ನಾವು ಇದನ್ನೂ ಹೇಳಬೇಕೆಂದು
ನಿಜ ಒತ್ತಾಯ ಮಾಡುತ್ತದೆ :
‘ಬದುಕು ಸಾಗುತ್ತದೆ.’
ಕ್ಯಾನೆ, ಬೊರೊಡಿನೋಗಳಲ್ಲಿ
ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ
ಬದುಕು ಸಾಗುತ್ತದೆ.
ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ
ಒಂದು ಪೆಟ್ರೋಲ್ ಬಂಕಿದೆ,
ಬಿಲಾಹೊರಾದ ಪಾರ್ಕಿನ ಬೆಂಚಿಗೆ
ಬಳಿದ ಬಣ್ಣಹಸಿಯಾಗಿದೆ.
ಪರ್ಲ್ ಹಾರ್ಬರಿನಿಂದ ಹೇಸ್ಟಿಂಗ್ಸ್ ಗೆ
ಪತ್ರಗಳು ರವಾನೆಯಾಗುತ್ತವೆ,
ಚೆರೊನಿಯಾದ ಸಿಂಹ ಪ್ರತಿಮೆಯ ಮುಂದೆ
ವ್ಯಾನು ಸಾಗುತ್ತದೆ,
ವೆರ್ಡನ್‍ನ ತೋಟಗಳು
ಬರಲಿರುವ ವಸಂತನ ತಪ್ಪಿಸಿಕೊಳ್ಳಲಾರದಿವೆ.
ಎಲ್ಲವೂ ಎಷ್ಟೊಂದಿದೆಯೆಂದರೆ
ಏನನ್ನೂ ಪೂರ್ತಿ ಬಚ್ಚಿಡಲಾಗುವುದಿಲ್ಲ.
ಅಕ್ಟಿಯಂನಲ್ಲಿನಿಂತ ವಿಹಾರ ದೋಣಿಯಿಂದ
ಸಂಗೀತದ ಮಳೆ ಸುರಿದಿದೆ,
ಡೆಕ್ಕಿನ ಮೇಲೆ
ಇಳಿ ಬಿಸಿಲಲ್ಲಿ ದಂಪತಿಗಳ
ನರ್ತನ ಸಾಗಿದೆ.
ಯಾವಾಗಲೂ ಎಷ್ಟೊಂದೆಲ್ಲ ನಡೆಯುತ್ತೆದೆಂದರೆ
ಎಲ್ಲಾ ಮತ್ತೆಮತ್ತೆ ಆಗುತ್ತಲೇ ಇದೆ ಅಂತನ್ನಿಸುತ್ತದೆ.
ಮನೆ ಬಿದ್ದ ಎಡೆಯಲ್ಲಿ
ಒಳ್ಳೆಯ ಮನುಷ್ಯನನ್ನು
ಮಕ್ಕಳು ಪೀಡಿಸುತ್ತಿವೆ.
ಹಿರೋಷಿಮಾ ಇದ್ದ ಎಡೆಯಲ್ಲಿ
ಹಿರೋಷಿಮಾ ಮತ್ತೆಎದ್ದಿದೆ.
ದಿನ ಬಳಕೆಯ ಸಾವಿರ ಸಾಮಾನು
ತಯಾರಿಸಿದೆ.
ಈ ಭಯಂಕರ ಜಗತಿನಲ್ಲಿ
ಎದ್ದದ್ದು ಸಾರ್ಥಕ ಅನಿಸುವ ಹಾಗೆ
ಮಾಡುವ ಮುಂಜಾವಿನ
ಸೌಂದರ್ಯವಿಲ್ಲದೆ ಇಲ್ಲ.
ಬಯಲ ಹುಲ್ಲಿನ ಮೇಲೆ ಇಬ್ಬನಿ ಇದೆ,
ಹುಲ್ಲು ಯಾವಾಗಲೂ ಇರುವಂತೆ.
ಬಹುಶಃ ಎಲ್ಲ ಬಯಲೂ ರಣರಂಗವೇ.
ನಮಗೆ ನೆನಪಿರುವ
ನಮಗೆ ಮರೆತಿರುವ
ಯುದ್ಧಗಳು ನಡೆದ ತಾಣಗಳೇ.
ಬರ್ಚ್, ಸೀಡರ್, ಫರ್ ಕಾಡುಗಳು,
ಬಿಳಿಯ ಹಿಮ, ಬೂದಿ ಮರಳು,
ಕಂದು ಕಲ್ಲು, ಜೌಗು, ಪೊದೆ,
ಎಲ್ಲವೂ ಕಪ್ಟ ಬಂದಾಗ ಅಡಗುವ ತಾಣಗಳೇ.
ಇದೆಲ್ಲದರ ನೀತಿ ಏನು? ಬಹುಶಃ ಏನೂ ಇಲ್ಲ.
ರಕ್ತಹರಿಯುತ್ತದೆ, ರಕ್ತ ಒಣಗುತ್ತದೆ.
ಎಂದಿನಂತೆ ಕೆಲವು ನದಿಗಳು
ಕೆಲವು ಮೋಡಗಳು.
ದರಂತ ತುಂಬಿದ
ಪರ್ವತ ಕಣಿವೆಗಳಲ್ಲಿ
ಗಾಳಿ ಬೀಸಿ,
ಮೈ ಮರೆತು ನಡೆದವನ ಹ್ಯಾಟನ್ನು
ಹಾಯ್ದು ಹಾರಿಸಿದಾಗ
ನಾವು ನಗದೆ ಇರಲು ಸಾಧ್ಯವಿಲ್ಲ.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