ಅವರು ತಾಯಂದಿರು ಮತ್ತೆ
ಕತ್ತಲ ರಾತ್ರಿಯ ಬಿಕ್ಕುಗಳ
ನಕ್ಷತ್ರಗಳ ತಂಪು ಆಗಸಕೆ ಒಡ್ಡಿ
ಒಡಲ ಸೆರಗತುಂಬ ಬೆಳದಿಂಗಳು
ತುಂಬಿಕೊಂಡವರು.
ಹಾರುವ ಹಕ್ಕಿ ತೇಲುವ ಮೋಡಗಳು
ಎಳೆಯುವ ತೇರಿನ ನಕ್ಷೆಗಳ
ಕಸೂತಿ ಅರಳಿಸಿಕೊಂಡು ಮತ್ತೆ
ಅಂಗಳದ ತುಂಬ ಸಡಗರದ
ದೀಪಾವಳಿ ದೀಪಗಳ ಹಚ್ಚಿದವರು.
ಹರಿಯುವ ನದಿಯ ನೀರು.
ಥಳಥಳ ಹೊಳೆಯುವ ಕೊಡಪಾನ
ಗಳಲಿ ತುಂಬಿ ಹೊಗೆ ಹಾರುವ
ಒಲೆಯ ಮೇಲೆ ಕಾಯಿಸಿ ಎಣ್ಣೇಹಚ್ಚಿ
ಬಿಸಿನೀರು ಅಭ್ಯಂಜನ ಸ್ನಾನ ಪುಳಕ ಹುಟ್ಟಿಸಿದವರು.
ಎಲ್ಲಾ ದಾರಿಗಳ ಕಲ್ಲು ಕಣಿವೆಯ
ದಾಟಿಸಿ ಕೈ ಹಿಡಿದು ಹಾಲು ಕುಡಿಸಿ
ಮೆಲ್ಲಗೆ ಬಯಲ ಹಸಿರು ನದಿಗುಡ್ಡ
ಹಸಿರ ಹೊಳಪಿಗೆ ಬಿಸಿಲಿಗೊಡ್ಡಿ ತಂದು
ಗುಬ್ಬಚ್ಚಿ ಗೂಡು ಕಟ್ಟಿಸಿದವರು.
ಬಿರುಬಿಸಿಲ ಕೆಂಡದಲಿ ಬೇಯುವಾಗ
ಅದೃಷ್ಟದ ಮಳೆ ಮೋಡ ಹರಿಸಿದ ಪ್ರೀತಿ
ಭೋರೆಂದು ಸುರಿದ ಮಳೆಯಲಿ
ತಬ್ಬಿ ಅಂಗಳದ ಮಲ್ಲಿಗೆ ಮುಡಿಗೇರಿಸಿ –
ಬಯಲಗಾಳಿಯಲಿ ಹೂವಹಕ್ಕಿ ಹಾಡು ಕೇಳಿಸಿದವರು.
ಜಾತ್ರೆಯಲಿ ಬಣ್ಣದ ಬಲೂನ ಬಳೆ
ಜರಿಲಂಗ ತೊಡಿಸಿ ಜಡೆತುಂಬ ಕೇದಿಗೆ
ಅರಸಿನ ಚಂದನ ಆರತಿ ಬೆಳಗಿ ಒಡಲಲಿ
ನೂಲನೇಯ್ದು ಬಟ್ಟೆ ಬಯಲ ದಾರಿ
ನಮಗೂ ನಿಮಗೂ ಅರಳಿಸಿ ತೋರಿಸಿದವರು.
ಅವರು ತಾಯಂದಿರು ಮಾತಿನ
ಮಂತ್ರ ಪುಷ್ಪ ಎದೆಗೆ ಅವಚಿಕೊಂಡ
ಗಾಳಿಗಂಧ ಸೇರಿಸಿ ಬೆರಗಿಗೆ ಉತ್ತರಿಸಿ
ಚರಿತೆ ಹುಟ್ಟಿಸಿ ಬತ್ತದ ಒರತ
ಎಲ್ಲರ ಒಡಲಲಿ ಜೀವಜಲವಾಗಿ ಹರಿದವರು.
ಅವರು ಜಗದ ತಾಯಂದಿರು.
*****