈಗೆ ಹತ್ತಾಣೆ ಕೊಟ್ಟೆ. ಅವಳು – ದಿನಾ ನಾಲ್ಕು ಜನಕ್ಕೆ ಹೀಗೆ ಜುಟ್ಟು ಕತ್ತರಿಸಿ ಸಂಪಾದಿಸಿರಿ ; ಇಲ್ಲಾದ್ರೆ ನಿಮ್ಮ ಹಿಟ್ಟಾಕಾಕಿಲ್ಲ ಎಂದು ಹೇಳಿ ಬಿಟ್ಟಳು.’

‘ಸರಿ. ಅಂದಿನಿಂದ ಈ ಪಾಠ ಶಾಲೆ ಹಜಾಮತ್ ಶಾಲೆ ಆಯಿತೋ ?’

‘ಇಲ್ಲ ಸಾರ್, ಎರಡು ದಿನ ಯಾರೂ ಬರಲಿಲ್ಲ. ಆದರೆ ಆ ಇಬ್ಬರು ಹುಡುಗರು ತಮ್ಮ ಸ್ನೇಹಿತರಿಗೆಲ್ಲ ಕ್ರಾಪು ತೋರಿಸಿ ಪ್ರಚಾರ ಮಾಡಿ ಬಿಟ್ಟರು. ಆಮೇಲೆ ಈ ಹಳ್ಳಿ ಆ ಹಳ್ಳಿ, ಸುತ್ತಲಹಳ್ಳಿ ಎಲ್ಲ ಕಡೆಗಳಿಂದಲೂ ಷೋಕಿ ಹುಡುಗರು, ಹಾಲು ಮಾರೋ ಯುವಕರು ಬರುವುದಕ್ಕೆ ಪ್ರಾರಂಭಿಸಿದರು. ಬರಬರುತ್ತಾ ಗಿರಾಕಿ ಜಾಸ್ತಿ ಆಗಿ ಹೋಯಿತು. ಈಗ ಮೇಷ್ಟರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಟ್ಟು ಈ ಕಟ್ಟಡದಲ್ಲೇ ಸೆಲೂನ್ ಮಡಗೋಣ ಅಂತ ಇದ್ದೀನಿ.’

‘ಕೆಲಸಕ್ಕೆ ರಾಜೀನಾಮೆ ಕೊಡುತ್ತಿರಾ ಮೇಷ್ಟ್ರೆ ? ಈಗ ದಿನಕ್ಕೆ ಎಷ್ಟು ರೂಪಾಯಿ ಸಂಪಾದನೆ ಇದೆ ನಿಮಗೆ ?’

‘ದಿನಕ್ಕೆ ಎರಡು ರೂಪಾಯಿ ಗಿಟ್ಟುತ್ತೆ ಸಾರ್, ನನ್ನ ಖರ್ಚು ದಿನಕ್ಕೆ ಎಂಟಾಣೆ ಆಗುತ್ತೆ, ಒಟ್ಟಿನಲ್ಲಿ ತಿಂಗಳಿಗೆ ನಲವತ್ತು ನಲವತ್ತೈದು ರೂಪಾಯಿಗಳಿಗೆ ಮೋಸವಿಲ್ಲ. ಈಗ ಮೇಷ್ಟರ ಕೆಲಸ, ನನ್ನ ಕಸುಬಿನ ಕೆಲಸ ಎರಡೂ ಒಟ್ಟಿಗೆ ನಡೆಯೋದು ಕಷ್ಟ ಸಾರ್, ನಾನು ಪಾಠ ಶಾಲೆ ಹೊತ್ತಿನಲ್ಲಿ ಕಸುಬಿನ ಕೆಲಸ ಮಾಡುವುದಿಲ್ಲ. ಬೆಳಗ್ಗೆ ಆರೂವರೆಯಿಂದ ಏಳೂ ಕಾಲು ಗಂಟೆಯವರೆಗೆ, ಪುನಃ ಹತ್ತೂ ಮುಕ್ಕಾಲರಿಂದ ಹನ್ನೆರಡೂ ಮುಕ್ಕಾಲು ಗಂಟೆವರೆಗೆ ಕಸುಬಿನ ಕೆಲಸ ಮಾಡ್ತೇನೆ. ಕೆಲವರು ಮಧ್ಯಾಹ್ನ ಒಂದು ಗಂಟೆಗೋ ಎರಡು ಗಂಟೆಗೊ ಬರ್ತಾರೆ. ಒಂದೊಂದು ದಿನ ಹಳ್ಳಿ ಕಡೆಯಿಂದ ಕೆಲವರು ಒಂಬತ್ತು ಗಂಟೆಗೇನೆ ಬಂದು ಕುಳಿತು ಕೊಳ್ಳುತ್ತಾರೆ.’

