ನನ್ನದೇ ತಾರಸಿಯಲ್ಲಿ ಒಣಗಿಸಿದ
ಒಂದೇ ಜಾತಿಯ ಬೀಜಗಳು
ಮೈಮನ ಗೆದ್ದಿದ್ದವು.
ಕಂಕುಳಲ್ಲಿ ಎತ್ತಿಕೊಂಡು ಉಣಿಸಿ
ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ
ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ
ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವು.
ಎದೆಯುಬ್ಬಿಸಿ ಫಲವತ್ತಾದ ಫಸಲು ನೋಡಬೇಕು
ರಸ ಒಸರುವ ಕಳಿತ ಹಣ್ಣುಗಳು ತೋನೆಯಾಡಬೇಕು
ಬೀಜದ ತಾಕತ್ತು, ಹತ್ತಾರು ಬಲ ಬೀಜಗಳ ಬೆಳಕಿಗೆ
ಇಡಬೇಕು.
ವ್ಯತಿರಿಕ್ತವಾಗಿ ಮೋಹಕ ವರ್ಣಗಳೆಲ್ಲ
ಕಳಪೆಯಾಗಿ ಈಗೀಗ ಮೈತುಂಬಾ ಮುಳ್ಳುಗಳೆದ್ದ
ಜಾಲಿಗಿಡಗಳು ಬೀಜಗಳಿಂದ ಉಕ್ಕುಕ್ಕಿ
ಕುಕ್ಕುತ್ತಿವೆ ದೃಷ್ಟಿಯುದ್ದಕೂ.
ಚಿತ್ರವಿಚಿತ್ರ ಮೈಗವಸಗಳು
ಕುರುಚಲು ಕಾಡುಗಳ ಹಬ್ಬಿಸಿಕೊಂಡ
ಕೃತಕ ಹಾವಭಾವದ ಕನ್ನಡಿಗಳು
ದಟ್ಟವಾಗುತ್ತ ಅರಳುಗಣ್ಣಿನ ಗಿಡಗಳು
ಇಂಗಾಲಮಯವಾಗಿವೆ.
ಹದಗೊಳಿಸಿದ ಹೊಲವಿನ್ನು
ಹಸನಾಗದು, ಕಣಜ ಉಕ್ಕೆದ್ದು ಬರಲಾಗದು.
ನನ್ನದೇ ತಾರಸಿಯಲ್ಲಿ ಒಣಗಿಸಿದ
ಬೀಜಗಳು ಈಗ ನಿರಂತರದಿ ಬಣ್ಣ ಬದಲಾಯಿಸುತ್ತಿವೆ.
ಕೆಲವು ಕೆಟ್ಟು ಕರಕಲಾಗುತ್ತಿವೆ.
*****