ಮೊದಲಿನ ಹಾಗಲ್ಲ ಈಗ
ನಾವು ಬೇಜಾರಾಗಿ ಬಿಟ್ಟಿದ್ದೇವೆ
ನಮ್ಮ ಬೇಜಾರೇ ನಮ್ಮ ಸಂತೋಷ
ನಮಗೆ ಇದು ಯಾವುದೂ ಬೇಡ
ಹಾಗಾದರೆ ಇವಕ್ಕೆಲ್ಲ ಬೆನ್ನು ಕೊಟ್ಟು
ನಾವೇ ಓಡಿ ಹೋಗೋಣ ನಡಿ
ಕನಸಿನವರೆಗೆ ಅಥವಾ ಸಾವಿನವರೆಗೆ
ಓಡು ಓಡು ಇನ್ನೂ ಜೋರಾಗಿ
ಸಿಗರೇಟಿನ ಹೊಗೆಯಲ್ಲಿ
ಅಂಗಡಿಗಳ ದೀಪದ ಬೆಳಕಿನಲ್ಲಿ
ಕ್ರಿಕೆಟ್ಟಿನ ಸ್ಕೋರಿನಲ್ಲಿ ಸಿನಿಮಾದಲ್ಲಿ
ಹೆಂಗಸರಲ್ಲಿ ಸಂಬಳದಲ್ಲಿ
ನಮ್ಮ ಸಂತೋಷ
(ನೂರು ಮೀಟರ್ ಓಟದಲ್ಲಿ ಹೊಸ
ವಿಶ್ವದಾಖಲೆ) ಎಷ್ಟು
ಓಡಿದರೂ ನಮ್ಮ ಧ್ವನಿಗಳು
ಕೇಳುತ್ತವೆ ನಮ್ಮ ಅಮರಾವತಿಯ ಕನಸಿನವರೆಗೂ
ಭೂಮಿ ನಮ್ಮ ಕಾಲ ಕೆಳಗೇ ಇರುತ್ತದೆ
ಕಾಫಿ ಆಯಿತಾ ಇನ್ನೊಂದು
ಸಾರಿ ಅಬ್ಬಾ
ಏನು ಬಿಸಿಲು ಓಹೋ
ಏನು ಇಲ್ಲಿಯವರೆಗೂ ಯಾವಾಗ
ಬಂದಿರಿ ಇನ್ನೂ
ಎಷ್ಟು ದಿನ ಇರುತ್ತೀರಿ
(ಸನ್ಮಾನ್ಯ ಅಧ್ಯಕ್ಷರೇ) ಪಂಪನು ಕನ್ನಡದ ಆದಿಕವಿಯಾಗಿದ್ದಾನೆ
ನಮಗೆ ಕನಸುಕೂಡ ಇಲ್ಲ
ಗೊತ್ತಿದ್ದೂ ಸುಮ್ಮನೆ ಅದನ್ನೇ
ಅದನ್ನೇ ಏನೂ ಇಲ್ಲದೆ
ನಮ್ಮನ್ನು ಮುಚ್ಚಿಟ್ಟುಕೊಂಡು
ಮಾತಾಡುವುದು
ದೇವರೇ ಅಸಹ್ಯ
ಹೊತ್ತಾಗುತ್ತೆ
ನೀನು ಮುಂದೆ ಹೋಗುತ್ತಾ ಇರು.
