ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. ತನ್ನ ಜಾತಕ ನೋಡಿದ ಜ್ಯೋತಿಷಿಯೊಬ್ಬನು ಒಂದೋ ಈತ ಹೆಣ್ಣುಗಳ ಹಿಂದೆ ಬೀಳುತ್ತಾನೆ ಇಲ್ಲವೇ ಸನ್ಯಾಸಿ ಯಾಗುತ್ತಾನೆ ಎಂದು ಹೇಳಿದ್ದನಂತೆ. ಈ ಮಾತನ್ನು ಆಗಾಗ ನೆನಪಿಸುತ್ತ ತಾಯಿ ಇಂಥ ಅತಿರೇಕಗಳಿಗೆ ಹೋಗದಿರುವಂತೆ ಉಪದೇಶಿಸುತ್ತಾಳೆ. ತನ್ನೊಳಗೆ ಈ ಎರಡೂ ಗುಣಗಳು ಜತೆಜತೆಯಾಗಿರುವಂತೆ ವಿನಯಚಂದ್ರನಿಗೆ ಅನಿಸಿತೊಡಗಿತ್ತು. ಆದರೆ ಸದ್ಯಕ್ಕೆ ಸನ್ಯಾಸಿ ಹಿಮ್ಮೆಟ್ಟುವ ಲಕ್ಷಣ ಕಾಣಿಸುತ್ತಿದೆ! ಬ್ಲೇಮಿಟಾನ್ ರಿಯೋದ ಭೀಕರ ಗಾತ್ರದ ಪೋಸ್ಟರ್ ಸಿನಿಮಾದ ಮುಂದಲೆಯನ್ನಲಂಕರಿಸಿದೆ. ಹೆಣ್ಣಿನ ನಗ್ನ ತೊಡೆ, ಪಾದ, ತೋಳು, ಕುಂಕುಳ! ಕಟಿ ಪ್ರದೇಶದ ಮೇಲೆ ಮಾತ್ರವೆ ಬಿಕಿನಿಯ ಆವರಣವಿದೆ. ಇಂಥ ಪೋಸ್ಟರುಗಳ ಕಲಾ ವಿಧಾನವನ್ನು ಅಭ್ಯಾಸ ಮಾಡುವವನಂತೆ ಫ಼ೌಂಟನ್ ನ ಪಕ್ಕದ ಆಸನವೊಂದರಲ್ಲಿ ಕುಳಿತು ನೋಡತೊಡಗಿದ. ಕೇವಲ ಎರಡು ಆಯಾಮಗಳ ಚಿತ್ರ ಮೂರು ಆಯಾಮಗಳ ಮನುಷ್ಯಾಕೃತಿಯನ್ನು ಹೇಗೆ ಪ್ರತಿನಿಧಿಸುತ್ತದೆ? ಹಾಗೂ ಕೇವಲ ಕಾಲದ ಆಯಾಮವನ್ನು ಮಾತ್ರವೇ ಒಳಗೊಂಡಿರುವ ಭಾಷೆ ಇವೆಲ್ಲವನ್ನೂ ಹೇಗೆ ಪ್ರಕಟಿಸಬಲ್ಲುದು? ಇತ್ಯಾದಿ, ಇತ್ಯಾದಿ.
ಸಿಗರೇಟನ್ನು ತೆಗೆದು ಬಾಯಿಗಂಟಿಸಿಕೊಂಡ. ಒಳಕ್ಕೆ ಬರುವ ಆಟೋಗಳನ್ನು ಗಮನಿಸತೊಡಗಿದ. ಆಗಲೆ ಆರುಗಂಟೆ ದಾಟಿದೆ. ರೇಶ್ಮ ಯಾವ ಕ್ಷಣದಲ್ಲಾದರೂ ಬರಬಹುದು. ಆಕೆ ಜತೆ ಏಕಾಂತದಲ್ಲಿ ನಡೆಯುವ ಮೊದಲ ಭೇಟಿ. ನೆನಸಿದರೇ ಮೈ ರೋಮಾಂಚನಗೊಳ್ಳುವುದು. ರೇಶಿಮೆಯಂಥ ರೇಶ್ಮ. ಅವಳ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳಬೇಕು. ಆದರೆ, ಡೋಂಟ್ ಬೀ ಎ ಫೂಲ್! ಜಾಗರೂಕನಾಗಿರು. ಪಶ್ಚಾತ್ತಾಪಗೊಳುವಂಥ ಏನನ್ನೂ ಮಾಡಬೇಡ. ಇಂಥ ಸಂದರ್ಭದಲ್ಲಿ ಮಾತಿಗಿಂತ ಮೌನವೇ ಸಂವಹನೀಯ ಅನ್ನೋದನ್ನು ತಿಳಿದುಕೋ. ಸದ್ಯ, ಮನಸ್ಸನ್ನು ಹಗುರಗೊಳಿಸಲೆಂದು ಸಿನಿಮಾದ ಮುಂದೆ ನೆರೆದ ಜನರನ್ನು ಗಮನಿಸತೊಡಗಿದ. ಯುವಕ ಯುವತಿಯರು, ಹರೆಯದ ದಂಪತಿಗಳು, ಗೆಳೆಯ ಗೆಳತಿಯರು-ಬ್ಲೇಮಿಟಾನ್ ರಿಯೋ! ನಂತರ ಅವನು ಪಕ್ಕದ ಅಂಗಡಿಗೆ ಹೋಗಿ ಚಹಾ ಕುಡಿಯುತ್ತ ನಿಂತ. ರೇಶ್ಮ ಬರುವ ತನಕ ಸಮಯವನ್ನು ಕೊಲ್ಲುವುದು ಮುಖ್ಯವಾಗಿತ್ತು. ಚಹಾ ಹೀರಿಯಾದ ಮೇಲೆ ಇನ್ನೊಂದು ಸಿಗರೇಟನ್ನು ಹಚ್ಚಿದ. ಸಮಯ ಆರೋ ಇಪ್ಪತ್ತು. ರೇಶ್ಮಳ ಪತ್ತೆಯಿಲ್ಲ. ಟ್ರಾಫ಼ಿಕ್ ಜ್ಯಾಮ್, ರೇಲ್ವೆ ಗೇಟ್ ಬಂದ್ ಅಥವಾ ಇಂಥದೇ ಇನ್ನೇನೋ ಕಾರಣವಿದ್ದಿತು ಎಂದುಕೊಂಡ. ಅಲ್ಲಿ ಬಂದಿಳಿಯುವ ಪ್ರತಿಯೊಬ್ಬಳು ಹೆಣ್ಣೂ ರೇಶ್ಮ ಇರಬಹುದೇ ಎಂಬ ಆಸೆಯಿಂದ ನೋಡಿದ.
