ಹೊಗಳುವರು ಭಟ್ಟಂಗಿಗಳು ನಿನ
ಗಗಣಿತಾರೋಪಗಳ ಮಾಡುತ
ಹಗರಣದ ಕಾಮುಕರು ನಿನ್ನರಿತವರು ಅವರಲ್ಲ
ಸುಗುಣ ನಿರ್‍ಗುಣ ರೂಪ ನೀನೈ
ಜಗಕೆ ಮಂಗಳ ಕಾರಿ ನೀನೈ
ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ
ನೊಂದಿ ಮೈತ್ರಿಯು ತಮದಲಿರುಳಲಿ
ಕಂದರೆಲ್ಲರು, ಕಂದಿ ತಮ್ಮೊಳ
ಗಿಂದು ನೊಂದಿಹರೆನುತ ಗಣಪನು ಗಿರಿಜೆಯೊಡಗೂಡಿ
ಬಂದು ನಿಂದಿಹ ನಿದುಗೊ! ಹೊಸಿಲಲಿ
ಒಂದೂಗೂಡಿಸಿ ನೊಂದ ಕರಗಳ
ಸಂದ ಪ್ರೇಮಾಂಜಲಿಯ ಪುಟದಲಿ ನೀಡಿರರ್ಘ್ಯವನು
ಮಳೆಯ ಕರೆಯಲು ಮೇಘ ಘಟೆಗಳು
ಬಳಲಿ ತೊಳಲಿದ ಧರಣಿ ತಣಿಯಲು
ಹೊಳೆಗಳೇರಲು ನರರು ಹರುಷಿಸೆ! ಪರಿಯನರಿಯದಲೆ
ಎಳೆಯ ಸುಳಿಗಳು ಪೂಗಳರಳಲು
ಇಳೆಯಕೇದಿಗೆ ಬಿರಿದು ಹೊಗಳಲು
ಸುಳಿದು ಸುಯ್ಯನೆ! ಗಾಳಿಯುಸರಿತು ಗಣಪ ಬರತಿಹನು
ಬರಹಗಾರರ ಗುರುವು ನೀನೈ
ಹರನ ಸುತ ಚಿರ ವಟುವು ನೀನೈ
ಹಿರಿದು ಸೇವೆಯ ಮಾಡಲೆಮಗರಿವಿತ್ತು ಸಲಹುತಿರು
ಇರವನಿಡು ಶಿವಸುಖದ ಬೆಳಕಲಿ
ಇರಿದು ಅಂಕುಶದಲ್ಲಿ ಶಂಕೆಯ
ಧರೆಯ ಸುಖಗಳ ಕರಿವೆ ಭಕುತಿಯಲೀವೆ ಮೋದಕವ
ಅರಿತು ನೋಡಲು ನಾಡ ಒಲುಮೆಗೆ
ಹರಿವ ವೀರ್‍ಯಕೆ ಭಾವಿ ಸೌಖ್ಯಕೆ
ಹರನ ಸುತ ಸ್ವಾತಂತ್ರಜೀವಿಗೆ ನೀನೆ ರಕ್ಷಕನು
ಭರತಮಾತೆಯ ಬೆಮರ ಮಣ್ಣೊಳ
ಗುರಿದಮೂರುತಿ ಭರತಗಣಪತಿಯೆ
ಅರಿತುನಿನ್ನನು ಭಜಿಸಿ ನಲಿವೆವು! ಜಗದ ಜನರೆಲ್ಲ
ನಡುವ ಬಿಗಿಯುವೆ ಪಾಶ ಬಂಧದಿ
ಹಿಡೆವನಂಕುಶ ಕೊಲಲು ಶಂಕೆಯ
ಒಡಲ ಕಟ್ಟುವೆ ಪರರ ಸೇವೆಗೆ ಪೊರೆವೆನಾರ್‍ತರನು
ಹಿಡಿವೆ ಲೇಖನಿ ಬರಿವೆ ಭಾರತ
ದೊಡಲ ಬೇಗೆಯ ಭವ್ಯ ಚರಿತೆಯ
ಒಡೆಯ! ಗಣಪನ ಮಾಡಲೆನ್ನನು ಘಳಿಗೆಯೋಲವಿನಲಿ
*****