ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು.
ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ ಕೇಳಿದಾಗ ನನ್ನ ಕಲ್ಪನೆಯ ಬೆಂಗಳೂರು ಕಣ್ಣಮುಂದೆ ನಿಲ್ಲುತ್ತಿತ್ತು. ಪಕ್ಕದ ಮನೆಯ ಗೆಳೆಯ ವೀರಣ್ಣನ ಅಕ್ಕ ಬೆಂಗಳೂರಲ್ಲಿ ನೆಲೆಸಿದ್ದ ಉದ್ಯೋಗಸ್ಥನನ್ನು ಮದುವೆಯಾಗಿದ್ದಳು. ವೀರಣ್ಣ ಒಮ್ಮೆ ಬೆಂಗಳೂರಿಗೆ ಹೋಗಿ ಬಂದಿದ್ದ. ಒಂದು ಇಡೀ ದಿನ ತಾನು ಅಲ್ಲಿ ಕಂಡ ಕಟ್ಟಡ, ಲಾಲ್‌ಬಾಕ್ಲು, ಇದಾನ್‌ಸೌದ, ಮಾಡಿ (ಮಹಡಿ) ಬಸ್ಸು, ಕಬ್ಬುನ್‌ಪಾಕ್ಲು -ಎಲ್ಲವನ್ನೂ ವಿವರ ವಿವರವಾಗಿ ಹೇಳಿದ್ದ. ಅಂದಿನಿಂದ ಮಾಯಾನಗರಿಯೊಂದು ನನ್ನ ಮನಸ್ಸಿನಲ್ಲಿ ರೂಪುಗೊಂಡಿತ್ತು. ಸಾಯುವುದಕ್ಕೆ ಮುನ್ನ ಬೆಂಗಳೂರನ್ನು ಒಮ್ಮೆ ನೋಡುವಂತೆ ಮಾಡು ಭಗವಂತಾ ಎಂದು ಮೊರೆಯಿಡುತ್ತಿದ್ದೆ. ಆಗ ನನಗೆ ಆರು ವರ್ಷ. ದೇವರನ್ನು ನಂಬುವಂಥ ವಯಸ್ಸು.
ಎರಡು: ನಾನು ಚಿಕ್ಕವನಿದ್ದಾಗ ನನ್ನ ಅಣ್ಣ-ದಾಯಾದಿ ಚಿಕ್ಕಪ್ಪಂದಿರು ರಾತ್ರಿ ವೇಳೆ ಮೂರು ಮೈಲು ನಡೆದು ಸಿನಿಮಾ ನೋಡಿ ಬರುತ್ತಿದ್ದರು. ಬರುವಾಗ ನೋಡಿದ ಚಿತ್ರದ ಹಾಡಿನ ಪುಸ್ತಕವನ್ನೂ ತರುತ್ತಿದ್ದರು. ಬೆಳಿಗ್ಗೆ ಎದ್ದು ಹೊಲದ ಕಡೆ ಸಿನಿಮಾ ಹಾಡುಗಳನ್ನು ಗಟ್ಟಿಯಾಗಿ ಹಾಡುತ್ತಲೋ, ಸಿಳ್ಳೆ ಹಾಕುತ್ತಾ ನುಡಿಸುತ್ತಲೋ ಹೋಗುತ್ತಿದ್ದರು. ತೊಲೆಯ ಸಂದು ಅಥವಾ ವಾಡೆಯ ಸಂದಿಯಲ್ಲಿ ಜೋಪಾನವಾಗಿ ತುರುಕಿರುತ್ತಿದ್ದ ಹಾಡಿನ ಪುಸ್ತಕವನ್ನು ಬಿಡಿಸಿ ನೋಡುವುದೆಂದರೆ ಎಂಥ ಸುಖ! ಏನು ಆನಂದ! ಚಿತ್ರದ ನಿರ್ಮಾಣ ಸಂಸ್ಥೆಯಿಂದ ಹಿಡಿದು ಕಥಾ ಸಾರಾಂಶ, ಹಾಡುಗಳನ್ನು ಬರೆದವರ, ಹಾಡಿದವರ ಹೆಸರು, ತಾರಾಗಣ, ಪಾರಿಭಾಷಿಕ ವರ್ಗ ಎಲ್ಲವನ್ನೂ ಓದಿ ಮುಗಿಸುತ್ತಿದ್ದೆ. ತಾರಾಗಣ, ಪಾರಿಭಾಷಿಕ ವರ್ಗ/ ತಾಂತ್ರಿಕ ವರ್ಗ ಎಂದರೇನೆಂದು ತಿಳಿದಿರಲಿಲ್ಲ. ಕಥಾ ಸಾರಾಂಶ ಓದುತ್ತಿದ್ದಾಗ ನನ್ನ ಕಲ್ಪನೆಯ ಸಿನಿಮಾ ಬಿಚ್ಚಿಕೊಳ್ಳುತ್ತಿತ್ತು. ಮುಂದಿನ ಕತೆಯನ್ನು ತೆರೆಯ ಮೇಲೆ ನೋಡಿ ಆನಂದಿಸಿ ಎನ್ನುವ ಸಾಲಿಗೆ ಬಂದ ನಂತರ ಸಿನೆಮಾ ನೋಡಬೇಕೆಂಬ ತೀವ್ರಭಾವ ಯಾತನೆಯಾಗಿ ಬದಲಾಗುತ್ತಿತ್ತು. ಅದರ ಜೊತೆಗೆ ಊರಿನ ಛೋಟೇಗೌಡರ ಮನೆಯ ಪಡಸಾಲೆಯ ಗಾರೆ ಮೆತ್ತಿದ ಗೋಡೆಗೆ ಅಂಟಿಸುತ್ತಿದ್ದ ಸಿನಿಮಾ ಭಿತ್ತಿಪತ್ರಗಳಲ್ಲಿನ ಚಿತ್ರಗಳು ನಮ್ಮನ್ನೇ ಹಿಂಬಾಲಿಸಿದಂತೆ ಕಾಣುತ್ತಿದ್ದವು. ಅವು ತೊಟ್ಟ ಪೋಷಾಕು, ಹಿಡಿದ ಖಡ್ಗ, ಅಪ್ಪಿಕೊಂಡ ನಾಯಕಿಯರು ಜೀವ ಪಡೆದು ಚಲಿಸಿದಂತೆ ಕಂಡು ಸಿನಿಮಾ ನೋಡಲೇಬೇಕೆನ್ನುವ ತೀವ್ರ ಬಯಕೆಯನ್ನು ಹುಟ್ಟುಹಾಕುತ್ತಿದ್ದವು.
