ಅಂದೊಮ್ಮೆ ನಾನು ಹಳ್ಳಿ ಹುಡುಗನಾಗಿದ್ದಾಗ, ಪೇಟೆ ಜಗತ್ತಿನೊಂದಿಗೆ ಸ್ಪಂದಿಸುವ ಮತ್ತು ಅನುಸರಿಸುವ ಗುಣಗಳನ್ನು ಸುತಾರಾಂ ಹೊಂದಿರಲಿಲ್ಲ. ಏಕೆಂದರೆ, ಅಲ್ಲಿಯ ರೀತಿ ರಿವಾಜುಗಳು, ನೀತಿ ನಿಯಮಗಳು ಅಷ್ಟೊಂದು ಆಧುನಿಕವಾಗಿರುತ್ತಿದ್ದವು. ಅವುಗಳಿಗೆ ಹೊಂದಿಕೊಂಡಿರುವುದೆಂದರೆ, ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗುತ್ತಿತ್ತು ಅಥವಾ ದಪ್ಪ ನಾಲಗೆ ಮಂತ್ರ ಉಚ್ಚರಿಸಲು ಹೇಳಿದಂತಾಗುತ್ತಿತ್ತು. ಏಕೆಂದರೆ, ಅಂದು ನಾನು ಹಳ್ಳಿ ಹುಡುಗನಾಗಿದ್ದೆ. ಹಾಗೆಂದ ಮಾತ್ರಕ್ಕೆ, ತೀರ ದಡ್ಡನೇನಾಗಿರಲಿಲ್ಲ. ಊರಿನ ಬದುಕು, ಬವಣೆ, ಹಳ್ಳಿಯ ಧರಿದ್ರ ಜನಗಳ ಆಟಾಟೋಪ, ಊರಿನ ಹೊಲ, ಗದ್ದೆ, ತಂಪಾದ ಗಿಡಗಳ ನೆರಳಿನಲ್ಲಿ ಯಾವುದೋ ಹಂತೀ ಪದ ಗುನುಗಿಸುತ್ತಾ, ಮೈಮರೆತು ಹೋಗುವುದು ಎಲ್ಲವೂ ಇತ್ತು. ನಮ್ಮ ಊರು, ನಮ್ಮ ಜನ, ನಮ್ಮ ನೆಲ, ಜಲದ ಬಗೆಗೆ ಅಷ್ಟೇ ಅಭಿಮಾನವಿತ್ತು. ಅಲ್ಲಿ ದಿಬ್ಬ ಇತ್ತು, ಅಲ್ಲಿ ಮರಗಳ ತೋಪು ಇದ್ದವು, ಹರಿಯುವ ಝರಿ ಇತ್ತು. ಇವುಗಳನ್ನು ಅನುಭವಿಸುತ್ತಾ, ಅಂದಿನ ದಿನ ಜಳಪಿಸುವ ಬಿಸಿಲಿನೊಂದಿಗೆ ಜಗಳ ಮಾಡುತ್ತಾ ಹೋಗುವ ನಿಷ್ಠೂರ ಧೈರ ಇತ್ತು.
ನಾನು ಬಹಳಷ್ಟು ಸಲ ಊರಿಗೆ ಹೋದಾಗ, ನಮ್ಮೂರಿನಿಂದ ತಾಳಿಕೋಟೆ ಪೇಟೆಗೆ ಓದಲು ಹೋಗುವಾಗಿನ ಸಂಗತಿ ನೆನಪಾಗುತ್ತಿತ್ತು. ಚಕ್ಕಡಿ ಹೋದ ದಾರಿಯಲ್ಲಿ ತಲೆ ಮೇಲೆ ಭಾರವಾದ ಬುತ್ತಿಯನ್ನು ಇಟ್ಟುಕೊಂಡು, ಕಣಿವೆಯ ದಾರಿಯಲ್ಲಿ ಹೋಗುವಾಗಿನ ಹಳ್ಳಗಳು, ಎದುರಾಗುವ ಕುರಿ ಹಿಂಡುಗಳು, ದನ ಮೇಯಿಸುವ ಜನ, ದೂರದಲೆಲ್ಲೋ ಕಾಣುವ ಕಿರು ಗುಡ್ಡಗಳು ಇವೆಲ್ಲವೂ ನೆನಪಾಗುತ್ತಿದ್ದವು. ಈ ನೆನಪಿಗೆ ಕಾವು ಕೊಡುವ ಪ್ರಸಂಗ ಮೊನ್ನೆ ನಡೆದೇ ಹೋಯಿತು.
