ಪರಾಗಕಣಗಳು ಪರಾಗಾಶಯದಿಂದ ಶಲಾಕಾಗ್ರಕ್ಕೆ ವರ್‍ಗಾವಣೆಯಾಗುವುದಕ್ಕೆ ಪರಾಗಣ ಎಂದು ಕರೆಯುತ್ತಾರೆ. ಇದು ಸಸ್ಯಗಳ ಜೀವನದಲ್ಲಿ ಒಂದು ಪ್ರಮುಖ ಕ್ರಿಯೆ. ಏಕೆಂದರೆ ಈ ಕ್ರಿಯೆಯ ಅನಂತರವೇ ಪುಷ್ಪಗಳ ಅಂಡಾಶಯದಲ್ಲಿ ಫಲೀಕರಣವಾಗಿ ಬೀಜಕಟ್ಟುತ್ತದೆ.
ಪರಾಗಣದಲ್ಲಿ ಎರಡು ವಿಧಗಳಿವೆ.
೧. ಪರಾಗಕಣಗಳು, ಒಂದೇ ಪುಷ್ಪದ ಪರಾಗಾಶಯದಿಂದ ಶಲಾಕಾಗ್ರಕ್ಕೆ ತಲುಪುವುದು. ಇದು ಸ್ವಪರಾಗಣ. ದ್ವಿಲಿಂಗೀ ಪುಷ್ಪಗಳಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.
೨. ಒಂದು ಸಸ್ಯದ ಪುಷ್ಪದ ಪರಾಗಕಣಗಳು ಅದೇ ಜಾತಿಗೆ ಸೇರಿದ ಇನ್ನೊಂದು ಸಸ್ಯದ ಪುಷ್ಪದ ಶಲಾಕಾಗ್ರ ತಲುಪುವುದು. ಅದಕ್ಕೆ ಸಂಕರ ಪರಾಗಣ ಎಂದು ಕರೆಯುತ್ತಾರೆ. ಏಕಲಿಂಗೀ ಪುಷ್ಪಗಳಲ್ಲಿ ಇದನ್ನು ಕಾಣಬಹುದು.
ಸಂಕರ ಪರಾಗಣ ಕ್ರಿಯೆಯಲ್ಲಿ ಪರಾಗಕಣವು ಒಂದು ಸಸ್ಯದ ಪುಷ್ಪದಿಂದ ಇನ್ನೊಂದು ಸಸ್ಯದ ಪುಷ್ಪಕ್ಕೆ ತಲುಪಬೇಕಾದರೆ ಬಾಹ್ಯ ಮಾಧ್ಯಮದ ಅವಶ್ಯಕತೆಯಿದೆ. ಗಾಳಿ, ನೀರು, ಕೀಟಗಳು ಮತ್ತು ಪಕ್ಷಿಗಳು ಇಂತಹ ಮಾಧ್ಯಮಗಳಾಗಿ ಕಾರ್‍ಯ ನಿರ್‍ವಹಿಸುತ್ತವೆ.
ಯುಕ್ಕ ಎಂಬುದು ಮೆಕ್ಸಿಕೋ ಮತ್ತು ಅಮೇರಿಕದಲ್ಲಿ ಕಾಣಸಿಗುವ ಲಿಲೀ ಗಿಡದ ಜಾತಿಗೆ ಸೇರಿದ ಒಂದು ಸಸ್ಯ. ಯೂರೋಪ್ ಮತ್ತು ಉತ್ತರ ಅಮೇರಕದಲ್ಲಿಯೂ ಅಲಂಕಾರಿಕ ಗಿಡವಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಈ ಗಿಡದ ಎಲೆಗಳ ತುದಿಯು ಚೂಪಾಗಿ ಮುಳ್ಳಿನಂತಿದೆ. ಎಲೆಗಳ ಸಮೂಹದ ಮಧ್ಯದಿಂದ ದೊಡ್ಡದಾದ ಮಿಶ್ರಮಂಜರಿ (ಪ್ಯಾನಿಕಲ್) ಬೆಳೆದು ಅಂಡಾಕಾರದ ಬಿಳಿ ಹೂಗಳನ್ನು ಬಿಡುತ್ತದೆ. ಇವು ರಾತ್ರಿಯಲ್ಲಿ ಅರಳಿ ಸುಗಂಧ ಸೂಸುತ್ತವೆ.
ಟಿಜಿಟಿಕುಲಾ ಕುಲಕ್ಕೆ ಸೇರಿರುವ ಪತಂಗವನ್ನು ಯುಕ್ಕ ಪತಂಗವೆಂದೇ ಕರೆಯಲಾಗುತ್ತದೆ. ರೆಕ್ಕೆ ಬಿಚ್ಚಿದಾಗ ಇವು ಎರಡೂವರೆ ಸೆ.ಮೀ. ಅಗಲದ ಬಿಳಿಯ ಪತಂಗಗಳು.
ಯುಕ್ಕ ಗಿಡವು ಪರಾಗಣಕ್ಕೆ ಪತಂಗವನ್ನೇ ಅವಲಂಬಿಸಿದೆ. ಪತಂಗದ ಲಾರ್‍ವಗಳು ಯುಕ್ಕದ ಬೀಜಗಳನ್ನಷ್ಟೇ ಆಹಾರವಾಗಿ ಸೇವಿಸುತ್ತದೆ! ಈ ಸಂಬಂಧವು ಅಸಾಮಾನ್ಯವೂ, ಜಟಿಲವೂ ಆಗಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಅಧ್ಯಯನ ನಡೆಯಿಸಿ ಅಮೆರಿಕದ ಕೀಟತಜ್ಞ ಸಿ.ವಿ.ರಿಲಿ ೧೮೭೨ರಲ್ಲಿ ವಿವರಿಸಿದರು.
