ಯಾವಾಗಲೂ ಹೆಜ್ಜೆಸದ್ದು
ಯಾವಾಗಲೂ
ರಾತ್ರಿಯ ಹೊತ್ತು ಹೆಜ್ಜೆ ಸದ್ದು
ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ,
ಯಾವಾಗಲೋ ತೆರೆದುಕೊಂಡು ಬಿಡುತ್ತದೆ
ನಿನ್ನನೀಲಿ ನೆರಳನ್ನು ದಿನವೂ ರಾತ್ರಿ
ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು?
ಹೆಜ್ಜೆಗಳು ಹತ್ತಿರ ಬರುತ್ತವೆ.
ನಿನ್ನ ಕಣ್ಣೇ ದೇಶ
ನಿನ್ನ ತೋಳೇ ನನ್ನಸುತ್ತುವರೆದ ಕೋಟೆ ಗೋಡೆ.
ಹೆಜ್ಜೆಗಳು ಬರುತ್ತವೆ.
ಯಾಕೆ ಯಾವಾಗಲೂ
ನಾನು ಓಡುವಂತೆಯೇ ಕನಸು ಚಿತ್ರಿಸುತ್ತದೆ
ಓ ಶಹರ್ ಝಾದ?
ಹೆಜ್ಜೆಗಳು ಹತ್ತಿರ ಬರುತ್ತವೆ,
ಒಳಗೆ ಬರುವುದಿಲ್ಲ.
ನಾನು ನಿನ್ನ ನೆರಳು ನೋಡಬಲ್ಲಂಥ
ಮರವಾಗು.
ನಾನು ನಿನ್ನ ನೆರಳು ನೋಡಬಲ್ಲಂಥ
ಚಂದ್ರನಾಗು.
ಬೂದಿಯಲ್ಲಿರುವ ಗುಲಾಬಿಯಂಥ ನನ್ನ ನೆರಳಲ್ಲಿ
ನಿನ್ನ ನೆರಳು ಕಾಣಬಲ್ಲಂಥ
ಕಠಾರಿಯಾಗು.
ಯಾವಾಗಲೂ ರಾತ್ರಿಯ ಹೂತ್ತು ಹೆಜ್ಜೆ ಸದ್ದು.
ನಾನು ಅವಿತಿಟ್ಟುಕೊಳ್ಳಬಲ್ಲಂಥ ಪರದೇಶವಾಗು.
ನನ್ನ ಸೆರೆಮನೆಯಾಗು.
ಒಂದೇ ಬಾರಿಗೆ ನನ್ನ ಕೊಂದುಬಿಡು.
ಹತ್ತಿರ ಹತ್ತಿರ ಬರುವ ಹೆಜ್ಜೆ ಸದ್ದಿನಲ್ಲಿ
ಹೀಗೆ ನನ್ನ ಕೊಲ್ಲಬೇಡ.
*****
ಮೂಲ: ಮಹಮೂದ್ ದರ್‍ವೇಶ್