ಮೊನ್ನೆ ಊರಿಗೆ ಹೋದಾಗ, ನಮ್ಮೂರಿನಿಂದ ತಾಳಿಕೋಟೆ ೮ ಕಿ. ಮೀ. ನಡೆದು ಹೋಗಬೇಕಾದ ದಾರಿ, ಇದೀಗ ಹೈಟೆಕ್ ರಸ್ತೆಯಾಗಿಬಿಟ್ಟಿದೆ. ತಾಳಿಕೋಟೆ ಇಳಿದ ತಕ್ಷಣ ಬಸ್ಸು ಹತ್ತಿದರೆ ೧೦ ನಿಮಿಷದಲ್ಲಿ ನಮ್ಮೂರೊಳಗೆ ಇರಬಹುದು. ಆದರೆ, ನನಗೆ ಬಸ್ಸು ಹತ್ತಿ ಹೋಗುವ ಮನಸ್ಸಾಗಲೇ ಇಲ್ಲ. ಊರಿಗೆ ಹೋಗುವ ದಾರಿ ಸರಳ ರೇಖೆಯಂತೆ ಫಳಫಳ ಹೊಳೆಯುತ್ತಾ, ಮಲಗಿಕೊಂಡಿತ್ತು. ಎಲ್ಲಾ ಹೈಟೆಕ್ ಪ್ರಭಾವದ ಮಾಯೆ! ಊರಿಗೆ ಹೋಗುವ ದಾರಿಯ ಎಡ ಬಲದಲ್ಲಿ ತಾಳಿಕೋಟೆಯ ಜನ ಪೇಟೆಯ ಪಕ್ಕದಲ್ಲಿ ಬೆಳೆದಿರುವ ಗಿಡಮರಗಳ ಮರೆಯಲಿಯೆ, ಕೆಂಡ ಸುರಿಯಲು ಹೋಗುತ್ತಿದ್ದರು. ಅಲ್ಲಿ ಹಂದಿಗಳ ಕಾಟವಂತೂ ಹೇಳತೀರದು. ಕೆಂಡವನ್ನು ದಾಟಿ ಕೊಂಡೇ ಉಸಿರು ಬಿಗಿಹಿಡಿದು ನಮ್ಮೂರ ದಾರಿಯನ್ನು ಹಿಡಿಯಬೇಕಾಗಿತ್ತು. ಒಂದು ಕಡೆ ದರಿದ್ರ ವಾತಾವರಣ ವಿದ್ದರೆ, ಇನ್ನೊಂದು ಕಡೆ ಆಧುನಿಕತೆಯ ಮಾಯೆಯ ಪ್ರಭಾವ ದೈತ್ಯವಾಗಿ ಬೆಳೆದುದ್ದರಿಂದ ಅದರ ಹಸ್ತಗಳು ಚಾಚಿದ್ದವು. ಎಡ ಬಲದಲ್ಲಿ ಚಮ್ಮಾರರ ಕುಟೀರಗಳೇ ಇದ್ದ ಸ್ಥಳದಲ್ಲಿ ಈಗ ಗಗನಚುಂಬಿ ಕಟ್ಟಡಗಳು ಮುಗಿಲು ಮುಟ್ಟಲು ಪೈಪೋಟಿ ಮಾಡುತ್ತಿದ್ದವು. ಇದೆಲ್ಲವೂ ನಮ್ಮೂರಿಗೆ ಹೋಗುವ ತಾಳಿಕೋಟೆ ಎಡಬಲದ ದೃಶ್ಯಗಳು!
