ಅಧ್ಯಾಯ – ೩
ಪರೀಕ್ಷೆ – ಯಾವುದೇ ವಿದ್ಯಾಭ್ಯಾಸ ಶಿಕ್ಷಣ, ತರಬೇತಿಯ ಒಂದು ಅವಿಭಾಜ್ಯ ಅಂಗ, ವಿಷಯಗಳನ್ನು ಕೌಶಲಗಳನ್ನು ವಿದ್ಯಾರ್ಥಿ ಕಲಿತಿದ್ದಾನೆಯೇ? ಇಲ್ಲವೇ? ಕಲಿತಿದ್ದರೆ ಎಷ್ಟು ಚೆನ್ನಾಗಿ ಕಲಿತಿದ್ದಾನೆ, ಅವನ ತಿಳುವಳಿಕೆಯ ಹಾಗೂ ಕೌಶಲದ ಮಟ್ಟ ಎಷ್ಟು ಎಂದು ಪರಿಶೀಲಿಸುವ ವಿಧಾನವೇ ಪರೀಕ್ಷೆ. ಇತ್ತೀಚಿನ ಅತಿ ಸ್ಪರ್ಧಾ ಯುಗದಲ್ಲಿ ಪರೀಕ್ಷೆಯಲ್ಲಿ ಕೇವಲ ಪಾಸಾದರೆ ಸಾಲದು, ನೂರಕ್ಕೆ ತೊಂಬತ್ತು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಗ್ರೇಡ್ಸ್ ಇದ್ದರೆ ಎ+ ಗ್ರೇಡ್ ಅಥವಾ ಎ ಗ್ರೇಡ್ ಪಡೆಯಬೇಕು ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಆಸೆ. ಆದರೆ ನೂರು ವಿದ್ಯಾರ್ಥಿಗಳಲ್ಲಿ ೨೦ ರಿಂದ ೨೫ ಜನ ಉತ್ತಮ ಮಟ್ಟವನ್ನು ತಲುಪಬಲ್ಲರು. ಎಸ್ಸೆಸ್ಸೆಲ್ಸಿ, ಪಿಯುಸಿಗಳಲ್ಲಿ ಸರಾಸರಿ ಶೇಕಡಾ ೩೦ ರಿಂದ ೫೦ ರಷ್ಟು ಜನ ಫೇಲಾಗುತ್ತಾರೆ. ಫೇಲಾದವರಿಗೆ ಮರ್‍ಯಾದೆ ಇಲ್ಲ. ಅವರನ್ನು ಎಲ್ಲರೂ ನಿಕೃಷ್ಟವಾಗಿ ಕಾಣುತ್ತಾರೆ. ನಿಮಗೆ ಭವಿಷ್ಯವಿಲ್ಲ, ನೀವು ನಿಷ್ಪ್ರ್‍ಅಯೋಜಕರು ಎಂದು ಹಂಗಿಸುತ್ತಾರೆ. ನಿರಾಶೆಯಿಂದ ತಂದೆ ತಾಯಿಗಳು, ಶಿಕ್ಷಕರು ಫೇಲಾದ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡಲು ಮುಂದಾಗುತ್ತಾರೆ. ಹೀಗಾಗಿ ಪರೀಕ್ಷೆಯನ್ನು ಎದುರಿಸುವ ಪ್ರತಿ ವಿದ್ಯಾರ್ಥಿಯ ಮನಸ್ಸಿನಲ್ಲಿ “ನಾನು ಫೇಲಾಗಿ ಬಿಟ್ಟರೆ, ಕಡಿಮೆ ಮಾರ್‍ಕ್ಸ್ ಬಂದರೆ, ನಿರೀಕ್ಷಿತ ೯೦+ ಅಂಕಗಳು ಬರದೇ ಹೋದರೆ” ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. “ನೀನು ಸರಿಯಾಗಿ ಓದುತ್ತಿಲ್ಲ, ವೃಥಾ ಕಾಲಹರಣ ಮಾಡುತ್ತಿದ್ದೀಯಾ, ನೀನು ಪಾಸಾಗುವುದಿಲ್ಲ, ಫೇಲಾಗಿ ನಮ್ಮ ಮುಖಕ್ಕೆ ಮಸಿ ಬಳಿಯುತ್ತೀಯಾ ಎಂದು ತಂದೆ ತಾಯಿಗಳು, ಶಿಕ್ಷಕರು ಹೇಳುತ್ತಾರೆ. ಸಹಜವಾಗಿ ಪರೀಕ್ಷೆಯಲ್ಲಿ ಫೇಲಾಗುವ, ಶಿಕ್ಷೆಗೆ ಅವಮಾನಕ್ಕೆ ಒಳಗಾಗುವ ಭಯ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಈ ಭಯ ಸಣ್ಣ ಪ್ರಮಾಣದಲ್ಲಿದ್ದರೆ, ಹಲವರಿಗೆ ಇದು ಸಾಧಾರಣದಿಂದ ತೀವ್ರಮಟ್ಟದಲ್ಲಿ ಹಾಗೂ ಶೇಕಡಾ ೫ ರಷ್ಟು ಮಂದಿ ಅತಿ ತೀವ್ರ ಮಟ್ಟದಲ್ಲಿದ್ದು ಅವರನ್ನು ನಿಷ್ಕ್ರಿಯಗೊಳಿಸುತ್ತದೆ. ಅಲ್ಪಮಟ್ಟದ ಪರೀಕ್ಷಾ ಭಯ ಇರಬೇಕು. ಅದು ವಿದ್ಯಾರ್ಥಿಯನ್ನು ಹಾಗೂ ಸಂಬಂಧಪಟ್ಟವರನ್ನು ಎಚ್ಚರಿಸುತ್ತದೆ. ಚೆನ್ನಾಗಿ ಪರೀಕ್ಷಾ ಸಿದ್ಧತೆ ಮಾಡಲು ಪ್ರೇರಣೆ ನೀಡುತ್ತದೆ, ಆದರೆ ತೀವ್ರ ಹಾಗೂ ಅತಿ ತೀವ್ರ ಭಯ ವಿದ್ಯಾರ್ಥಿಗೆ ಮಾರಕವಾಗುತ್ತದೆ. ತೀವ್ರ ಭಯ ಹುಟ್ಟಲು ಅನೇಕ ಕಾರಣಗಳಿವೆ. ಉದಾಹರಣೆಗೆ:
೧) ಓದಬೇಕಾದ ವಿಷಯ ಕಠಿಣವಾಗಿದ್ದು, ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ಕಡಿಮೆ ಇರುವುದು.