‘ಮೇಷ್ಟರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸೆಲೂನ್ ಮಡಗಿ, ಕಸುಬು ಬಿಡಬೇಡಿ.’

‘ನನಗೂ ಹಾಗೆ ಅನ್ನಿಸಿದೆ ಸಾರ್. ಮನೇಲಿ ನನ್ನ ಹೆಂಡತಿ ಹಟಾ ಮಾಡ್ತಾಳೆ. ಈ ಕಟ್ಟಡದಾಗೆ ಇಸ್ಕೊಲ್ ಬೇಡ ; ಅವರು ಕೊಡೋ ಎರಡು ರೂಪಾಯಿ ಬಾಡಿಗೆ ನಮ್ಗೆ ಬೇಡಾ ; ಎರಡೊರ್‍ಸ ಆಗೋಯ್ತು, ಬಾಡಿಗೆ ಚಿಕ್ಕಾಸೂ ಬಂದಿಲ್ಲ. ಇಸ್ಕೊಲ್ ಎಲ್ಲಾದ್ರೂ ಮಾಡಿಕೊಳ್ಳಲಿ. ನಿಮ್ಮ ತಮ್ಮನಿಗೆ ಸೆಲೂನ್ ಕೆಲಸ ನೋಡಿಕೊಳೊ ಹಾಗೆ ಮಾಡಿ. ನೀವು ಮೇಷ್ಟರ ಕೆಲಸದ ಜೊತೆಗೆ ಮಧ್ಯೆ ಮಧ್ಯೆ, ತಲೆ ಕೆರೀರಿ, ರಜಾ ಬಂದಾಗ ನೀವೇನು ಮಾಡ್ಬೇಕು- ಅಂತಾ ಹಟಾ ಮಾಡ್ತಾಳೆ.’

‘ಸ್ಕೂಲಿಗೆ ಬೇರೆ ಕಟ್ಟಡ ಇದೆಯೇ ಮೇಷ್ಟ್ರೆ?’

‘ಅದೇ ಬಂಡಾಟ ಸಾರ್ ಈ ಹಳ್ಳೀಲಿ, ಬೇರೆ ಕಟ್ಟಡ ಇಲ್ಲ. ಪಂಚಾಯ್ತಿ ಕಟ್ಟಡ ಆಗಿಲ್ಲ. ಪಂಚಾಯ್ತಿಯವರನ್ನು ಕೇಳಿದರೆ- ಎಂಗಾನಾ ಮಾಡಿಕೊಂಡು ಹೋಗು, ಇಸ್ಕೂಲಿಗೆ ಕಟ್ಟಡ ಇಲ್ಲ ಅನ್ನುತ್ತಾರೆ’

‘ನೀವು ಕ್ಷೌರದವರಾಗಿ ಮೇಷ್ಟ್ರಾಗಿದ್ದೀರಲ್ಲ. ಹಳ್ಳಿಯವರ ಆಕ್ಷೇಪಣೆ ಇಲ್ಲವೇ?’

