ನನ್ನೆಲ್ಲಾ ಪದ್ಯಗಳಲ್ಲಿರುವಂತೆ
ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ.
ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ
ಇಷ್ಟವಾಗದಿದ್ದರೆ ಬೇಡ
ಕಿಂಚಿತ್ತೂ ಕೋಪವಿಲ್ಲ.
ಆದರೆ ನಾನು ಪ್ರೀತಿಸುವ
ಗಾಳಿ, ಮೋಡ, ತಾರೆಯರನ್ನು
ನಿಂದಿಸಬೇಡ.
ಅವರ ಬಗ್ಗೆ ಯಾಕೆ ಬರೆಯುತ್ತಿ?
ಎಂದು ಕೇಳಬೇಡ.
ಅವರ ಬಗ್ಗೆ ಎಷ್ಟು ಬರೆಯುತ್ತಿ?
ಎಂದು ಕಾಡಬೇಡ.
ನಾನೀಗ-
ನನ್ನ-ನಿನ್ನ ಗೆಳೆತನದ ಬಗ್ಗೆ
ಬರೆಯುತ್ತಿದ್ದೇನೆ.
ನಿನ್ನ ಗೈರು ಹಾಜರಿಯಲ್ಲಿ
ತಾರೆ, ಸೂರ್ಯ, ಮೋಡ, ಗಾಳಿ
ನನ್ನ ಜತೆಯಲ್ಲಿದ್ದಾರೆ.
ಈ ಗೆಳೆತನ ಮೋಡಗಳ ಹಾಗೆ.
ನಾಲ್ಕು ಹನಿ ತಂಪು ಚೆಲ್ಲುತ್ತೇನೆ
ಎಂದು ಹೇಳುವುದಿಲ್ಲ.
ಚೆಲ್ಲಬೇಡ ಎಂದರೆ
ಕೇಳುವುದೂ ಇಲ್ಲ.
ಈ ಗೆಳೆತನ ಕಡಲೊಳಗಿನ
ಅಲೆಗಳ ಹಾಗೆ.
ತಡಿಯಲ್ಲಿ ನಿಂತರೆ ಓಡಿಬಂದು
ಕಾಲನ್ನು ಚುಂಬಿಸುತ್ತದೆ.
ಚುಂಬಿಸುತ್ತೇನೆ ಎಂದು ಹೇಳುವುದಿಲ್ಲ
ಚುಂಬಿಸಬೇಡ ಎಂದರೆ
ಕೇಳುವುದೂ ಇಲ್ಲ.
ಈ ಗೆಳೆತನ ಗಾಳಿಯ ಹಾಗೆ.
ಎದೆಯೊಳಗೆ ನುಗ್ಗಿ ಹೊರಬರುತ್ತದೆ.
ಹೋಗುತ್ತೇನೆ ಎಂದು ಹೇಳುವುದಿಲ್ಲ.
ಹೋಗಬೇಡ ಎಂದರೆ
ಕೇಳುವುದೂ ಇಲ್ಲ.
ಆದರೂ ಅನಿಸುತ್ತದೆ.
ಒಮ್ಮೊಮ್ಮೆ ಈ ಗೆಳೆತನ
ಧೂಳಿನ ಹಾಗೆ ಮೆತ್ತಿಕೊಳ್ಳುತ್ತದೆ.
ಕೊಡವಿದರೆ ಚದುರಿ
ಚೆಲ್ಲಿ ಹೋಗುತ್ತದೆ.
ಹೌದು
ನನ್ನ-ನಿನ್ನ ಗೆಳೆತನದಲ್ಲಿ
ಮೆಚ್ಚುವಂಥಾದ್ದು ಇದೆ
ಚುಚ್ಚುವಂಥಾದ್ದು ಇದೆ
ಕೊಚ್ಚಿ ಹರಿದು ಹೋಗುವಂಥಾದ್ದು ಇದೆ.
ಅಂದಹಾಗೆ ಗೆಳೆಯಾ…
ಈ ಗೆಳೆತನದಲ್ಲಿ ನಾನು
ಶಾಮೀಲಾಗಿದ್ದರೂ ಇದು
ಇಡಿಯಾಗಿ ನಿನ್ನನ್ನು ಕುರಿತೆ
ಬರೆದ ಕವನ. ನಿಜ,
ಬರೆ ಎಂದೇನೂ ನೀನು ಕೇಳಿಲ್ಲ.
ಆದರೆ ಬರೆಯಬೇಡ ಎಂದರೆ ನಾನು ಕೇಳುವುದೂ ಇಲ್ಲ.