ಒಳಕ್ಕೆ ಬರುವ ಸೂಚನೆಯ ಗಂಟೆಯಾಯಿತು. ಅಷ್ಟರತನಕ ಕಾದಿದ್ದ ಜನರೆಲ್ಲ ಕೆಲವೇ ಕ್ಷಣದಲ್ಲಿ ಮಾಯವಾದರು. ಸ್ವಲ್ಪ ಹೊತ್ತಿನಲ್ಲಿ ಕಳ್ಳಸಂತೆಯಲ್ಲಿ ಟಿಕೇಟುಗಳನ್ನು ಮಾರುವವರೂ ತಮ್ಮ ಕೆಲಸ ಮುಗಿಸಿ ಹೊರಟುಹೋದರು. ಹೌಸ್ ಫುಲ್ ಎಂಬ ಬೋರ್ಡು ಪೋರ್ಟಿಕೋದಲ್ಲಿ ರಾರಾಜಿಸಿತು. ವಿನಯಚಂದ್ರನಿಗೆ ಸಿಗರೇಟೊಂದೇ ಶರಣು. ಕಾರಂಜಿಯ ಕಟ್ಟೆಯಲ್ಲಿ ಬಂದು ಮತ್ತೆ ಆಸೀನನಾಗಿ ಹೊಗೆ ಸೇದತೊಡಗಿದ. ಈಚೆಗೆ ಕೆಮ್ಮು ಸುರುವಾಗಿದೆ. ಈಸಿಸೋಫ಼ೀಲಿಯಾ, ಅಥವಾ ಯಾರೋ ಹೇಳಿದಂತೆ ಬೆನ್ನು ಹತ್ತಿರುವ ಒಫ಼ೀಲಿಯಾ? ಹೇಗಿದ್ದರೂ ಇದು ಆತಂಕದ ನಿಮಿಷಗಳು. ಇದೊಂದು ಇತ್ಯರ್ಥಕ್ಕೆ ಬಂದೊಡನೆ ಸಿಗರೇಟಿಗೆ ಮಂಗಳ. ಇದು ಟಿಪಿಕಲ್ ಬೂರ್ಜ್ವಾ ಚಿಂತನೆ ಎನ್ನುತ್ತಾನೆ ದೀಕ್ಷಿತ. ಐಡಿಯಾಲಜಿ ಅವನನ್ನು ಎಷ್ಟು ಧಡ್ಡನನ್ನಾಗಿ ಮಾಡಿದೆಯೆಂದರೆ ಕಾಮ ಪ್ರೇಮದಂಥ ಯಾವ ಭಾವನೆಗಳೂ ಅವನನ್ನು ತಟ್ಟುವುದಿಲ್ಲ.
ತೀರ ವಿಲಕ್ಷಣ ವಾದ ಸಂದಿಗ್ಧದಲ್ಲಿ ವಿನಯಚಂದ್ರ ಸಿಲುಕಿಕೊಂಡ. ಈಗೇನು ಮಾಡಲಿ? ಹೊರಟುಹೋಗಲೆ? ರೇಶ್ಮಳ ಮನೆಗೆ ಫೋನ್ ಮಾಡಲೆ? ಆಕೆ ತನಗೆ ಕೈಕೊಟ್ಟಿರಬಹುದೆ? ಯಾತಕ್ಕೆ? ಇನ್ನೈದು ನಿಮಿಷ ಕಾಯುತ್ತೇನೆ. ಅಷ್ಟರತನಕ್ ಕಣ್ಣುಗಳನ್ನು ಮುಚ್ಚಿಯೇ ಕೂತಿರುತ್ತೇನೆ. ರೇಶ್ಮ ಬಂದು ಎಬ್ಬಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಕಣ್ಣುಗಳನ್ನು ಮುಚ್ಚಿದ.
ಎಬ್ಬಿಸಿದ್ದು ವಾಚ್ ಮನ್.
“ಇಲ್ಲಿ ಯಾಕೆ ಕೂತಿದ್ದೀರಿ, ಸಾಬ್? ನಾನು ಗೇಟುಗಳನ್ನು ಹಾಕಬೇಕು,”ಎಂದ.
“ಯಾರೋ ಒಬ್ಬರು ಬರೋದಿದೆ, ಕಾಯ್ತಾ ಇದ್ದೀನಿ,” ಎಂದು ಟಿಕೀಟುಗಳನ್ನು ತೋರಿಸಿದ ಮೇಲೆ ಆತ ದೂರ ಸರಿದ.
ಅಷ್ಟರಲ್ಲಿ ಯಾರೋ ಬಂದರು. ರೇಶ್ಮ ಇರಬಹುದೆ? ಎಂದುಕೊಂಡರೆ ಅವಳಲ್ಲ. ಅವಳಂತೆಯೇ ಇನ್ನೊಬ್ಬಳು. ಆಕೆ ನೇರವಾಗಿ ವಿನಯಚಂದ್ರನನ್ನು ಸಮೀಪಿಸಿ, “ಕ್ಷಮಿಸಿ, ನಿಮ್ಮಲ್ಲಿ ಎಕ್ಸ್ ಟ್ರಾ ಟಿಕೆಟ್ ಇರಬಹುದೇ? ಎಂದು ವಿಚಾರಿಸಿದಳು.
ಎಂದರೆ ತಾನು ಕಳ್ಳಸಂತೆಯ ಟೌಟೌ ನಂತೆ ಕಾಣಿಸುತ್ತಿರುವೆನೆ? ಬಂದ ಹುಡುಗಿ ಅಷ್ಟು ಆಕರ್ಷಕವಾಗಿ ಇಲ್ಲದಿರುತ್ತಿದ್ದರೆ ಅವನು ರೇಗಿಬಿಡುತ್ತಿದ್ದ.