ತದೇಕವಾಗಿ ಇವುಗಳೆಲ್ಲವನ್ನೂ ನೋಡುತ್ತಾ ನಿಂತಾಗ ಅಲ್ಲಿ ಜನಗಳ ಸೌಜನ್ಯ ಇಲ್ಲದ ವರ್ತನೆ, ಫ್ಯಾಷನ್ ಪ್ರಪಂಚದ ಶಬ್ದಗಳಿಗೆ ಮಾರುಹೋಗಿ, ಮೂಕನಾಗಿ, ಹೈಟೆಕ್ ಮಾಯೆಯನ್ನು ಶಪಿಸುತ್ತಾ ಮೇಲಕ್ಕೆ ನೋಡುತ್ತಾ ನಿಂತುಬಿಟ್ಟೆ! ಅಷ್ಟೊತ್ತಿಗಾಗಲೇ, ಬಸ್ ಸ್ಟಾಂಡ್ನಿಂದ ಅರ್ಧ ಕಿ. ಮೀ. ದೂರಬಂದಿದ್ದೆ. ನಮ್ಮೂರಿಗೆ ಹೋಗುವ ಬಸ್ಸು, ನಾನು ನಿಂತ ಸ್ಥಳದಲ್ಲಿ ನಿಲುಗಡೆ ಯಾದಾಗ, ಕೆಲವರು ಹತ್ತಿದರು, ಕೆಲವರು ಇಳಿದರು. ಆಗ ನಮ್ಮೂರಿನ ಕೆಲವರು ನನ್ನನ್ನು ಗುರುತು ಹಿಡಿದು –
“ಏಯ್! ಯಾಕೋ ಚಂದ್ರಶೇಖರ ಇಲ್ಲಿ ನಿಂತೀರಲ್ರಿ, ಊರಿಗೆ ಬರಾಕ್ಕತ್ತೀರೇನ್ರೀ? ಬರ್ರೀ… ಬರ್ರೀ… ಹತ್ರಲ ಬಸ್ನಾ.” ಅಂದರು. ಅವರಲ್ಲೇ ಒಬ್ಬ ನನ್ನನ್ನು ನೋಡಿ –
“ಓ ಇವರು ಆ ಗೌರಮ್ಮನವರ ಮಗನ ಚಂದ್ರಶೇಖರ್ ಅಲ್ವಾ ಅಲ್ಲಿ ಹಾಸನ್ ಕಡೆ ಸಕಲೇಶಪುರ ದೇಶದಾಗ ಇರ್‍ತಾರಲ್ಲ ಅವರು… ಬರ್ರಿಯಪ್ಪಾ, ಏನ್ ಸಮಾಚಾರ ಛಲೋ ಇದಿರೇನ್ರಿ?” ಎಂದು ಕೇಳಿದರು. ನಾನು ನಿಂತಲ್ಲೇ – “ಹೂಂ… ರ್ರೀ ಈಗ ಬಂದೆ. ನಾನು ಬರಕ್ಕತೀನಿ ನೀವು ಮುಂದ ನಡಿರಲ್ಲ. ಬಾಳ ದಿನ ಆತು. ಊರು ಕೇರಿ ಹ್ಯಾಂಗದಾವೂ? ಏನ್ ಕತಿ? ಎಡ-ಬಲದಾಗ. ಎಲ್ಲಾನೂ ನೋಡ್ಕೊಂತಾ ಬರ್‍ತೀನಿ ನೀವು ನಡೀರಿ” ಅಂದೆ. ಅದಕ್ಕೆ ಅವರು – “ನಡ್ಕೊಂತಾ ಯಾಕ್ ಬರ್ತೀರಿ?- ಈಗ ಬಸ್ಸಾಗ್ಯಾವ, ಟಂಟಮಿ ಆಗ್ಯಾವಾ, ಕಾರು ಬರ್‍ತಾವಾ, ಹಿಂಗಿದ್ರೂ ನೀವು ನಡ್ಕೋಂತಾ ಬರ್‍ತೀರಲ್ಲಾ? ಎಂಥ ಹುಚ್ಚು ಮನುಷ್ಯ ರೀ ನೀವು? ನಾವು ಹೊಕ್ಕಿವಿ ನೀವು ಹಿಂದಗಡೆ ಬರ್ರಿ” ಅಂದಾಗ ಬಸ್ಸು ಹೊರಟೆ ಬಿಟ್ಟಿತು.
