ಮುಗಿಲ ಚುಂಬನವಿಡುವ ಆಕಾಶದೆತ್ತರಕೆ ಬೆಳೆದುನಿಂತು, ಕೈ ಮಾಡಿ ಕರೆಯುವ ಬೆಟ್ಟಗಳ ಸಾಲುಗಳ ಮಧ್ಯ ಇರುವ ತುಮಕೂರ ಜಿಲ್ಲೆಯ ಮಧುಗಿರಿಯಲ್ಲಿ ದಿನಾಂಕ ೨೧-೧೧-೯೮ ರಿಂದ ೨೪-೧೧-೧೯೯೮ರವರೆಗೆ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ತಾಲ್ಲೂಕ ಕನ್ನಡ ಶಕ್ತಿಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಬರಗೂರರ ಚಲನಚಿತ್ರೋತ್ಸವ ಮತ್ತು ಮಧುಗಿರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಹಾಗೂ ೧೯೯೮ರ ‘ಲೀಡ್ಸ್’ದಲ್ಲ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭಾರತ ದೇಶದಿಂದ ಆಯ್ಕೆಗೊಂಡ ಏಕಮೇವ ಚಿತ್ರವಾದ ‘ಕರಡಿಪುರ’ ಚಿತ್ರತಂಡಕ್ಕೆ ಆತ್ಮೀಯ ಅಭಿನಂದನಾ ಸಮಾರಂಭ ಏರ್ಪಟ್ಟಿತ್ತು.
ದಿನಾಂಕ ೨೧-೧೧-೧೯೯೮ ಪ್ರೊ. ಬರಗೂರ ರಾಮಚಂದ್ರಪ್ಪನವರ ನಿರ್ದೇಶನದ ಚಿತ್ರಗಳಾದ ಸೂರ್ಯ, ಕೋಟೆ, ಕರಡಿಪುರ ಕಾರ್ಯಕ್ರಮ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾದ ಚಲನಚಿತ್ರೋತ್ಸವವು ದಿನಾಂಕ ೨೩-೧೧-೯೮ರವರೆಗೆ ಚಲನಚಿತ್ರಗಳು ಪ್ರದರ್ಶನಗೊಂಡವು. ಮರುದಿನ ನಡೆದ ಅಭಿನಂದನಾ ಸಮಾರಂಭಕ್ಕೆ ಚಲನಚಿತ್ರ ನಟ-ನಟಿಯರ ದಂಡೆ ಆಗಮಿಸಿತ್ತು.
ನಾಯಕ ನಟ-ನಟಿಯರಾದ ಕುಮಾರ ಗೋವಿಂದ, ತಾರಾ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಈ ಪೈಕಿ ತಾರಾಳೊಬ್ಬಳನು ಹೊರತುಪಡಿಸಿ ಇನ್ನುಳಿದವರು ಅನಿವಾರ್ಯ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಗೈರಹಾಜರಿಯಿದ್ದರು.
ಸಭೆಯಲ್ಲಿ ಖ್ಯಾತ ನಟ-ನಿರ್ಮಾಪಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ, ತಾರ, ಕರಿಬಸವಯ್ಯ, ಶ್ರೀ ಮತ್ತು ಶ್ರೀಮತಿ ಬರಗೂರವರು, ಪ್ರಹ್ಲಾದ ಬೆಟಗೇರಿ, ಶ್ರೀಮತಿ ರಾಧಾರಾಮಚಂದ್ರ, ಬಾಲನಟರಾದ ಬೇಬಿ ಸುಜೇತಾ, ಮಾಸ್ಟರ್ ಸುರೇಶ, ಮೈಲಾರರಾವ, ಸುಂದರರಾಜ ಅರಸು, ಡಾ. ರಂಗಾರೆಡ್ಡಿ ಕೋಡಿರಾಂಪುರ, ಬೆಳಗಾವಿಯ ಹವ್ಯಾಸಿ ರಂಗಭೂಮಿ ಕಲಾವಿದರಾದ ಕರಡಿಪುರದಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದ ನಾನು, ಶ್ರೀ ಮತ್ತು ಶ್ರೀಮತಿ ರತ್ನಾ ನಾಗೇಶ, ರಾಜಪ್ಪ ದಳವಾಯಿ, ಕಾ.ವೆಂ.ಶ್ರೀನಿವಾಸಮೂರ್ತಿ, ಸಿ.ಬಿ.ಹೊನ್ನಯ್ಯ ಹಾಗೂ ಚಿತ್ರದ ತಾಂತ್ರಿಕ ವರ್ಗದವರು ಇಡೀ ‘ಕರಡಿಪುರ’ ಚಿತ್ರದ ಕಲಾವಿದರ ಬಳಗವೇ ಅಲ್ಲಿತ್ತು.
ಅಭಿನಂದನಾ ಸಮಾರಂಭದಲ್ಲಿ ಮೊದಲು ತುಮಕೂರ ಜಿಲ್ಲೆಯ ಶಿರಾ ತಲ್ಲೂಕದ ಬರಗೂರ ಗ್ರಾಮದ ಬಡ ಹಿಂದುಳಿದ ನಾಯಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಬರಗೂರ ರಾಮಚಂದ್ರಪ್ಪ ಅವರು, ಇಂದು ಅಂತರಾಷ್ಟ್ರೀಯ ಮಟ್ಟದ ‘ಲಿಡ್ಸ್’ ಚಲನಚಿತ್ರೋತ್ಸವದಲ್ಲಿ ಅವರ ಚಿತ್ರಗಳು ಪ್ರದರ್ಶನಗೊಳ್ಳುವವರೆಗೆ ಬೆಳೆದು ನಿಂತಿದ್ದಾರೆ. ಕನ್ನಡ ನಾಡು ಕಂಡ ಪ್ರತಿಭಾವಂತ, ಚಿಂತನಶೀಲ, ಮನುಷ್ಯತ್ವಕ್ಕೆ ಸ್ಪಂದಿಸುವ, ಬರಡತೆಗೆ ಜೀವತುಂಬುವ, ನಿರ್ದೇಶಕ ಬರಗೂರ ಅವರನ್ನು ಮಧುಗಿರಿಯ ಅಭಿಮಾನಿಗಳೂ, ತುಮಕೂರಿನ ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ ಅವರಿಂದ ಶಾಲು ಹೊದಿಸಿ, ಅಭಿನಂದನಾ ಪತ್ರ ಅರ್ಪಿಸಿ, ನೆನಪಿನ ಕಾಣಿಕೆಯೊಂದಿಗೆ ಸತ್ಕಾರ ಮಾಡಿ ಗೌರವಿಸಿದರು.
ಅದೇ ರೀತಿ ‘ಕರಡಿಪುರ’ ತಂಡದ ಎಲ್ಲ ಕಲಾವಿದರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಆತ್ಮೀಯ ಸತ್ಕಾರಕ್ಕೆ, ಅಭಿನಂದನೆಗೆ ಋಣಿಯಾಗಿ ಮಾತಾಡಿದ ಶ್ರೀ ಬರಗೂರ ಅವರು ಇಂದಿನ ