ಅವಳ ಬೆರಳಾಡಿ ಬಣ್ಣಹೂವಾಗುತ್ತದೆ.
ಅವಳ ಮೈ ತನ್ನದೇ ನೆನಪುಗಳಲ್ಲಿ ಅರಳುತ್ತದೆ.
ಅವಳಿಗೆ ಸದಾ ಕೆಲಸ-
ನಮ್ಮ ಮದುವೆ ಉಡುಪು ಹೊಲಿಯುವುದೊಂದೇ,
ಪಕ್ಷಿಯ ಹಾಗೆ ಸದಾ ನಮಗೆ
ತಿನ್ನಲು ಆಹಾರ ಹುಡುಕುವುದೊಂದೇ.
ಬದುಕಲ್ಲಿ ಮುಳ್ಳುಗಳಿದ್ದರೆ
ಅವಳೇ ತನ್ನೆದೆ ಅವಕ್ಕೆ ಒತ್ತಿ ಹಾಡುವವಳು.
ಅವಳ ಮಾತು, ಬೈದಾಗ, ತುಂಬ ಮೊನಚು.
ಆಮೇಲೆ ಗಂಟೆಗಳ ಕಾಲ
ಗಾಯಕ್ಕೆ ಮುಗುಳ್ನಗೆ ಸವರುತ್ತಿರುತ್ತಾಳೆ.
ಅವಳು ಹುಡುಗಿಯಾಗಿದ್ದಾಗ, ನೋಡಿದೆ…
ನನ್ನ ರೆಕ್ಕೆ-ಗರಿ ಹರಡಿ ನವಿಲಾಡಿ ಅವಳ ಸೆಳೆದೆ,
ಮರುಳಾಗಲಿಲ್ಲ ಅವಳು.
ಚೌತಿಚಂದ್ರನ ಬೆಳಕಲ್ಲಿ
ಕಲ್ಪನೆಯ ಕೂಸಿಗೆ ಮನೆಯ ಕಟ್ಟಲು
ಹುಡುಗಿಯೊಬ್ಬಳು ಆಟಕ್ಕೆ ಗಂಡನನ್ನು ಒಪ್ಪುವಂತೆ,
ಪ್ರೀತಿ ಇರದಿದ್ದರೂ,
ನನ್ನ ಒಪ್ಪಿದಳು.
*****
ಮೂಲ: ಆರ್ ಎಸ್ ಥಾಮಸ್