ಇನ್ನೂ ಅಲ್ಲೇ ನಿಂತುಕೊಂಡರೆ ಇನ್ ಯಾರಾದರೂ ಬಂದು ನನ್ನನ್ನು ನಿಜವಾಗಿಯೂ ಹುಚ್ಚನೆಂದೇ ಕರೆಯುತ್ತಾರೆಂದು ನಿಧಾನವಾಗಿ ಸೂಟ್ಕೇಸನ್ನು ತಲೆ ಮೇಲೆ ಇಟ್ಟು, ಬಗಲು ಚೀಲವನ್ನು ಹೆಗಲ ಮೇಲೆ ಹೊತ್ತು, ಎಡ – ಬಲ ನಡುವೆ ನೋಡುತ್ತಾ ನೇರ ದೃಷ್ಟಿ, ಹತ್ತಿರ ದೃಷ್ಟಿ ಬೀರುತ್ತಾ ಹಂಗೆ ಮುಂದಮುಂದಕ್ಕೆ ಹೊರಟೆ. ದಾರಿಯ ಮಧ್ಯದಲ್ಲಿ ಭರ್ಜರಿಯಾದ ಒಂದು ದೇವಸ್ಥಾನ, ಅಸಂಖ್ಯಾತ ಭಕ್ತರು! ಅನ್ನಸಂತರ್ಪಣೆ! ಕಾಣಿಕೆಗಳ ಅರ್ಪಣೆ! ಇದೆಲ್ಲವನ್ನೂ ನೋಡಿದಾಗ ನನಗೆ ಆಶ್ಚರವಾಯಿತು. ಹೌದು ಅಲ್ಲೊಂದು ನಾನು ಚಿಕ್ಕವನಾಗಿದ್ದಾಗ ಮೂರು ಕಲ್ಲು ಇಟ್ಟು ಪೂಜೆ ಮಾಡುವ ಸಣ್ಣ ಗುಡಿಯಂತ್ತಿದುದನ್ನು ಇಂದು ಅದ್ಯಾರೋ ಭಕ್ತರು ಸೇರಿಸಿಕೊಂಡು ದೇವಸ್ಥಾನ ಕಟ್ಟಿಸಿ ಭರ್ಜರಿ ಮಾಡಿದ್ದಾರೆ ಪಾಪ…! ಎಂದು ಮುಂದೆ ಮುಂದೆ ನಡೆದೆ. ಅಲ್ಲೊಂದು ಹಳ್ಳವಿತ್ತು. ಆ ಹಳ್ಳದಲ್ಲಿ ಕೆಸರು ಮಡುಗಟ್ಟಿ ಎಷ್ಟೋ ದನಕರುಗಳು ಅಂದು ಮುಳುಗಿ ಹೋದದ್ದನ್ನು ನಾನು ಕಂಡಿದ್ದೆ. ಆದರೆ ಇವತ್ತು ಆ ಹಳ್ಳಕ್ಕೆ ಬಾಕ್ಸ್ ಮಾದರಿಯ ಅಚ್ಚುಕಟ್ಟಾದ ಸೇತುವೆಯನ್ನು ಕಟ್ಟಲಾಗಿದೆ. ಆದರೆ, ನೀರು ಮಾತ್ರ ಭತ್ತಿಹೋಗಿತ್ತು. ಮುಂದೆ ಹೋದಾಗ ಎಡಬಲದಲ್ಲಿದ್ದ ಬೇವಿನ ಮರ, ಜಾಲಿಮರಗಳ ಗುರುತಿನಿಂದಾಗಿ ನಮ್ಮೂರಿನ ಯರಿ ಮತ್ತು ಮಡ್ಡಿ ಹೊಲಗಳು ಬಂದೆವೆಂದು ತಿಳಿದುಕೊಂಡೆ.