“ಸಾರಿ, ನನ್ನ ಬಳಿ ಯಾವುದೇ ಎಕ್ಸ್ ಟ್ರಾ ಟಿಕೇಟಿಲ್ಲ.” ಎಂದ.
“ಹಾಗಾದ್ರೆ ಯಾಕೆ ಕೂತಿದ್ದೀರಿ ಇಲ್ಲಿ?”
“ಯಾಕಂತಂದ್ರೆ ನಾನು ಯಾರಿಗೋ ಕಾಯ್ತ ಇದ್ದೀನಿ!”
“ಅಂದರೆ ನಿಮ್ಮ ಬಳಿ ಎಕ್ಸ್ ಟ್ರಾ ಟಿಕೇಟಿದೆ!”
“ನನ್ನ ಬಳಿ ಎರಡು ಟಿಕೇಟುಗಳಿವೆ. ನಾನು ಮತ್ತು ನನ್ನ ಫ಼್ರೆಂಡ್ ಗೋಸ್ಕರ ಕೊಂಡ್ಕಂಡದ್ದು. ಅದರರ್ಥ ನನ್ನ ಬಳಿ ಎಕ್ಸ್ ಟ್ರಾ ಟಿಕೇಟಿದೆ ಅಂತಲ್ಲವಲ್ಲ! ”
“ಅಲ್ಲ!”
“ಮತ್ತೆ!”
“ನಿಮ್ಮ ಫ಼್ರೆಂಡು ಬರದೇ ಇದ್ದರೆ ಒಂದು ಟಿಕೇಟನ್ನ ನನಗೆ ಕೊಡಬಹುದೆ ಅಂತ?”
“ಬರದೇ ಇದ್ರೆ ತಾನೆ?”
“ಹೌದು”
“ಆಗ ನೋಡೋಣ”
“ಆಕೆ ಬರಲ್ಲ”
“ಆಕೆ ಬರಲ್ಲ? ನಿಮಗೆ ಹೇಗೆ ಗೊತ್ತು?”
“ಹೇಗೆಂದ್ರೆ ಆಕೆ ನನ್ನ ಅಕ್ಕ. ನನ್ನ ಹೆಸರು ಸುನಯನ!”
“ಸುನಯನ?”
“ಸುನ್ ಅಂತ್ಲೂ ಕರೀತಾರೆ. ನೀವು ವಿನಯಚಂದ್ರ ಅಲ್ವೆ?”
“ಹೇಗೆ ಗೊತ್ತಾಯ್ತು?”
“ಮುಖ ನೋಡಿದ್ರೆ ಗೊತ್ತಾಗಲ್ವೆ?”
“ಮುಖ ನೋಡಿದ್ರೆ ಹೇಗೆ ಗೊತ್ತಾಗತ್ತೆ?”
“ಅಕ್ಕ ವಿವರಿಸಿದ್ಳು.”
“ಆಕೆ ಯಾಕೆ ಬರಲ್ಲ?”
“ಅದೊಂದು ದೊಡ್ಡ ಕತೆ!”
“ಗಾಡ್!”
“ಯಾಕೆ?”
“ಈ ನೆವ ಕೇಳಿ ಕೇಳಿ ಸಾಕಾಗಿದೆ!”
“ಊಟ ಮಾಡೋವಾಗ ಹೇಳ್ತೇನೆ – ಸಂಕ್ಷಿಪ್ತವಾಗಿ”
“ಊಟ?”
“ಪಿಕ್ಚರ್ ನೋಡಿದ ಮೇಲೆ ಊಟ ಮಾಡ್ತೀವಲ್ಲ, ಆವಾಗ. ಈಗ ಸದ್ಯ ಏಳಿ, ಆಗ್ಲೆ ಸಾಕಷ್ಟು ತಡವಾಗಿದೆ.”
ಎಂದು ಸುನಯನ ಎಬ್ಬಿಸಿದಳು.
ಬೆಳಕಿನಿಂದ ಕತ್ತಲೆಗೆ ನುಗ್ಗಿದಾಗಿನ ದಿಕ್ಪಲ್ಲಟದಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ಅಂತೂ ತಮ್ಮ ಸೀಟುಗಳಲ್ಲಿ ಬಂದು ಕುಳಿತರು. ವಿನಯಚಂದ್ರ ಕಾರ್ನರ್ ಸೀಟುಗಳಲ್ಲಿ ಬಂದು ಕುಳಿತರು. ವಿನಯಚಂದ್ರ ಕಾರ್ನರ್ ಸೀಟುಗಳನ್ನು – ಅದೂ ಹಿಂದಿನ ರೋವಿನಲ್ಲಿ – ಕಾಯ್ದಿರಿಸಿದ್ದ. ರೇಶ್ಮಳ ಜತೆ ಮಾತಾಡೋದಕ್ಕೆ ಅನುಕೂಲವಾಗುತ್ತದೆ ಅಂತ. ಈಗ ರೇಶ್ಮಳ ಸ್ಥಾನವನ್ನು ಸುನಯನ ಅಲಂಕರಿಸಿದ್ದಾಳೆ. ಕತ್ತಲಲ್ಲಿ ಅವಳ ಕೈಹಿಡಿದು ಅವಳ ಮೃದುತ್ವವನ್ನು ಅನುಭವಿಸಿಯೂ ಆಗಿದೆ. ರೇಶ್ಮ, ಸುನಯನ – ಸಿನಿಮಾದ ಕತ್ತಲಿನಲ್ಲಿ ಏನು ವ್ಯತ್ಯಾಸ?
“ಈ ಫ಼ಿಲ್ಮ್ ನ ಹೆಸರೇನು?” ಸುನಯನ ಅವನ ಕಿವಿಯಲ್ಲಿ ಪಿಸುಗಟ್ಟಿ ವಿಚಾರಿಸಿದಳು.
“ಬ್ಲೇಮಿಟಾನ್ ರಿಯೋ!”
