ದೈವ ದೇವರು
ಸ್ವರ್ಗ ನರಕ
ಎಲ್ಲವೂ ಕಟ್ಟುಕತೆ ಆರಂಭದಿಂದ
ಕೊನೆಯ ತೀರ್ಪಿನ ತನಕ
ಎಂದೇಕೆ ಎಲ್ಲ ತಿಳಿದವನಂತೆ
ತಿಳಿಯದವರ ಬೆಪ್ಪಾಗಿಸುವೆ ?
ಮಾಡದಿದ್ದರೆ ಬೇಡ
ನಮ್ಮ ನಜರಿನಲಿ ನಿನ್ನ ನಮಾಜು
ನಿನಗೆ ನಿನ್ನದೇ ಆವಾಜು
ಕೇಳುವುದು ಖುಷಿಯಾದರೆ
ಎಬ್ಬಿಸು ಸ್ವಂತದ
ನೆಲ ಮುಗಿಲು ಗಾಳಿಗಳ
ಬಿಚ್ಚಿಬಿಡು ಹಾಯಿಗಳ
ಆದರೇಕೆ ಇತರರ ಸಮುದ್ರಗಳಲ್ಲಿ
ನಡೆಸುವ ಹಟ ನಿನಗೆ
ನಿನ್ನ ವಿಧ್ವಂಸಕ ಜಹಜು?
ಅವರವರ ತಪ್ಪಿಗೆ ಅವರವರ
ಸಾಕ್ಷಿ ನೀಡುವ ದಿನ
ಕಳೆದು ಕೊಂಡವರ ಸೇರುವ
ಮಾಫಿ ಪಡೆಯುವ ಕೊಡುವ
ಕೊನೆಯ ತೀರ್ಪಿನ ದಿನ
ಇನ್ನೂ ಬಹಳ ದೂರ-
ಅಲ್ಲಗಳೆಯುವೆಯೇಕೆ ಆ ದಿನವ?
ಕಲ್ಪನೆಯ ಅಗತ್ಯ
ಅವರವರ ಪ್ರತ್ಯೇಕ ಸತ್ಯ
ಹೀಗಿರುವಾಗ ಅಷ್ಟು ದೀರ್ಘಕಾಲ
ಸಾಧಿಸಬೇಕೆಂದಿರುವೆಯ
ಕೇವಲ ವೈರ?
*****