ಅದೇ ವೇಳೆ ನಮ್ಮೂರಿಗೆ ಪಂಚಾಯಿತಿ ರೇಡಿಯೋ ಬಂತು. ಬೆಳಗಿನ, ಮಧ್ಯಾಹ್ನದ ಮತ್ತು ರಾತ್ರಿ ಪ್ರಸಾರದ ಸಮಯಗಳಲ್ಲಿ ನಿಯತವಾಗಿ ‘ಹಾಡು’ತ್ತಿತ್ತು. ರೇಡಿಯೋ ಹಾಕದಿದ್ದರೆ, ಉಸ್ತುವಾರಿ ವಹಿಸಿದ್ದ ಮನೆಯವರನ್ನು ಪೀಡಿಸುತ್ತಿದ್ದೆವು. ಮನೆಯಲ್ಲೇ ಕುಳಿತು ಆಲಿಸಬಹುದಾಗಿದ್ದ ಊರಿನ ರೇಡಿಯೋನಲ್ಲಿ ಚಿತ್ರಗೀತೆಗಳ ಪ್ರಸಾರ ಆಗ ಕಡಿಮೆ ಅವಧಿಯದಾಗಿತ್ತು. ಬಹುತೇಕ ವೇಳೆ ನಮಗೆ ‘ಹಿಂಸೆ’ಯಾಗುತ್ತಿದ್ದ ಶಾಸ್ತ್ರೀಯ ಸಂಗೀತದ ಆಲಾಪ, ಪಿಟೀಲಿನ ಕೊಯ್ಯ ಪಿಯ್ಯ ಶಬ್ದವೇ ಕೇಳಿಸುತ್ತಿತ್ತು. ಸಿನಿಮಾ ಹಾಡು ಬಂತೆಂದರೆ ಸಂಭ್ರಮವೋ ಸಂಭ್ರಮ. ಹಾಡಿನ ಪುಸ್ತಕ ಓದುತ್ತಾ, ಕೇಳುತ್ತಾ ನೂರಾರು ಹಾಡುಗಳು ಕಂಠಪಾಠವಾಗಿದ್ದವು. ನಮ್ಮ ಬಂಧುಗಳು ಹೇಳುತ್ತಿದ್ದ ‘ಬ್ಯಾಟ್ರ ಕಣ್ಣಪ್ಪ’, ‘ಜಕಣಾಚಾರಿ’, ‘ಹರಿಶ್ಚಂದ್ರ’ ಸಿನಿಮಾಗಳ ಸೀನ್ ಬೈ ಸೀನ್ ಕತೆ ಹೇಳುತ್ತಿದ್ದರೆ, ನಾನು ಎಂದು ಸಿನಿಮಾ ನೋಡುವುದು ಎಂದು ಚಡಪಡಿಸುತ್ತಿದ್ದೆ. ವಯಸ್ಸಾದ ಮೇಲೆ ಅವಕಾಶ ಸಿಕ್ಕಿದರೆ ಅದೇ ಸಿನಿಮಾ ನೋಡಲಾಗುವುದಿಲ್ಲವೇನೋ ಎಂಬ ಸಂಶಯ. ಯಾಕೆಂದರೆ ಆ ಸಿನಿಮಾದ ನಟರು ಸತ್ತು ಹೋಗುತ್ತಾರಲ್ಲವೇ?! ನಾಟಕದ ನಟರಂತೆ ಸಿನಿಮಾನಟರೂ ಬೊಂಬೆಗಳಾಗಿ ಬಂದು ‘ಆಟ ಆಡುತ್ತಾರೆ’ ಎಂಬ ಕಲ್ಪನೆ ನನ್ನಂತಹ ಬಾಲಕರ ಮನಸ್ಸಿನಲ್ಲಿ ದೊಡ್ಡವರು ಕೊಡುತ್ತಿದ್ದ ವಿವರಣೆಯಿಂದಾಗಿ ಹೇಗೋ ಉಳಿದುಬಿಟ್ಟಿತ್ತು. ಸಾಯುವ ಮೊದಲು ಒಂದು ಹತ್ತು ಸಿನಿಮಾಗಳನ್ನಾದರೂ ನೋಡಬೇಕೆಂಬ ಹೆಬ್ಬಯಕೆಯಿಂದಲೇ ಕಾಲ ನೂಕುತ್ತಿದ್ದೆ. ಅದೇ ವೇಳೆ ಪಟ್ಟಣದಲ್ಲಿ ಓದುತ್ತಿದ್ದ ಹಳ್ಳಿ ಮಕ್ಕಳು ಸಿನಿಮಾ ನೋಡಿ ಓದಿನಲ್ಲಿ ಡುಮುಕಿ ಹೊಡೆಯುತ್ತಿದ್ದ ಪ್ರಕರಣಗಳು ಪ್ರಚಾರ ಪಡೆಯುತ್ತಿದ್ದವು. ಸಿನಿಮಾ ಎಂಬುದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ‘ಗಾಳಿ’, ‘ದೆವ್ವ’ ಎಂಬ ಸಾಮಾನ್ಯ ನಂಬಿಕೆಯಿತ್ತು. ಒಮ್ಮೆ ಸಿನಿಮಾ ಚಟ ಅಂಟಿದರೆ, ಕುಡಿತ, ಜೂಜು, ವ್ಯಭಿಚಾರಕ್ಕಿಂತಲೂ ಅಪಾಯಕಾರಿ ಎಂಬ ಭಾವನೆ ಜನಜನಿತವಾಗಿತ್ತು. ಹಾಗಾಗಿ ಸಿನಿಮಾ ನೋಡಿ ಸಿಕ್ಕಿಹಾಕಿಕೊಂಡ ವಿದ್ಯಾರ್ಥಿಗಳನ್ನು ಕಂಬಕ್ಕೆ ಕಟ್ಟಿ ಮೆಣಸಿನಕಾಯಿ ಹೊಗೆಹಾಕುವ, ಕೋದಂಡ ಎತ್ತುವ, ಇಲ್ಲವೆ ನೇರವಾಗಿ ‘ಫುಟ್‌ಬಾಲ್’ ಆಡುವ ಮುಂತಾದ ಕ್ರೂರ ಶಿಕ್ಷೆಗಳ ಮೂಲಕ ಗಾಳಿ ದೆವ್ವ ಬಿಡಿಸುತ್ತಿದ್ದ ಘಟನೆಗಳಿಗೆ ನಾನೇ ಎಷ್ಟೋ ಬಾರಿ ಸಾಕ್ಷಿಯಾಗಿದ್ದೆ. (ಮುಂದೆ ಅಂಥವೇ ಶಿಕ್ಷೆಗಳನ್ನು ಅನುಭವಿಸಿದೆ.)
ಆದರೆ ನನಗೆ ಸಿನಿಮಾ ನೋಡುವ ಅವಕಾಶಗಳೇ ಬಹಳ ಕಾಲ ದೊರೆತಿರಲಿಲ್ಲ. ಮೂರೂವರೆ ಮೈಲು ದೂರದ ಕಾನಕಾನಹಳ್ಳಿ ಪೇಟೆ ನನ್ನ ಪಾಲಿಗೆ ಬಹಳ ದೂರದಲ್ಲಿತ್ತು. ಸಿನಿಮಾ ನೋಡಿ ಅಣ್ಣ ಕೆಟ್ಟುಹೋಗಿದ್ದ ಇತಿಹಾಸವಿತ್ತು. ಸಿನಿಮಾ ಆಕರ್‍ಷಣೆಯಿಂದ ಮನೆಯಲ್ಲಿ ಪರೀಕ್ಷೆಗೆ ಕೊಟ್ಟ ಹಣವನ್ನು ಆತ ಕಟ್ಟದೆ ಜೊತೆಗೆ ಸಾಲಮಾಡಿ ಮದರಾಸಿಗೆ ಓಡಿಹೋಗಿದ್ದ ಪ್ರಕರಣವೂ ನನ್ನ ಸಿನಿಮಾ ವೀಕ್ಷಣೆಗೆ ತಡೆಯೊಡ್ಡಿದ್ದವು.