‘ನಾನು ಅವರ ಮಕ್ಕಳನ್ನು ಮುಟ್ಟೋದಿಲ್ಲ ಸಾರ್. ಜೊತೆಗೆ ನನ್ನ ಉಡುಪು, ರೀಕು ನೋಡಿ ಅವರೇ ಮೆಚ್ಚು ಕೋತಾರೆ. ನಾನೂ ಚೊಕ್ಕಟವಾಗಿದ್ದೇನೆ. ಈ ಸ್ಕೂಲ್ ಕಟ್ಟಡ ಹೇಗಿದೆ ನೋಡಿ ಸಾರ್ ! ಎಷ್ಟು ಚೆನ್ನಾಗಿಟ್ಟುಕೊಂಡಿದ್ದೇನೆ ! ತಮ್ಮ ಶಿಷ್ಯ!’

‘ಅದಕ್ಕೇನೆ ಪುಕಾರು ಬರಲಿಲ್ಲ ಅಂತ ಕಾಣುತ್ತೆ.’

‘ಪಂಚಾಯ್ತಿ ಮೆಂಬರುಗಳಿಗೆಲ್ಲ ಪುಕಸಟ್ಟೆ ಕ್ಷೌರ ಮಾಡುತ್ತೇನೆ ಸಾರ್ ! ಪುಕಾರ್ ಯಾಕೆ ಮಾಡ್ತಾರೆ ! ಅವರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿ ಕೊಟ್ಟಿದ್ದೇನೆ. ನನ್ನ ಕಂಡರೆ ಈ ಊರಿನವರಿಗೆ ವಿಶ್ವಾಸ ಇದೆ ಸಾರ್.’

ಈ ಮಾತುಗಳು ಮುಗಿಯುವ ಹೊತ್ತಿಗೆ ರಂಗಣ್ಣನಿಗೆ ದಿವ್ಯವಾದ ಕ್ರಾಪ್ ಕಟ್ಟೂ ಕ್ಷೌರವೂ ಆದುವು. ಕೂದಲಿಗೆ ಪರಿಮಳಿಸುವ ಕೂದಲೆಣ್ಣೆ, ಕೆನ್ನೆಗಳಿಗೆ ಸ್ನೋ ಹಚ್ಚಿ ಮುನಿಸಾಮಿ ರಂಗ್ ಮಾಡಿದನು ! ಶ್ಯಾನುಭೋಗರು ಬಂದು ಕೈ ಮುಗಿದರು. ‘ ಏನು ಶ್ಯಾನುಭೋಗರೇ, ಸ್ನಾನ ಮಾಡಬೇಕಲ್ಲ. ನೀರು ಕಾಸಿಟ್ಟದೀರಾ?’

ಕಾಸಿಟ್ಟಿದೇನೆ ಸ್ವಾಮಿ. ದಯಮಾಡಬೇಕು. ನಮ್ಮ ಹಳ್ಳಿಯಲ್ಲಿ ತಾವು ಮೊಕ್ಕಾಂ ಮಾಡಿದ್ದು ಬಹಳ ಸಂತೋಷ, ಬಡವರ ಮನೆಗೆ ನೀವೇಕೆ ಬಂದೀರಿ?’

ರಂಗಣ್ಣ ಶ್ಯಾನುಭೋಗರ ಮನೆಗೆ ಹೋಗಿ ಸ್ನಾನಾದಿಗಳನ್ನು ತೀರಿಸಿಕೊಂಡನು. ಆ ಮೇಲೆ ಊಟ. ಆ ದಿವಸ ತೊವ್ವೆ, ಮಜ್ಜಿಗೆ ಹುಳಿ, ಆಂಬೊಡೆ, ನಿಂಬೆಹಣ್ಣಿನ ಚಿತ್ರಾನ್ನ, ರವೆ ಪಾಯಸ- ಇವುಗಳನ್ನು ಇನ್ಸ್‍ಪೆಕ್ಟರಿಗಾಗಿ ಶ್ಯಾನುಭೋಗರು ಮಾಡಿಸಿದ್ದರು. ಅಡಿಗೆ ಚೆನ್ನಾಗಿತ್ತು. ಊಟ ಮಾಡುತ್ತಿದಾಗ ರಂಗಣ್ಣ ಮೇಷ್ಟರ ಮಾತೆತ್ತಿ ‘ಆತ ಹಜಾಮರ ಜಾತಿ ಎಂಬುದು ತಿಳಿದೂ ನಿಮ್ಮ ಆಕ್ಷೇಪಣೆ ಇಲ್ಲದಿರುವುದು ಆಶ್ಚರ್ಯ’ ಎಂದು ಹೇಳಿದನು.

