ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ
ಪಾಡ ಕಾಣೋದಿಲ್ಲೋ ಸಮರಾ ಐಸುರಾ ||ಪ||
ಕವಿತ ಮಾಡುವದು ಮೂಲಸ್ಥಾನದಲಿ
ತಿಳಿಯಲೋ ತಿಳಿದ್ಹೇಳಲೋ
ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ ||೧||
ಅಂಗವನರಿಯದೆ ರಂಗಿಲೆ ಹಾಡುವದು
ಸಂಗನೇ ಮುದಿಮಂಗನೇ
ಬಂಗಿ ಸೇದವರಂತೆ ಕೊಂಗಿ ಕವಿತೆ ನಿಂದು ||೨||
ಆರ್ಥವನರಿಯದೆ ಮರ್ತ ಹಾಡುವದು
ಜಾಣನೇ ಮುದಿ ಕೋಣನೆ
ತುರ್ತ ನಮ್ಮಲ್ಲಿಗೆ ಬುದು ಶರ್ತಹಾಕುವದುಂಟೆ ||೩||
ದೇಶದೊಳಗ ಇದು ಹೇಸಿ ಕವಿತೆ ನಿಂದು
ಬ್ಯಾಡಲೋ ಮಹಾ ಕೆಡಲೋ
ಬ್ಯಾಸರಾದಿತು ಶಿಶುನಾಳಧೀಶನಿಗೆ ||೪||
*****