ಕತ್ತಲ ಕಡಲಲಿ ಸಾಗುತ್ತಲೆ ಇವೆ
ಬೆಳಕಿನ ದೋಣಿಯ ಸಾಲುಗಳು,
ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ
ನಕ್ಷತ್ರದ ಮಣಿಮಾಲೆಗಳು.
ಹಸಿರಿನ ಅಗಾಧ ಹಸರದ ಮೇಲೆ
ಖುಷಿಯಲಿ ಆಡಿವೆ ಹೂವುಗಳು,
ಕತ್ತಲ ಕೊನೆಯ ಸಾರುತ ಹಕ್ಕಿಯ
ಹಾಡನು ತುಳುಕಿವೆ ಗೂಡುಗಳು.
ಬೆಳಕಾಗದ ಗೂಢಗಳೆಷ್ಟೋ ಇವೆ
ಅರಿವಿನ ಮೋರೆಯ ತಿವಿಯುತ್ತ,
ಆದರು ನಡೆದಿದೆ ಬೆಳಕಿನ ಕಾಯಕ
ಹನಿ ಹನಿ ಕತ್ತಲ ಕುಡಿಯುತ್ತ.
ಬರೀ ಕತ್ತಲೆ ಹಬ್ಬಿತ್ತೆಲ್ಲೂ
ಒಂದಾನೊಂದು ಕಾಲದಲಿ,
ಇಷ್ಟಾದರು ಬೆಳಕಾಗಿದೆ ಈಗ
ಬೆಳಕೇ ಗೆದ್ದಿದೆ ಯುದ್ಧದಲಿ!
*****