ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು
ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ
ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ
‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು
ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’?
ನೂರು ವರ್ಷದ ಹಿಂದೆ ಹೀಗೆ ಬರೆದು ‘ಅದರ ಸುತ್ತ
ಗುಂಡಗೆ ಗೆರೆ ಎಳೆದಿದ್ದೇನೆ’ ಅನ್ನುವ ಮಾತು ಸೇರಿಸುತ್ತಿದ್ದರು.
ಕಾಲ ಕಳೆಯುತ್ತಿದೆ… ಫೋನಿನಲ್ಲಿ ದೂರದವರು
ಅಳುತಲೋ ನಗುತಲೋ ಇರುವಂತೆ:
ಕೇಳಿಸುವುದು ಕಾಣಿಸುತ್ತಿಲ್ಲ,
ಕಾಣಿಸುತಿರುವುದೇನೂ ಕೇಳಿಸುತ್ತಿಲ್ಲ,
‘ಮುಂದಿನ ವರ್ಷ’ ಅಂದಾಗ, ‘ಹೋದ ತಿಂಗಳು’ ಅಂದಾಗ
ಮೈ ಮೇಲೆ ಎಚ್ಚೆರ ಇರುವುದಿಲ್ಲ.
ಒಡೆದ ಗಾಜಿನ ಚೂರುಗಳು ಈ ಮಾತುಗಳು
ಗಾಯ ಮಾಡಿ ರಕ್ತ ಹರಿಸುತ್ತವೆ.
ನೀನು ಸುಂದರಿ, ಪ್ರಾಚೀನ ಗ್ರಂಥದ ವ್ಯಾಖ್ಯಾನದಂತೆ.
ನಿಮ್ಮ ದೇಶದಲ್ಲಿ ಹೆಂಗಸರ ಸಂಖ್ಯೆ ಹೆಚ್ಚೆಂದು
ಇಲ್ಲಿಗೆ ಬಂದು ನನಗೆ ಸಿಕ್ಕಿದೆ.
ಈಗ ಬೇರೆ ಸ್ಟಾಟಿಸ್ಟಿಕ್ಸು ನಮ್ಮನ್ನು ದೂರ ಮಾಡಿದೆ.
ಬದುಕುವುದೆಂದರೆ ಹಡಗನ್ನೂ
ಬಂದರನ್ನೂ ಒಟ್ಟಿಗೆ ಕಟ್ಟುವ ಕೆಲಸ.
ಹಡಗು ಮುಳುಗಿಹೋದ ಮೇಲೂ
ಬಂದರನ್ನು ಪೂರ್‍ಣವಾಗಿಸುವ ಜವಾಬ್ದಾರಿ.
ಕೊನೆಯದಾಗಿ, ನನಗೆ ನೆನಪಿರುವುದು ಇಷ್ಟೆ :
ಮಂಜು ಕವಿದಿತ್ತು.
ಕೇವಲ ಕವಿದ ಮಂಜನ್ನಷ್ಟೆ
ನೆನಪಿಟ್ಟುಕೊಂಡಿರುವವರು….
ಏನನ್ನು ತಾನೇ ಜ್ಞಾಪಕ ಇಟ್ಟುಕೊಂಡಿರಲು ಸಾಧ್ಯ, ಹೇಳು?
*****
ಮೂಲ: ಯೆಹೂದಾ ಅಮಿಛಾಯ್