೨) ಅಧ್ಯಯನ ಮಾಡಲು ಬೇಕಾದ ಆಸಕ್ತಿ, ಏಕಾಗ್ರತೆ, ಶ್ರಮದ ದುಡಿಮೆ, ಕಾಲಾವಕಾಶ, ಪ್ರೋತ್ಸಾಹ ಮಾರ್ಗದರ್ಶನ ಕಡಿಮೆ ಇರುವುದು.
೩) ಕಲಿತದ್ದು ಬೇಗ ಮರೆತು ಹೋಗುವುದು.
೪) ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದರೆ ಹೆಚ್ಚು ಅಂಕಗಳು ಸಿಗುತ್ತವೆ ಎಂಬುದು ವಿದ್ಯಾರ್ಥಿಗೆ ಗೊತ್ತಿಲ್ಲದಿರುವುದು.
೫) ವಿದ್ಯಾರ್ಥಿ ತನ್ನ ಶಕ್ತಿ ಸಾಮರ್ಥ್ಯ ನಿರ್ವಹಣೆ ಬಗ್ಗೆ ಅನುಮಾನ ಇರುವುದು.
೬) ನಾನು ಪಾಸಾಗುವುದಿಲ್ಲ/ನನಗೆ ‘ಎ’ ಗ್ರೇಡ್ ಅಂಕಗಳು ಬರುವುದಿಲ್ಲ. ನನಗಿಂತ ಇತರರು ಸ್ಪರ್ಧೆಗಳಲ್ಲಿ ಮುಂದಾಗುತ್ತಾರೆ ಎಂಬ ನಕಾರಾತ್ಮಕ ಆಲೋಚನೆಗಳು.
೭) ಹೆಚ್ಚು ಮಾರ್ಕ್ಸ್ ಪಡೆಯಲು ವಿದ್ಯಾರ್ಥಿ ಪೋಷಕರ ಶಿಕ್ಷಕರಿಂದ ಮತ್ತು ಇತರರಿಂದ ಅತಿ ಹೆಚ್ಚು ನಿರೀಕ್ಷೆ ಒತ್ತಡ. ಬಹುಮಾನ ಅಥವಾ ಶಿಕ್ಷೆಯ ರೂಪದಲ್ಲಿ ಒತ್ತಡ/ (ಪಾಸಾದರೆ ಬೈಕ್ ಅಥವಾ ಇತರೆ ವಸ್ತುಗಳು, ಫೇಲಾದರೆ ಹೊಡೆತ, ವಿದ್ಯಾಭ್ಯಾಸಕ್ಕೆ ವಿರಾಮ, ಮನೆ ಕೆಲಸಕ್ಕೆ ಹಚ್ಚುತ್ತೇನೆ ಇತ್ಯಾದಿ).
೮) ಹಿಂದಿನ ಟೆಸ್ಟ್ / ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬಂದಿರುವುದು ಅಥವಾ ಫೇಲಾಗಿರುವುದು.
೯) ಶಿಕ್ಷಕರ ಪಕ್ಷಪಾತ, ಅನುಚಿತ ಟೀಕೆ, ಕಿರಿಕಿರಿ.
೧೦) ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳು (ಪ್ರಶ್ನೆ ಪತ್ರಿಕೆ ಬಹಿರಂಗ ಗೊಳ್ಳುವುದು, ಕಾಪಿ ಮಾಡುವುದು, ಹಣ ಕೊಟ್ಟು / ವಶೀಲಿ ಮಾಡಿಸಿ ಹೆಚ್ಚು ಅಂಕಗಳನ್ನು ಪಡೆಯುವುದು. ಮಾರ್ಕ್ಸ್ ಕಾರ್ಡ್ ಬದಲಿಸುವುದು, ತಿದ್ದುವುದು, ಅಸಮರ್ಪಕ ಅಥವಾ ಎರ್ರಾಬಿರ್ರಿ ಮೌಲ್ಯಮಾಪನ ಇತ್ಯಾದಿ.
೧೧) ದೈಹಿಕ ಮತ್ತು ಮಾನಸಿಕ ಅನಾರೋಗ್ಯ : ಪದೇ ಪದೇ ಬರುವ ಅಥವಾ ದೀರ್ಘಕಾಲ ಕಾಡುವ ಅಥವಾ ಸಾಮಾಜಿಕ ಕಳಂಕವನ್ನುಂಟು ಮಾಡುವ ಯಾವುದೇ ದೈಹಿಕ ಮತ್ತು ಮಾನಸಿಕ ಕಾಯಿಲೆ ವ್ಯಕ್ತಿಯ ಆತ್ಮವಿಶ್ವಾಸವನ್ನು ದೇಹ ಮತ್ತು ಮನಸ್ಸಿನ ಸಾಮರ್ಥ್ಯವನ್ನು ಕುಗ್ಗಿಸಬಲ್ಲದು.
೧೨) ಸಿಟ್ಟು, ಕೋಪ, ಬೇಸರ, ದುಃಖದಂತಹ ನಕಾರಾತ್ಮಕ ಭಾವೋದ್ವೇಗಗಳೂ.
೧೩) ವಿದ್ಯಾರ್ಥಿಯ ಗಮನವನ್ನು ತಮ್ಮೆಡೆಗೆ ಸೆಳೆಯುವ ಇತರ ಕೌಟುಂಬಿಕ – ಸಾಮಾಜಿಕ ಸಮಸ್ಯೆಗಳು.