“ಬ್ಲೇಮಿಟಾನ್ ವಾಟ್?”
ಬ್ಲೇಮಿಟಾನ್ ವಾಟಲ್ಲ, ರಿಯೋ, ರಿಯೋ! ಯಾಕೆ ಹೊರಗೆ ಆನೆ ಗಾತ್ರದ ಪೋಸ್ಟರ್ ನೋಡಿಲ್ವೆ?”
“ನೋಡೋದಕ್ಕೆ ಎಲ್ಲಿದೆ ಸಮಯ? ದಾರೀಲಿ ಆಟೋದ ಟಯರು ಪಂಕ್ಚರಾಯಿತು. ನಂತರ ನಿಮ್ಮನ್ನ ಕನ್ ವಿನ್ಸ್ ಮಾಡೋದಕ್ಕೇ ಕಷ್ಟವಾಯಿತಲ್ಲ!”
ಸುನಯನ ಯಾವುದೋ ಹಿತಕರವಾದ ಸೆಂಟು ಧರಿಸಿದ್ದಾಳೆ. ಪರದೆಯ ಮೇಲಿನ ಬೆಳಕಿನಲ್ಲಿ ಅವಳ ಮುಖವನ್ನು ಅಧ್ಯಯನ ಮಾಡಿದ. ಯಾವನೇ ಬೇಕೂಫ಼ನಾದರೂ ಜತೆಯಲ್ಲಿ ಕರೆದೊಯ್ಯಲು ಹೆಮ್ಮೆಪಡುವಂಥ ರೂಪ.
“ನೀವೀ ಫಿಲಿಂ ಮೊದಲು ನೋಡಿದ್ದೀರ? ಅಥ್ವ ಇದೇ ಮೊದಲ ಸಲ?” ಸುನಯನಳ ಪ್ರಶ್ನೆ.
“ಇದೇ ಮೊದಲ ಸಲ! ಯಾಕೆ?”
“ಸುಮ್ಮನೆ ಕೇಳಿದೆ.”
ಮೌನ. ಪರದೆಯ ಮೇಲೆ ಮಿಯಾಮಿ ಬೀಚಿನಂಥ ಬೀಚು, ಸೊಂಟ ಮಾತ್ರ ಮುಚ್ಚಿ ಉಳಿದ ಕಡೆ ಬೆತ್ತಲಾದ ಹೆಣ್ಣುಗಳು, ಗಂಡುಗಳು.
“ಈ ಫ಼ಿಲಮ್ಮನ್ನೆ ಯಾಕೆ ಆರಿಸಿದಿರಿ?”
ಸುನಯನಳ ಪ್ರಶ್ನೆ. ನಾನು ಫಿಲಂ ಆರಿಸಲಿಲ್ಲ. ಫ಼ಿಲಂ ನನ್ನನ್ನ ಆರಿಸಿತು ಎನ್ನಲೆ? ಯಾಕೆಂದರೆ, ಉಳಿದೆಲ್ಲವೂ ಅದೇ ರೀತಿ ನಡೆಯುವ ಹಾಗೆ ಕಾಣಿಸ್ತ ಇದೆ.
“ವಿಶೇಷ ಕಾರಣವೇನೂ ಇಲ್ಲ.”
“ಯೂ ಆರ್ ಎಲೂಫ಼್!”
“ವ್ಹಾಟ್?”
“ಯೂ ಆರ್ ಎಲೂಫ಼್! A, L, O, O, F ಅಂತ. ನನ್ನ ಜತೆ ಫ಼ಿಲಂ ನೋಡೋದು ಬೇಸರವೇ?”
“ನೋ! ನೋ! ನೋ! ಬಟ್ ಥಾಂಕ್ಯೂ! ಥಾಂಕ್ಯೂ ವೆರಿಮಚ್!
ಥಾಂಕ್ಯೂ ಅಂದುದು ಯಾಕೆಂದು ತಿಳಿಯದೆ ಸುನಯನ ತುಸು ಗೊಂದಲದಿಂದ ವಿನಯಚಂದ್ರನ ಮುಖ ನೋಡಿದಳು. ಮಬ್ಬುಗತ್ತಲಿನಲ್ಲಿ ಅವಳಿಗೆ ಏನೊಂದೂ ತಿಳಿಯಲಿಲ್ಲ. ಇತ್ತ ವಿನಯಚಂದ್ರನಿಗೆ ಮಾತ್ರ ಒಂದು ಒಗಟು ಪರಿಹಾರವಾಗಿತ್ತು. ಹೆರಾಕ್ಲಿಟಸ್ ನ ಪುಸ್ತಕದಲ್ಲಿ ಬರೆದಿದ್ದ A LOOF ಅನ್ನೋ ಒಗಟು. A FOOL ಅನ್ನೋದರ ತಿರುಗ ಮುರುಗ~
“ಯಸ್, ಯಸ್, ಐ ಯಾಮ್ ಅಲೂಫ಼್ ರಿಯಲಿ, ಬಟ್ ಐ ಕಾಂಟ್ ಹೆಲ್ಪ್ ಇಟ್!” ಎಂದ.
“ಐ ಯಾಮ್ ಸಾರಿ,” ಎಂದಳು ಅವಳು. ನಂತರ ತನ್ನ ತೋಳನ್ನು ಅವನ ಭುಜದ ಮೇಲೆ ಹಾಕಿ, “ರಿಯಲಿ” ಎಂದು ಸೇರಿಸಿದಳು. ವಿನಯಚಂದ್ರ ಅವಳ ಕೈಯನ್ನು ತೆಗೆದುಕೊಂಡು ಚುಂಬಿಸಿದ. ಅವಳು, “ನೋಡಿ! ನೋಡಿ! ಅಲ್ಲೇನು ನಡೀತಾ ಇದೆ! ” ಎಂದು ಅವನ ಲಕ್ಷ್ಮವನ್ನು ಪರದೆ ಕಡೆ ಸರಿಸುವವಳಂತೆ ನಟಿಸಿದಳು.
