ಶಬ್ದಗಳ ಮರೆತರೆ ಹೇಗೆ ಕವಿತೆ
ಎಷ್ಟು ದೊಡ್ಡ ನದಿಗೂ ಬೇಕು ಒರತೆ
ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ
ಶಬ್ದಗಳ ಸಂಚು ಕವಿಯ ಬಗೆಗೆ
ಆದರು ತಿಳಿದವರು ಅದರ ಸೂತ್ರ
ಕೆಲವೇ ಮಂದಿ ಹಿರಿಯರು ಮಾತ್ರ
ಕತ್ತಲೆಯ ದಾರಿಯಲಿ ಎಡವಿದ ಕಲ್ಲು
ಅಥವ ಬಿದ್ದಾಗ ಮೈ ತಡವಿದ ಸೊಲ್ಲು
ಒಬ್ಬೊಬ್ಬರಿಗೆ ಒಂದೊಂದು ರೀತಿ
ಒದಗುವ ಅನಿರೀಕ್ಷಿತ ಪ್ರೀತಿ
ಅಥವ ಮಾತು ಬಿಡು ಆಗು ಮೌನಿ
ಹಿಡಿದು ನಿನ್ನೊಳಗೆ ಜಗತ್ತಿನ ಗ್ಲಾನಿ
ನದಿಗಳ ದಾಟು ದೇಶಗಳ ಸುತ್ತು
ಯಾರೂ ನೋಡದ ಬೆಟ್ಟಗಳ ಹತ್ತು
ಕುಳಿತು ಋಷಿಯಂತೆ ಎಷ್ಟೋ ಕಾಲ
ಚಿಂತಿಸು ಎಲ್ಲ ದುಃಖಗಳ ಮೂಲ
ಒಂದು ದಿನ ಬೆಳಕು ಹರಿಯುತಿದ್ದಂತೆ
ಕರಗುವುದು ಮಾಯೆ ಮಂಜಿನಂತೆ
ಮತ್ತೆ ಬಂದೇ ಬರುವೆ ನಮ್ಮ ಬಳಿಗೆ
ಮಾತು ಫಕ್ಕನೆ ಕಲಿತ ಮಗುವಿನ ಹಾಗೆ
*****