ಪ್ರಿಯ ಸಖಿ,
ಬೇರೆಯವರ ಭಾವನೆಗಳನ್ನು ಅರ್ಥೈಸುವುದು ಬಹಳವೇ ಕಷ್ಟ ಎನ್ನುತ್ತಾರೆ ತಿಳಿದವರು. ಅದು ನಿಜವೂ ಹೌದು. ಆದರೆ ಅದಕ್ಕಿಂತಾ ಕಷ್ಟವಾದುದು ನಮ್ಮನ್ನು ನಾವು ಅರಿಯುವುದು ! ಅಲ್ಲವೇ ? ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ತಮ್ಮ ‘ಇಷ್ಟು ಕಾಲ’, ಎಂಬ ಕವನದಲ್ಲಿ
ಇಷ್ಟು ಕಾಲ ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು ನಾವು
ನಮ್ಮ ಅಂತರಾಳವ?
ಕಡಲಮೇಲೆ ಸಾವಿರಾರು ಮೈಲಿ
ಸಾಗಿಯೂ
ನೀರಿನಾಳ ತಿಳಿಯಿತೇನು
ಹಾಯಿ ದೋಣಿಗೆ ?
ಎಂದು ಪ್ರಶ್ನಿಸುತ್ತಾರೆ. ತನಗೆಲ್ಲಾ ತಿಳಿದಿದೆ ಎಂದು ಬೀಗುವ ಮಾನವ ತನ್ನನ್ನು ತಾನು ಅರ್ಥ ಮಾಡಿಕೊಂಡಿರುವುದಾದರೂ ಎಷ್ಟು ? ಇಂದು ನಾವು ಬಾಹ್ಯದೊತ್ತಡದಲ್ಲಿ ಅಂತರಾಳದ ದನಿಗೆ ಕಿವಿಗೊಡುವುದನ್ನೇ ಮರೆತಿದ್ದೇವೆ. ನೀರಿನ ಮೇಲೆ ತೇಲಿದರೆ ಕಡಲಿನ ಆಳದ ಅನುಭವವಾಗುತ್ತದೆಯೆ?
ಮೆರಿ ಸ್ಕ್ರಾಲಿಬ್ ಎನ್ನುವ ಕವಿ “Have a quiet time in which to learn your own weakness and gods strength” ನಾವೆಲ್ಲರೂ ನಮ್ಮ ನಮ್ಮ ದೌರ್ಬಲ್ಯಗಳನ್ನರಿಯಲು ಹಾಗೂ ದೇವರು ನೀಡಿದ ಶಕ್ತಿಯನ್ನರಿಯಲು ತಕ್ಕಷ್ಟು ಸಮಯ ಕೊಡಬೇಕು ಎನ್ನುತ್ತಾನೆ. ಎಷ್ಟೊಂದು ಅರ್ಥಪೂರ್ಣವಾದ ಮಾತಲ್ಲವೇ ಸಖೀ? ನಮ್ಮ ನಮ್ಮ ದೌರ್ಬಲ್ಯಗಳನ್ನು ಅರಿತಾಗ ಮಾತ್ರ ಅದನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿರುವ ವಿಶಿಷ್ಟ ಶಕ್ತಿಯ ಅರಿವಾದಾಗ ಮಾತ್ರ ಅದನ್ನು ಉಪಯೋಗಿಸಿಕೊಂಡು ಉತ್ತಮ ವ್ಯಕ್ತಿಗಳಾಗಲು ಪ್ರಯತ್ನಿಸುತ್ತೇವೆ. ನಮ್ಮ ಮನಸ್ಸನ್ನೇ ಅರಿಯದೇ ಹೋದಾಗ ಯಾವುದೂ ಸಾಧ್ಯವಿಲ್ಲ. ನಾವೂ ಬದುಕುತ್ತೇವೆ. ಆದರೆ ಅರ್ಥಪೂರ್ಣವಾಗಿಯಲ್ಲ!
ಅಕ್ಕಮಹಾದೇವಿ ಬಹಳ ಹಿಂದೆಯೇ “ಎಲ್ಲ ಎಲ್ಲವನರಿದು ಫಲವೇನಯ್ಯ ತನ್ನ ತಾನರಿಯಬೇಕಲ್ಲವೇ?” ಎಂದಿದ್ದಾರೆ. ಇಲ್ಲಿ ಎಲ್ಲಕ್ಕಿಂತಾ ಮುಖ್ಯವಾದುದೇ ತನ್ನನ್ನು ತಾನು ಅರಿತುಕೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೌರ್ಬಲ್ಯಗಳು, ಕೆಟ್ಟ ಗುಣಗಳಿರುವಂತೆ ಉತ್ತಮ ಗುಣ, ಶಕ್ತಿಗಳು ಇದ್ದೇ ಇರುತ್ತವೆ. ಕೆಟ್ಟದ್ದನ್ನು ಹತೋಟಿಯಲ್ಲಿರಿಸಿ ಉತ್ತಮವಾದುದನ್ನು ಉದ್ದೀಪನಗೊಳಿಸುವ ವಿವೇಕ ನಮ್ಮಲ್ಲಿ ಮೂಡಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು! ನೀನೇನನ್ನುತ್ತೀ ಸಖೀ?
*****