ತಲೆಗೂದಲು ಕೆದರಿರುವುದು
ಗಡ್ಡ ಹೇರಳ ಬೆಳೆದಿರುವುದು
ಕಣ್ಣು ಆಳಕ್ಕೆ ಇಳಿದಿರುವುದು
ಜೇಬಿನಲ್ಲಿ ಬಾಂಬಿರುವುದು
ಮಂದಿಯ ಹಿಂದೆಯು ಇರುವರು
ಮಂದಿಯ ಮುಂದೆಯು ಇರುವರು
ಮಂದಿಯ ನಡುವೆಯ ಇರುವರು
ಯಾರಿಗೂ ಕಾಣದೆ ಇರುವರು
ಹಿಮಾಲಯದ ಮೇಲೆ ಹಿಮ ಬೀಳುವುದು
ಮನೆಯಂಗಳದ ಮೇಲೆ ಮಳೆ ಬೀಳುವುದು
ಕಾಡಿನ ಮೇಲೆ ಬೆಂಕಿ ಬೀಳುವುದು
ನಿದ್ರಿಸಿದವರಿಗೆ ನಿದ್ದೆ ಬೀಳುವುದು
ಒಬ್ಬಾನೊಬ್ಬ ರಾಜ
ಕನಸೊಂದ ಕಂಡ
ಪೇಪರ್‌ವೈಟಿನ ಬದಲಿಗೆ ಇತ್ತು
ಮೇಜಿನ ಮೇಲವನ ರುಂಡ
ಕೂಡಲೆ ಎದ್ದು ಅಪ್ಪಣೆಮಾಡಿದ
ಪೇಪರ್ ವೈಟುಗಳಿನ್ನು ನಿಷಿದ್ಧ
ಎಲ್ಲವನೂ ಹುಡುಕಿ ತೆಗೆಸಿ
ಸಮುದ್ರದಲ್ಲಿ ಮುಳುಗಿಸಿದ
ಆದರೇನು ಭಯೋತ್ಪಾದಕರು
ಬೇರೆ ಕನಸ ಕಳಿಸಿದರು
ತುಂಡರಿಸಿದ ಅವನ ಕೈಗಳು
ಆದವು ರೇಲ್ವೆ ಸಿಗ್ನಲುಗಳು
ಮಸಿಯ ಬದಲಿಗೆ ನೆತ್ತರು
ಉಪ್ಪಿನಂತೆ ಬೆವರು!
ಕಣ್ಣು ತಾಳೆಹಣ್ಣುಗಳು
ಎದೆಯೊಳಗೆ ಇದ್ದಿಲು!
ಏಳಲಾರ ಕನಸು ಹರಿದು
ಎದ್ದರೆ ಗತಿಯೇನು ?
ಹಾಗೆ ಸುಮ್ಮನೆ ಮಲಗಿರುವನು
ಯುಗ ಮುಗಿಯುವುದ ಕಾದು
*****