ನಾನು ನೋಡಿದ ಮೊದಲ ಸಿನಿಮಾ ‘ಪತಿಯೇ ದೈವ’, ೧೯೬೫ರಲ್ಲಿ. ಅಂದು ನನಗಾದ ಆಶ್ಚರ್ಯಕ್ಕೆ ಎಣೆಯಿರಲಿಲ್ಲ. ಕನಕಪುರದ ಬೂದಿಕೇರಿಯಲ್ಲಿದ್ದ ಟೆಂಟ್‌ಗೆ ಅಣ್ಣ ಶಿವಣ್ಣ ಫಸ್ಟ್ ಶೋಗೆ ಕರೆದುಕೊಂಡು ಹೋಗಿದ್ದರು. ಗುಂಪುಗೂಡಿದ ಜನ. ಘಂಟಸಾಲರವರ ಕಂಠದಲ್ಲಿ ಮೊಳಗುತ್ತಿದ್ದ ‘ವಾತಾಪಿ ಗಣಪತೀಂ…’ ಮತ್ತು ‘ದಿನಕರ ಶುಭಕರ’ ಹಾಡುಗಳು… ಟಿಕೆಟ್ ಪಡೆದು ಒಳಹೋಗಿ ನೆಲದ ಮೇಲೆ ಕುಂತಾಗ ಯಾವ ಯಾವುದೋ ಹಾಡುಗಳು. ಕೊನೆಗೆ ‘ನಮೋ ವೆಂಕಟೇಶ’ ಹಾಡು ಬಂದ ಕೂಡಲೇ ಮಬ್ಬಾದ ಲೈಟುಗಳು. ಸ್ಲೈಡ್ ಪ್ರದರ್ಶನ. ಧೂಮಪಾನ ಮಾಡದಿರಲು ಮಾಡಿಕೊಂಡ ಮನವಿಯನ್ನು ಅಣಕಿಸುವಂತೆ ಎದ್ದ ಬೀಡಿ ಸಿಗರೇಟಿನ ಹೊಗೆ ಸುರುಳಿ. ಸ್ವಲ್ಪ ಸಮಯದ ನಂತರ ಶುರುವಾದ ‘ಸೈಡ್‌ರೀಲು’ಗಳು. ಮುಖ್ಯ ಸಿನಿಮಾ ಬಂದಾಗ ‘ಹ್ಞೂ ಸಿನಿಮಾ ಶುರು ಆಯ್ತು’ ಎಂದು ಎಲ್ಲ ಕಡೆಯಿಂದಲೂ ಕೇಳಿ ಬಂದ ಪಿಸುಮಾತು; ಟೈಟಲ್ ಕಾರ್ಡ್ ಮುಗಿಯುತ್ತಿದ್ದಂತೇ ಶುರುವಾದ ಪ್ರಾರ್ಥನಾಗೀತೆ ‘ಜಯ ರಘುರಾಮ ಜಯ ಘನ ಶ್ಯಾಮ’ ಹಾಡು- ಅಯ್ಯೋ!… ಎಲ್ಲವೂ ಹಾಡಿನ ಪುಸ್ತಕದಲ್ಲಿ ಇರುವಂತೆ ನಡೆಯುತ್ತಿದೆಯಲ್ಲಾ ಎನಿಸಿತು. ಹಾಡು ಮುಗಿದ ತಕ್ಷಣ ಶುರುವಾದ ಸಂಸಾರದ ಕತೆ. ಬೆಳ್ಳಿತೆರೆಯ ಮೇಲೆ ಮೂಡಿದ ಚಲಿಸುವ ಬಿಂಬಗಳನ್ನೆಲ್ಲ ತುಂಬಿಕೊಳ್ಳುತ್ತಾ ತನ್ಮಯವಾಗಿ ಆನಂದಿಸಿದ ಆ ಕ್ಷಣಗಳು ಇಂದಿಗೂ ನನ್ನ ಮನಸ್ಸಿನಿಂದ ಮಾಸಿಲ್ಲ. ಅಂದು ಕೇಳಿದ ಆ ಚಿತ್ರದ ಹಾಡುಗಳು- ನಗೆ ಮೊಗದ ನಲಿವ ನಲ್ಲೆ… ನಿನಗೆಣೆಯ ಕಾಣೆ ನಲ್ಲೆ, ಮಂಗಳಮೂರ್ತಿ ಮಾರಯ್ಯ ಮಡದಿಯ ಮನೆಗೆ ಬಾರಯ್ಯ ಹಾಸ್ಯಭರಿತ ಹಾಡು, ಬೀಗರ ಮನೆಯ ಬೆಡಗಿನ ಹೆಣ್ಣೆ ಬಿಂಕವಿದೇಕೋ ಕಾಣೆ… -ಸವಾಲು-ಜವಾಬಿನ ಹಾಡು, ಕೋಪವೇಕೆ ಕೋಪವೇಕೆ ಅಜ್ಜಿ -ಮೊಮ್ಮಕ್ಕಳು ಅಜ್ಜಿಯನ್ನು ಒಲಿಸಿಕೊಳ್ಳಲು ಹಾಡುವ ಹಾಡು- ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ನಿಂತುಬಿಟ್ಟವು.
ಬಹುಶಃ ಮೊದಲ ಬಾರಿಗೆ ಸಿನಿಮಾ ನೋಡಿದ ಎಲ್ಲರಿಗೂ ಇದೇ ಅನುಭವವಾಗಿರಬಹುದು. ಸಿನಿಮಾದ ಆಕರ್ಷಣೆಯೇ ಅಂಥದಲ್ಲವೇ? ನಾನು ಎರಡನೆಯ ಸಿನಿಮಾ ನೋಡಿದ್ದು, ಮೊದಲ ಸಿನಿಮಾ ನೋಡಿದ ಐದು ವ?ಗಳ ತರುವಾಯ. ಅಲ್ಲಿಯವರೆಗೆ ಕೇವಲ ಹಾಡಿನ ಪುಸ್ತಕ, ಊರುಗಳಲ್ಲಿ ಅಂಟಿಸುತ್ತಿದ್ದ ಸಿನಿಮಾ ಭಿತ್ತಿಪತ್ರ ಮತ್ತು ಪಟ್ಟಣದ ಛತ್ರಗಳಲ್ಲಿ ನಡೆಯುವ ಊರ ಮದುವೆಗಳಿಗೆ ಹೋದಾಗ ಅಲ್ಲಿ ಮೈಕ್‌ಸೆಟ್ ಹೊರಹೊಮ್ಮಿಸುತ್ತಿದ್ದ ಸಿನಿಮಾ ಗೀತೆಗಳು ಮಾತ್ರ ಚಿತ್ರ ಜಗತ್ತಿನ ಸಂಪರ್ಕ ಮಾಧ್ಯಮಗಳಾಗಿದ್ದವು. ಮದುವೆ, ಜಾತ್ರೆಗಳಲ್ಲಿ ನನಗೆ ಹೆಚ್ಚು ಆಕರ್ಷಣೀಯವಾಗಿದ್ದದ್ದೇ ಈ ಮೈಕ್‌ಸೆಟ್. ಅಲ್ಲಿ ರೆಕಾರ್ಡು ಹಾಕುವವರ ಹತ್ತಿರ ಹೊಟ್ಟೆಯ ಚಿಂತೆಯಿಲ್ಲದೆ ಹಾಡುಗಳನ್ನು ಕೇಳುತ್ತಾ ಕುಳಿತುಕೊಳ್ಳುತ್ತಿದ್ದದ್ದು ಈಗ ಗತಕಾಲದ ಚಿತ್ರ.
