ಬಟ್ಟಲು ಗಂಗಳ ಚಲುವೆ
ಕಣ್ಣಸಿಪ್ಪೆಯ ಕೆಳಗೆ
ವರ್ತಲದ ಛಾಯೆ
ಕೆನ್ನೆ ಗಂಟಿದ ಅಶ್ರುಧಾರೆ
ಮೇಲೆ ಜರತಾರಿ ಸೀರೆ
ಮಕಮಲ್ಲಿನ ಬಟ್ಟೆ
ವಡ್ಯಾಣ ಒಡವೆ
ಹುಸಿ ನಗೆಯ ಮುಖವಾಡ
ಹಮ್ಮು ಬಿಮ್ಮಿನ ಕೈವಾಡ
ಒಲುಮೆ ರಾಗ ಮೈದುಂಬಿ
ಉಕ್ಕಿ ಉರಿಸಿದ ಬಗೆ
ಬರಿಯ ಬೊಗಳೆ
ತಟ್ಟಿದರೆ ಸಾಕು
ಬಿದ್ದು ಹೋಗುವ ಭಯ
ಮತ್ತೆ ತುಟಿಯ ಮೆತ್ತಿದ ಬಣ್ಣಕ್ಕೂ
ಉಗುರ ಬಣ್ಣಕ್ಕೂ ತಾಳೆಯಾಗುವುದೇ ಇಲ್ಲ
ಆದರೂ, ಪೋಸು ಕೂಡಲೇ ಬೇಕು
ನಟಿಸಬೇಕು
ಪಾತ್ರಗಳ ಸರಿಯಾಗಿ
ಪೂರೈಸಬೇಕು
ಮಗಳೂ, ಸೊಸೆ
ಪತ್ನಿ, ಅತ್ತೆ ಮತ್ತು ಮಾತೆ
ವೈವಿಧ್ಯತೆಗೆ ಚ್ಯುತಿ ಬಾರದಂತೆ
ಚಪ್ಪಲಿಯಡಿಯ ಚೇಳಿನಂತೆ