೧೪) ವಿದ್ಯಾರ್ಥಿಯ ದುರಭ್ಯಾಸ-ದುಶ್ಚಟಗಳು
ಪರೀಕ್ಷಾ ಭಯ ಪ್ರಕಟಣೆ:
ವಿದ್ಯಾರ್ಥಿ ನೇರವಾಗಿ ಪರೀಕ್ಷೆಯ ಬಗ್ಗೆ ನನಗೆ ಭಯವಿದೆ ಎಂದು ಹೇಳಬಹುದು ಅಥವಾ ಪರೋಕ್ಷವಾಗಿ ಹಲವು ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಮೂಲಕ ಪ್ರಕಟಿಸಬಹುದು. ಉದಾಹರಣೆಗೆ:
* ತಲೆನೋವು, ಎದೆ ನೋವು, ಮೈ ಕೈ ನೋವು, ಕಣ್ಣುರಿ, ಸುಸ್ತು, ಆಯಾಸ ಎನ್ನಬಹುದು. ಮೈಗೆ ಹುಷಾರಿಲ್ಲ ಎನ್ನುವುದು.
* ಪದೇ ಪದೇ ನೆಗಡಿ, ಕೆಮ್ಮು, ಜ್ವರ, ವಾಂತಿಭೇದಿ, ಉಸಿರಾಟದ ತೊಂದರೆ, ಕೀಲು ಊತ, ಅಲರ್ಜಿಯಿಂದ ನರಳಬಹುದು.
* ಹಸಿವು ಕಡಿಮೆ, ಅಜೀರ್ಣ/ಭೇದಿ, ಮಲಬದ್ಧತೆ, ನಿದ್ರಾ ತೊಂದರೆಗಳಿಂದ ಬಳಲಬಹುದು. ವಾಕರಿಕೆ-ವಾಂತಿ ಎನ್ನಬಹುದು.
* ಪದೇ ಪದೇ ಮೂತ್ರ ಮಾಡುವುದು, ಹಾಸಿಗೆ ಬಟ್ಟೆಯಲ್ಲಿ ಮೂತ್ರ ಮಾಡಿಕೊಳ್ಳಬಹುದು.
* ನಿತ್ಯ ಚಟುವಟಿಕೆಗಳಲ್ಲಿ ಪರಾವಲಂಬನೆ. ಈ ಮೊದಲು ತಾನೇ ಮಾಡಿ ಕೊಳ್ಳುತ್ತಿದ್ದ ಕೆಲಸ, ಚಟುವಟಿಕೆಗಳಿಗೆ ಬೇರೆಯವರನ್ನು ಆಶ್ರಯಿಸಬಹುದು.
* ಸುಲಭಕ್ಕೆ ಸಣ್ಣಪುಟ್ಟ ಕಾರಣಗಳಿಗೆ ಕೋಪಿಸಿಕೊಳ್ಳುವುದು, ಮುನಿಸಿಕೊಳ್ಳುವುದು, ದುಃಖಿಸುವುದು, ನಾಚಿಕೊಳ್ಳುವುದು. ನೊಂದುಕೊಳ್ಳುವುದು, ಅಸಹಾಯಕನಾಗುವುದು.
* ಏಕಾಗ್ರತೆ ಇಲ್ಲ, ನೆನಪಿಲ್ಲ, ವೇಗವಾಗಿ ಬರೆಯಲಾಗುವುದಿಲ್ಲ. ಕೈ ನಡುಗುತ್ತಿದೆ. ಹ್ಯಾಂಡ್‌ರೈಟಿಂಗ್ ಕೆಟ್ಟದಾಗಿರುವುದು, ಕಾಗುಣಿತ ತಪ್ಪುಗಳು ಹೆಚ್ಚುತ್ತದೆ. ಬರೆಯುವಾಗ ಕೈ ಸೆಳೆತ ಉಂಟಾಗಬಹುದು. (Writer’s cramp)
* ಒಂಟಿಯಾಗಿರುವುದು, ಸಭೆ ಸಮಾರಂಭಗಳಿಗೆ ಹೋಗಲು ನಿರಾಕರಿಸುವುದು, ಸಾಮಾಜಿಕ ಸೌಜನ್ಯವನ್ನು ತೋರಿಸದಿರುವುದು, ಒರಟಾಗಿ ನಡೆದುಕೊಳ್ಳುವುದು, ಸಹಪಾಠಿಗಳನ್ನು ಭೇಟಿಮಾಡಲು ನಿರಾಕರಿಸುವುದು, ಮೌನಿಯಾಗಿರಬಹುದು.
* ಯಾರಿಗೂ ಹೇಳದೆ, ಹೊರಗೆ ದೂರ ಹೋಗಿ ಬಿಡುವುದು, ವೇದಾಂತಿಯಂತೆ ವರ್ತಿಸಬಹುದು. ಪರೀಕ್ಷೆಗೆ ಕೂರುವುದಿಲ್ಲ ಎನ್ನುವುದು.
* ತಲೆ ಖಾಲಿಯಾದಂತಿದೆ, ತಲೆಭಾರ/ಹಗುರವಾಗಿದೆ, ಸುತ್ತಮುತ್ತ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎನ್ನುವುದು, ಮೈಮರೆತಂತೆ, ಗರಬಡಿದಂತೆ ಕೂರುವುದು.
* ಮನರಂಜನಾ ಚಟುವಟಿಕೆ (ಟೀ ವಿ, ಸಿನಿಮಾ, ಕ್ರೀಡೆಗಳು, ಹೋಟೆಲ್ ಪಾರ್ಕ್ ಭೇಟಿ ಸ್ನೇಹಿತರೊಂದಿಗೆ ಹರಟೆ) ಯನ್ನು ಹೆಚ್ಚಿಸುವುದು. ತನಗಿಂತ ಸಣ್ಣ ವಯಸ್ಸಿನವರೊಂದಿಗೆ ಸೇರಬಹುದು.
* ಯಾವುದೇ ವ್ಯಕ್ತಿಯೊಂದಿಗೆ ಅಥವಾ ಸನ್ನಿವೇಶದಲ್ಲಿ ಅಸಹಜವಾಗಿ ವಿಚಿತ್ರವಾಗಿ ಇತರರಿಗೆ ಮುಜುಗರ ತರಿಸುವ ರೀತಿಯಲ್ಲಿ ಮಾತು / ವರ್ತನೆಯನ್ನು ತೋರಿಸಬಹುದು. ವಿನಯ-ವಿಧೇಯತೆ ಇಲ್ಲದಿರುವುದು.
