ಭೂಪಾರದೊಳಗೆ ಮದೀನಶಹರದೊಳು
ವ್ಯಾಪಾರ ಮಾಡುವಾಗೀನ ಗಾಡಿಯೋ ||ಪ||
ಕೂಪದೊಳು ಹರಿದಾಡುತಿಹ ಜಲ
ವ್ಯಾಪಿಸಿತು ಮುದ್ದಿನ ಸಲಾಕೆಯು
ರೂಪ ಬೆಂಕಿಯ ಪುಟವಗೊಳ್ಳುತ
ತಾಪದಿಂ ಸರಿಸ್ಯಾಡುತಿಹುದೋ ||ಆ.ಪ.||
ಸಧ್ಯಕ್ಕೆ ಕಾಶೀಮಸಾಹೇಬರ ಸಮರದಿ
ಮದ್ದು ಹೇರಿಸುವ ಆಗೀನ ಗಾಡಿಯೋ
ಚೋದ್ಯವಾಯಿತು ಚಮತ್ಕಾರದಿ
ಎದ್ದು ತಾನೇ ತಾನೇ ಬರುವುದು
ಗದ್ದಲದಿ ಸಾಗುವದು ಆದರೊಳು
ಇದ್ದಲಿಯ ಮಸಿಬಿದ್ದು ಬಯಲದಿ ||೧||
ಅಬ್ಬರದಿಂದ ಮಕಾನದ ಹೊಲಕೆಲ್ಲ
ಗೊಬ್ಬರ ಹೇರುವ ಅಗೀನ ಗಾಡಿಯೋ
ಸಬ್ಬಯಲಿನೊಳು ಸರಸಿ ಬರುವಾಗ
ನಿಬ್ಬಯಲ ನಿಜತತ್ವ ಮಾಗ೯ದಿ
ಕೊಬ್ಬಿಕೊಂಡಿಹ ಕಮಲ ಚಕ್ರದಿ
ಗಬ್ಬಿನೊಳು ಗಮಕದಿ ಬರುವದೋ ||೨||
ಕರ್ಬಲದೊಳಗೆಲ್ಲ ಕಟಗಿ ಹೊತ್ತು ಹಾಕಿ
ಉಬ್ಬೇರಿ ಬರುವ ಅಗೀನ ಗಾಡಿಯೋ
ಆರ್ಭಟಿಸಿ ಜಲವಾಯು ಸೂಸುತ
ಪೆರ್ಬುಲಿಯ ತೆರದಿಂದ ಒದರುತ
ಆಬ್ಬರದಿ ಹರದಾಡುವದು ಬಲು
ಹಬ್ಬಿಕೊಂಡಿತು ಹಲವು ಲೋಕದಿ ||೩||
ಕ್ಷೋಣಿಪರಾಜನ ಶಹಾನ ದೊರಗಳ
ಠಾಣಿದೊಳಗಿರುವ ಅಗೀನ ಗಾಡಿಯೋ
ಪಾಣಿ ಅಲಗು ಸಮಸ್ತ ಆಯುಧ
ಕ್ಷೀಣವಿಲ್ಲದೆ ತುಂಬ ತವಕದಿ
ಬಾಣ ಬಿಲ್ಲುಗಳಿಡಿಸಿ ಬೇಗನೆ
ರಾಣಿ ಸರಕಾರ ಸದರಿನೊಳು ||೪||
ಧರೆಯೊಳು ದಕ್ಷಿಣ ದೇಶದೊಳಗೆಲ್ಲ
ಅರಳಿ ಹೇರಿಸುವ ಅಗೀನ ಗಾಡಿಯೋ
ಸರಸದಿಂ ವಿಸ್ತರಿಸಿ ಪೇಳುವೆ
ವರ ಶಿಶುನಾಳಧೀಶನಾಜ್ಞೆಯ
ಮೆರೆಸಿದರು ಇಂಗ್ಲೀಷದೊರೆಗಳು
ಸರ್ವರಿಗೆ ಆಶ್ಚರ್ಯವಾಯಿತು ||೫||
*****