ಲಲಿತಾಂಗಿ

ತುಂಬು ಜವ್ವನದಬಲೆ
ಪತಿರಹಿತೆ ಶೋಕಾರ್ತೆ
ಕಾಡುಮೇಡನು ದಾಟಿ
ಭಯದಿಂದ ಓಡಿಹಳು
ಒಬ್ಬಳೇ ಓಡಿಹಳು
ಅಡಗಿಹಳು ಗುಹೆಯಲ್ಲಿ
ಬಾಲೆ ಲಲಿತಾಂಗಿ.

ಹುಲಿಕರಡಿಯೆಲ್ಲಿಹವೊ
ವಿಷಸರ್ಪವೆಲ್ಲಿಹವೊ
ಎಂದಾಕೆ ನಡುಗಿಹಳು
ನಡುಗಿ ಗುಹೆಯನ್ನು ಬಿಟ್ಟು
ಮುಂದೆ ಮುಂದೋಡಿಹಳು
ಮೈಮರೆತು ಓಡಿಹಳು
ಬಾಲೆ ಲಲಿತಾಂಗಿ.

ಹಿಂದೆ ನೋಡಿದರತ್ತ
ರಾವುತರು ಬರುತಿಹರು
ವೇಗದಿಂದಟ್ಟಿಹರು
ಹಗಲೆಲ್ಲ ಹಗಲೆಲ್ಲ
ಓಡಿಹಳು ಚೀರುತ್ತ
ಬೀಳುತ್ತ ಏಳುತ್ತ
ಬಾಲೆ ಲಲಿತಾಂಗಿ.

ದೀನ ರಕ್ಷಕನೆಂಬ
ಬಿರುದಿಂದು ದೇವಂಗೆ
ಎಂತು ಸಲುವದೊ ಕಾಣೆ
ಆರಿಂದು ದೇವಿಯನು
ಚೆಲುವೆಯನು ಬಾಲೆಯನು
ಆರ್ತೆಯನು ಕಾಯುವರು
ದಂಡನಾಥನ ಮಡದಿ
ಲಲಿತಾಂಗಿ ದೇವಿಯನು.

ಕಂದಿಹಳು ಕುಂದಿಹಳು
ಗುರುತಿಪರು ಆರಿಲ್ಲ.
ಬಿಟ್ಟ ಮಂಡೆಯು ಕೆದರಿ
ಮೈಯೆಲ್ಲ ಧೂಳಾಗಿ
ಉಟ್ಟ ಸೀರೆಯು ಹರಿದು
ಹೆದರಿ ಓಡುತಲಿಹಳು
ರಾಹು ಕೈ ಚಂದ್ರನೋ
ಗತಿಗೆಟ್ಟ ದೇವಿಯೋ
ರತಿಯೊಂದು ಪ್ರೇತವೋ
ಮಾನವಿಯು ಇವಳಲ್ಲ
ಹುಚ್ಚುರೂಪನು ತಾಳಿ
ಕಿಚ್ಚನೊಡಲಲಿ ತಾಳಿ
ವನದೇವಿ ಓಡಿಹಳು
ಚೆಲುವು ಕಣಿ ಓಡಿಹಳು
ದಂಡನಾಥನ ಮಡದಿ
ಬಾಲೆ ಲಲಿತಾಂಗಿ.

ಕಲ್ಲು ಮುಳ್ಳನು ತುಳಿದು
ಕಾಲೆಲ್ಲ ಸಿಡಿಯುತಿದೆ
ಕೆನ್ನೀರು ಹರಿಯುತಿದೆ
ನಿಲಲಿಲ್ಲ ನಿಲಲಿಲ್ಲ
ಕಾಡೊಳಗೆ ನೆಲೆಯಿಲ್ಲ
ಆರ್ತರಿಗೆ ದಿಕ್ಕಿಲ್ಲ
ಓಡಿಹಳು ಲಲಿತಾಂಗಿ.

ಹೇಷೆಗಳ ಕೆಲೆವುಗಳು
ಖುರಪುಟದ ಸಪ್ಪಳವು
ರಾವುತರ ಕೇಕೆಗಳು
ಕಾಡಿನಲಿ ತುಂಬುತ್ತ
ಮಾರುದನಿ ತೋರುತ್ತ
ಖಗ ಕುಲವ ಹಾರಿಸಲು
ಮೃಗತತಿಯನೋಡಿಸಲು
ಓಡಿದುವು, ಓಡುತಿರೆ
ಬಾಲೆ ಲಲಿತಾಂಗಿ.