ಅಂದು ಉತ್ಕೃಷ್ಟವಾದ ಹತ್ತಿಯನ್ನು ಬೆಳೆಯುತ್ತಿದ್ದ ಹೊಲದಲ್ಲಿ, ಅಂದು ಪೌಷ್ಟಿಕಾಂಶವುಳ್ಳ ರಾಶಿ ರಾಶಿ ಜೋಳವನ್ನು ಬೆಳೆಯುತ್ತಿದ್ದ ಹೊಲಗಳಲ್ಲಿ ಇಂದು ನಮ್ಮ ಮಂದಿಯ ವ್ಯವಹಾರಿಕ ಜ್ಞಾನ, ದೃಷ್ಟಿಕೋನ ಬದಲಾಗಿ ಹಣಕಾಸಿನ ಬೆಳೆಗಳಾದ ಸೂರ್ಯಕಾಂತಿಯನ್ನು ಅಥವಾ, ತೊಗರಿ ಬೆಳೆಯನ್ನು ಬೆಳೆಯುತ್ತಾರೆ. ಇವುಗಳು ಹುಲುಸಾಗಿ ಬೆಳೆಯಲೆಂದು ಏನೆಲ್ಲಾ ರಾಸಾಯನಿಕಗಳನ್ನು ಸಿಂಪಡಿಸಿ, ಹೊಲದ ಮಣ್ಣಿನ ಸತ್ವ ಹೋಗುವಂತೆ ಮಾಡುತ್ತಾರೆ. ಜೊತೆಗೆ ಬೆಳೆದ ತೊಗರಿ ಮತ್ತು ಸೂರ್ಯಕಾಂತಿಯನ್ನು ದಲ್ಲಾಳಿಗಳಿಗೆ ಮಾರಿ ಅವರ ದಗಲ್ಬಾಜಿಗಳಿಗೆ ಒಳಗಾಗಿ ಕೋಟ್ಟಷ್ಟು ರೊಕ್ಕವನ್ನು ಪಡೆದು, ಒಂದಿಷ್ಟು ಹಣದಿಂದ ನಿತ್ಯ ಉಪ ಜೀವನಕ್ಕೆ ಬೇಕಾದ ಬಿಳಿ ಜೋಳವನ್ನು ಕೊಂಡು ತರುತ್ತಾರೆ! ಹಣದ ಆಸೆಗಾಗಿ ಏನೆಲ್ಲಾ ಬೆಳೆಯನ್ನು ಬೆಳೆದು, ಮಣ್ಣಿನ ಸತ್ವವನ್ನು ಬರಿದು ಮಾಡಿ, ರಾಶಿ ರಾಶಿಯಾಗಿ ಬೆಳೆಯುವ ಜೋಳವನ್ನು ಕೊಂಡುತರುತ್ತಾರೆಂದರೆ ಇದೆಂತಹ ವಿಪರ್ಯಾಸ? ಅಂದು ಈ ಹೊಲಗಳಲ್ಲಿ ಜೋಳದ ರಾಶಿಯನ್ನು ಮಾಡುವಾಗ ತನೆಯನ್ನು ಕಣಕ್ಕೆ ಹಾಕಿ ಎಂಟು ಹತ್ತು ಎತ್ತುಗಳಿಂದ ಹಂತಿ ಹೊಡೆಯಿಸಿ, ಹಂತಿ ಪದ ಹಾಡುತ್ತಾ, ರಾಶಿ ಮಾಡುವಾಗಿನ ಮೋಜು ಮೇಜವಾನಿ ಸ್ಥಳದಲ್ಲಿ ಇಂದು ತೊಗರಿ ಮತ್ತು ಸೂರ್ಯಕಾಂತಿಯನ್ನು ಒಕ್ಕಲೆಬ್ಬಿಸುವ ಯಂತ್ರಗಳು ಬಂದು ಬಿಟ್ಟಿವೆ!
