ಸಿದ್ಧಾಂತ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು.

ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ “ನೀವು ಕೂದಲೆಳೆಯಲ್ಲಿ ಸೋಲು ತಪ್ಪಸಿಕೊಂಡಿರಿ” ಎಂದ.

“ನಾನು ಸೋಲಿಲ್ಲದ ಸರದಾರ” ಅತ್ಯುತ್ಸಾಹದಿಂದ ಉದ್ಗರಿಸಿದ ಉಗ್ರಪ್ಪ.

“ನಿಮ್ಮ ಅಧಿಕಾರದ ಅವಧಿಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ರಾಜಮಾರ್ಗಗಳನ್ನಾಗಿ ರೂಪಿಸುತ್ತೇನೆ ಎಂದಿದ್ದೀರಿ” ಪರ್ತಕರ್ತ ಹೇಳಿದ.

“ಹೌದು” ಚುಟುಕಾಗಿ ಉಲಿದ ಉಗ್ರಪ್ಪ.

“ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಭವಿಷ್ಯ ನೀಡುತ್ತೇನೆಂದು ಪ್ರಮಾಣ ಮಾಡಿದ್ದೀರಿ”.

“ಅದು ನಿಜ”

“ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ಟು, ಬೀಜ, ಗೊಬ್ಬರ ಪೂರೈಸಿ ಅನ್ನದಾತರನ್ನು ಬದುಕಿಸುತ್ತೇನೆ ಎಂದು ಘೋಷಿಸಿದ್ದೀರಿ”.

“ಹೌದು”.

“ಕುಡಿಯುವ ನೀರಿಗೆ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆ. ಹಸಿವಿನ ಸಂಕಟದಿಂದ ಜನರು ಸಾಯದಂತೆ ಎಚ್ಚರಿಕೆ ವಹಿಸುತ್ತೇನೆ. ನೂರಕ್ಕೆ ನೂರರಷ್ಟು ಜನರನ್ನು ಸಾಕ್ಷರರನ್ನಾಗಿಸಲು ಹೋರಾಡುತ್ತೇನೆ. ರೋಗ-ರುಜಿನಗಳಿಂದ ಜನರು ಸತ್ತು ಹೋಗದಂತೆ ಅಮೃತ ಕುಡಿಸುತ್ತೇನೆ ಎಂದು ನೂರಾರು ಸಭೆಗಳಲ್ಲಿ ಹೇಳುತ್ತಿದ್ದಿರಿ.”

“ಹೌದು… ಹೌದು… ಹೌದು.”

“ಆದರೆ ನೀವು ಏನನ್ನೂ ಮಾಡಲಿಲ್ಲ” ವಿಷಾದ ವ್ಯಕ್ತಪಡಿಸಿದ ಪತ್ರಕರ್ತ.

“ನನ್ನ ಗೆಲುವಿಗೆ ಅದೇ ಆಧಾರವಲ್ಲವೆ?” ನಗುತ್ತ ಕೇಳಿದ ಉಗ್ರಪ್ಪ.

ಅವನ ಪ್ರಶ್ನೆಗೆ ದಿಗಿಲುಗೊಂಡ ಪತ್ರಕರ್ತ ತುಸು ಏರುಧ್ವನಿಯಲ್ಲಿ ಹೇಳಿದ “ನೀವು ರಾಜಕಾರಣಿಗಳು ಬರಿ ಸುಳ್ಳು ಹೇಳುತ್ತೀರಿ. ಭರವಸೆಯ ಗಾಳಿ ಊದಿ ಜನರನ್ನು ರಬ್ಬರಿನ ಬಲೂನ್ ಆಗಿಸುತ್ತೀರಿ.”

“ಎಷ್ಟೇ ಆಗಲಿ ನೀವೂ ಪತ್ರಕರ್ತರು. ರಾಜಕಾರಣದ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ” ಹ್ಹ ಹ್ಹ ಹ್ಹ…. ಎಂದು ಹಗುರಾಗಿ ನಕ್ಕ ಉಗ್ರಪ್ಪ. ಆ ಲಜ್ಜೆಗೇಡಿ ನಗೆ ಕಂಡು ಕೋಪಿಸಿಕೊಂಡ ಪತ್ರಕರ್ತ “ಇಂಥ ರಾಜಕಾರಣದಿಂದ ದೇಶಕ್ಕೇನು ಲಾಭ?” ಎಂದು ವ್ಯಂಗ್ಯದ ಬಾಣ ಎಸೆದ.

“ದೇಶಕ್ಕೇನೋ ಗೊತ್ತಿಲ್ಲ. ನನಗಂತೂ ಇದೆ. ನನ್ನ ನಂಬಿಕೊಂಡವರಿಗೂ ಅನುಕೂಲವಿದೆ” ಯಾವ ಮುಜುಗರವಿಲ್ಲದೆ ಹೇಳಿದ ಉಗ್ರಪ್ಪ.

“ಒಂದಿಲ್ಲ ಒಂದಿನ ಜನ ನಿಮ್ಮ ಸ್ವಾರ್ಥದ ಎದುರು ನಿಂತರೆ?”

“ಬಲೂನಿಗೆ ಗಾಳಿ ತುಂಬುವುದರಲ್ಲಿ ನಾನು ಚಾಣಾಕ್ಷ. ಹಾಗೆಯೇ ಉಬ್ಬಿದ ಬಲೂನುಗಳ ಗಾಳಿ ತೆಗೆಯುವ ತಂತ್ರದಲ್ಲಿ ನಾನು ಎಕ್ಸ್‌ಪರ್ಟು ಮಾರಾಯರೆ!” ಆತ್ಮವಿಶ್ವಾಸ ವ್ಯಕ್ತಪಡಿಸಿದ ಉಗ್ರಪ್ಪ.

ಪತ್ರಕರ್ತ ತುಟಿ ಹೊಲಿದುಕೊಂಡಂತೆ ಕುಳಿತ.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನ ಮೆಚ್ಚಿದ ಶಿಕ್ಷಕ
Next post ಅಗ್ಗದರವಿಯ ತಂದು ಹಿಗ್ಗಿ ಹೊಲೆಸಿದೆನಂಗಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…