ಆದರೆ ೧೯೭೦ರ ನಂತರ ಸಿನಿಮಾ ನೋಡುವುದು ಹವ್ಯಾಸವಾಗಲಿಲ್ಲ. ಗೀಳೇ ಆಗಿತ್ತು. ಪ್ರೌಢಶಾಲೆ ಕಲಿಯಲು ಕೆಜಿಎಫ್ ಸೇರಿದ ನಾನು ಅಲ್ಲಿ ಕನ್ನಡ ಚಿತ್ರಗಳನ್ನು ನೋಡಿದ್ದು ಕಡಿಮೆ. ಎಪ್ಪತ್ತರ ದಶಕದಲ್ಲಿ ಅಲ್ಲಿ ಕನ್ನಡ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದದ್ದೇ ಅಪರೂಪ. ಆದರೆ ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳನ್ನು ಧಾರಾಳವಾಗಿ ಕದ್ದು ನೋಡುತ್ತಿದ್ದೆ. ಆದರೆ ಕನ್ನಡ ಚಿತ್ರಗಳ ಬಗ್ಗೆ ಮೋಹವೇನೂ ಕಡಿಮೆಯಾಗಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕನ್ನಡ ಚಿತ್ರಗಳನ್ನು ನೋಡಿಯೇ ತೀರುತ್ತಿದ್ದೆ. ಕದ್ದು ದೂರದ ಕೋಲಾರಕ್ಕೆ ಹೋಗಿ ಕನ್ನಡ ಸಿನಿಮಾ ನೋಡಿ ಬರುತ್ತಿದ್ದದ್ದು, ಬಂದ ನಂತರ ನಿಸ್ಸಂಶಯವಾಗಿ ಬೀಳುತ್ತಿದ್ದ ಒದೆಗಳು, ಅನುಭವಿಸುತ್ತಿದ್ದ ಕ್ರೂರ ಶಿಕ್ಷೆಗಳು ನನ್ನನ್ನು ಸಿನಿಮಾದಿಂದ ವಿಮುಖಗೊಳಿಸಲು ವಿಫಲವಾದವು. ಸಿನಿಮಾ ಗೀಳು ಹತ್ತಿ ಉರಿಯಲು ನನ್ನ ಸಹಪಾಠಿ ರಾಧಾಕೃಷ್ಣ ಕಾಣಿಕೆ ಕಡಿಮೆಯಲ್ಲ. ಆತನ ತಂದೆಯ ಮಾತೃಭಾಷೆ ತೆಲುಗು. ತಾಯಿ ತಮಿಳು ಮೂಲದವರು. ಶಾಲೆಯಲ್ಲಿ ಆತನ ಪ್ರಥಮ ಭಾಷೆ ಕನ್ನಡ. ಆದರೆ ತಮಿಳು ಸಿನಿಮಾಗಳ ಭಕ್ತ. ಅದರಲ್ಲೂ ಎಂಜಿಆರ್ ಸಿನಿಮಾಗಳೆಂದರೆ ಪ್ರಾಣ. ಸಮಾನ ಚಟದಿಂದಾಗಿ ನಾವಿಬ್ಬರೂ ಹತ್ತಿರವಾದೆವು. ಕ್ಲಾಸಿಗೆ ಚಕ್ಕರ್ ಕೊಟ್ಟು ಸಿನಿಮಾ ನೋಡುತ್ತಿದ್ದೆವು. ನಮ್ಮಿಬ್ಬರ ನಡುವೆ ಅಲಿಖಿತ ಒಪ್ಪಂದವಿತ್ತು. ಅಲ್ಲಿ ಪ್ರದರ್ಶನ ಕಾಣುವ ಎಲ್ಲ ಎಂಜಿ.ಆರ್. ನಟಿಸಿದ ಚಿತ್ರಗಳನ್ನು ಆತ ನನಗೆ ಉಚಿತವಾಗಿ ತೋರಿಸಬೇಕು. ನಾನು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವನನ್ನು ಉಚಿತವಾಗಿ ಕರೆದೊಯ್ಯಬೇಕು. ಈ ಒಪ್ಪಂದದಿಂದ ಹೆಚ್ಚಿನ ಲಾಭವಾಗಿದ್ದು ನನಗೆ. ಅಲ್ಲದೆ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಬಲ್ಲ ಆ ಗೆಳೆಯ ನನಗೆ ಸ್ವಲ್ಪ ತಮಿಳು ಭಾಷೆಯನ್ನು ಓದುವ, ಬರೆಯುವ ಕಲೆಯನ್ನು ಹೇಳಿಕೊಟ್ಟ. ವಿಚಿತ್ರವೆಂದರೆ ಅವನು ನನಗೆ ತಮಿಳು ಭಾಷೆಯ ಅಕ್ಷರ ಪರಿಚಯ ಮಾಡಿದ್ದು ಸಿನಿಮಾ ವಾಲ್‌ಪೋಸ್ಟರ್‌ಗಳ ಮೂಲಕ. ತಮಿಳಿನ ವಾಲ್‌ಪೋಸ್ಟರ್‌ಗಳಲ್ಲಿ ಕನ್ನಡದಲ್ಲೂ ಆಗ ಶೀರ್ಷಿಕೆಯನ್ನು ಮುದ್ರಿಸುತ್ತಿದ್ದರು. ‘ನಾಡೋಡಿ ಮನ್ನನ್’ ಎಂಬ ಚಿತ್ರದ ವಾಲ್‌ಪೋಸ್ಟರ್ ತೋರಿಸುತ್ತಾ, ‘ನ’ ಅಕ್ಷರವು ತಮಿಳು ಲಿಪಿಯಲ್ಲಿ ದೀರ್ಘವಾಗುವ, ಒತ್ತಕ್ಷರವಾಗುವ ಮತ್ತು ಅರ್ಧಾಕ್ಷರವಾಗುವ ಸ್ವರೂಪವನ್ನು ಹೇಳಿಕೊಡುತ್ತಿದ್ದ. ಇದು ಭಾಷೆಯ ಲಿಪಿಯನ್ನು ಗುರುತಿಸಲು ಮತ್ತು ಅದನ್ನು ಅನ್ಯಭಾಷಿಕರಿಗೆ ಸುಲಭವಾಗಿ ಹೇಳಿಕೊಡಲು ಅವನೇ ಕಂಡು ಹಿಡಿದ ಅಮೋಘ ವಿಧಾನ! (ಜೊತೆಗೆ ನಾನು ಓದುತ್ತಿದ್ದ ಶಾಲೆಯಲ್ಲಿ ತಮಿಳು ತರಗತಿಗಳೂ ಇದ್ದದ್ದರಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅವರೇ ಇರುತ್ತಿದ್ದರಿಂದ ತರಗತಿಯ ಹೊರಗಡೆ ತಮಿಳೇ ಆಡುಭಾಷೆಯಾಗಿತ್ತು. ಹಾಗಾಗಿ ತಮಿಳು ಭಾಷೆ ಕಲಿಯುವುದು, ಓದುವುದು ಸುಲಭವಾಯಿತು) ರಾಧಾಕೃಷ್ಣ ಮತ್ತು ನನ್ನ ಸಿನಿಮಾ ಗೀಳು ಶಾಲೆಯಲ್ಲಿ ಜನಜನಿತವಾಗಿತ್ತು. ಅಣ್ಣನಿಗೆ ದೊಡ್ಡ ತಲೆನೋವು ಆಗಿತ್ತು. ಹಾಜರಿಯ ಕೊರತೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂರಲು ದಂಡ ತೆರಬೇಕಾಯಿತು. ಈ ಸಿನಿಮಾ ಗೀಳಿನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾಗಬಹುದೆಂದು ನಿರೀಕ್ಷಿಸಿದ್ದ ಶಿಕ್ಷಕರೂ ಸೇರಿದಂತೆ ನನ್ನ ಬಲ್ಲವರೆಲ್ಲರಿಗೂ ಆಘಾತವಾಗಿತ್ತು! ಫಸ್ಟ್ ಕ್ಲಾಸ್ ಆರು ಅಂಕದಲ್ಲಿ ತಪ್ಪಿಹೋಗಿತ್ತು! ಅದರಿಂದ ‘ಹುಡುಗ ಜಾಣ. ಸಿನಿಮಾ ಗೀಳು ಬಿಟ್ಟಿದ್ದರೆ ಫಸ್ಟ್‌ಕ್ಲಾಸ್ ಬರುತ್ತಿದ್ದ’ ಎಂಬ ಸಹಾನುಭೂತಿಯ ಶ್ಲಾಘನೆ ದೊರೆತಿತ್ತು.
