ಹೂಗಳ ಮೌನ ಮಾತಾಗುವ ಹೊತ್ತು
ನಾನು ಅರಳಬೇಕಷ್ಟೇ…
ವಿಷಾದದ ಹಗಲು
ಹಳತಾದ ರಾತ್ರಿಗಳು
ಹಳೆಯ ಕಾಗದದ ಪುಟದಂತೆ
ಅಟ್ಟಸೇರಿ ಎಷ್ಟೋದಿನ ಮೌನದಿ ಮಲಗಿದಂತೆ
ರಾತ್ರಿಗಳಿಗೂ ವಯಸ್ಸಾಗುತ್ತದೆ
ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ
ಬಯಲು ಬಿಕ್ಕಳಿಸುವ ಸಮಯ
ನಿನ್ನೆಗಳು ಮುಗ್ಗರಿಸಿ ಬಿದ್ದಿವೆ
ನಿನ್ನೆಗೆ ಕಂದನ ಪಾದವಾಗಿ
ವರ್ತಮಾನದ ಎದೆಗೆ ಒದೆಯುವ ಬಯಕೆ
ನಗರ ವಿಷಾದ ಹೊದ್ದು ಮಲಗುವ ಸಮಯ
ನಿನ್ನೆಗಳು ನಮ್ಮವಾಗಿದ್ದವು
ವರ್ತಮಾನ ನಮ್ಮದಲ್ಲ
ನಾಳೆಯೂ ಗೊತ್ತಿಲ್ಲ
ಗೊಂದಲದ ಬದುಕಿನಲಿ ಹಂಬಲ
ಮೊಳಕೆಗೆ ಮುನ್ನ ಸೋಲುತಿದೆ
ವರ್ತಮಾನಕೆ ಕಳೆದುದರ ಚಿಂತೆ ಹಳಹಳಿಕೆ
ನದಿ ದುಃಖಿಸುವ ಸಮಯ
ಹಾಗಿತ್ತು ಹೀಗಾಗಬೇಕಿತ್ತು ಏನಾಗಿಹೋಯಿತು ಹೀಗೆ ಬದಲಾಗಬಹುದು
ಕಷ್ಟ ; ಈ ಹಾಳು ಮನಸು ಬಂಧನಗಳ ಈ ಬಂಧನದಲ್ಲಿ
ಆ ಅದು ಸಾಧ್ಯವಿಲ್ಲ ಬಿಡು
ಕನಸು ಕಾಣಬೇಡ , ಮಾತು ಕೊಡಲಾರೆ ….
ಹಕ್ಕಿಗಳು ಗೂಡು ಸೇರುವ ಸಮಯ
ಈ ಮನುಷ್ಯರ ಗೊಣಗಾಟಗಳಲ್ಲಿ ವರ್ತಮಾನವೂ ಮುಪ್ಪಾಗಿ
ನಿನ್ನೆಯ ಹಳೆಯ ಪುಟಕ್ಕೆ ಸೇರುವ ಮುನ್ನ
ಎಲ್ಲವೂ ಶೃಂಗಾರ, ನಾನು ನೀನು
ಬೆತ್ತಲೆಯ ನದಿ ಬೆಟ್ಟ ಬಯಲು ಚಂದ್ರ ಹೂ ತಾರೆ
ನಿನ್ನೆ ಇವತ್ತು ನಾಳೆ ನಾಡಿದ್ದು
ನಾಲಿಗೆಗಳು ಶಬ್ದವಿಲ್ಲದ ಯುದ್ಧ ಮಾಡುವ ಸಮಯ
*****