ಪರಿಹಾರ:
೧) ಒಂದು ವಿಷಯ ಅಥವಾ ಸಬ್ಜೆಕ್ಟ್ ಕಷ್ಟವಾಗಿದೆ. ಅರ್ಥವಾಗುತ್ತಿಲ್ಲ ಎಂದಾದರೆ ಆತಂಕ ಪಡದೆ ಆ ವಿಷಯದ ಟೀಚರನ್ನು ಕಂಡು ಸ್ಪೆಷಲ್ ಕೋಚಿಂಗ್ ಪಡೆಯಬೇಕು. ಪ್ರಶ್ನೆಗಳನ್ನು ಉತ್ತರಿಸುವ ಅಭ್ಯಾಸ ಮಾಡಬೇಕು. ಆ ವಿಷಯವನ್ನು ತಿಳಿದುಕೊಂಡಿರುವ ಸಹಪಾಠಿಯ ನೆರವು ಪಡೆಯಬಹುದು. ಅಧ್ಯಯನ ಮಾಡುವಾಗ, ಮನಸ್ಸು ಫ್ರೆಶ್ ಇರುವ ಸಮಯದಲ್ಲಿ ಈ ಕಠಿಣ ವಿಷಯವನ್ನು ನಿಧಾನವಾಗಿ ಓದಿ ಅರ್ಥಮಾಡಿ ಕೊಳಬೇಕು. ನನ್ನ ಕಲಿಕಾ ಸಾಮರ್ಥ್ಯ ಅಥವಾ ಬುದ್ಧಿ ಶಕ್ತಿ ಕಡಿಮೆ ಎಂದು ಕೀಳರಿಮೆಯನ್ನು ಬೆಳೆಸಿ ಕೊಳ್ಳಬಾರದು. ಈ ಸಬ್ಜೆಕ್ಟ್ ಕಷ್ಟ ಎಂದರೆ ಅದೊಂದು ಅಪರಾಧ ಅಥವಾ ಹೀನಾಯವಲ್ಲ ಎಂದು ತಿಳಿಯಬೇಕು.
೨) ಏಕಾಗ್ರತೆ, ಆಸಕ್ತಿಯನ್ನು ಹೆಚ್ಚಿಸಿ ಕೊಳ್ಳಿ :
ವಿವಿಧ ಆಕರ್ಷಣೆಗಳು ವಿಕರ್ಷಣೆಗಳು, ಭಾವೋದ್ವೇಗಗಳು, ಮನಸಿನ ಒತ್ತಡ ಹಾಗೂ ಅನಾರೋಗ್ಯ ಏಕಾಗ್ರತೆಗೆ ಭಂಗವನ್ನುಂಟುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ರೇಡಿಯೋ, ಟೀವಿ, ಇಂಟರ್‌ನೆಟ್, ಕ್ರೀಡೆಗಳು ವಿದ್ಯಾರ್ಥಿಗಳ ಮನಸ್ಸನ್ನು ಸದಾ ತಮ್ಮ ಕಡೆಗೆ ಆಕರ್ಷಿಸುತ್ತದೆ. ಕೌಟುಂಬಿಕ, ಸಾಮಾಜಿಕ, ಆರ್ಥಿಕ ಹಾಗೂ ಸ್ನೇಹ ಸಂಬಂಧಗಳಲ್ಲಿ ತೊಡಕುಗಳು ಭಾವೋದ್ವೇಗಗಳನ್ನುಂಟುಮಾಡುತ್ತವೆ. ಪ್ರಶಾಂತ ಮನಸ್ಸು ಮತ್ತು ಪ್ರಶಾಂತ ಪರಿಸರ ಹಾಗೂ ಒಳ್ಳೆಯ ಆರೋಗ್ಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮಾನಸಿಕ ತೃಪ್ತಿ ಇದ್ದರೆ ಏಕಾಗ್ರತೆ ವೃದ್ಧಿಸುತ್ತದೆ. ಪ್ರತಿದಿನ ನಮಗೆ ಸಿಕ್ಕ ಆಹಾರ, ವಸ್ತ್ರ, ಇತರೆ ಅನುಕೂಲತೆಗಳು, ಸ್ಥಾನಮಾನಗಳು ನಮ್ಮ ಸಾಧನೆಯಿಂದ ನಾವು ತೃಪ್ತರಾಗುವುದನ್ನು ಅಭ್ಯಾಸ ಮಾಡಬೇಕು. ಇದು ಸಾಲದು. ಅದು ಸಾಲದು, ಇದು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ ಎಂದು ಹೇಳ ಬಾರದು. ಕೊರಗಬಾರದು, ಸಂಗೀತ ಕೇಳುವುದು, ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದಲೂ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.
ನಾವು ಯಾವ ವಿಷಯವನ್ನು ಕಲಿಯಬೇಕು, ಅದರ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಯಾವ ಜ್ಞಾನವೂ ವ್ಯರ್ಥವಲ್ಲ ಎಂದು ತಿಳಿದರೆ ಒಳ್ಳೆಯದು. ಪಾಲಕರು ಪೋಷಕರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಶ್ರಮ ದುಡಿಮೆ ಮಾಡುವ ಪ್ರವೃತ್ತಿ ಬೆಳೆಸಲು ಬಹುಮಾನ ಶ್ಲಾಘನೆಗಳ ಮೂಲಕ ಪ್ರೋತ್ಸಾಹ ನೀಡಬೇಕು.
೩) ಕಲಿತದ್ದು ನೆನಪಿನಲ್ಲಿ ಉಳಿಯಲು ಏನು ಮಾಡಬೇಕು?