ಆದರೆ ಪಿಯುಸಿಗೆ ಸೇರಿದ ನಂತರ ಈ ಹುಚ್ಚು ಇನ್ನೂ ಜಾಸ್ತಿಯಾಯಿತು. ಆಗ ಡಾ. ರಾಜ್ ಅವರ ೧೫೦ನೇ ಚಿತ್ರ ‘ಗಂಧದ ಗುಡಿ’ ಬಿಡುಗಡೆಯಾಗಿತ್ತು. ಅದೇ ಸಮಯದಲ್ಲಿ ಬೆಲೆಯೇರಿಕೆಯ ವಿರುದ್ಧ ವಿದ್ಯಾರ್ಥಿಗಳ ಮುಷ್ಕರ ಆರಂಭವಾಯಿತು. ಕಾಲೇಜಿಗೆ ರಜೆ ಘೋಷಿಸಿದ್ದರು, ಮೂರು ದಿನ. ನಾನು ಒಂದು ತಿಂಗಳು ಕಾಲೇಜಿಗೆ ರಜೆಯೆಂದು ಸುಳ್ಳುಹೇಳಿ ಊರಿಗೆ ಹೋಗುವ ನೆಪ ಒಡ್ಡಿ ಬೆಂಗಳೂರಿನ ಆಗಿನ ಸಂಜಯ ಚಿತ್ರಮಂದಿರದಲ್ಲಿ ಮಾಟ್ನಿಶೋಗೆ ಹತ್ತು ಗಂಟೆಗೇ ಕ್ಯೂನಿಂತು ಸಿನಿಮಾ ನೋಡಿ ಊರಿಗೆ ಧನ್ಯತಾಭಾವದಿಂದ ಹೋಗಿದ್ದೆ. ಅಕ್ಟೋಬರ್‌ನಲ್ಲಿ ವಾಪಸ್ಸು ಬಂದಾಗ ಸಾಕಷ್ಟು ಪಾಠಗಳಾಗಿದ್ದವು. ಇನ್ನು ಈ ವರ್ಷ ಓದುವುದರಿಂದ ಪ್ರಯೋಜನವಿಲ್ಲವೆಂದು ಭಾವಿಸಿ ನವೆಂಬರ್ ೩, ೧೯೭೩ರಂದು ಅಣ್ಣನ ಜೇಬಿನಿಂದ ನೂರು ರೂಪಾಯಿ ಎಗರಿಸಿ ಬೆಂಗಳೂರಿಗೆ ಓಡಿ ಬಂದೆ. ಗೊತ್ತುಗುರಿಯಿಲ್ಲದೆ ಬೆಳಗಿನ ಪ್ರದರ್ಶನದಿಂದ ಎರಡನೇ ಪ್ರದರ್ಶನದವರೆಗೆ ಎರಡು ಹಗಲು ಎರಡು ರಾತ್ರಿ ಮೆಜೆಸ್ಟಿಕ್ ಏರಿಯಾದಲ್ಲಿ ಸಿನಿಮಾ ನೋಡುತ್ತಾ ಹಣ ಖಾಲಿಯಾಗುವ ಲಕ್ಷಣ ಕಂಡುಬಂದಾಗ ದಿಕ್ಕೆಟ್ಟು ಊರು ಸೇರಿಕೊಂಡಿದ್ದೆ. ನನ್ನ ಕಣ್ಮರೆ ಎಂಥ ಸಂಚಲನ ಸೃಷ್ಟಿಸಿತ್ತೆಂದು ತಿಳಿದದ್ದು ಊರಿಗೆ ಹೋದ ತರುವಾಯ. ಅನಂತರ ಆ ವರ್ಷ ವಿದ್ಯಾಭ್ಯಾಸ ಬಿಟ್ಟು ಮರುವರ್ಷ ಮತ್ತೆ ಮೊದಲ ಪಿಯುಸಿಗೆ ಸೇರಿದೆ. ಎರಡು ವರ್ಷ ಒಂದು ಸಿನಿಮಾ ಸಹ ನೋಡದೆ ವ್ಯಾಸಂಗ ಮಾಡಿದೆ. ನನ್ನ ಜಾಣತನವನ್ನು ರುಜು ಮಾಡಬೇಕಿತ್ತು. ಯಶಸ್ಸು ಕಂಡೆ.
ಕೃಷಿ ಪದವೀಧರನಾಗುವ ಹಂಬಲ ಹೊತ್ತು ರಾಜಧಾನಿಗೆ ಬಂದೆ. ಆದರೆ ಬೆಂಗಳೂರಿನಲ್ಲಿ ಚಿತ್ರದ ಗೀಳು ಮರುಕಳಿಸಿತು. ಕೆಜಿಎಫ್‌ನಲ್ಲಿ ರಾಧಾಕೃಷ್ಣ ನನಗೆ ಹತ್ತಿಸಿದ್ದ ಚಟವನ್ನು ಇಲ್ಲಿ ತೋಟಗಾರಿಕೆ ವಿಜ್ಞಾನ ಓದುತ್ತಿದ್ದ ಬಾಲಚಂದ್ರ ಎಂಬ ಗೆಳೆಯನಿಗೆ ಹತ್ತಿಸಿದೆ. ಆಗ ನಾವಿಬ್ಬರೂ ಬೆಂಗಳೂರಿನ ಸ್ಟೇಟ್ಸ್, ಕೆಂಪೇಗೌಡ, ಹಿಮಾಲಯ, ಜೈಶ್ರೀ ಚಿತ್ರಮಂದಿರಕ್ಕೆ ಖಾಯಂ ಗಿರಾಕಿಗಳು. ಅಲ್ಲೆಲ್ಲಾ ಆಗ ಕನ್ನಡ ಚಿತ್ರಗಳದ್ದೇ ಪ್ರದರ್ಶನ. ಮಾರ್ನಿಂಗ್ ಷೋನಲ್ಲಿ ಕನ್ನಡ ಚಿತ್ರ ಪ್ರದರ್ಶಿಸುತ್ತಿದ್ದ ಪ್ರಭಾತ್, ತ್ರಿವೇಣಿ, ವಿಜಯಲಕ್ಷ್ಮಿ ಚಿತ್ರಮಂದಿರಗಳಲ್ಲಿ ಮುಖ್ಯವಾಗಿ ಹಳೆಯ ಕನ್ನಡ ಚಿತ್ರಗಳನ್ನು ನೋಡುತ್ತಿದ್ದೆವು. ಬಿಡುಗಡೆಯಾದ ಹೊಸ ಚಿತ್ರಗಳನ್ನು ನೋಡುವುದು ಇದ್ದೇ ಇತ್ತು. ಅದೇ ವೇಳೆ ಕೃಷಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರೊ. ಅನಂತ ದೇವರಾಜೇ ಅರಸು, ಅಕುಮಲ್ ರಾಮಚಂದ್ರ ಮುಂತಾದವರು ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಿ ‘ಫಿಲ್ಮ್ ಕ್ಲಬ್’ ಆರಂಭಿಸಿದರು. ತೋರಿಸಿದ ಮೊದಲ ಚಿತ್ರ ‘ಸಂಸ್ಕಾರ’. ಆವೇಳೆಗೆ ನಾನದನ್ನು ನೋಡಿದ್ದೆ. ಮೊದಲ ಚಿತ್ರವೇ ವಿದ್ಯಾರ್ಥಿಗಳನ್ನು ಕ್ಲಬ್‌ನಿಂದ ವಿಮುಖಗೊಳಿಸಿತು. ರಾಜಣ್ಣನವರ ‘ಬಂಗಾರದ ಮನುಷ್ಯ’, ವಿಷ್ಣುವಿನ ‘ನಾಗರಹಾವು’, ಕಮಲಹಾಸನ್ ಚಿತ್ರಗಳ ಹೊಸತನ, ರಾಜ್ ಕಪೂರನ ‘ಬಾಬ್ಬಿ’ ಅಮಿತಾಭ್‌ನ ಕುಪಿತ ಯುವಕನ ಪಾತ್ರಗಳು ವಿದ್ಯಾರ್ಥಿಗಳ ಮೇಲೆ ಮೋಡಿಹಾಕಿದ್ದ ಕಾಲ. ನಮ್ಮಂಥ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕ್ಲಬ್ಬಿನ ಸಿನಿಮಾಗಳ ಬಗ್ಗೆ ಆಸಕ್ತಿಯಿದ್ದರೂ ಬಹುಸಂಖ್ಯಾತರಿಗೆ ಮನ್ನಣೆ ಇರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಂಗೀಕರಿಸಬೇಕಾಗಿದ್ದರಿಂದ ಕ್ಲಬ್ ಬೇಗನೆ ನಿಂತಿತು. ನಂತರ ‘ಪ್ರಜಾವಾಣಿ’ ಸೇರಿದ ಮೇಲೆ ಗೆಳೆಯ ಎನ್.