ಅಚ್ಚಚ್ಚು ಬೆಲ್ಲದಚ್ಚು
ಅಲ್ಲಿ ನೋಡು ಇಲ್ಲಿ ನೋಡು
ಸಂಪಂಗಿ ಮರದಲ್ಲಿ
ಕಾಗೆ ನೋಡು….
ಗೆಳತಿ ಗುಣುಗುಣಿಸಿದಳು.
ನಾನು ನೋಡಿದೆ:
ಮರದ ಮೇಲೆ ಕುಳಿತುಕೊಂಡು
ಹುಳುವೊಂದನ್ನು ಅವುಚಿ ಹಿಡಿದು
ಕಾಗೆ ಕೂಗುತ್ತಿತ್ತು.
ಕಾ…. ಕಾ….. ಕಾ…. ಕಾ….
ಅಯ್ಯೋ! ಎಂಥಾ ದನಿ!
ಕಿವಿ ಕತ್ತಿರಿಸಿತು
ಕಿರಿಕಿರಿಯೆನಿಸಿದರೂ….
ಹತ್ತು ಮಂದಿಗೆ
ಹಂಚಿ ತಿನ್ನುವ ಹುರುಪು
ಪ್ರೀತಿ, ಮೆಚ್ಚುಗೆ ಮೂಡಿತು.
ಅಚ್ಚಚ್ಚು ಬೆಲ್ಲದಚ್ಚು
ಅಲ್ಲಿ ನೋಡು ಇಲ್ಲಿ ನೋಡು
ಮಾವಿನ ಮರದಲ್ಲಿ
ಕೋಗಿಲೆ ನೋಡು….
ಗೆಳತಿ ಗುಣುಗುಣಿಸಿದಳು.
ನಾನು ನೋಡಿದೆ:
ಮರದ ಮೇಲೆ ಕುಳಿತುಕೊಂಡು
ಕೋಗಿಲೆ ಹಾಡುತ್ತಿತ್ತು
ಕುಹೂ…. ಕುಹೂ…. ಕುಹೂ….
ಆಹಾ! ಎಂಥಾ ದನಿ!
ಕಿನ್ನರಿ ಕಿವಿ ತುಂಬಿತು.
ಜುಮ್ಮೆನಿಸಿದರೂ….
ಕರುಳ ಕುಡಿಯನ್ನ
ಕಡೆಗಣಿಸುವ ಕಟುಕತನ
ಕಹಿ ಮೂಡಿಸಿತು.
ಕಾಗೆ-ಕೋಗಿಲೆ, ಕೋಗಿಲೆ-ಕಾಗೆ
ಏತ-ಧೂತ ಆಡಿದವು.
ಕಾ…. ಕುಹೂ…. ಕುಹೂ…. ಕಾ
ಏತ-ದೂತ ಆಡಿದವು.
ನಾನು ಸಂಪಂಗಿ ಮರವನ್ನು ಕೇಳಿದೆ
ನನ್ನ ಎದೆಯಲ್ಲಿ ಕಾಗೆಯನ್ನಿಡು.
ನಾನು ಮಾವಿನ ಮರವನ್ನು ಕೇಳಿದೆ
ನನ್ನ ಕೊರಳಲ್ಲಿ ಕೋಗಿಲೆಯನ್ನಿಡು.
*****