ನಾನು ಅವರು ಬರುತ್ತಾರೇನೋ
ನೋಡಿಕೊಂಡು ಬರುತ್ತೇನೆ
ಬೇಡ ತಡಿ
ಅವರು ಬರುತ್ತಾರೋ ಇಲ್ಲವೋ
ನಾನೂ ನಿನ್ನ ಜೊತೆಗೇ ಬಂದು ಬಿಡುತ್ತೇನೆ
ಅವರು ಸುಮ್ಮನೆ ನಮ್ಮ ಜೊತೆ ಯಾಕೆ
ಅಲ್ಲದೆ ಅವರು ಆಮೇಲೆ ಬರುತ್ತಾರೋ ಏನೋ
ಬರೀ ಮಾತಿನ ಎಂಬ್ರಾಯಿಡರಿ
ನಮಗೆ ಯೋಚನೆ ಮಾಡುವುದಕ್ಕೂ ಬರಲ್ಲ
ನನ್ನ ಮನಸ್ಸು ಸತ್ತು ಹೋಗಿದೆ
ಕಾಲು ಸತ್ತು ಹೋಗಿದೆ ಕಣ್ಣು
ಸತ್ತು ಹೋಗಿದೆ ಎಲ್ಲಾ ಸತ್ತು
ಹೋದ Parts ಸೇರಿ
ನಾವು ಬದುಕಿದ್ದೇವೆ ಆಕಾಶ
ಭೂಮಿಯ ಮೇಲೆ
ಜೀವರಾಶಿ ತುಂಬಿದ ಭೂಮಿ
ಒಂದು ಈಚಲು ಚಾಪೆ
ನಕ್ಷತ್ರ ಖಚಿತ ಆಕಾಶ
Expose ಮಾಡಿದ Film (
ಅಮ್ಮನ ಸೀರೆ ಮಡಿಸುವರಿಲ್ಲ
ಅಪ್ಪನ ಹಣ ಎಣಿಸುವರಿಲ್ಲ
ಏನದು) ಬೇರೆ ಏನೂ
ಇಲ್ಲವೇ ಖಂಡಿತ ಇಲ್ಲ
ಇದೆ ಅಂದುಕೊಂಡದ್ದು ಏನೂ
ಇಲ್ಲಾ ಇಲ್ಲ
ನಿನ್ನನ್ನು ಬಿಟ್ಟು
oh my dear ನೀನು
ನನ್ನ ಬಾಳಿನ ದೇವತೆ ಬಾಳಿನ
ಬೆಳಕು ನಿನ್ನನ್ನು ಅಗಲಿ ನಾನು
ಒಂದು ಕ್ಷಣವೂ ಬದುಕಿರಲಾರೆ
ನಿನ್ನ ಕಣ್ಣಿನ ಹೊಳಪನ್ನು ಹೀರುತ್ತಾ
ಮತ್ತು ಬರುತ್ತದೆ ನನಗೆ ನಿನ್ನ ಬಿಟ್ಟು
(ನಿನ್ನ ಮೈ ಬಿಟ್ಟು) ಬೇರೇನೂ ಬೇಡ
ಹಾಯ್
Rascal
ಈ ಸ್ಮಶಾನದಲ್ಲಿ
ಒಂದು ಹಳ್ಳ ತೋಡಿ
ನಿನ್ನ ನೂಕಿ
ನಿನ್ನ ಮೇಲೆ ಬಿದ್ದು
ನಿನ್ನ ಮುಖ ಮೈ ಪರಚಿ
ಕೆಸರು ಕೆಸರು ಮಾಡಿ ಬಿಡುತ್ತೇನೆ
ಅಗೆದು ಹಾಕುತ್ತೇನೆ
ರಾಕ್ಷಸಮರದ ಹಾಗೆ
ಭೂಮಿಯಂಥ ಹಾಲಿನಂಥ ನಿನ್ನ ಎದೆಗೆ
ನನ್ನ ಹಸಿವಿನ ಬಾಯಿ ಬೇರು ಒತ್ತಿ
ಹೀರಿಕೊಳ್ಳುತ್ತೇನೆ
ಓ ಸೂರ್ಯನಂಥಾ ದೇವರೇ
ಏನಾಗುತ್ತಿದೆ ಯಾಕೆ
ಆಗುತ್ತಿದೆ (ಪ್ರಾರ್ಥನೆಗಳು
ಪ್ರಶ್ನೆಗಳು ಬೇಕಾಗಿಲ್ಲ-
ನಮ್ಮ ಪ್ರೀತಿ ಮತ್ತು ಬೇಜಾರು
ಪ್ರೀತಿ ಮತ್ತು ಬೇಜಾರಲ್ಲ
ರೊಚ್ಚು ರೊಚ್ಚಲ್ಲ
ಸಂತೋಷ ಅಪಾಯವಾಗಿ
ಬುದ್ದಿವಂತಿಕೆ ಪಾಪವಾಗಿದೆ
ಹೀಗೆ ಕೇಳುವುದು ಕರ್ತವ್ಯವೇನೋ ಅಂತ)
