ನೋಡು-
ಕಣ್ಣು ತುಟಿ ಮೂಗು
ಕೈಯಿ ಮೈಯಿ
ಏನಿಲ್ಲದಿದ್ದರೂ
ಇದ್ದ ಹಾಗೆಯೇ ಕಾಣಿಸುವ
ಚಂದ್ರನನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.
ಬೆಂಕಿಯನ್ನು ಬೆಳಕನ್ನು
ಬಣ್ಣವನ್ನು ಬೆಡಗನ್ನು
ತುಂಬಿಕೊಂಡಿರುವ,
ನಿನ್ನೊಳಗೆ
ಬೆರಗನ್ನು ಭಯವನ್ನು
ಹುಟ್ಟಿಸಿದ
ಆಕಾಶವನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.
ನೀನು ಆಟವಾಡಿದ ನೆಲ
ನಿನಗೆ ಪಾಠ ಕಲಿಸಿದ ಹೊಲ
ನಿನ್ನಲ್ಲಿ ಪ್ರೀತಿ ಹುಟ್ಟಿಸಿದ ಹುಡುಗ
ನಿನಗೆ ನೀತಿ ಬೋಧಿಸಿದ ತಂದೆ
ಎಲ್ಲರನ್ನೂ ಕಡೆಯ ಬಾರಿ
ಎಂಬಂತೆ ನೋಡಿ ಬಿಡು.
ಹೋಗು-
ಹುಲ್ಲು ಪೊದೆ ಮರಗಿಡಗಳಲ್ಲಿ
ಹುದುಗಿರುವ
ಹೂವುಗಳನ್ನು ಅರಳಿಸು
ಹಾಡುಗಳನ್ನು ಎಬ್ಬಿಸು.
ನಿನ್ನ ಅಹಂಕಾರನ್ನು
ನಿನ್ನ ಪ್ರೀತಿಯನ್ನು
ನಿನ್ನ ದುಃಖವನ್ನು
ಇಲ್ಲೆ ಈ ದಡದಲ್ಲಿರಿಸಿ
ತಣ್ಣಗೆ, ಕಡಲಿನೊಳಗೆ
ನದಿಯ ಹಾಗೆ
ನಡೆದು ಹೋಗಿಬಿಡು…..