ಜಯ ಜಯ ಜಯ ಕನ್ನಡ ರಾಜೇಶ್ವರಿ
ಶರಣು ಬಂದೆ ಪಾದಕೆ ಭುವನೇಶ್ವರಿ
ಪಂಪನ ನುಡಿಮಿಂಚಿನ ಮಣಿಮಾಲೆಗೆ
ನಾರಣಪ್ಪ ಕಡೆದ ಭಾವಜ್ವಾಲೆಗೆ
ಶಿಲೆಯೆ ಅರಳಿ ನಗುವ ಕಲೆಯ ಲೀಲೆಗೆ
ಯಾರು ಸಮವೆ ತಾಯಿ ನಿನ್ನ ಚೆಲುವಿಗೆ?
ಶಂಕರ ರಾಮಾನುಜರಲಿ ಸುಳಿಯುವೆ
ಮಧ್ವರ ನವಚಿಂತನದಲಿ ಬೆಳೆಯುವೆ,
ಬಸವಣ್ಣನ ನೀತಿಗೆ, ಅಲ್ಲಮಪ್ರಭು ಪ್ರೀತಿಗೆ
ನಮೋ ಎನುವೆ ದರ್ಶನಗಳ ಜ್ಯೋತಿಗೆ.
ಕಾವೇರಿಯ ಸಿರಿಪಯಿರಿನ ಹಾಡಿಗೆ
ಮಿಂಚುನಗೆಯ ಶರಾವತಿಯ ಬೀಡಿಗೆ
ವಿರೂಪಾಕ್ಷ ಚಾಮುಂಡಿಯ ಜೋಡಿಗೆ
ಮಣಿದೆ ನೂರು ವೈಭವಗಳ ನಾಡಿಗೆ.
*****