ಎ ಫ಼ೂಲ್! ಹೆರಾಕ್ಲಿಟಸ್, ಸಾಕ್ರೆಟಿಸ್, ಬುದ್ಧ, ಯೇಸು, ವಿನಯಚಂದ್ರ! ಕೆಲವರಿಗೆ ಬೋಧಿವಕ್ಷದ ಕೆಳಗೂ, ಕೆಲವರಿಗೆ ಬೀದಿ ಬದಿಯಲ್ಲೂ, ಇನ್ನು ಕೆಲವರಿಗೆ ಸಿನಿಮಾ ಗೃಹದಲ್ಲೂ ಜ್ಞಾನೋದಯವಾಗುತ್ತದೆ. ಪ್ರತಿಯೊಂದು ವಸ್ತುವೂ ಅದರ ಋತುವಿನಲ್ಲಿ ಕಾಣಿಸಿಕೊಳ್ಳುತ್ತದೆ, ಕಸ್ಟರ್ಡ್ ಆಪಲ್ ನ ಋತುವಿನಲ್ಲಿ ಕಸ್ಟರ್ಡ್ ಆಪಲೂ, ಆನನಾಸಿನ ಋತುವಿನಲ್ಲಿ ಅನನಾಸೂ, ಮಾವಿನ ಹಣ್ಣಿನ ಋತುವಿನಲ್ಲಿ ಮಾವಿನ ಹಣ್ಣೂ ಕಾಣಿಸಿಕೊಳ್ಳುವುದು. ಹಾಗೂ ಪ್ರತಿಯೊಂದು ಸಂಗತಿಗೂ ಅದರದೇ ಅದಂಥ ಲಯವೂ ಇದೆ. ಕುದುರೆಗೆ ಕುದುರೆಯ ಲಯ ಹಾಗೂ ಕತ್ತೆಗೆ ಕತ್ತೆಯ ಲಯ. ಅದ್ದರಿಂದಲೆ ಕುದುರೆಗಳನ್ನು ಕುದುರೆಯ ಲಾಯದಲ್ಲಿಯೂ, ಕತ್ತೆಗಳನ್ನು ಕತ್ತೆಯ ಲಾಯದಲ್ಲಿಯೂ ಕೂಡಿಹಾಕುವುದು!
ವಿನಯಚಂದ್ರನಿಗೆ ನಗು ಬಂತು. ನಕ್ಕ.
ಅವನು ಹಾಗೆ ನಗುವುದಕ್ಕೆ ಕಾರಣವೇನೆಂದು ತಿಳಿಯದೆ ಅವಳು ಗೊಂದಲದಲ್ಲಿ ಬಿದ್ದಂತೆ ತೋರಿತು. ಪುನಃ ತನ್ನ ತೋಳನ್ನು ಅವನ ಹೆಗಲ ಮೇಲಿರಿಸಿದಳು. ಮಧ್ಯಂತರ ಬಹಳ ಬೇಗನೆ ಬಂತು. ಮಧ್ಯಂತರದ ಬೆಳಕು ಸಕಲರ ಮೇಲೂ ಬಿದ್ದಾಗ ಈ ಸುನಯನ ಎಂಬ ವ್ಯಕ್ತಿಯ ಜತೆ ಹೇಗೆ ವ್ಯವಹಾರಿಸಬೇಕೆನ್ನುವುದು ಅವನಿಗೆ ಸ್ಪಷ್ಟವಾಗಲಿಲ್ಲ.
“ಹೊರಗೆ ಹೋಗೋಣವೆ? ಟೀ ಕಾಫ಼ಿ ಕುಡೀಬಹುದು.” ಎಂದ.
“ನೀವು ಹೋಗಿಬನ್ನಿ. ನಾನಿಲ್ಲೆ ಇರುತ್ತೇನೆ. ಬಹುಳ ರಶ್ಶು.”
ಅದರಂತೆ ವಿನಯಚಂದ್ರ ಲೌಂಜಿಗೆ ಬಂದು ಒಂದು ಎಸ್ಪ್ರೆಸ್ಸೋ ಕಾಫ಼ಿ ಸಂಪಾದಿಸಿಕೊಂಡು ಕುಡಿದ. ಹಾಗೆಯೆ ಒಂದು ಸಿಗರೇಟೂ ಸೇದಿದ್ದಾಯಿತು. ಈಗಲೆ ಇಲ್ಲಿಂದ ಹೊರಟುಹೋದರೆ ಹೇಗೆ? ರೇಶ್ಮಳ ಕಾರ್ಯಕ್ಕೆ ತಕ್ಕ ಪ್ರತೀಕಾರ! ಆದರೆ ಪ್ರತೀಕಾರ ಮಾತ್ರ ಯಾರಮೇಲೆ? ಒಂದು ವೇಳೆ ರೇಶ್ಮಳನ್ನು ಭೇಟಿಯಾಗುವುದಕ್ಕೆ ಮೊದಲು ಸುನಯನ ತನ್ನ ಕಣ್ಣಿಗೆ ಬಿದ್ದಿರುತ್ತಿದ್ದರೆ? ಹಲವು ಆಕಸ್ಮಿಕಗಳಲ್ಲಿ ಆಯ್ಕೆಯ ಸ್ವಾತಂತ್ರ್ಯವೆಷ್ಟು? ಒಂದೋ ಸನ್ಯಾಸಿ ಯಾಗುತ್ತೇನೆ, ಅಥವಾ ಹೆಣ್ಣು ಗಳ ಹಿಂದೆ ಬೀಳುತ್ತೇನೆ. ಈಗ ಸುನಯನಳ ಪ್ರವೇಶದೊಂದಿಗೆ ಈ ಮಾತಿನ ಬಹುವಚನಕ್ಕೊಂದು ಅರ್ಥ ಬಂದಿದೆ! ಸರಿ ಎಂದುಕೊಂಡು ಒಂದು ಜಾಯ್ ಐಸ್ ಕ್ರೀಮು ಖರೀದಿಸಿಕೊಂಡು ಒಳಗೆ ಬಂದ. ಸುನಯನ ತನ್ನನೇ ಪ್ರತೀಕ್ಷಿಸುವಂತೆ ಕಾಣಿಸಿತು. ಅವಳ ಕೈಯಲ್ಲಿ ಐಸ್ ಕ್ರೀಮಿಟ್ಟ.