ಎಸ್. ಶಂಕರನ ದೆಸೆಯಿಂದ ಚಿತ್ರಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಅಭ್ಯಾಸ ಬೆಳೆಯಿತು. ಚಿತ್ರಗಳನ್ನ ನೋಡುವುದಷ್ತೆ ಅಲ್ಲ ಚಲನಚಿತ್ರಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನು ಎಡೆಬಿಡದೆ ಓದುವುದು ನಡೆದೇ ಇತ್ತು. ಆಗಿನ ಕಾಲದಲ್ಲಿ ಪ್ರಜಾಮತ, ಮೇನಕಾ, ಪನೋರಮಾ, ವಿಜಯಚಿತ್ರ, ರೂಪತಾರಾಗಳಲ್ಲದೆ, ಪ್ರಜಾಮತದ ದ್ವಾರಕಾನಾಥ್, ಹಿರಿಯ ಪತ್ರಕರ್ತರಾದ ವಿ.ಎನ್. ಸುಬ್ಬರಾವ್, ಡಾ. ವಿಜಯಾ, ಗಂಗಾಧರ ಮೊದಲಿಯಾರ್, ಬಿಎಂಕೆ, ವೈಕುಂಠರಾಜು, ಸಿ. ಸೀತಾರಾಂ, ನಾರಾಯಣಸ್ವಾಮಿ ನಂತರ ಸತ್ಯಮೂರ್ತಿ ಆನಂದೂರು, ಚಂದ್ರಶೇಖರ ಆಲೂರು, ಎನ್.ಎಸ್. ಶಂಕರ್ ಮುಂತಾದವರು ಕನ್ನಡದ ಚಿತ್ರಗಳ ಬಗ್ಗೆ ಅಭಿಮಾನದಿಂದ ಬರೆಯುತ್ತಿದ್ದ ಲೇಖನಗಳನ್ನು ಓದುತ್ತಾ ಬೆಳೆದವರಲ್ಲಿ ನಾನೂ ಒಬ್ಬ. ಒಂದು ಕಾಲಕ್ಕೆ ‘ಪ್ರಜಾಮತ’ದ ದ್ವಾರಕಾನಾಥ್‌ರವರು ಓದುಗರ ಪ್ರಶ್ನೆಗೆ ನೀಡುತ್ತಿದ್ದ ಉತ್ತರಗಳು ಕನ್ನಡ ಚಿತ್ರರಂಗದ ಸಮಗ್ರ ಮಾಹಿತಿಕೋಶವೊಂದರ ದರ್ಶನವನ್ನು ನೀಡುತ್ತಿದ್ದರೆ ಕನ್ನಡಪ್ರಭ ಪತ್ರಿಕೆಯು ‘ಚಿತ್ರಪ್ರಭ’ ಪುರವಣಿ ಆರಂಭಿಸುವ ಮೂಲಕ ಕನ್ನಡ ಚಲನಚಿತ್ರ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನೇ ಆರಂಭಿಸಿತು. ಕನ್ನಡ ಚಲನಚಿತ್ರ ಪತ್ರಕರ್ತರು ೧೯೭೦ರಲ್ಲಿ ಆರಂಭವಾದ ಹೊಸ ಸಂಪ್ರದಾಯದ ಚಿತ್ರಗಳಿಗೆ ಅಪಾರ ಬೆಂಬಲ ನೀಡಿದ್ದು, ಆರಂಭದಲ್ಲಿ ಅವುಗಳಿಗೆ ‘ವಿದ್ಯಾವಂತ’ ಪ್ರೇಕ್ಷಕವರ್ಗ ಹೆಚ್ಚಾಗಲು ಕಾರಣವಾಯಿತು.
ಬೆಂಗಳೂರಿಗೆ ಓದಲು ಬಂದು, ಇಲ್ಲಿಯೇ ಉದ್ಯೋಗದಲ್ಲಿ ನಿಂತ ಕಾರಣ ನನ್ನ ಬಾಲ್ಯದ ಕನಸು ನನಸಾದಂತಾಯಿತು. ಬೆಂಗಳೂರು ನನ್ನ ಸಿನಿಮಾ ಗೀಳಿಗೆ ದೊಡ್ಡದೊಂದು ವೇದಿಕೆಯೊದಗಿಸಿತು. ವಿಶ್ವದ ಚಲನಚಿತ್ರಗಳಿಗೆ ಬಾಗಿಲು ತೆರೆಯಿತು. ೧೯೮೦ರಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಟ್ರೋಸ್ಟೆಕ್ಟಿವ್ ವಿಭಾಗದಲ್ಲಿ ಪ್ರದರ್ಶಿಸಲಾದ ಸತ್ಯಜಿತ್ ರೇ ಅವರ ಇಪ್ಪತ್ತೈದು ಕಥಾಚಿತ್ರ ಮತ್ತು ಎರಡು ಸಾಕ್ಷ್ಯಚಿತ್ರಗಳನ್ನು ನೋಡಿದ್ದು ಒಂದು ರೋಮಾಂಚಕ ಅನುಭವ. ರೋಮಾನ್ ಪೊಲಾನ್ಸ್‌ಕಿಯನ್ನು ನೋಡಲು ಕಾತರದಿಂದ ಕಾಯ್ದು ಕೂತದ್ದು, ಗಾಂಧಿನಗರದಲ್ಲಿ ೧೬ ಎಂ.ಎಂ. ಚಲನಚಿತ್ರಗಳನ್ನು ಬಾಡಿಗೆಗೆ ಪಡೆದು ಹಾಸ್ಟೆಲ್‌ನಲ್ಲಿ ಪ್ರದರ್ಶಿಸುತ್ತಿದ್ದ ಸಾಹಸ, ರಾಜ್ಯೋತ್ಸವದ ದಿನ ಕಡ್ಡಾಯವಾಗಿ ಕನ್ನಡ ಚಿತ್ರವೊಂದನ್ನು ನೋಡಲೇಬೇಕೆಂದು ಗೆಳೆಯರಿಗೆಲ್ಲ ನೀಡಿದ ದೀಕ್ಷೆ, ನೋಡಿದ ಚಿತ್ರಗಳ ಬಗ್ಗೆ ಮಲಗುವ ಮುನ್ನ ಅದರ ವಿವರಗಳನ್ನು ಶ್ರದ್ಧೆಯಿಂದ ಬರೆದಿಡುತ್ತಿದ್ದ ಅಭ್ಯಾಸ… ಹೀಗೆ ವಿಶ್ವದ ಚಲನಚಿತ್ರರಂಗದ ಬಗ್ಗೆ ಅರಿವು ಮೂಡಿಸಿಕೊಳ್ಳುವ ಕಾತರದ ಜೊತೆಯಲ್ಲಿಯೇ ಕನ್ನಡ ಚಲನಚಿತ್ರಗಳ ಸಂಬಂಧವನ್ನು ಬಿಡಿಸಿಕೊಳ್ಳದೆ, ಒಳ್ಳೆಯ ಚಿತ್ರ ನೋಡಿದಾಗ ಅಭಿಮಾನ ಪಟ್ಟು, ಕೆಟ್ಟ ಚಿತ್ರಗಳನ್ನು ಕಂಡಾಗ ವ್ಯಗ್ರಗೊಂಡು ಯಾವುದೇ ಸಾಮಾನ್ಯ ಕನ್ನಡ ಪ್ರೇಕ್ಷಕನಂತೆ ವರ್ತಿಸುತ್ತಾ ಸಿನಿಮಾದ ಯಾನದಲ್ಲಿ ಎಲ್ಲ ಬಗೆಯ ಭಾವಾವೇಶಗಳನ್ನು ಅನುಭವಿಸುತ್ತಾ ಬಂದಿದ್ದೇನೆ.