ಯುಕ್ಕ ಪತಂಗವು ರಾತ್ರಿಯಲ್ಲಿ ಚುರುಕಾಗಿ ಯುಕ್ಕ ಗಿಡವನ್ನು ಅರಸಿ ಹೋಗುತ್ತದೆ. ಯುಕ್ಕ ಗಿಡದ ಪರಾಗಕಣಗಳು ಒಂದು ರೀತಿಯ ಅಂಟುಪದಾರ್‍ಥದಲ್ಲಿದ್ದು ಜಿಗಿಟಾಗಿರುತ್ತವೆ. ಪತಂಗದ ಪ್ರೊಬೊಸಿಸ್‌ನ ಎಡ ಮತ್ತು ಬಲ ಭಾಗಗಳು ಎರಡು ಗ್ರಹಣಾಂಗಗಳಾಗಿ ಮಾರ್‍ಪಟ್ಟಿವೆ. ಅವುಗಳ ಸಹಾಯದಿಂದ ಅದು ಪರಾಗಕಣಗಳನ್ನು ಸಂಗ್ರಹಿಸಿ, ತನ್ನ ತಲೆಗಿಂತಲೂ ದೊಡ್ಡದಾದ ಪರಾಗಕಣಗಳ ಚೆಂಡನ್ನು ತಯಾರಿಸುತ್ತದೆ. ಆ ಪರಾಗಕಣದ ಚೆಂಡನ್ನು ಗ್ರಹಣಾಂಗಗಳು, ತಲೆ ಮತ್ತು ಮುಂಭಾಗದ ಕಾಲುಗಳ ಮಧ್ಯೆ ಹಿಡಿದು ಇನನ್ನೊಂದು ಗಿಡದ ಪುಷ್ಪಕ್ಕೆ ಹಾರಿ, ಅದರ ಶಲಾಕಾಗ್ರದಲ್ಲಿ ಪರಾಗಕಣದ ಚೆಂಡನ್ನು ಇಟ್ಟು ನಾಲಿಗೆಯಿಂದ ದಬ್ಬುತ್ತದೆ. ಅನಂತರ ಅದು ಅಂಡ ನಿಕ್ಷೇಪಕ (ಓವೀಪಾಸಿಟರ್)ನ ಸಹಾಯದಿಂದ ಅಂಡಾಶಯಕ್ಕೆ ರಂಧ್ರ ಕೊರೆದು, ಒಳಹೊಕ್ಕು ಒಂದೆರಡು ಮೊಟ್ಟೆಗಳನ್ನು ಇಡುತ್ತದೆ. ಇದೇ ಕಾರ್‍ಯ ಮುಂದೆವರೆಸಲು ಇನ್ನಿತರ ಪುಷ್ಪಗಳಿಗೆ ಹಾರಿಹೋಗುತ್ತದೆ. ಹೀಗೆ ಪರಪರಾಗಣ ಜರುಗುತ್ತದೆ.
ಪರಾಗವು ಅಂಡಕಗಳನ್ನು ಫಲೀಕರಿಸಿ, ಬೀಜಗಳಾಗಿ ಬೆಳೆದಾಗ ಅವುಗಳಲ್ಲಿರುವ ಪತಂಗದ ಲಾರ್‍ವಗಳು ಬೀಜಗಳೊಂದಿಗೆ ಬೆಳೆಯುತ್ತ ಕೆಲವು ಬೀಜಗಳನ್ನು ಆಹಾರವಾಗಿ ಉಪಯೋಗಿಸುತ್ತವೆ.
ಲಾರ್‍ವಗಳು ಕೀಟಗಳಾದಾಗ ಹಣ್ಣಿಗೆ ರಂಧ್ರ ಕೊರೆದು ಹೊರ ಹಾರಿಹೋಗುತ್ತವೆ. ಆ ರಂಧ್ರದ ಮೂಲಕ ಹಲವು ಬೀಜಗಳು ಹೊರಬಿದ್ದು ಬೀಜ ಪ್ರಸಾರವಾಗುತ್ತದೆ. ಹೀಗೆ ಈ ಎರಡು ಜೀವಿಗಳ ಸಹಜೀವನ ಸಾಗುತ್ತದೆ.
ಹೀಗೆ ಟಿಜಿಟಿಕುಲಾ ಕುಲದ ಪ್ರತಿಯೊಂದು ಜಾತಿಯ ಪತಂಗಗಳು ಯುಕ್ಕ ಗಿಡದ ಒಂದೊಂದು ಜಾತಿಯ ಯುಕ್ಕಗಿಡಗಳನ್ನು ಪರಾಗಣಿಸುತ್ತವೆ. ಉದಾಹರಣೆಗೆ ಟಿಜಿಟಿಕುಲಾ ಯುಕ್ಕಾಸೆಲಾ ಪತಂಗವು ಯುಕ್ಕ ಫಿಲಾಮೆಂಟೋಸ್ ಗಿಡದಲ್ಲಿ ಪರಾಗಣಿಸುತ್ತದೆ. ಟಿಜಿಟಿಕುಲಾ ಸಿಂಥೆಟಿಕಾ ಮತ್ತು ಟಿ. ಮ್ಯೂಕುಲೆಟಾ ಪತಂಗಗಳು ಕ್ರಮವಾಗಿ ಯುಕ್ಕ ಬ್ರೆವಿಫೋಲಿಯ, ಯುಕ್ಕ ವಿಪ್ಲೇ ಜಾತಿಯ ಗಿಡಗಳನ್ನು ಪರಾಗಣಿಸುತ್ತವೆ.
*****