ಕನಕ ಪುತ್ತಳಿಯಂತೆ
ಸಿಂಗರದ ಸಿರಿಯಂತೆ
ಮಧುಮಾಸ ವನದಂತೆ
ಚೆಲ್ವಿನಿಂ ತೀವಿರುವ
ಪೆಣ್ಮಣಿಯು ಕೋಮಲೆಯು
ಮೇಲುಸಿರು ಸೂಸುತ್ತ
ಶಕ್ತಿಯದು ಕುಂದುತ್ತ
ಬಾಯಾರಿ ಸೊರಗಿಹಳು
ತಲ್ಲಣಿಸಿ ನಿಂದಿಹಳು
ಬಾಲೆ ಲಲಿತಾಂಗಿ.

ಮರ ಮರದ ಮರೆಯಲ್ಲಿ
ನಿಂತು ನೋಡುತ ಬಾಲೆ
ರಾವುತರ ತಂಡವನು
ರಾಕ್ಷಸರ ತಂಡವನು
ಕುಸಿಯುತ್ತ ಮುಗ್ಗುತ್ತ
ಕಣ್ಣೀರು ತುಂಬುತ್ತ
‘ಹೆಣ್ಣಾಗಿ ಹುಟ್ಟುವುದು
ರೂಪವತಿಯಾಗಿಹುದು
ಏರು ಜವ್ವನವಿಹುದು
ಕೇಡಿಂಗೆ ಕಾರಣವು’
ಎಂದಾಕೆ ಮರುಗುತ್ತ
ಭೀತಿಯಿಂದೋಡಿಹಳು
ದಂಡನಾಥನ ಮಡದಿ
ಬಾಲೆ ಲಲಿತಾಂಗಿ.

“ಎನ್ನ ಪತಿ ಕಣ್ಮುಚ್ಚಿ
ಪರದೇಶಿಯಾದೆನೈ
ಕಾಯುವರು ಆರಿಲ್ಲ
ನಿಷ್ಕರುಣಿಯಾಗದಿರು
ಎಲೆ ವಿಧಿಯೆ, ಬೇಡುವೆನು
ಈಗೆನ್ನ ತೊರೆಯದಿರು
ಅಹಿತರಿಗೆ ನೀಡದಿರು
ಬೇಡುವೆನು ದೈನ್ಯದಲಿ
ಮಾನರಕ್ಷಣಗೆ”
ಎಂದಾಕೆ ದುಃಖದಲಿ
ಕಣ್ಣೀರು ತುಂಬಿದಳು.
ಎರಡು ಚಣ ನಿಲ್ಲುತ್ತ
ಬೆವರನ್ನು ಬಸಿಯುತ್ತ
ಓಡಲಾರದೆ ನಿಂದು
ದೃಷ್ಟಿ ಹಿಂದಕೆ ಸಂದು
ಹಿಂದೆಯೇ ರಾವುತರು
ಹೆಜ್ಜೆ ಹೆಜ್ಜೆಯ ಬಿಡದೆ
ಮುಂಬರಿದು ಬರುತಿರಲು
ಮತ್ತೆ ಬಿಟ್ಟೋಡಿಹಳು
ಬಾಲೆ ಲಲಿತಾಂಗಿ.

ಭಯದಿಂದ ಓಡುತಿರೆ
ಓಡುತ್ತ ಬೀಳುತಿರೆ
ಸೂರ್ಯನುಂ ಬೀಳುತಿರೆ
ಹೊತ್ತು ಹೋಗುತ ಬಂತು
ಕಪ್ಪುಕವಿಯುತ ಬಂತು
ಅಲ್ಲಲ್ಲಿ ತಾರೆಗಳು
ಮೂಡಿದುವು ಮಿನುಗಿದುವು
ಮಸಕಿನಲಿ ಮುಂದೊಂದು
ಹೆದ್ದೊರೆಯು ಕಾಣಿಸಿತು
ಹೆಬ್ಬಾವು ಕಾಣಿಸಿತು
ದಾರಿಯನು ಬಂಧಿಸಿತು.
ತುಂಬು ಹೊಳೆ ಮುಂದುಗಡೆ
ರಾವುತರು ಹಿಂದುಗಡೆ
ದಿಕ್ಕು ತೋರದೆ ನಿಂದು
ಕಣ್ಣು ಸುತ್ತುತ ಬಂದು
ಅರಿವು ಅಳಿಯುತ ಬಂದು
ಮುಂದೆ ಗತಿಯೇನೆಂದು
ತೊರೆ ಸಾವೆ ಮೇಲೆಂದು
ಹೆದ್ದೊರೆಯ ಮಾತೆಯನು
ದೈನ್ಯದಲಿ ಬೇಡಿದಳು
ದಂಡನಾಥನ ಮಡದಿ
ಬಾಲೆ ಲಲಿತಾಂಗಿ.