ವಿಚಿತ್ರವೆಂದರೆ ನಾನು ಸಿನಿಮಾ ಬಗ್ಗೆ ಬರದದ್ದೇ ಕಡಿಮೆ. ಹಿಂದಿಯ ಗುರುದತ್ ಅವರ ಬದುಕು ಸಾದನೆಯ ಬಗ್ಗೆ ಒಮ್ಮೆ ಲೇಖನ ಬರೆದದ್ದು ಬಿಟ್ಟರೆ ವಾರ್ತಾ ಇಲಾಖೆಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಸ್ಮರಣ ಸಂಚಿಕೆಗೆ ಪ್ರಶಸ್ತಿ ವಿಜೇತ ಚಿತ್ರ, ಕಲಾವಿದರು, ತಂತ್ರಜ್ಞರ ಬಗ್ಗೆ ೧೯೮೫-೮೬ರಿಂದ ೧೯೯೫-೯೬ರವರೆಗೆ ಪರಿಚಯದ ಟಿಪ್ಪಣಿಗಳನ್ನು ಮಾತ್ರ ಬರೆದಿದ್ದೆ. ‘ಚಾರ್ಲಿ ಚಾಪ್ಲಿನ್’ನ ಜೀವನ ಚರಿತ್ರೆಯನ್ನು ಬರೆಯಬೇಕೆಂದು ಹೊರಟಾಗ ಗೆಳೆಯ ಕುಂ.ವೀರಭದ್ರಪ್ಪನವರ ಪುಸ್ತಕ ಪ್ರಕಟವಾದ ಕಾರಣ ಕೈಬಿಟ್ಟೆ. ಡಾ. ರಾಜ್‌ರವರು ನಿಧನರಾದಾಗ ‘ಅಗ್ನಿ’ ಪತ್ರಿಕೆಗಾಗಿ ಶ್ರದ್ಧಾಂಜಲಿ ಲೇಖನವೊಂದನ್ನು ಗೆಳೆಯ ಬಸವರಾಜು ಅವರು ಸೂಚಿಸಿದ ಕಾರಣ ಬರೆದಿದ್ದೆ. ಅಲ್ಲದೆ ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಹಿರಿಯರಾದ ಡಿ.ಎಸ್.ನಾಗಭೂಷಣರವರು ಕನ್ನಡದ ಹತ್ತು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡುವ ಹೊಣೆ ಹೊರಿಸಿದ್ದ ಕಾರಣ ಆ ಸಂಬಂಧ ಲೇಖನವನ್ನು ಬರೆದಿದ್ದೆ, ಅಷ್ಟೆ.
ಕನ್ನಡ ಚಲನಚಿತ್ರರಂಗದ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅದೇ ಗೆಳೆಯ ಬಸವರಾಜು ಅವರು ‘ವಿಕ್ರಾಂತ ಕರ್ನಾಟಕ’ಕ್ಕಾಗಿ ಲೇಖನವೊಂದನ್ನು ಬರೆಯಲು ಸೂಚಿಸಿದರು. ಒಂದೇ ಲೇಖನದಲ್ಲಿ ಕನ್ನಡ ಚಲನಚಿತ್ರರಂಗ ನಡೆದು ಬಂದ ಹಾದಿಯನ್ನು ಗುರುತಿಸುವ ಬದಲು ಹಲವಾರು ಕಂತುಗಳಲ್ಲಿ ಬರೆದುಕೊಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದೆ. ಬಸು ಒಪ್ಪಿದರು. ಯಾವುದೇ ಚೌಕಟ್ಟು ಹಾಕಿಕೊಳ್ಳದೆ ಲೇಖನ ಬರೆಯಲಾರಂಭಿಸಿದೆ. ಆದರೆ ಇತಿಹಾಸ ಬರೆಯುವುದು ಎಷ್ಟು ಕಷ್ಟ ಎಂದು ಎರಡು ಲೇಖನ ಬರೆಯುವ ವೇಳೆಗೆ ತಿಳಿಯಿತು. ಹಾಗಾಗಿ ನಾನು ಓದಿದ, ಕೇಳಿದ ಮತ್ತು ನೋಡಿದ ಕನ್ನಡ ಚಿತ್ರರಂಗದ ಬಗ್ಗೆ ಮಾತ್ರ ಬರೆಯಲು ನನ್ನ ಮೊದಲಿನ ನಿರ್ಧಾರವನ್ನು ಬದಲಿಸಿಕೊಂಡೆ. ಆದರೆ ‘ವಿಕ್ರಾಂತ ಕರ್ನಾಟಕ’ದಲ್ಲಿ ‘ಕನ್ನಡ ಚಲನಚಿತ್ರರಂಗ-೭೫’ ಎಂದು ಅಂಕಣ ಆರಂಭವಾಗಿತ್ತು. ಹಾಗಾಗಿ ನಾನು ಹಿಂದೆ ಚಿತ್ರಗಳನ್ನು ನೋಡುತ್ತಾ ಮಾಡಿಕೊಂಡಿದ್ದ ಟಿಪ್ಪಣಿಗಳಿಗಾಗಿ ಹುಡುಕಾಡಿದೆ. ಊರಿಂದ ಊರು, ಮನೆಯಿಂದ ಮನೆಗಿನ ಯಾತ್ರೆಯಲ್ಲಿ ಎಷ್ಟು ಕಳೆದುಹೋಗಿದ್ದವು. ನನ್ನಲ್ಲಿದ್ದ ಚಲನಚಿತ್ರಗಳ ಬಗೆಗಿನ ಸ್ಮರಣ ಸಂಚಿಕೆ, ಕೃತಿಗಳನ್ನೆಲ್ಲ ಹರಡಿಕೊಂಡೆ. ಮುಖ್ಯವಾಗಿ ನನ್ನ ನೆನಪನ್ನು ನೆಚ್ಚಿದ್ದೆ. ಈ ಎಲ್ಲ ಮೂಲಗಳಿಂದ ತುಣುಕುಗಳನ್ನು ಹೆಕ್ಕಿ ಅಂಕಣ ಬರಹ ತರುವ ಒತ್ತಡದ ಕುಲುಮೆಯಲ್ಲಿ ಬಡಿದು ಲೇಖನಗಳಿಗೆ ರೂಪ ಕೊಟ್ಟಿದ್ದೇನೆ. ಇದು ಖಂಡಿತಾ ಕನ್ನಡ ಚಲನಚಿತ್ರರಂಗದ ಇತಿಹಾಸವಲ್ಲ. ನಾನು ನನ್ನ ಅನುಭವಗಳ ಹಿನ್ನೆಲೆಯಲ್ಲಿ ಕಂಡ ಚಲನಚಿತ್ರಲೋಕ.