‘ಸ್ವಾಮೀ! ಈಗಿನ ಕಾಲವೇ ಹೀಗೆ, ನಾನಾ ಜಾತಿಯವರು, ಆದಿ ಕರ್ಣಾಟಕರು ಮೊದಲಾದವರೆಲ್ಲ ಸರ್ಕಾರದ ನೌಕರಿಯಲ್ಲಿದ್ದಾರೆ. ಉಪಾಧ್ಯಾಯರು, ಅಮಲ್ದಾರರು, ಡೆಪ್ಯುಟಿ ಕಮೀಷನರು, ಕೌನ್ಸಿಲರು, ಎಲ್ಲರೂ ನಾನಾ ಜಾತಿ, ಆದಿಕರ್ಣಾಟಕರೂ ನಾಳೆ ಕೌನ್ಸಿಲರು, ದಿವಾನರು ಆಗುತ್ತಾರೆ. ಏನು ಮಾಡುವುದು ಸ್ವಾಮಿ? ರೈಲಿನಲ್ಲಿ, ಬಸ್ಸಿನಲ್ಲಿ ಯಾವ ಜಾತಿಯವರು ಪಕ್ಕದಲ್ಲಿ ಕುಳಿತು ಕೊಳ್ಳುತ್ತಾರೆ? ಎಂದು ಈಗ ನಾವು ಕೇಳುತ್ತೇವೆಯೇ? ಕೇಳಿದರೆ ತಾನೆ ಏನು ? ಪರಿಹಾರವಿದೆಯೆ? ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು ಸ್ವಾಮಿ, ಕೆಲವು ಸ್ಕೂಲುಗಳಲ್ಲಿ ಆದಿ ಕರ್ಣಾಟಕರು ಮೇಷ್ಟರಿದ್ದಾರೆ. ತಮಗೇ ಗೊತ್ತಿದೆಯಲ್ಲ.’

‘ಶ್ಯಾನುಭೋಗರೇ ! ನಿಮ್ಮಷ್ಟು ತಿಳಿವಳಿಕೆ, ಸೈರಣೆ ನಮ್ಮ ಜನಗಳಿಗೆಲ್ಲ ಇದ್ದರೆ ದೇಶ ಉದ್ಧಾರವಾದೀತು.’

‘ಎಲ್ಲರಿಗೂ ತಿಳಿವಳಿಕೆ ಬರುತ್ತದೆ ಸ್ವಾಮಿ, ತಾನಾಗಿ ಒಳಗಿಂದ ಬರದಿದ್ದರೆ ಹೊರಗಿಂದ ಬಲಾತ್ಕಾರ ಮಾಡಿ ತುಂಬುತ್ತಾರೆ.’

‘ಈಗ ಆ ಮೇಷ್ಟ್ರು ಆ ಕೆಲಸ ಮಾಡುತ್ತಿರುವುದು ನಮ್ಮ ಇಲಾಖೆಯ ರೂಲ್ಸಿಗೆ ವಿರುದ್ಧ, ಮೇಷ್ಟ್ರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡಿ ಎಂದು ಹೇಳಿದ್ದೇನೆ.’

