ನಾನು ಕಳಿಸಿದ್ದು ಮಿಂಚುಗಳನ್ನು
ತಲುಪಿದ್ದು ಮಿಣುಕು ಹುಳುಗಳೇ?
ಹಾಗಾದರೆ ಮಿಂಚೆಲ್ಲ ಹೋಯಿತು?
ನನ್ನ ಕುಂಚದಿಂದ ಮೂಡಿದ ಮೊಲ
ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ?
ಹಾಗಾದರೆ ಮೊಲವೆಲ್ಲಿ ಮಾಯವಾಯಿತು?
ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು
ಮೌನದ ಗಂಟೆಯನ್ನು
ಕತ್ತರಿಸಿದ್ದು ಸಿಡಿಲೆ?
ಹಾಗಾದರೆ ಸಿಡಿಲಾದರೂ ಎಲ್ಲಿಂದ ಬಂತು?
ನಾನು ಮುಟ್ಟಿಸ ಬಯಸಿದ್ದು ಬೆಂಕಿ ಬಿಸಿಯನ್ನು
ಬೆಚ್ಚಗಿತ್ತೆ? ಬಿಸಿ ನೀರಿನ ಹಾಗೆಯೇ?
ಹಾಗಾದರೆ ಬೆಂಕಿಗೇನಾಯಿತು?
ಕಗ್ಗಂಟಿನ ಹಾದಿ ಕಾಡಿನಂತಿದೆ.
ತಣ್ಣಗೆ ಕೂತು ಧ್ಯಾನಿಸಿದಂತೆ
ಮಬ್ಬು ಸರಿಯುತ್ತಿದೆ….
ಪೊರೆ ಕಳಚಿದ ಕಣ್ಣಲ್ಲಿ
ಚಿತ್ರ ಮೂಡುತ್ತಿದೆ
ಏನೂ ಅಲ್ಲ-
ಸೇತುವೆ ಕುಸಿದಿದೆ.
ನನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ
ನನ್ನೆತ್ತರಕ್ಕೂ ಬೆಳೆದ ಸೇತುವೆ
‘ನಾನು’ ಇರುವಂತೆಯೆ ಕುಸಿದಿದೆ.
ನಿನ್ನೆ ಮುಸ್ಸಂಜೆಯನ್ನು ಬೆಚ್ಚಗೆ
ತರುಣನ ಹಾಗೆ ಕಳೆದ ಸೇತುವೆ
ಇದೀಗ ಸಾವಿನ ಸುಖ ನಿದ್ದೆಯಲ್ಲಿದೆ.
ನಾನೇ ನೆಟ್ಟು ನೀರುಣಿಸಿ
ಬೆಳೆಸಿದ ಗಿಡದ ಹೂವ
ಪರಾಗ, ಕೇಸರದ ಸಮೇತ
ಒಂದು ಹನಿ ಮಕರಂದ
ಅಲ್ಲಾಡದ ಹಾಗೆ ಅಷ್ಟೂ ದಳಗಳೊಂದಿಗೆ
ಖುದ್ದಾಗಿ ಒಯ್ಯುವೆನೆಂದು
ಕೊಟ್ಟ ಮಾತು ಇನ್ನೂ
ಹಾಗೆಯೇ ಇರುವಂತೆ
ಸೇತುವೆ ಕುಸಿದಿದೆ.
ಮಿಂಚುಗಳನ್ನು ಮಿಣುಕು
ಹುಳುಗಳನ್ನಾಗಿಸಿ
ಮೊಲಕ್ಕೆ ಕೊಂಬು ಮೂಡಿಸಿ
ಬೆಂಕಿಯನ್ನು ಬಿಸಿನೀರನ್ನಾಗಿಸಿ
ಇಕ್ಕಟ್ಟಿಗೆ ಸಿಲುಕಿಸುತ್ತಲೇ
ಬಿಕ್ಕಟ್ಟಿನಿಂದ ಬಿಡುಗಡೆಗೊಳಿಸಿದ
ಸೇತುವೆ ಕುಸಿದಿದೆ.
ಕುಸಿದ ಸೇತುವೆಯಾಚೆ
ಎಂದಿನಂತೆ ಹೂವು ಅರಳಿದೆ.
ಕುಸಿದ ಸೇತುವೆಯ ಮೇಲೆ ಕೂತು
ಕೋಗಿಲೆ ತನ್ನ ಪಾಡಿಗೆ ತಾನು ಹಾಡಿದೆ.
ನದಿಯಲ್ಲಿ ನೀರು ಹರಿದಿದೆ
ಸಂತನಂತೆ ಸಹಜವಾಗಿದೆ.
*****