ತಾರಣ ವರುಷದ ನಾಲ್ಕನೆ ಮಾಸದ
ಅಂತ್ಯದ ದಿನವದು ಮುಂಜಾನೆ
ಊರಿನ ಜನರಿಗೆ ಹೇಳಲು ತೀರದ
ಸಡಗರ ತುಂಬಿದೆ ಬಿಡುವಿಲ್ಲ
ದಾನವು ಧರ್ಮವು ದಾಸರ ಪದಗಳು
ಸ್ನಾನವು ಜಪಗಳು ನಡೆದಿಹುವು
ಏನಿದು ಎಂದರೆ ಬಾಲಕನೊಬ್ಬನು
ಕನ್ನಡಿಯೊಂದನು ತೋರಿದನು
ಮಸಿಯನು ಪೂಸಿದ ಮುರುಕಿನ ಕನ್ನಡಿ
ಕಂಗಳಿಗಿಟ್ಟನು ನೋಡೆಂದು
ನೀಲಿಯ ಭವನದಿ ಕಾಂತಿವಿಹೀನದ
ಸ್ವಾಮಿಯ ಕಂಡೆನು ಕಾತರದಿ
ಧಗಧಗಿಸುವ ಆ ಕಿರಣಗಳಿಲ್ಲದೆ
ಭಿನ್ನದ ಮೂರುತಿ ಕಾಣಿಸಿತು
‘ರಾಹುವೊ ಕೇತುವೊ ನುಂಗಿವೆ ಸೂರ್ಯನ
ತಿಳಿಯಿತೆ’ ಎಂದನು ಬಾಲಕನು
ಸೃಷ್ಟಿಯನೆಲ್ಲವ ಪಾಲನೆ ಮಾಡುವ
ಸೂರ್ಯನ ಪಾಡನು ನೋಡಿದೆನು
ತಿವಿದನು ಕವಿ ಹೃದಯವ ಆ ಭಾಸ್ಕರ
ಮಗಳೇ ವಿಧಿಯನು ನೋಡೆಂದು
ಏನಿದು ಅಚ್ಚರಿ ಓ ರವಿ ದೇವಾ
ನಿನಗೂ ವಿಧಿಯಾಜ್ಞೆಯು ಉಂಟೇ?
ಬಾನೊಳು ಧಗಿಸುವ ಮಿಹಿರನ ಕೂಡ
ಬಂಧಿಸಿ ಕೆಡಿಸಿತೆ ಆ ವಿಧಿಯು
ನೀನಿರುತಿಹ ಬಹುದೂರದ ಭವನವು
ಕಲ್ಮಷವಿಲ್ಲದ ಆಗಸವು
ನಿನ್ನೊಳು ತುಂಬಿದೆ ಜಗವನು ಬೆಳಗಿಸಿ
ನಿತ್ಯವು ನಡಸುವ ಸಾಹಸವು
ಭುವಿಯನೆ ಕುದಿಸುತ ಪ್ರಜ್ವಲಿಸುವ ಪ್ರಭು
ವಿಧಿಯನು ಗೆಲ್ಲಲು ಅಸದಳವೆ?
ಎದುರಿಸಿ ನಿನ್ನಾ ಜ್ವಾಲೆಯ ಝಳಪಿಸಿ
ಸಹಿಸದೆ ಪೋದೆಯ ಆ ವಿಧಿಯ?
ಆಗದು ಆಗದು ಎಂದಿಗು ಮಗಳೇ
ಸಾಹಸಿಯಾ ವಿಧಿ ಚಿರಜೀವಿ!
ಬಾಳಿನ ತಳಿರಿನ ಕುಡಿಗಳ ಚಿವುಟುತ
ಕಿಲಿ ಕಿಲಿ ನಗುವುದೆ ಅವನಾಟ!
ಸುಖದೊಳು ದುಃಖದ ಮೊಳಕೆಯ ನಾಟಿಸಿ
ಕಂಬನಿಗರಸುತ ಬೆಳಸುವನು
ರೋದನ ದನಿಯನು ಕೇಳುತ ಹರುಷದಿ
ಕರತಾಡನದಿಂ ಕುಣಿಯುವನು
ಇಂತಿರು ಅಂತಿರು ಎನ್ನುತ ಸೃಷ್ಟಿಯ
ನಿಯಮಿಸಿ ಆಜ್ಞೆಯ ವಿಧಿಸುವನು
ಯಂತ್ರ ವಸ್ತುಗಳಾಗಿಹೆವೆಲ್ಲರು
ಆ ವಿಧಿ ಶಾಸನದಡಿಯೊಳಗೆ
ಮಾನುಷ ಯತ್ನಕೆ, ಸೌಖ್ಯಕೆ ದೈವವು
ನಾನಾ ಘಾತವ ತಂದಂತೆ
ಬಾನೊಳು ಸುಳಿಯುತ ಸುಖಿಸವ ನನ್ನನು
ಕ್ರಾಂತಿಯು ಕ್ಷಣದೊಳು ಕೆಡಿಸಿಹುದು
ವಿಧಿ ನಿಯಮದ ಒಂದಾಜ್ಞೆಯು ಮೀರದೆ
ಸಲಿಸುತ ಬಂದಿದೆ ಯುಗ ಯುಗವು
ನಾವದನೆದುರಿಸಲಾಗದು ಅಮ್ಮಾ
ಜನಕಜೆ ಎಂದನು ದಿನಕರನು
*****