‘ಇದೇನು ಸ್ವಾಮಿ ನಿಮ್ಮ ಇಲಾಖೆಯ ರೂಲ್ಸು! ಜೀವನಕ್ಕೆ ಸಾಕಾಗುವಷ್ಟು ಸಂಬಳ ಕೊಡುವುದಿಲ್ಲ, ಏನೂ ಇಲ್ಲ. ಹದಿನೈದು ರೂಪಾಯಿಗಳಲ್ಲಿ ಒಬ್ಬನ ಜೀವನ ನಡೆಯುವುದೇ ಕಷ್ಟ, ಇನ್ನು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡವರು ಹೇಗೆ ಜೀವನ ಮಾಡಬೇಕು? ಏನೋ ತನ್ನ ಕಸುಬಿನಿಂದ ಎರಡು ರೂಪಾಯಿ ಸಂಪಾದಿಸಿಕೊಂಡರೆ ರೂಲ್ಸು ಮಾತು ಆಡುತ್ತೀರಿ, ಈಗ ಆ ಮೇಷ್ಟರಿಗೇನು, ಆ ಕಟ್ಟಡ ಅವನು ಕಟ್ಟಡ ಅವನು ಬಿಡಿಸಿಕೊಂಡು ಸೆಲೂನ್ ಇಟ್ಟು ಕೊಂಡರೆ ಅವನ ಜೀವನ ನಡೆಯುತ್ತದೆ. ಆ ಮೇಷ್ಟ್ರು ಸಹ ನಮ್ಮೊಡನೆ ಹಿಂದೆಯೇ ಹೇಳಿದ, ಈಗ ಸ್ಕೂಲಿಗೆ ಬೇರೆ ಕಟ್ಟಡ ಇಲ್ಲ. ಪಂಚಾಯತಿ ಕಟ್ಟಡ ಇನ್ನೂ ಆರು ತಿಂಗಳಿಗೆ ಎದ್ದೀತು. ಆಮೇಲೆ ಏನಾದರೂ ಏರ್ಪಾಟು ಮಾಡಬಹುದು. ಎಷ್ಟು ಒಳ್ಳೆಯವನು, ಕೆಟ್ಟ ಅಭ್ಯಾಸಗಳಿಲ್ಲ ; ಚೆನ್ನಾಗಿ ಪಾಠ ಮಾಡುತ್ತಾನೆ, ಚೊಕ್ಕಟವಾಗಿದ್ದಾನೆ. ನಮ್ಮ ಪುಕಾರು ಏನೂ ಇಲ್ಲ. ನಿಮ್ಮ ಇಲಾಖೆಯ ರೂಲ್ಸು ನಮಗೇಕೆ ಸ್ವಾಮಿ?’

‘ಶ್ಯಾನುಭೋಗರೇ, ನೀವು ಹೇಳುವುದನ್ನೆಲ್ಲ ಒಪ್ಪುತ್ತೇನೆ. ಆದರೆ ರೂಲ್ಸು ಇರುವ ತನಕ ನಾನೇನೂ ಮಾಡುವ ಹಾಗಿಲ್ಲ. ಸ್ಕೂಲಿಗೆ ಎಲ್ಲಿಯಾದರೂ ಬೇರೆ ಕಟ್ಟಡ ನೀವು ಕೊಡಬೇಕು.’

‘ಆಲೋಚನೆ ಮಾಡುತ್ತೇನೆ ಸ್ವಾಮಿ. ಈ ಮೇಷ್ಟರನ್ನು ಮಾತ್ರ ತಪ್ಪಿಸಬೇಡಿ. ಈಗ ಒಂದೂವರೆ ವರ್ಷದಿಂದ ಅವನ ಕಟ್ಟಡದಲ್ಲಿ ಸ್ಕೂಲು ನಡೆಯುತ್ತಾ ಇದೆ. ಹಿಂದಿನ ಇನ್‌ಸ್ಪೆಕ್ಟರವರ ಕಾಲದಲ್ಲಿ ಎರಡು ರೂಪಾಯಿ ಬಾಡಿಗೆಗೆ ಗೊತ್ತು ಮಾಡಿದ್ದಾಯಿತು. ಇದುವರೆಗೂ ಬಾಡಿಗೆ ಮಂಜೂರಾಗಿ ಬರಲಿಲ್ಲ, ಆದರೂ ಮೇಷ್ಟ್ರು ತಕರಾರ್ ಮಾಡದೆ ನಡೆಸಿಕೊಂಡು ಹೋಗುತ್ತಿದ್ದಾನೆ. ನಾಳೆ ದಿನ ಅವನು ಸ್ಕೂಲಿನ ಸಾಮಾನುಗಳನ್ನೆಲ್ಲ ತಂದು ನನ್ನ ಮನೆಯಲ್ಲಿ ಹಾಕಿ-ಸ್ಕೂಲು ಚಾರ್ಜು ತೆಗೆದುಕೊಳ್ಳಿ, ನಾನು ಕೆಲಸ ಬಿಟ್ಟಿದ್ದೇನೆ ಎಂದು ಹೇಳಿದರೆ ಅನ್ಯಾಯವಾಗಿ ಸ್ಕೂಲು ಮುಚ್ಚಿ ಹೋಗುತ್ತದೆ. ತಾವೂ ಆಲೋಚನೆಮಾಡಿ ಸ್ವಾಮಿ.’