ಮನುಷ್ಯನ ಶ್ರಮದ ಸಾಧನೆ ವ್ಯರ್ಥವಾಗಿ ಬಿಟ್ಟಿದೆ. ಆ ಶ್ರಮವೆಲ್ಲವೂ ಇಂದು ನಮ್ಮ ಹಳ್ಳಿಗಳಲ್ಲಿ ಲಾಭ ಲೋಭಗಳಿಗೆ ಬಲಿಯಾಗಿ, ಸಾಚಾತನದಿಂದ ಇದ್ದ ವ್ಯಕ್ತಿಗಳು ಇಂದು ಕುಡಿಯುತ್ತಾ, ಕುಪ್ಪಳಿಸುತ್ತಾ, ಇಲ್ಲದ ಸ್ವರ್ಗವನ್ನು ಕಾಣುತ್ತಾ, ಕಂಗಾಲಾಗುತ್ತಿದ್ದಾರೆ. ಇರುವುದೆಲ್ಲವನ್ನು ಬಿಟ್ಟು, ಇಲ್ಲದ್ದನ್ನು ಬರಮಾಡಿಕೊಂಡ, ಸುಖದ ಹೆಸರಲ್ಲಿ ನರಕವನ್ನು ಅನುಭವಿಸುವ ನಮ್ಮ ಜನಗಳ ಇತ್ತೀಚಿನ ಹೈಟೆಕ್ ಸಂಸ್ಕೃತಿಯನ್ನು ಕಂಡು ವ್ಯಾಕುಲಗೊಂಡೆ. ಮುಂದೆ ಎಡ – ಬಲ ನೋಡುತ್ತಾ ನಮ್ಮೂರ ಅಗಸಿ ಬಾಗಿಲಿಗೆ (ಊರ ಬಾಗಿಲಿಗೆ) ತಲುಪಿದೆ. ಮೇಲಿನ ವಿಷಯ ಉತ್ತರ ಕರ್ನಾಟಕದ ಪರಿಸ್ಥಿತಿಯ ಒಂದು ಉದಾಹರಣೆ ಮಾತ್ರವಾಗಿರದೆ ದಕ್ಷಿಣ ಕರ್ನಾಟಕದ ಎಲ್ಲಾ ಹಳ್ಳಿಗಳಲ್ಲಿಯೂ ಹಳ್ಳಿಯ ಸೊಗಡು ಖಾಲಿಯಾಗುತ್ತಾ, ಹೈಟೆಕ್ ಸಂಸ್ಕೃತಿಯ ಮಾಯೆಗೆ ಬಲಿಯಾಗುತ್ತಾ, ಹಣದಾಸೆಗೆ ಏನೆಲ್ಲವನ್ನು ಬೆಳೆಯುತ್ತಾ ಸ್ವರ್‍ಗದಲ್ಲಿದ್ದೇವೆಂದು ಭ್ರಮಿಸುತ್ತಾ, ನರಕದಲ್ಲಿ ಸಾಉತ್ತಿದ್ದಾರೆ. ನಾನು ನಮ್ಮ ಹಳ್ಳಿಯ ವಾಸ್ತವಿಕ ಚಿತ್ರಣವನ್ನು ಬಯಸುತ್ತಾ ಹೋಗಿ ಹುಚ್ಚನಾಗಿ ಬಿಟ್ಟೆ. ನಮ್ಮೂರಿನ ಜನ ಲಾಭಲೋಭಗಳಿಗೆ ಬಲಿಯಾಗುತ್ತಾ, ಆಧುನಿಕತೆಯನ್ನು ಅರಸುತ್ತಾ, ಜಾಣರಾಗುತ್ತಿದ್ದೇವೆ, ಎಂದು ತಿಳಿದುಕೊಂಡಿದ್ದಾರೆ….!
*****
ಕಲ್ಲರಳಿ ಹೂವಾಗುವುದು
ಕಲ್ಪನೆಯ ಅನುಭವವಲ್ಲ.
ಈ ಕಲ್ಲು
ಕಲೆಯ ಕೈಂಕರ್‍ಯಕ್ಕೆ ಸಿಲುಕಿ
ಶಿಲ್ಪಕಲಾ ವೈಭವವ
ಸಾರುವುದು
ಕಲ್ಲೇ ಹೂವಾಗಿ.
*
ಜ್ಞಾನದಾಸೋಹಕ್ಕೆ
ಅನುಭವದ ಒಗ್ಗರಣೆಯೊಂದಿಗೆ,
ನಿನ್ನ ತನುಮನವ ಬಾಗಿಸಿ
ಜ್ಞಾನಗಳ ನೀಗಿಸಿ,
ಜಂಗಮನಾಗಿ,
ಉಣಿಸು
ಆ ಜ್ಞಾನದಾಸೋಹ.
*