“ಇದೇನಿದು?”
“ಎಂಜಾಯ್!”
“ಆಹ್! ಜಾಯ್ ಐಸ್ ಕ್ರೀಮ್! ಇದು ನನಗೆ ಇಷ್ಟಾಂತ ನಿಮಗೆ ಹೇಗೆ ಗೊತ್ತಾಯಿತು.”
“ಚಂದದ ಹುಡುಗಿಯರು ಇಷ್ಟಪಡುವಂಥ ಸಂಗತಿ ಇದು!”
“ವಾರೆ ವ್ಹಾ!”
“ಎರಡನೆ ಭಾಗ ನಿರ್ವಿಘ್ನವಾಗಿ ಮುಗಿಯುತು. ಹೊರಬಂದಾಗ ಊಟದ ಸಮಯ.
“ಊಟಕ್ಕೆ ಎಲ್ಲಿಗೆ ಹೋಗೋಣ? ನಿಮಗಿಷ್ಟವಾದ ಯಾವುದಾದ್ರೂ ರೆಸ್ಟೊರಾಂಟಿದ್ಯೆ?” ಎಂದು ಆಕೇನ ಕೇಳಿದ.
“ನೀವೇ ಸಿಲೆಕ್ಟ್ ಮಾಡಿ!” ಎಂದಳು.
“ಪಾಮ್ ಗ್ರೋವ್ ಅಂತ ಒಂದು ಸ್ಥಳವಿದೆ, ಹೋಗೋಣವೆ?”
“ವೈ ನಾಟ್!”
ಯಸ್! ವೈ ನಾಟ್? ಹಾಗಂದುಕೊಂಡು ಒಂದು ಆಟೋ ಕರೆದ. ಪಾಮ್ ಗ್ರೂಪ್ ಗೆ ಕರಕೊಂಡು ಹೋಗುವಂತೆ ಹೇಳಿದ. ಆತ ಮೀಟರಿನ ಮೇಲೆ ಬರೋಲ್ಲ. ಐದು ರೂಪಾಯಿ ಕೊಡಿ ಎಂದದ್ದಕ್ಕೆ ಎಷ್ಟಾದರಾಗಲಿ ಎಂದು ಹೇಳಿದ.
ಪಾಮ್ ಗ್ರೂವಿಗೆ ಆ ಹೆಸರು ಯಾಕೆಂದರೆ ಅಲ್ಲೆರಡು ತಾಳೆಮರಗಳಿದ್ದುವು-ಅದಕ್ಕೆ. ತೋಟದ ಒಂದು ಮೂಲೆಯಲ್ಲಿ ಹಾಕಿದ್ದ ಟೇಬಲಿನ ಆಚೀಚೆ ಅವರು ಕುಳಿತುಕೊಂಡರು. ಊಟಕ್ಕೆ ಆರ್ಡರ್ ಮಾಡಿದ್ದಾಯಿತು.
“ಡೂ ಯೂ ಮೈಂಡ್ ಈಫ಼್ ಐ…..”
“ನಾಟೆಟಾಲ್?”
ವೈಟರನ್ನ ಕರೆದು ತನಗೊಂದು ಲಾರ್ಜ್ ವಿಸ್ಕಿ, ಈಯಮ್ಮನಿಗೊಂದು ಯಾಪಲ್ ಜ್ಯೂಸ್ ತರುವಂತೆ ಹೇಳಿದ.
“ನಾಟೆಟಾಲ್!”
ವೈಟರನ್ನ ಕರೆದು ತನಗೊಂದು ಲಾರ್ಜ್ ವಿಸ್ಕಿ, ಈಯಮ್ಮನಿಗೊಂದು ಯಾಪಲ್ ಜ್ಯೂಸ್ ತರುವಂತೆ ಹೇಳಿದ.
“ಮೇ ಐ ಸ್ಮೋಕ್?”
“ಪ್ಲೀಸ್….”
“ಥ್ಯಾಂಕ್ಯೂ ಸುನಯನ….”
“ಸುನ್ ಅಂದ್ರೆ ಸಾಕು- ಯಾಕಂದರೆ ನನ್ನ ಹೆಸರು ತುಸು ದೊಡ್ಡದಿದೆ. ಹಾಗನಿಸಲ್ವೆ ನಿಮಗೆ?”
ಓಕೇ, ಸುನ್! ಈಗ ಆ ದೊಡ್ಡ ಕತೆಯೇನಿದ್ಯೊ ಅದನ್ನ ಸ್ವಲ್ಪ ಸಂಕ್ಷಿಪ್ತವಾಗಿಯಾದರೂ ತಿಳಿಸಬಹುದೆ? ಬರೀ ಸಾರಂಶ ಹೇಳಿದ್ರೂ ಸಾಕು – ದಿ ಸ್ಟೋರೀ ಲ್ಯಾನ್.”
ಸುನಯನ ಸೀನಿದಳು. ಕೈಬ್ಯಾಗಿನಿಂದ ಕರ್ಚೀಫ಼್ ತೆಗೆದು ಮೂಗು ಕೆಂಪಾಗುವಷ್ಟು ಒರೆಸಿದಳು. ಎಲ್ಲದಕ್ಕೂ ತಯಾರಿ, ಸಿದ್ಧತೆ ಬೇಕು. ಈ ಸ್ಟೋರೀಗೆ ಈ ಸಿದ್ಧತೆ ಎಂದುಕೊಂಡ ವಿನಯಚಂದ್ರ.
“ಇದು ಕಾನ್ಫ಼ಿಡೆನ್ಶಲ್.” ಎಂದಳು ಸುನಯನ.
“ಐ ನೋ.” ಎಂದ ವಿನಯಚಂದ್ರ.
“ರೇಶ್ಮಗೆ ತಲೆನೋವು.”
“ಇಷ್ಟೇನೇ?”
“ಇಷ್ಟೇ ಅಲ್ಲ!”
“ಜ್ವರ, ನೆಗಡಿ, ಹಲ್ಲುನೋವು….”
“ಇದು ತಮಾಷೆ ಮಾಡೋ ವಿಷ್ಯ ಅಲ್ಲ, ವಿನ್!”
“ಇಲ್ಲ, ದಯವಿಟ್ಟು ಹೇಳಿ”
“ರೇಶ್ಮ ಎಂದಾದ್ರೂ ಡೇವಿಡ್ ನ ಕುರಿತು ಹೇಳಿದ್ಳೆ?”
“ಡೇವಿಡ್?”
“ಡಾಕ್ಟರ್ ಡೇವಿಡ್ ಅಹುಜ.”
“ಏನಾಯಿತು ಆತನಿಗೆ?”
“ಆತನಿಗೇನೂ ಆಗಿಲ್ಲ!”
“ಮತ್ತೆ?”
“ನಾ ಹೇಳೋದನ್ನ ಪೂರ್ತಾ ಕೇಳಿ, ಇಷ್ಟು ತಾಳ್ಮೆಗೆಟ್ಟರೆ ಹೇಗೆ?”
“ಆಯ್ತು, ಸಸ್ಪೆನ್ಸ್ ಕ್ರಿಯೇಟ್ ಮಾಡದೆ ಹೇಳಿ?”
ಆದರೆ, ಸಸ್ಪೆನ್ಸ್ ಕ್ರಿಯೇಟ್ ಆಗಲೇಬೇಕೆಂದು ವಿಧಿಯ ನಿಯಮವಿದ್ದ ಹಾಗೆ ಪೈಟರ್ ಡ್ರಿಂಕ್ಸ್ ತಂದು ಅವರ ಮುಂದಿರಿಸಿ, “ಮಂಚ್ ಮಾಡೋಕೆ ಏನಾದ್ರೂ ಬೇಕೆ” ಎಂದು ಕೇಳಿದ. ವಿನಯಚಂದ್ರ ಅಭಿಪ್ರಾಯಕ್ಕಾಗಿ ಸುನಯನಳ ಮುಖ ನೋಡಿದ. ಈ ಕುರಿತು ಅವಳಿಗೇನೂ ಅಭಿಪ್ರಾಯ ವಿದ್ದಂತೆ ಕಾಣಿಸಲಿಲ್ಲ.
“ಏನೇನಿದೆ?”
ವೈಟರ್ ದೊಡ್ಡದೊಂದು ಲಿಸ್ಟ್ ಹೇಳಿದ.
“ಚಿಪ್ಸ್ ತಗೊಂಡ್ಬನ್ನಿ!”
ವೈಟರ್ ವಿಧಿವತ್ತಾಗಿ ನಮಸ್ಕರಿಸಿ ಹೊರಟುಹೋದ ಮೇಲೆ ಸುನಯನ ತಾನು ಹೇಳಹೊರಟಿದ್ದ ಸಂಗತಿಯನ್ನು ವಿವರಿಸಿದಳು. ಆಕೆ ರೇಶ್ಮ ಮದುವೆ ಸಂಗತಿಗೆ ಬಂದಿದ್ದಾಗ ಅವನ ಲಾರ್ಜ್ ಮುಗಿದಿತ್ತು. “ಬೇಕಿದ್ರೆ ಇನ್ನೊಂದು ತಗೊಳ್ಳಿ,”ಎಂದು ಸುನಯನ ಪ್ರೋತ್ಸಾಹಿಸಿದಳು. ಚಿಪ್ಸ್ ತಂದ ವೈಟರನಿಗೆ ವಿಸ್ಕಿ ರಿಪೀಟ್ ಆರ್ಡರ್ ಕೊಟ್ಟು ಕಳಿಸಿದ. ನಂತರ ಸುನಯನ ಕಡೆ ತಿರುಗಿ ಕೇಳಿದ.
“ಆದರೆ, ಒಂದು ವಿಷ್ಯ ನನಗಿನ್ನೂ ಅರ್ಥ ಆಗ್ತ ಇಲ್ಲ. ತಾಯೀನ ರೇಶ್ಮ ಯಾಕೆ ಮದರಿನ್ಲಾ ಅಂತ ಇಂಟ್ರೊಡ್ಯೂಸ್ ಮಾಡಿದ್ಲು?”
“ನಮ್ಮಮ್ಮನಿಗೆ ಹೀಯರಿಂಗ್ ಏಡ್ ಇಲ್ದೆ ಕಿವಿ ಸರಿಯಾಗಿ ಕೇಳಿಸೋದಿಲ್ಲ!”
“ಇದೊಂದೇ ಕಾರಣವೆ.”
“ಅಲ್ಲ!”
“ಮತ್ತೆ?”
“ಯಾತಕ್ಕಿರಬಹುದು ನೀವೇ ಊಹಿಸಿಕೊಳ್ಳಿ!”
“ಊಹಿಸಿಕೊಳ್ಳಲಾರೆ ಅಥವಾ ಅವತ್ತು ಊಹಿಸಿಕೊಳ್ಳಲಾರದ ಸ್ಥಿತಿ ಯಲ್ಲಿದ್ದೆ. ಯಾಕಂದ್ರೆ ನಾಉ ಅಲೂಫ಼್ ಆಗಿದ್ದೆ!”
“ಅಲೂಫ಼್?”
“ಯಸ್ ಹೆರಾಕ್ಲಿಟಸ್ ನ ಹಾಗೆ!”
“ಹೆರಾಕ್ಲಿಟಸ್? ಯಾರವನು?”
“ಕ್ರಿಸ್ತ ಪೂರ್ವದ ಒಬ್ಬ ಗ್ರೀಕ್ ತತ್ವ ಜ್ಞಾನಿ. ಅವನನ್ನು ಜನ ಅಲೂಫ಼್ ಅಂತಿದ್ರು.”
“ನೀವು ಹೇಳೋದು ನನಗೆ ಅರ್ಥವಾಗ್ತ ಇಲ್ಲ!”
“ಅರ್ಥವಾಗ್ತದೆ, ಈ ದಿನ ಅಲ್ಲದಿದ್ದರೆ ನಾಳೆ, ನಾಡಿದು, ಯಾವುದೋ ಒಂದು ದಿನ. ಪ್ರತಿಯೊಂದ ವಸ್ತುವಿಗೂ ಅದರ ಪ್ರತ್ಯೇಕ ಋತುವಿದೆ. ಈಗ ಊಟ ತರೋದಕ್ಕೆ ವೈಟರಿಗೆ ಹೇಳೋಣವೆ?”