ಊಟವಾಯಿತು, ಮಾತು ಮುಗಿಯಿತು. ರಂಗಣ್ಣನಿಗೆ ದೊಡ್ಡದೊಂದು ಸಮಸ್ಯೆ ಗಂಟು ಬಿತ್ತು. ತಿಮ್ಮರಾಯಪ್ಪನಿಗೆ ಕಾಗದ ಬರೆದು ಸಲಹೆ ಕೇಳಲೆ? ಅಥವಾ ಸಾಹೇಬರಿಗೆ ತಿಳಿಸಿ ಅವರಿಂದ ಸಲಹೆ ಕೇಳಲೆ? ಅಥವಾ ಸ್ಕೂಲು ಮುಚ್ಚಿ ಹೋದರೆ ಹೋಗಲಿ ಎಂದು ರೂಲ್ಸು ಪ್ರಕಾರ ಆಚರಿಸಲೆ? ಎಂದು ಆಲೋಚನೆ ಮಾಡುತ್ತಿದ್ದನು. ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡು, ಮಧ್ಯಾಹ್ನ ಪಾಠ ಶಾಲೆಯ ತನಿಖೆಗೆ ಹೊರಟನು. ಮಕ್ಕಳೆಲ್ಲ ಒಳ್ಳೆಯ ಉಡುಪುಗಳನ್ನು ಹಾಕಿಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಸ್ಕೂಲ್ ಕಟ್ಟಡವನ್ನು ಮಾವಿನೆಲೆ, ಬಣ್ಣ ಬಣ್ಣದ ಕಾಗದದ ಮಾಲೆ – ಇವುಗಳಿಂದ ಅಲಂಕರಿಸಿದ್ದರು. ತನಿಖೆಯೇನೋ ಆಯಿತು. ಉಪಾಧ್ಯಾಯರು ಚೆನ್ನಾಗಿ ಕೆಲಸ ಮಾಡಿದ್ದರು. ನಾರ್‍ಮಲ್ ಸ್ಕೂಲಿನಲ್ಲಿ ಬರೆದಿದ್ದ ಟಿಪ್ಪಣಿಗಳನ್ನು ಸಹ ಆತ ರಂಗಣ್ಣನಿಗೆ ತೋರಿಸಿದನು. ಸ್ಕೂಲ್ ಕಮಿಟಿ ಮೆಂಬರುಗಳು ಸಹ ಹಾಜರಿದ್ದು ಮೇಷ್ಟರ ಕೆಲಸದ ಬಗ್ಗೆ ಮೆಚ್ಚಿಕೆಯ ಮಾತುಗಳನ್ನು ಹೇಳಿದರು.