ನೆನಪು ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತ ವಿಷಯವನ್ನು ಗ್ರಹಿಸುವುದು. ಎರಡನೆಯ ಹಂತ, ಗ್ರಹಿಸಿದ ವಿಷಯ ಮಿದುಳಿನಲ್ಲಿ ಮುದ್ರಣವಾಗುವುದು ಮತ್ತು ಮೂರನೆಯ ಹಂತ ಅಗತ್ಯವಿದ್ದಾಗ ಕಲಿತ ಮಾಹಿತಿ ಅಥವಾ ವಿಷಯ ನೆನಪಿಗೆ ಬರಬೇಕು. ಆಸಕ್ತಿ ಮತ್ತು ಏಕಾಗ್ರಾತೆಯಿಂದ ಓದಿದ್ದರೆ, ಓದಿದ್ದನ್ನು ಅರ್ಥಮಾಡಿ ಕೊಳ್ಳದಿದ್ದರೆ, ವಿಷಯವನ್ನು ಮೆದುಳನ್ನು ಗ್ರಹಿಸುವುದೇ ಇಲ್ಲ! ಕಲಿತದ್ದನ್ನು ಮನನ ಮಾಡದಿದ್ದರೆ, ಬರೆಯದಿದ್ದರೆ, ಅದು ಮುದ್ರಣವಾಗುವುದಿಲ್ಲ. ಮುದ್ರಣವಾದದ್ದನ್ನು ಆಗಾಗ ನೆನಪಿಸಿಕೊಂಡು ಎಷ್ಟು ನೆನಪಿಗೆ ಬರುತ್ತದೆ, ಯಾವುದು ಮರೆತು ಹೋಗುತ್ತದೆ ಎಂದು ನೋಡಬೇಕು. ಆತಂಕ, ಭಯ, ಸಿಟ್ಟು ದುಃಖಗಳಿಂದ ನೆನಪಿಟ್ಟುಕೊಳ್ಳುವ ಪ್ರಕ್ರಿಯೆ ಹಾಳಾಗುತ್ತದೆ. ಆದ್ದರಿಂದ ಕಲಿತ ವಿದ್ಯೆ ನೆನಪಿನಲ್ಲಿ ಉಳಿಯಬೇಕಾದರೆ ಈ ಅಧ್ಯಯನದ ವಿಧಾನವನ್ನು ಪಾಲಿಸಿ.
8R ವಿಧಾನ
ಒಂದನೇ R: Right time and place: ಅಧ್ಯಯನ ಮಾಡಲು ಒಂದು ನಿರ್ದಿಷ್ಟ ವೇಳೆ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ, ವೇಳೆ ಮತ್ತು ಸ್ಥಳದಲ್ಲಿ ನಿಮ್ಮ ಏಕಾಗ್ರತೆ ಭಂಗ ತರುವ ಯಾವುದೇ ಆಕರ್ಷಣೆ, ವಿಕರ್ಷಣೆ ಇರಬಾರದು. ನೀವು ಮತ್ತು ನಿಮ್ಮ ಪರಿಸರ ಪ್ರಶಾಂತವಾಗಿರಬೇಕು. ಗದ್ದಲ, ಅಹಿತಕರ ಪರಿಸರದಲ್ಲಿ ಕುಳಿತು ಓದಬೇಡಿ, ಮನಸ್ಸು ಪ್ರಕ್ಷುಬ್ಧವಾಗಿದ್ದಾಗಲೂ ಓದಬೇಡಿ.
ಎರಡನೇ R: Read for 30 to 40 minutes: ೩೦ ರಿಂದ ೪೦ ನಿಮಿಷಗಳ ಕಾಲ ಓದಿದ್ದನ್ನು ಅರ್ಥ ಮಾಡಿಕೊಂಡು ಓದಿ, ಮೌನವಾಗಿ ಅಥವಾ ಗಟ್ಟಿಯಾಗಿ ಓದಿಕೊಳ್ಳಿ
ಮೂರನೇ R:Write : ಓದಿದ್ದರೆ ಸಾರಾಂಶವನ್ನು ಮತ್ತು ಮುಖ್ಯಾಂಶವನ್ನು ಬರೆಯಿರಿ. ನಿಮ್ಮದೇ ಆದ ಚಿಕ್ಕ ನೋಟ್ಸ್ ಮಾಡಿ.
ನಾಲ್ಕನೇ R: Relax: ಎರಡು ಅಥವಾ ಮೂರು ನಿಮಿಷ ವಿರಮಿಸಿ, ಎದ್ದು ಓಡಾಡಿ. ದೀರ್ಘ ಮತ್ತು ಆಳವಾದ ಉಸಿರಾಟ ಮಾಡಿ.
ಐದನೇ R: Recall: ಓದಿದ್ದನ್ನು ಮತ್ತೆ ಮತ್ತೆ ಸ್ಮರಣೆಮಾಡಿ. ನಿನ್ನೆ ಓದಿದ್ದು, ಒಂದು ವಾರದ ಹಿಂದೆ ಓದಿದ್ದು, ಒಂದು ತಿಂಗಳ ಹಿಂದೆ ಓದಿದ್ದನ್ನು ನೆನೆಸಿಕೊಳ್ಳಿ. ಯಾವ ಅಂಶ ಮರೆತು ಹೋಗುತ್ತದೆ ನೋಡಿ, ಅದನ್ನು ಪುನರ್‍ಮನನ ಮಾಡಿ ಹೇಳಿ ಮತ್ತು ಬರೆಯಿರಿ.
ಆರನೇ R: Rehersal: ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ಕಾಲಮಿತಿ ಹಾಕಿಕೊಂಡು ಉತ್ತರ ಬರೆಯಿರಿ. ಪ್ರಶ್ನೆಗಳಿಗೆ ಉತ್ತರಗಳು ಸರಿ ಇದೆಯೇ, ಎಷ್ಟು ಅಂಕಗಳು ಬರಬಹುದು ನೋಡಿ. ಶಿಕ್ಷಕರ ಮಾರ್ಗದರ್ಶನವನ್ನು ಪಡೆಯಿರಿ.
ಏಳನೇ R: Repeat: ಯಾವುದು ಮರೆತಿದೆ. ಯಾವ ಪ್ರಶ್ನೆಗೆ ಸರಿ ಉತ್ತರ ಬರೆಯಲಾಗಲಿಲ್ಲ ಆ ವಿಷಯವನ್ನು ಮತ್ತೆ ಓದಿ, ಮನನ ಮಾಡಿ.
