ನೋವಿನ ಹೇಳಿಗೆ ಹೊತ್ತ ಭಾರಕ್ಕೆ
ಬಾಗಿದೆ ಲೋಕದ ಬೆನ್ನು
ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ
ಕಂಗಾಲಾಗಿದೆ ಕಣ್ಣು
ಕೊರಳನು ಬಿಗಿಯುವ ಕಣ್ಣಿಯ ಕಳಚಲು
ಬರುವನು ಯಾರೋ ಧೀರ,
ಎಂಬ ಮಾತನ್ನೆ ನಂಬಿ ಕಾಯುತಿದೆ
ಜೀವಲೋಕಗಳ ತೀರ.
ಯಾರ ಬೆರಳುಗಳು ಯಾವ ಕೊರಳಿಗೆ
ಕಟ್ಟಲಿರುವುವೋ ತಾಳಿಯ,
ಯಾರ ಹರಸುವುದೊ ಕಾಣದ ಹಸ್ತ
ಯಾರು ಆಳುವರೊ ನಾಳೆಯ,
ಬರೆಯುವವರಾರೋ ಕಿರಣ ಕಾವ್ಯವ
ಮುಗಿಲಿನ ಹಾಳೆಯ ಮೇಲೆ,
ಏಳು ಕುದುರೆಗಳು ಯಾರ ರಥ ಎಳೆದು
ತೆರೆವುವೊ ಬೆಳಗಿನ ಲೀಲೆ!
ಸುತ್ತ ಏಳುತಿದೆ ಕಾಣದ ಹಾಗೆ
ಹುತ್ತ ಅವನ ಸುತ್ತ,
ಮರಗಳ ಜಪದಲಿ ರಾಮಬ್ರಹ್ಮನ
ಸೃಷ್ಟಿಸಿಕೊಳುತಿದೆ ಚಿತ್ತ;
ಸಾಯಲು ಕ್ರೌಂಚ, ಕಾಯಲು ಕವಿತೆ
ಎದುರು ನೋಡುತಿವೆ ಆಜ್ಞೆ,
ಆರು ಚಕ್ರಗಳ ತೂರಿ ಏರಲಿದೆ
ಸಹಸ್ರಾರಕ್ಕೆ ಪ್ರಜ್ಞೆ.
ಆ ಸೌಭಾಗ್ಯದ ಬರವ ಕಾಯುತಿದೆ
ಕವಿತೆಯ ಪಾದ, ಪಲ್ಲವಿ,
ಆ ತಾರಕಕೆ ಮೆಟ್ಟಿಲ ಕಟ್ಟಿದೆ
ಶ್ರುತಿ ಲಯ ಸರಿಗಮಪದನಿ,
ಆ ಶ್ರೀ ಚಿತ್ರಕೆ ಗೆರೆಯ ಹರಸುತಿದೆ
ಅರುಣನ ಮಲ್ಲಿಗೆ ಕಿರಣ,
ಮೂಡಲ ದಡದಲಿ ಕೆಂಪಗೇಳುತಿದೆ
ಹೊಸ ಅವತಾರದ ಚರಣ!
*****