“ಎಲೆ ತಾಯೆ ! ಇಂಬುಗೊಡು
ಪೆಣ್ಣೊಡಲು ಇಂಬುಗೊಡು
ಶರಣಾಗಿ ಬಂದಿಹೆನು
ಗತಿಗೆಟ್ಟು ಬಂದಿಹೆನು
ಮಾನವನು ಬಿಡಲಮ್ಮೆ
ಜೀವದಿಂದಿರಲಮ್ಮೆ
ಮಾನಾಪಹಾರಿಗಳು
ದುಷ್ಟ ರಾವುತರವರು
ದುಷ್ಟ ರಾಜನ ದಂಡು
ಹಿಂದಟ್ಟಿ ಬರುತಿಹರು
ಎನ್ನ ಪಾಲಿಪರಿಲ್ಲ
ಎನ್ನ ಮೊರೆ ಬಯಲಾಯ್ತು
ಕಷ್ಟದಿಂ ಕಂಗೆಟ್ಟೆ
ಊರು ಮನೆಯನ್ನು ಬಿಟ್ಟೆ
ಕಾಡಿನಲಿ ಬೇಸತ್ತೆ
ಆರ್ತರಿಗೆ ದಿಕ್ಕಿಲ್ಲ
ಭೂತನಾಥನ ಸೇವೆ
ಭುವನೇಶ್ವರಿಯ ಸೇವೆ
ಇಂದಿನಲಿ ಬರಿದಾಯ್ತು
ದಂಡನಾಥನ ಮಡದಿ
ಇಂದು ಈ ಗತಿಯಾಯ್ತು!
ಎಲೆ ತಾಯೆ ಇಂಬುಗೊಡು
ಪೆಣ್ಣೊಡಲು ಇಂಬುಗೊಡು
ಬಂದಿಹೆನು ಶರಣಾಗಿ”
ಎಂದಬಲೆ ಬೇಡಿದಳು
ಕಣ್ಣೀರು ಸುರಿಸಿದಳು
ಬಾಲೆ ಲಲಿತಾಂಗಿ.

“ಬಾ ಮಗಳೆ ! ಬಲು ಬಳಲಿ
ಬಸವಳಿದು ಬಂದೆ, ಬಾ !
ಮಾನವನು ಕಾಯುವೆನು
ಕೀರ್ತಿಯನ್ನು ಸಾರುವೆನು
ನೊಂದ ಜೀವನ ಸಲಹಿ
ತಣ್ಣಿನೊಳು ಸೈತಿಟ್ಟು
ಸಂತೈಸಿ ಪೊರೆಯುವೆನು”
ಎಂಬೊಂದು ಮೃದು ಮಧುರ
ಭಾಷಣವು ಕೇಳಿಸಿತು
ಕೇಳುತಿರೆ ಭೀತಿಯಲಿ
ಬಾಲೆ ಲಲಿತಾಂಗಿ.

ತಿರುಗಿ ನೋಡಿದಳೊಮ್ಮೆ
ನಡುಗಿದಳು ಮಗುದೊಮ್ಮೆ
ಮುಂದೆ ನೋಡಿದಳೊಮ್ಮೆ
ಭೀತಿಯಿಂ ಕಡೆಗೊಮ್ಮೆ
ಒಂದೆ ನಿಮಿಷದ ಆಯು
ಮರುಚಣವೆ ಕತ್ತಲೆಯು
ಬಿಮ್ಮೆಂಬ ಕತ್ತಲೆಯು
ಕತ್ತಲೆಯ ಹೆಗ್ಗವಿಯು
ಏನಿಹುದೋ ಎಂತಹುದೊ !
ಹೆದರಿದಳು ನಡುಗಿದಳು ;
ಜೀವವಾಹಿನಿಯಲ್ಲ
ಜೀವಾಪಹಾರಿಣಿಯು
ನೀಲ ಮೃತ್ಯುಚ್ಛಾಯೆ
ಕಾಲಪಾಶಚ್ಛಾಯೆ
ನೋಡಿದಳು ನಡುಗಿದಳು ;
ಮುಂದಿಹುದು ತೊರೆ ಸಾವು
ಮಾನದಿಂದಾ ಸಾವು
ಎದೆಗೆಡಲು ಬಾಳುಂಟು
ಏ ಬಾಳೆ ! ತೆಗೆಯೆಂದು
ಎದೆ ಗಟ್ಟಿ ಮಾಡಿದಳು
ಹೆದ್ದೊರೆಯ ನೋಡಿದಳು
ಬಾಲೆ ಲಲಿತಾಂಗಿ.