ದೇವರೇ ಸೂರ್ಯನಂಥಾ ಮಳೆಯಂಥಾ ಭೂಮಿಯಂಥಾ
ದೇವರೇ
ನನ್ನ ಮರದಲ್ಲಿ ಹಣ್ಣು ಬಿಡಲಿ
ನೆರಳು ಸಿಗಲಿ
ಬಿಳಲು ಬಿಳಲು ಹಾಗೇ
ಸಾಯದೆ ಹಾಗೇ ಉಳಿದಿರಲಿ ಹಸಿರಾಗಿ
ನಾನು ಹುಲಿ ಅಂತ ಇದ್ದೆ
ಅಲ್ಲಿ ನೋಡಲು ಹೆದರುವ ಗೂಬೆ
ಬಾಲ ಆಡಿಸಿ ಕಾಲು ನೆಕ್ಕಿ ನೆಕ್ಕಿ ಹುಚ್ಚು ಹಿಡಿದ ಮೊಲ
ಕಂಡರೆ ಸಾಕು ಜಿಗಿದು ಓಡುವ ನಾಯಿ
ವಕ್ರ ಬುದ್ಧಿಯ ಪಾರಿವಾಳ
ಸುಲಭವಾಗಿ ಸಿಕ್ಕಿ ಬೆಂದು ಹೋಗುವ
ಕೆಲವು ಸಾರಿ ತ್ಯಾಗ ಮಾಡುವ ನರಿ
ನನ್ನದು ಹುಲಿಯ ಮಾತೂ ಅಲ್ಲ
ಹಾಳು ಮನುಷ್ಯನ ಧೀರ ಗರ್ಜನೆ
ಆದರೆ ಆದರೆ
ಯಾಕೆ ಇವೆಲ್ಲ ಈ
ಪ್ರಾರ್ಥನೆಗಳು ಬೇಡಿಕೆಗಳು
ಬರೀ ಬರೀ ಕನವರಿಕೆಗಳು
ನಿಜವಾಗಿ ಏನು ಬೇಕು
ಎಲ್ಲಿ ಹೋಗಬೇಕು
ನಾನು ನಾನು
ಅಂತೂ ನನ್ನಿಂದ ಆಚೆಗೆ
ನನ್ನನ್ನು ತಪ್ಪಿಸಿಕೊಂಡು
ನೀನು ಕೂಡ (ನೀವೂ)
ನಡಿ ಮತ್ತೆ ಸತ್ತು ಹೋಗೋಣ
ಆಗ ನಮ್ಮಿಂದ ನಾವು ಓಡಿ ಹೋಗಬಹುದು
ಒಬ್ಬೊಬ್ಬರೇ ಬೇಡ
ಇಬ್ಬರೂ ಸಾಯೋಣ
ನಿನ್ನ ತಲೆಕೂದಲೆಲ್ಲ ನನ್ನ ಎಲುಬಿಗೆ ಸುತ್ತಿಕೊಂಡಿರುವ ಹಾಗೆ
ಸತ್ತು ಹೋಗೋಣ
ಎಲುಬುಗಳು ತಲೆ ಬುರುಡೆ
ಮಧ್ಯೆ ಹುಲ್ಲಿನಗಿಡಗಳು ಹೂವುಗಳು
ಮತ್ತು ಎಲುಬಿನ ಮೇಲೆ ಹುಳುಗಳು ನರಕ
never never never ever never
ಬೇಕಾದರೆ ಪಾಚಿ ಆಗೋಣ
ಜೊಂಡು ಆಗೋಣ
ಹೊಲದಲ್ಲಿ ಬೆರ್ಚಪ್ಪ ಆಗೋಣ
ಸಾಯುವುದು ಮಾತ್ರ ಬೇಡ
ಸತ್ತೇ ಬದುಕುತ್ತಾ
ಅಥವಾ ಬದುಕೇ ಸತ್ತ ಹಾಗೆ
ಕನಸು ಕಾಣುವಾಗ ಎದ್ದಿದ್ದೇವೆ ಅಂದುಕೊಂಡು
ಎದ್ದಿರುವುದನ್ನು ಕನಸು ಅಂದುಕೊಂಡು
ಯೋಚನೆ ಮಾಡಬೇಕಾದ್ದನ್ನೆಲ್ಲ
ಮಧ್ಯಾಹ್ನದ ನೆರಳಿನ ಹಾಗೆ ತುಳಿದುಕೊಂಡು
ಅಥವಾ ಹೇಗೆ ಬೇಕಾದರೂ ಇರೋಣ
(ಹೇಗೆ)
ಸತ್ತೇ ಹೋಗುವುದು ಮಾತ್ರ ಬೇಡ
ಓಡು
ಮತ್ತೆ
ಭೂಮಿಯ ಮೇಲೇ
ಸೂರ್ಯನಂಥಾ
ಭೂಮಿಯಂಥಾ
ಮಳೆಯಂಥಾ
ಹಾಲಿನಂಥಾ
ದೇವರೇ
ದೇವರೇ
*****