ಡಿಸೆಂಬರಿನ ಚಳಿ ಶತಮಾನ
ಕಳೆದರೂ ಇತಿಹಾಸ ಸ್ಪುರಿಸುತ್ತದೆ
ತೆಳು ಬಟ್ಟೆಯ ಮಕ್ಕಳ ಬೀದಿ
ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ
ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು
ಎಲ್ಲೆಲ್ಲೋ ಇದ್ದಾರೆ ಸೂರ್ಯ
ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ.
ಎತ್ತ ಪಯಣ ಎಂಬುದು ತಿಳಿಯದೇ
ಕೊರೆಯುವ ಚಳಿಯಲಿ ಗೂಡ ಅರಸಿ
ಹೊರಟಿವೆ ಬೆಳ್ಳಕ್ಕಿ ಸಾಲು, ಗೌಂವ್
ಎನ್ನುವ ಮಂಕು ಸಂಜೆಯಲಿ ಬದುಕು
ಬೀದಿ ದೀಪಗಳ ಕಣ್ಣು ತುಂಬಿಕೊಂಡು
ಕಳೆದು ರಾತ್ರಿಯ ಪಯಣ ಮುಂದುವರಿದು
ಚಿಕ್ಕಿಗಳು ಪರಿತಪಿಸುತ್ತಿವೆ ಪರಧಿಯಲಿ ಸಿಲುಕಿ.
ಅರಳಿ ಹೂವು ಬಿಳಿಯಾಗಿ ಬಿರಿಯಲು
ತಡೆದು ನಿಂತಿವೆ ಕರಿ ಹೊಲದ ತುಂಬ
ಮೊಗ್ಗೊಡೆದ ಹತ್ತಿ ಎದೆ ನಡುಗುವ ಚಳಿ
ಅಮ್ಮನ ಮೃದು ಸ್ಪರ್ಶದ ಕೈಗಳು ಬಿಡಿಸಲಿ
ಕ್ರೈಸ್ತನ ಶಿಲುಬೆಯ ಯಾತನೆಯ ಕ್ಷಣಗಳ
ದೂರದಿಂದ ಮುಸುಕು ಹಾಕಿದ ಎಲ್ಲ ನೀರವ
ಮಬ್ಬುಗಳ ಸವರಿ ಎದೆಗೆ ಅಮರುತ್ತವೆ
ಎಲ್ಲೋ ಬಸಿವ ನೆನಪುಗಳ.
*****