ಸಾಯಂಕಾಲ ಕಾಫಿ ಉಪ್ಪಿಟ್ಟು, ಬಾಳೆಯಹಣ್ಣು ಮತ್ತು ಎಳ ನೀರುಗಳ ಸಮಾರಾಧನೆ ಆದ ಮೇಲೆ ರಂಗಣ್ಣ ಅಲ್ಲಿಂದ ಜನಾರ್ದನಪುರಕ್ಕೆ ಹೊರಟನು. ಮೇಷ್ಟ್ರು ದೊಡ್ಡ ರಸ್ತೆ ಸಿಕ್ಕುವವರೆಗೂ ಜೊತೆಯಲ್ಲೇ ಬಂದನು. ರಂಗಣ್ಣನು, ‘ಮೇಷ್ಟ್ರೇ! ನೀವೊಂದು ಕೆಲಸ ಮಾಡಬೇಕು. ಸ್ಕೂಲಿನ ಹಿಂಭಾಗದಲ್ಲಿ ನಿಮ್ಮ ಮನೆ ಇದೆ. ಪಕ್ಕದಲ್ಲಿ ಬಯಲು ಸಹ ಇದೆ. ಆ ಬಯಲಲ್ಲಿ ಒಂದು ಗುಡಿಸಿಲನ್ನು ಕಟ್ಟಿಕೊಂಡು ಅಲ್ಲಿ ನಿಮ್ಮ ಸೆಲೂನ್ ಇಟ್ಟುಕೊಳ್ಳಿ. ನಿಮ್ಮ ತಮ್ಮನ್ನ ಅಲ್ಲಿ ಕೆಲಸಕ್ಕೆ ಹಾಕಿ, ಪಾಠಶಾಲೆಯ ಕಟ್ಟಡದಲ್ಲಿ ಪಾಠಗಳನ್ನು ಮಾತ್ರ ಮಾಡಿ, ಗುಡಿಸಿಲಿಗೆ ಖರ್ಚು ಎಷ್ಟಾಗುತ್ತೆ ಹೇಳಿ?’ ಎಂದು ಕೇಳಿದನು.

‘ಮುವ್ವತ್ತು ರೂಪಾಯಿ ಆಗಬಹುದು ಸಾರ್’

‘ಒಳ್ಳೆಯದು ಮೇಷ್ಟ್ರೆ, ಶ್ಯಾನುಭೋಗರನ್ನೂ ಕಮಿಟಿ ಮೆಂಬರಗಳನ್ನೂ ಕಂಡು ಅವರಿಗೆ ನನ್ನ ಸಲಹೆ ತಿಳಿಸಿ, ಅವರೆಲ್ಲ ನಿಮ್ಮಲ್ಲಿ ವಿಶ್ವಾಸವಾಗಿದ್ದಾರೆ. ಗುಡಿಸಿಲಿಗೆ ಸಹಾಯಮಾಡುತ್ತಾರೆ. ನಾನು ಹೇಳಿದೆ ಎಂದು ತಿಳಿಸಿ, ಗೊತ್ತಾಯಿತೋ? ಅವರು ಸಹಾಯ ಮಾಡದಿದ್ದರೆ ನನಗೆ ಕಾಗದ ಬರೆಯಿರಿ.’

‘ನನ್ನ ಹತ್ತಿರ ಇಪ್ಪತ್ತು ರುಪಾಯಿ ಮಡಗಿಕೊಂಡಿದ್ದೇನೆ ಸಾರ್, ನನ್ನ ಹೆಂಡತಿ ಸೀರೆ ಇಲ್ಲ, ತೆಕ್ಕೊಡಿ ಅಂತ ವರಾತ ಮಾಡುತ್ತಿದಾಳೆ. ತಮ್ಮ ಸಲಹೆಯೇನೋ ಚೆನ್ನಾಗಿದೆ. ಅವಳನ್ನು ಕೇಳಿ ನೋಡುತ್ತೇನೆ ಸಾರ್.’

‘ಮೇಷ್ಟರೇ ! ನಿಮ್ಮ ರೂಪಾಯಿ ನಿಮ್ಮಲ್ಲಿರಲಿ. ಮೊದಲು ಶ್ಯಾನುಭೋಗರನ್ನು ಕಂಡು ಮಾತನಾಡಿ ; ಆ ಮೇಲೆ ನನಗೆ ಕಾಗದ ಬರೆಯಿರಿ. ನನ್ನ ಸಲಹೆ ಕೇಳದೆ ನಿಮ್ಮ ರೂಪಾಯಿ ಗುಡಿಸಿಲಿಗೆ ಖರ್ಚು ಮಾಡ ಬೇಡಿ ; ನಿಮ್ಮ ಹೆಂಡತಿಗೆ ಸೀರೆ ಇಲ್ಲದಂತೆ ಮಾಡಬೇಡಿ’ ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿದನು.

‘ಅಪ್ಪಣೆ ಸ್ವಾಮಿ.’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊಗ್ಗು
Next post ಹಣತೆ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…