“ಹೇಳಿ!”
ಊಟ ಮುಗಿದಾಗ ಗಂಟೆ ಹತ್ತೂವರೆಯಾಗಿತ್ತು. ಆಟೋ ಮಾಡಿಕೊಂಡು ಕೈಲಾಸ್ ಅಪಾರ್ಟ್ ಮೆಂಟ್ ಸೇರೋವರೆಗೆ ಹೆಚ್ಚು ಮಾತುಕತ ನಡೆಯಲಿಲ್ಲ. ಅಪಾರ್ಟ್ ಮೆಂಟ್ ನ ಮುಂದೆ ಆಟೋ ನಿಂತಾಗ ಸುನಯನ ವಿನಯಚಂದ್ರನ ಕಡೆ ತಿರುಗಿ ಕೇಳಿದಳು:
“ನನ್ನ ಜತೆ ಬೇಸರವಾಯಿತೆ?”
“ಬೇಸರವೇ! ಯಾತಕ್ಕೆ?”
“ನಿಮ್ಮ ಮೇಲೆ ಹೀಗೆ ಇಂಪೋಸ್ ಮಾಡಿಕೊಳ್ಳೋದು ನನಗೆ ಇಷ್ಟವಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ!”
“ಸುನಯನ, ಸುನ್! ನಿಜಕ್ಕೂ ಹೇಳಬೇಕೆಂದರೆ, ನಾನೇ ನಿಮ್ಮ ಕ್ಷಮೆ ಕೇಳಬೇಕು. ಡಿಫ಼ಿಕಲ್ಟಾಗಿ ವರ್ತಿಸಿದವನು ನಾನು.”
“ಆಯ್ತು, ಈ ಮಧ್ಯ ರಾತ್ರೀಲಿ ಜಗಳ ಬೇಡ. ಅಕ್ಕನಿಗೇನಾದರೂ ಮೆಸೇಜ್ ಕೊಡೋದಿದೆಯೆ?”
“ಇಲ್ಲ… ಆದರೆ, ನನ್ನ ಕಾಂಪ್ಲಿಮೆಂಟ್ಸ್ ಹೇಳಿ”
“ಹೇಳ್ತೇನೆ. ವಿನ್…. ನೀವು ನನ್ನ ಕ್ಷಮಿಸಿದ್ದೀರಂತ ನನಗೆ ಖಚಿತವಾಗ್ಬೇಕಾದರೆ ಒಂದು ಕೆಲಸ ಮಾಡಬೇಕು.”
“ಏನು?”
“ನಾಳೆ ನನಗೆ ಫೋನ್ ಮಾಡುವಿರ?”
“ಓಕೇ. ಗುಡ್ ನೈಟ್!”
“ನೀವು ಯಾತಕ್ಕೆ ಆಟೋದಿಂದ ಇಳೀತಾ ಇಲ್ಲ.”
“ಯಾತಕ್ಕಂದರೆ ನಾನೀಗ ಇಲ್ಲಿಲ್ಲ! ಮುಂಬಯಿಯೊಳಗೆ ಇದ್ದೀನಿ-ಅದಕ್ಕೇ!”
ಹೀಗಂದು ಗಾಡಿಯವನಿಗೆ ವಾಪಸು ತಿರುಗಿಸುವಂತೆ ಹೇಳಿದ. ಸ್ವಲ್ಪ ದೂರ ಸಾಗಿದೊಡನೆ ಒಂದು ವೈನ್ ಶಾಪ್ ಕಣ್ಣಿಗೆ ಬಿತ್ತು. ಗಂಟೆ ಹನ್ನೊಂದಾಗುತ್ತಿದ್ದಂತೆ ಶಟರ್ ಎಳೆಯುತ್ತಿದ್ದುದು ಕಾಣಿಸಿತು. ಆಟೋ ನಿಲ್ಲಿಸಿ, ಬಾಗಿಲ ಮುಚ್ಚುತ್ತಿದ್ದ ವನಿಗೆ ಹೇಳಿದ: “ಅರ್ಧ ಬಾಟಲಿ ವಿಸ್ಕಿ ಯಾವುದಾದರೂ ಸರಿ!”
ಅಂಗಡಿಯವನು ಇವನನ್ನು ಪರೀಕ್ಷಿಸುವವನಂತೆ ನೋಡಿದ. ಪೋಲೀಸ ನಿರಬಹುದೇ ಎಂದು ಸಂದೇಹಿಸುತ್ತಿದ್ದಾನೆಯೆ?
ಟೇಮ್ ಹೋಗಯಾ ಸಾಬ್,” ಎಂದ ಆತ ರಾಗವಾಗಿ.
“ಎಲ್ಲಯ್ಯ ಟೇಮ್ ಹೋಗಯಾ? ನಿನ್ನ ವಾಚು ಮುಂದಿದೆ. ಹನ್ನೊಂದಕ್ಕೆ ಇನ್ನೂ ಎರಡು ನಿಮಿಷ ಇದೆ!”
“ನಹೀಂ ಸಾಬ್. ಪೋಲೀಸಿನವರು ಕಂಡರೆ ಜುಲ್ಮಾನೆ ಹಾಕ್ತಾರೆ……”
ಎಲ್ಲಿದ್ದಾರೆ ಪೋಲೀಸಿನವರು? ನೀ ಸುಮ್ಮನೆ ಒಂದರ್ಧ ಬಾಟಲಿ ಕೊಡು…..”
“ಒಂದೈದು ರೂಪಾಯಿ ಜಾಸ್ತಿಯಾಗತ್ತೆ…..”
“ಏನಾದರಾಗಲಿ!”
ಆತ ಹೇಳಿದ ಹಣ ತೆತ್ತು ಅರ್ಧ ಬಾಟಲಿ ವಿಸ್ಕಿಯನ್ನು ಸಂಪಾದಿಸಿ ಆಟೋಕ್ಕೆ ಮರಳಿ, ತಲುಪಿಸಬೇಕಾದ ವಿಳಾಸ ಹೇಳಿದ.
*****