ಎಂಟನೇ R: Regular Food/Sleep and Recreation: ನಿಗದಿತ ವೇಳೆಗೆ ಸರಿಯಾಗಿ, ಸುಲಭವಾಗಿ ಜೀರ್ಣವಾಗುವ, ಪುಷ್ಟಿಯುತ ಆಹಾರವನ್ನು ಸೇವಿಸಿ. ಉಪವಾಸವೂ ಬೇಡ, ಹೊಟ್ಟೆ ಬಿರುಯುವಂತೆ ತಿನ್ನುವುದು ಬೇಡ. ಹಾಗೇ ನಿತ್ಯ ರಾತ್ರಿ ಕನಿಷ್ಟ ೬ ಗಂಟೆಗಳ ಕಾಲ ಭಂಗ ವಿಲ್ಲದ ನಿದ್ರೆ ಮಾಡಿ. ಪರೀಕ್ಷೆ ಎಂದು ಹೆಚ್ಚು ಓದುವುದಿದೆ ಎಂದು ನಿದ್ರೆಗೆಡಬೇಡಿ. ಹಾಗೆ ಮೈ ಮನಸ್ಸು ವಿರಮಿಸಲು ಮನರಂಜನೆಯೂ ಕ್ರಮವಾಗಿರಲಿ.
೪) ಯಾವ ಪ್ರಶ್ನೆಗೆ ಹೇಗೆ ಉತ್ತರಿಸಿದರೆ ಹೆಚ್ಚು ಅಂಕಗಳು ಬರುತ್ತವೆ ಎಂಬುದು ನಿಮ್ಮ ಅಧ್ಯಾಪಕರನ್ನು ಅಥವಾ ಕೋಚಿಂಗ್ ಕ್ಲಾಸ್‌ನಲ್ಲಿ ಶಿಕ್ಷಕರನ್ನು ಕೇಳಿ ತಿಳಿಯಿರಿ, ಬರೆದು ಪ್ರಾಕ್ಟೀಸ್ ಮಾಡಿ. ನೀವು ಅಥವಾ ನಿಮ್ಮ ಸ್ನೇಹಿತರ ಮೂಲಕ ಮೌಲ್ಯಮಾಪನ ಮಾಡಿ.
೫) ನಿಮ್ಮ ಬುದ್ಧಿವಂತಿಕೆ, ನಮ್ಮ ಸಾಮರ್ಥ್ಯದ ಬಗ್ಗೆ ಉತ್ಪ್ರ್‍ಏಕ್ಷಿತ ನಿರೀಕ್ಷೆ ಬೇಡ. ನಿಮ್ಮ ಯೋಗ್ಯತೆ ಏನು, ಹಿಂದಿನ ನಿಮ್ಮ ನಿರ್ವಹಣೆ ಹೇಗಿತ್ತು ಎಂಬುದರ ಮೇಲೆ ನೀವೆಷ್ಟು ಅಂಕಗಳನ್ನು, ಗ್ರೇಡನ್ನು ಪಡೆಯಬಲ್ಲಿರಿ ಎಂದು ಯೋಚಿಸಿ. ಉದಾಹರಣೆಗೆ ನೀವು ಹಿಂದಿನ ಎರಡು, ಮೂರು ಪರೀಕ್ಷೆಗಳಲ್ಲಿ ಗಣಿತದಲ್ಲಿ ಐವತ್ತು, ಅರವತ್ತು ತೆಗೆಯದಿದ್ದರೆ ತೊಂಬತ್ತು, ನೂರು ಅಂಕ ತೆಗೆಯಬೇಕೆಂಬ ಗುರಿ ಬೇಡ. ಅರವತ್ತರ ಬದಲು ಎಪ್ಪತ್ತು ಅಂಕ ತೆಗೆಯಲು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಳ್ಳಿ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಅಂಕಗಳನ್ನು ಪಡೆಯುತ್ತೇನೆ ಎಂಬ ಧೋರಣೆ ಇಟ್ಟುಕೊಳ್ಳಿ.
೬) ನಕಾರಾತ್ಮಕ ಆಲೋಚನೆಗಳನ್ನು ತಡೆಗಟ್ಟಿ/ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ಪರೀಕ್ಷೆಗೆ ನನ್ನ ಸಿದ್ಧತೆ ಸಾಲದು, ನನಗೇನು ಗೊತ್ತಿಲ್ಲ. ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಚೆನ್ನಾಗಿ ಬರೆಯಲಾರೆ, ನಾನು ಫೇಲಾಗುವುದು ಖಂಡಿತಾ. ಅಪ್ಪ ಅಮ್ಮ ನನ್ನನ್ನು ಬಯ್ಯುತ್ತಾರೆ. ಅವಮಾನ ಮಾಡುತ್ತಾರೆ ಇತ್ಯಾದಿ ನಕಾರಾತ್ಮಕ ಆಲೋಚನೆ ಗಳನ್ನು ಬಿಟ್ಟು ಬಿಡಿ. ನನ್ನ ಕೈಲಾದಷ್ಟು ಸಿದ್ಧತೆ ಮಾಡುತ್ತೇನೆ, ಉಳಿದಿರುವ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಓದುತ್ತೇನೆ. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಎಷ್ಟು ಉತ್ತರ ಗೊತ್ತೋ ಅಷ್ಟನ್ನು ಬರೆಯುತ್ತೇನೆ. ನನಗೆ ಒಳ್ಳೆಯದಾಗುತ್ತದೆ ಎಂಬ ಸಕಾರಾತ್ಮಕ ಆಲೋಚನೆಗಳಿಗೆ ಮನಸ್ಸಿನಲ್ಲಿ ಎಡೆ ಮಾಡಿ ಕೊಡಿ. ಇತರರ ಕುಹಕ, ಟೀಕೆಗಳಿಗೆ ಕಿವಿಗೊಡಬೇಡಿ. ನಿಮಗೆ ಪ್ರೋತ್ಸಾಹಿಸಿ ಧೈರ್ಯ ತುಂಬಲು ನಿಮ್ಮ ತಂದೆ ತಾಯಿ ಶಿಕ್ಷಕರನ್ನು ಕೇಳಿಕೊಳ್ಳಿ.
