ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು
ತಿಳಿಯದಿದ್ದುದು ಹೇಗೆ ಮಾರಾಯ?
ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ
ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ!
ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು
ಮುರಿದುಬಿದ್ದಿತು ಈಗ ಲೊಡ್ಡು ಹಲಗೆ,
ಚಂದ್ರಮಾಯೆಯು ಕವಿದ ಸ್ವಪ್ನನಗರಿಯಲಿ
ಕರ್ಪೂರ ಭವನಕ್ಕಿದ್ದ ಪರವಾನಿಗೆ!
ಅಲ್ಲಿ ಬಂದಿದ್ದಾಗ ಏನೆಲ್ಲ ತೋರಿಸಿದೆ
ಮಂಜುಮಂಜಾಗಿದ್ದ ಮಂತ್ರಲೋಕ!
ಕನಸಿನಲ್ಲಷ್ಟೆ ಬಿಗಿದಪ್ಪಿ ಮುದ್ದಿಟ್ಟರೂ
ವಂಶ ಬೆಳೆಸುವ ಹೆಣ್ಣ ಘನ ಕಾಯಕ!
ಮುಟ್ಟಿದರೆ ಸಾಕು ಥಟ್ಟನೆ ತೆರೆದು ಬಾಗಿಲು
ರಂಭೆ ಊರ್ವಶಿ ಮೇನಕೆಯರ ಸಾಲು;
ಬೀದಿ ಹೆಣ್ಣೂ ಸಿಗದೆ ಉರಿ ಕೆರಳುತಿದ್ದಂಥ
ತಿರುಕ ಬದುಕಿಗೆ ಗಾಳಿ, ಜೇನು ಹಾಲು!
ಬೆಳುದಿಂಗಳಲಿ ಬರೆದ ಗಾಳಿಮೈ ಬಾಲೆಯರ
ಬಾಳೆತೋಟಕ್ಕೆ ನಾ ಲಗ್ಗೆ ಹೊಡೆದೆ;
ತೊಣಚಿ ಹೊಕ್ಕಿದ ಗೂಳಿ ಸೊಕ್ಕಿ ಸೊಟ್ಟಗೆ ಓಡಿ
ಬಟ್ಟೆ ತುಂಬಾ ಕೆಟ ಚಿತ್ರ ಬರೆದೆ.
ಮದುವೆಯಾಗಲು ಬಯಸಿ ಸಿಗದ ಚೆಲುವೆಯರನ್ನ
ತಂಗಿ ಎಂದಾದರೂ ಕರೆವ ಕಲೆಯ,
ಕಲಿಸಿದೆಯೊ ಕೀಟಲೆಗೆ ಮೈಮುಟ್ಚಿ ಕಣ್ಮುಚ್ಚಿ
ಜೂಟಾಟಕೆಳೆವ ಆದರ್ಶರತಿಯ!
ಎಲ್ಲಿ ದೊರೆತಾರು ಬಿಡು ನಿನ್ನಂಥ ಕಲೆಗಾರ
ಗೀರ್ವಾಣರಾಗದಲ್ಲೆ ಎಲ್ಲ ವ್ಯವಹಾರ;
ಗುಗ್ಗು ಭೋಳೇರಾಮರನ್ನು ಹಳ್ಳಕ್ಕೆ ತಳ್ಳಿ
ಆಯ್ತು ನಿನ್ನಂಗಡಿಗೆ ಪೂರ್ತಿವ್ಯಾಪಾರ!
ಸಂಕ ಮುರಿದಿದೆ, ನಡುವೆ ಗಡಿ ಎದ್ದಿದೆ,
ನಮ್ಮ ವ್ಯವಹಾರಕ್ಕೆ ಕೊನೆ ಬಿದ್ದಿದೆ;
ದಾಕ್ಷಿಣ್ಯ ದಡ್ಡತನ ಹೆಣೆದ ಸಂಬಂಧಕ್ಕೆ
ಹಳೆರಾಗದಲ್ಲಿ ಮಂಗಳ ಹಾಡುವೆ.
*****