ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ
ತತ್ವಾರ ತಟ್ಟಿ ತಬ್ಬಲಿಯ ಗೂಡು
ಎಂದು ನಿಟ್ಟುಸಿರೇ ಉಸಿರಾಗಿತ್ತು.
ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ
ಸಮಯವೆಲ್ಲಾ ಹನಿಹನಿಯ ಉದುರಿಸಿ
ನಯನಗಳು ಕೊಳಗಳಾಗಿತ್ತು.
ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು
ಬೆರಣಿ ತಟ್ಟಿಟ್ಟು, ಅಕ್ಕಚ್ಚು ಬಾನಿಗೆ ಹೊಯ್ದು
ಎಮ್ಮೆ ಮೇಯಿಸ ಹೊರಟರೆ
ದಾಂಬು ಬಿಚ್ಚುವ ತ್ವರೆಗೆ
ಕೈಬಳೆಯ ಗಾಜುನಟ್ಟಿತ್ತು
ಮುಂಗೈಯ ಸೆರೆಯುಬ್ಬಿ ರಕ್ತ ಒಸರಿತ್ತು
ಏರುಗುಡ್ಡವ ಹತ್ತಿ
ತರಕ ರಾಶಿಯ ಗುಡಿಸಿ ಕಲ್ಲಿತುಂಬಿಸಿಕೊಂಡು
ಇಳಿಜಾರಿಗೆ ಊರುಗೋಲನು ಹಿಡಿದು
ಹೊತ್ತು ಬರುವಾಗ ಎಡಗಾಲು ಎಡವಿ
ಬಾತುಕೊಂಡಿತ್ತು
ಮನೆಯ ಹೊಲೆಯನು ತೊಳೆದು
ಒಲೆಗೆ ಉರಿಯನು ಹಚ್ಚಿ ಗಂಜಿ ಬೇಯಿಸಿ
ದುಡಿದು [ಕುಡಿದು] ಬರುವ ಗಂಡನಿಗಾಗಿ
ನಾ ಹೈರಾಣು ಹೆಣವಾಗಿ
ಕಾದು ಕೂತಿದ್ದೆ.
ಆಗಸದ ಅಂಚಿನ ಮಂಜಿನ ಪೊರೆ
ಎಂದಿಗೆ ಕಳಚಿ ಬೀಳುವುದು
ಸುಟ್ಟ ಚರ್ಮದ ಕಲೆಯು ಎಂತು
ಮಾಯುವುದು ಕಾಯುತ್ತಿದ್ದೆ,
ಕಾಯುತ್ತಲೇ ಇದ್ದೇನೆ
*****