೭) ಅದಾಗ್ಯೂ ನಿಮ್ಮ ತಂದೆ ತಾಯಿ ಇತರರು ಒತ್ತಡ ತಂದರೆ, ಬಹುಮಾನದ ಆಮಿಷ ಅಥವಾ ಶಿಕ್ಷೆಯ ಭಯವನ್ನು ನಿಮ್ಮ ಮೇಲೆ ಹಾಕಿದರೆ, ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಹುಮಾನ ಶಿಕ್ಷೆ ಕೊಡುವುದು ನಿಮಗೆ ಬಿಟ್ಟದ್ದು ಎನ್ನಿ. ಬಹುಮಾನ ಶಿಕ್ಷೆಯ ಬಗ್ಗೆ ಗಮನ ಕೊಡಬೇಡಿ.
೮) ಹಿಂದಿನ ವಿಫಲತೆಯಿಂದ ಪಾಠ ಕಲಿಯಿರಿ. ಹಿಂದಿನ ಟೆಸ್ಟ್ ಅಥವಾ ಪರೀಕ್ಷೆಯಲ್ಲಿ ನೀವು ಫೇಲಾಗಿದ್ದರೆ, ಕಡಿಮೆ ಅಂಕಗಳನ್ನು ತೆಗೆದಿದ್ದರೆ ಅಧೀರರಾಗಬೇಡಿ, ಏಕೆ ಫೇಲಾಯಿತು, ಏಕೆ ಅಂಕಗಳು ಕಡಿಮೆ ಬಂದವು. ಕಳೆದ ಸಲದ ನಿಮ್ಮ ಈ ವಿಫಲತೆಯಿಂದ ನೀವೇನು ಪಾಠ ಕಲಿಯಬಹುದೆಂದು ಯೋಚಿಸಿ, ಅಧ್ಯಾಪಕರನ್ನು ಕಂಡು, ನೀವು ಎಲ್ಲಿ ತಪ್ಪಿದ್ದು ಕೇಳಿ. ಸಾಧ್ಯವಾದರೆ ನಿಮ್ಮ ಉತ್ತರ ಪತ್ರಿಕೆಗಳನ್ನು ಪಡೆದು ನೀವೇ ವಿಶ್ಲೇಷಿಸಿ, ನಿಮ್ಮ ನಿರ್ವಹಣೆ ಸುಧಾರಿಸಲು ಏನು ಮಾಡಬೇಕೆಂದು ಅಧ್ಯಾಪಕರೊಂದಿಗೆ ಚರ್ಚಿಸಿ. ಸೋಲು ಗೆಲುವಿನ ಸೋಪಾನವಾಗಲಿ. ಸೋಲು ನಿಮ್ಮನ್ನು ಮತ್ತಷ್ಟು ಕೆಳಕ್ಕೆ ತಳ್ಳುವ ಜಾರುಬಂಡಿಯಾಗಬಾರದು. ಪ್ರಶ್ನೆಗಳಿಗೆ ಉತ್ತಮ ಅತ್ಯುತ್ತಮ ಉತ್ತರಗಳನ್ನು ಬರೆಯುವ ಪ್ರಾಕ್ಟೀಸ್ ಮಾಡಿ.
೯) ಶಿಕ್ಷಕರ ಪಕ್ಷಪಾತ, ಅನುಚಿತ ಟೀಕೆ, ಪೂರ್ವಾಗ್ರಹ ಪೀಡಿತ ಮೌಲ್ಯ ಮಾಪನಗಳಿಂದ ನೀವು ಆಫ್‌ಸೆಟ್ ಆಗಿದ್ದರೆ ಸಂಬಂಧಪಟ್ಟ ಶಿಕ್ಷಕರನ್ನು ಕಂಡು ನಿಮ್ಮ ಬಗ್ಗೆ ಸದಭಿಪ್ರಾಯ ಬರುವ ಹಾಗೆ ನಡೆದುಕೊಳ್ಳಿ. “ಪಕ್ಷಪಾತ ಮಾಡಬೇಡಿ. ನನಗೆ ಅನ್ಯಾಯ ಮಾಡಬೇಡಿ” ಎಂದು ವಿನಂತಿಸಿ ಕೊಳ್ಳಿ. ನಿಮ್ಮ ತಂದೆ ತಾಯಿಗಳ ಮತ್ತು ನಿಮ್ಮನ್ನು ಇಷ್ಟಪಡುವ ಶಿಕ್ಷಕರ ನೆರವನ್ನು ಪಡೆಯಿರಿ.
೧೦) ಪರೀಕ್ಷಾ ಅಕ್ರಮ ಗಳ ಬಗ್ಗೆ ನೀವು ತಲೆ ಬಿಸಿ ಮಾಡಿಕೊಳ್ಳಬೇಡಿ. ಅದನ್ನು ತಪ್ಪಿಸುವುದು, ನಿಮ್ಮ ಕೈಯಲಿಲ್ಲ. ಪ್ರಶ್ನೆ ಪತ್ರಿಕೆ ಬಹಿರಂಗ ಗೊಳ್ಳುವುದು, ಕಾಪಿ ಮಾಡುವುದು, ಹಣ ಕೊಟ್ಟು ಪಾಸ್ ಮಾಡಿಸುವುದು, ಅಂಕಪಟ್ಟಿ ತಿದ್ದುವುದು ಇವನ್ನೆಲ್ಲ ಮಾಡುವವರು ತಮ್ಮ ಈ ಕೆಟ್ಟ ಕೆಲಸಕ್ಕೆ ಒಂದಲ್ಲ ಒಂದು ದಿನ ಬೆಲೆ ತರುತ್ತಾರೆ. ನೀವು ಪ್ರಾಮಾಣಿಕರಾಗಿರಿ. ಅದು ನಿಮ್ಮನ್ನು ಸದಾ ರಕ್ಷಿಸುತ್ತದೆ.
೧೧) ದೈಹಿಕ ಮಾನಸಿಕ ಆರೋಗ್ಯ ನಿವಾರಣೆ ಮತ್ತು ಆರೋಗ್ಯ ವರ್ಧನೆ ಪರೀಕ್ಷಾ ಸಮಯದಲ್ಲಿ, ಪರೀಕ್ಷಾ ಸಿದ್ಧತೆ ಅವಧಿಯಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಹಾಗೂ ಅನಾರೋಗ್ಯದಿಂದ ಬಳಲುವಂತಾಗಬಾರದು. ಆರೋಗ್ಯ ವರ್ಧನೆಗೆ ಈ ಕೆಳ ಕಾಣುವ ಸೂತ್ರಗಳನ್ನು ಪಾಲಿಸಿ.