ಈ ಲೇಖನ ಮಾಲಿಕೆಯನ್ನು ಬರೆಯಲು, ಕೃತಿಯಾಗಿ ಹೊರಬರಲು ಅನೇಕ ಮಹನೀಯರು ಕಾರಣ. ಮುಖ್ಯವಾಗಿ ನನ್ನ ಸಿನಿಮಾಯಾನದಲ್ಲಿ ಸಹ ಪ್ರಯಾಣಿಕರಾಗಿದ್ದ ರಾಧಾಕೃಷ್ಣ, ಬಾಲಚಂದ್ರ, ಕೆ.ಆರ್. ರವೀಂದ್ರ, ಸಿ. ಜಯರಾಂ, ಬಿ.ಎಸ್. ಪುಟ್ಟಸಿದ್ದಯ್ಯ ಅವರಿಗೆ ನನ್ನ ಮೊದಲ ನೆನಕೆಗಳು. ಬಸವರಾಜು ಅವರು ಮನಸ್ಸು ಮಾಡದಿದ್ದರೆ ನಾನು ಎಂದೂ ಈ ಪ್ರಯತ್ನಕ್ಕೆ ಕೈ ಹಾಕುತ್ತಿರಲಿಲ್ಲ. ಲೇಖನ ಮಾಲಿಕೆಗೆ ಸೂಕ್ತವಾದ ಚಿತ್ರಗಳನ್ನು ಆಯ್ದು ನಂತರ ಕೃತಿರೂಪಕ್ಕೆ ತರುವಾಗ ಪುಟ ವಿನ್ಯಾಸಗೊಳಿಸಿರುವ ‘ಬಸು’ರವರ ಪರಿಶುದ್ಧ ಪ್ರೀತಿಗೆ ಕೃತಜ್ಞತೆಗಳು ಸಾಲವು. ಹಾಗೆಯೇ ಈ ಲೇಖನ ಮಾಲಿಕೆಯನ್ನು ಪ್ರಕಟಿಸಲು ಔದಾರ್ಯದ ಜೊತೆಗೆ ಇಪ್ಪತ್ತು ಕಂತುಗಳಾದಾಗ ತಮ್ಮ ಸಂಪಾದಕೀಯದಲ್ಲಿ ಅಭಿನಂದನೆಯ ಮಾತುಗಳನ್ನು ಬರೆದು ನಾನು ಸಂಕೋಚದಿಂದ ಮುದ್ದೆಯಾಗುವಂತೆ ಮಾಡಿದ ರವೀಂದ್ರ ರೇಷ್ಮೆಯವರಿಗೂ, ಪ್ರಕಾಶಕ ಪ್ರಸನ್ನಯ್ಯ ಮತ್ತು ‘ವಿಕ್ರಾಂತ ಕರ್ನಾಟಕ’ ಬಳಗದ ರಾಥೋಡ್, ಮಲ್ಲನಗೌಡರ್, ಕಗ್ಗೆರೆ ಪ್ರಕಾಶ್, ಪವಿತ್ರ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಲೇಖನ ಮಾಲೆ ಆರಂಭವಾದಂದಿನಿಂದ ಆಗಾಗ್ಗೆ ತಮ್ಮ ಎಂದಿನ ಅಭಿಪ್ರಾಯಗಳನ್ನು ಹೇಳುತ್ತಾ ಪ್ರೋತ್ಸಾಹಿಸಿದ ಹಿರಿಯರಾದ ಪ್ರೊ. ಶಿವರಾಮಯ್ಯ, ಪ್ರೊ. ಎಂಜಿಕೆ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಡಿ.ರಾಮಾ ನಾಯಕ್, ಕೆವೈನಾ, ಡಾ.ಆರ್. ಶಿವಪ್ಪ, ಲಕ್ಷ್ಮೀಪತಿ ಕೋಲಾರ, ಜೆಪಿ, ‘ಪರಿಸರ’ ಪ್ರಸನ್ನ, ಡಿ.ಎಸ್.ನಾಗಭೂಷಣ, ಕೃಷ್ಣ ಮಾಸಡಿ, ಅಗ್ರಹಾರ ಕೃಷ್ಣಮೂರ್ತಿ, ಸತ್ಯಮೂರ್ತಿ ಆನಂದೂರು, ಜೆಸುನಾ, ಕುಂವೀ, ಪತ್ರಕರ್ತರಾದ ಸಂಜಯ ದೊರೆ, ಲಕ್ಷ್ಮಿನಾರಾಯಣ ಹಾಗೂ ಲೇಖನವನ್ನು ಓದಿದ ಕೂಡಲೇ ಗದಗಿನಿಂದ ಕರೆ ಮಾಡಿ ತಬ್ಬಿಬ್ಬುಗೊಳ್ಳುವಷ್ಟು ಪ್ರೀತಿಯಿಂದ ಲೇಖನವನ್ನು ವಿಮರ್ಶಿಸುತ್ತಿದ್ದ ರವೀಂದ್ರನಾಥ ದೊಡ್ಡಮೇಟಿ, ಕ್ಯಾಲಿಫೋರ್ನಿಯಾದ ಮಧುಕೃಷ್ಣಮೂರ್ತಿ, ‘ವಿಕ್ರಾಂತ ಕರ್ನಾಟಕ’ದ ಅನೇಕ ವಾಚಕ ಮಹಾಶಯರಿಗೆ, ಅವರು ಪತ್ರ ಬರೆದು ಪ್ರತಿಕ್ರಿಯಿಸಿದ ಪರಿಗೆ ನನ್ನ ಹೃದಯಾಂತರಾಳದ ವಂದನೆಗಳು.
ಈ ಕೃತಿಗೆ ಅನೇಕ ಚಿತ್ರಗಳನ್ನು ಒದಗಿಸಿಕೊಟ್ಟ ವಾರ್ತಾ ಇಲಾಖೆಯ ಗೆಳೆಯರಾದ ಟಿ.ಸೋಮಶೇಖರ್, ಮೂರ್ತಿ ಮತ್ತು ಚಂದ್ರಶೇಖರ್‌ರವರನ್ನು, ಲೇಖನಗಳನ್ನು ಅಕ್ಷರ ಸಂಯೋಜಿಸಿಕೊಟ್ಟ ಸಹೋದ್ಯೋಗಿ ಎಸ್. ನಾರಾಯಣ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ.
ಎಂದಿನಂತೆ ಈ ಕೃತಿಗೆ ಮುನ್ನುಡಿಯನ್ನು ಬರೆದು, ಮುಖಪುಟ ವಿನ್ಯಾಸಗೊಳಿಸಿದ, ನನ್ನ ಸಿನಿಮಾ ಯಾನದಲ್ಲಿ ಸಹ ಯಾತ್ರಿಕನಾಗಿರುವ ಯಾವತ್ತೂ ಗೆಳೆಯ ಶಂಕರ(ಎನ್.ಎಸ್. ಶಂಕರ್)ನಿಗೆ ಅಖಂಡವಾದ ಪ್ರೀತಿಯ ನೆನಕೆಗಳು. ಹಾಗೆಯೇ ಕನ್ನಡ ಚಿತ್ರರಂಗವು ಎಪ್ಪತ್ತೈದು ವರ್ಷಗಳು ತುಂಬಿದ ನೆಪದಲ್ಲಿ ಈ ಕೃತಿಗೆ ಒಪ್ಪುವಂತೆ ‘ಮೊದಲ ಮಾತು’ ಬರೆದುಕೊಟ್ಟ ಸಂಸ್ಕೃತಿ ಚಿಂತಕರಾದ ಡಾ.ಕೆ.ವಿ. ನಾರಾಯಣ ಅವರಿಗೆ ವಂದನೆಗಳು.
ಈ ಕೃತಿ ರಚನೆಯ ಸಮಯದಲ್ಲಿ ಸದಾ ಕಾಲ ಪ್ರೋತ್ಸಾಹ ನೀಡಿದ ಮಿತ್ರರಾದ ಎಚ್.ಆರ್.ಜಗದೀಶ್ ಹಾಗೂ ಟಿ.ಡಿ.ನಂಜುಂಡಪ್ಪ ಅವರನ್ನು ನೆನೆಯುತ್ತೇನೆ.
ಪುಸ್ತಕದ ಮುದ್ರಣದ ಉಸ್ತುವಾರಿಯನ್ನು ಹೊತ್ತುಕೊಂಡ ಅಭಿಮಾನಿ ಪ್ರಕಾಶನದ ಮಾಲೀಕರಾದ ಶ್ರೀ ಟಿ.ವೆಂಕಟೇಶ್ ಮತ್ತು ಗೆಳೆಯರೂ ಆದ ಟಿ.ನಾಗರಾಜ್ ಹಾಗೂ ಚೆನ್ನಪ್ಪ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಕೊನೆಯದಾಗಿ ಓದುಗರಲ್ಲಿ ಒಂದು ಮನವಿ. ಈ ಲೇಖನಗಳೆಲ್ಲವೂ ‘ವಿಕ್ರಾಂತ ಕರ್ನಾಟಕ’ ಪತ್ರಿಕೆಯ ದಿನಾಂಕ ೧೮ನೇ ಏಪ್ರಿಲ್ ೨೦೦೮ರಿಂದ ಜುಲೈ ೩೧, ೨೦೦೯ರವರೆಗಿನ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ವರ್ಷ ಮುಗಿದ ನಂತರವೂ ಕೆಲವು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಲೇಖನಗಳಲ್ಲಿ ಕಾಲದ ಪ್ರಸ್ತಾಪ ಬಂದಾಗ ಅವು ಪ್ರಕಟಗೊಂಡ ಕಾಲದ ಮಿತಿಗೆ ಸೇರಿವೆ ಎಂಬುದನ್ನು ಓದುಗರು ಮರೆಯಬಾರದು.
*