ಮಾನವನೆ ಬಯಸುತ್ತ
ತನ್ನ ಕತೆ ನೆನೆಯುತ್ತ
ದುಃಖದಿಂ ತುಂಬುತ್ತ
ನರಪತಿಗೆ ಮುನಿಯುತ್ತ
“ಪರರೊಡವೆ ಬಯಸುವರು
ಪರವಧುವ ಕೋರುವರು
ಲೋಕ ಕಂಟಕರಿವರು
ವಂಶವಿದು ಬೆಳೆಯದಿರಲಿ;
ಕ್ರೂರ ಶತ್ರುಗಳಿವರ
ರಾಜ್ಯದೈಸಿರಿ ಪಿಡಿದು
ಭೋಗ ಭಾಗ್ಯವ ಪಿಡಿದು
ಇವರ ಮಡದಿಯರೊಡವೆ
ಇವರ ಮಡದಿಯರುಡುಗೆ
ಸುಲಿಸುಲಿದು ಪೊರಡಿಸಲಿ
ಗತಿಗೆಡಿಸಿ ನರಳಿಸಲಿ
ಎನ್ನೊಡಲ ಕಷ್ಟಗಳು
ಎಂದೆಂದು ಮರೆಯದಿರಲಿ”
ಎಂದು ಬಿರುನುಡಿ ನುಡಿದು
ಕಣ್ಣೀರು ಹರಿಯುತಿರೆ
ತುಂಬು ಹೊಳೆ ಹರಿಯುತಿರೆ
ದುಃಖ ಮೂರ್ಛಿತೆಯಾಗಿ
ಕ್ರೋಧ ಮೂರ್ಛಿತೆಯಾಗಿ
ಶಪಿಸಿದಳು ಬಾಲೆ
ತುಂಬು ಹೊಳೆ ಪಾಲಾಗಿ
ಬಿದ್ದಳಾ ಬಾಲೆ.

ಕಾರ್ಮೋಡ ತಂಡಗಳು
ಸಿಡಿಲು ಕಿಡಿಗಳ ಸೂಸಿ
ನಭದಲ್ಲಿ ಗಜರಿದವು
ಬೆಟ್ಟಗಳು ಮೊಳಗಿದವು
ಭೂಮಾತೆ ನಡುಗಿದಳು
ಕತ್ತಲೆಯ ಮೊತ್ತದಲಿ
ಕಾಳರಕ್ಕಸಿ ರೂಪು
ದೆಸೆದೆಸೆಗೆ ಮೂಡಿದುದು
ಪರರೊಡವೆ ಬಯಸುವರ
ಕಬಳಿಸುವ ತೆರದಲ್ಲಿ.

ಇಲ್ಲೊಮ್ಮೆ ಮುಳುಗಿದಳು
ಅಲ್ಲೊಮ್ಮೆ ತೇಲಿದಳು
ಬಂಡೆಯನು ತಾಗಿದಳು
ಸಾವೆಂದು ಕೂಗದೆಯೆ
ಭಯವೇನು ಇಲ್ಲದೆಯೆ
ತೇಲಿದಳು ಮುಳುಗಿದಳು ;
ಕೊಚ್ಚಿ ಹೋದಳು ದೂರ
ಪಾಪಿ ನೆಲದಿಂ ದೂರ
ಮುಳುಗಿದಳು ತೇಲಿದಳು ;
ಸುಳಿಯಲ್ಲಿ ಸಿಕ್ಕಿದಳು
ಸುಳಿಯೊಡನೆ ಸುತ್ತಿದಳು
ಬಿಟ್ಟ ಮಂಡೆಯು ಚೆದರಿ
ಉಟ್ಟ ಸೀರೆಯು ಉಬ್ಬಿ
ಸುತ್ತುತ್ತ ಇಳಿಯುತ್ತ
ಚೆಲುವು ಮುಖ ತಿರುಹುತ್ತ
ತಣ್ಪೀವ ತಾಯಿಯನು
ನೆರೆಪೊರೆವ ತಾಯಿಯನು
ತೆಕ್ಕೆಯಲಿ ಬಿಗಿದಪ್ಪಿ
ನಲ್ಮೆಯಿಂ ಕಣ್ಮುಚ್ಚಿ
ಮೆಲುಮೆಲನೆ ಇಳಿದಿಳಿದು
ನರಲೋಕದತ್ತಣಿಂ
ಮರೆಯಾಗಿ-ಮರೆಯಾಗಿ,
ಪಾಪಿಗಳ ಕಾಮುಕರ
ಕಣ್ಣಿಂದ ಮರೆಯಾಗಿ-
ಜಲದೇವಿಯುದರದೊಳು
ಅಡಗಿ ಹೋದಳು ದೇವಿ
ದಂಡನಾಥನ ಮಡದಿ
ಚೆಲುವೆ ಲಲಿತಾಂಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಉಗಾದಿ…
Next post ಪುಟ್ಟನ ಜ್ಯೋಗ್ರಫಿ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…