* ಪುಷ್ಟಿಕರ ಹಾಗೂ ಆರೋಗ್ಯ ಪೂರ್ಣ ಆಹಾರವನ್ನು ಸೇವಿಸಿ.
ಹಣ್ಣುಗಳು, ತರಕಾರಿ, ನೀರಿನಲ್ಲಿ ನೆನೆಸಿದ / ಮೊಳಕೆ ಕಟ್ಟಿದ ಕಾಳುಗಳು, ಹಬೆಯಲ್ಲಿ, ನೀರಿನಲ್ಲಿ ಬೆಂದ ಪದಾರ್ಥಗಳು ಹೆಚ್ಚು ಆರೋಗ್ಯದಾಯಕ ಆಹಾರಗಳು. ಎಣ್ಣೆ / ಬೆಣ್ಣೆ / ಮಸಾಲೆ ಪದಾರ್ಥಗಳನ್ನು ಕಡಿಮೆ ತಿನ್ನಿ. ಸ್ವಚ್ಛವಾದ ಸ್ಥಳದಲ್ಲಿ ಕುಳಿತು ಆಹಾರ ಸೇವಿಸಿ. ಬೀದಿ ಬದಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಚೀಲ ಅಥವಾ ಡಬ್ಬ ಶೀಷೆಯಲ್ಲಿ ಮಾರುವ ಸಿದ್ಧಪಡಿಸಿದ ಆಹಾರ ಪೇಯಗಳನ್ನು ಸೇವಿಸಲೇ ಬೇಡಿ. ಮನೆಯಿಂದಲೇ ಆಹಾರ ನೀರು ತೆಗೆದುಕೊಂಡು ಹೋಗಿ. ನಿರ್ದಿಷ್ಟ ವೇಳೆ ಆಹಾರವನ್ನು ಸೇವಿಸಿ. ಉಪವಾಸ ಬೇಡ, ಫುಲ್ ಮೀಲ್ಸ್ ಬೇಡ. ಸ್ನೇಹಿತರೊಡನೆ ಕುಳಿತು ಆಹಾರ ಸೇವಿಸಿ.
* ಕ್ರಮವಾದ ವ್ಯಾಯಾಮ, ನಿತ್ಯ ೪೦ ರಿಂದ ೬೦ ನಿಮಿಷಗಳ ಕಾಲ ನಡೆಯಿರಿ, ಜಾಗಿಂಗ್ ಮಾಡಿ ಅಥವಾ ಸೈಕಲ್ ತುಳಿಯಿರಿ ಅಥವಾ ಈಜಿ, ಬಯಲಲ್ಲಿ ಆಡುವ ಆಟಗಳನ್ನಾಡಿ.
* ಸ್ವಚ್ಛತೆ, ನಮ್ಮ ದೇಹವನ್ನು ನೀವು ವಾಸಿಸುವ ಮನೆಯ ಒಳಹೊರಗನ್ನು ಮತ್ತು ಶಾಲೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲೆಂದರಲ್ಲಿ ಕಸ ಹಾಕಬೇಡಿ, ಮಲ ಮೂತ್ರ ವಿಸರ್ಜಿಸ ಬೇಡಿ. ನಿತ್ಯ ಸ್ನಾನ ಮಾಡಿ ಹೊರಗಡೆ ಹೋಗಿ ಮನೆಯೊಳಕ್ಕೆ ಬರುವ ಮೊದಲು ಕೈಕಾಲು ತೊಳೆದುಕೊಳ್ಳಿ. ಮಲ ವಿಸರ್ಜನೆ ನಂತರ ನಿಮ್ಮ ಕೈಗಳನ್ನು ಸೋಪು ಹಾಕಿ ಸ್ವಚ್ಛ ಮಾಡಿ.
* ಒಬ್ಬ ವೈದ್ಯರ ಮಾರ್ಗದರ್ಶನದಲ್ಲಿ ಅನಾರೋಗ್ಯ ಸಮಸ್ಯೆಗಳಿಗೆ ಸಲಹೆ ಚಿಕಿತ್ಸೆ ಪಡೆಯಿರಿ.
೧೨) ಭಾವೋದ್ವೇಗಗಳ ಶಮನ. ನಿಮ್ಮ ಭಾವನೆಗಳನ್ನು ನಿಮ್ಮ ತಂದೆ, ತಾಯಿ ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿರೀಕ್ಷೆ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು ಲಭ್ಯವಿದ್ದುದರಲ್ಲಿ ತೃಪ್ತಿ ಸಂತೋಷವನ್ನು ಕಾಣಿ. ಮನಸ್ಸಿಗೆ ಮುದ ನೀಡುವ ಸಂಗೀತ, ಸಾಹಿತ್ಯ, ಕ್ರೀಡೆ, ಹಾಸ್ಯ – ಪ್ರವಾಸದಂತಹ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಹೀಗೆ ಪರೀಕ್ಷೆ ಸಿದ್ಧತೆ ಮಾಡಿ, ನಿರಾತಂಕ, ನಿಶ್ಚಿಂತ ಮನಸ್ಸಿನಿಂದ ಪರೀಕ್ಷೆಗೆ ಹೋಗಿ, ಪರೀಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ಮೂರು ನಿಮಿಷ ಧ್ಯಾನ ಪ್ರಾಣಾಯಾಮ ಮಾಡಿ, ಸುಲಭ ಪ್ರಶ್ನೆಗೆ ಮೊದಲು ಉತ್ತರಿಸಿ, ಸಮಯದ ಪಾಲನೆ ಮಾಡಿ. ಪರೀಕ್ಷೆ ಫಲಿತಾಂಶದ ಬಗ್ಗೆ ಚಿಂತೆ ಆತಂಕ ಪಡಬೇಡಿ. ಆಗ ನಿಮ್ಮ ನಿರ್ವಹಣೆ ಗರಿಷ್ಠ ಮಟ್ಟದಲ್ಲಿರುತ್ತದೆ. ನೀವು ಯಶಸ್ವಿಯಾಗುತ್ತೀರಿ. ನಿಮಗೆಲ್ಲ ಶುಭವಾಗಲಿ.
*****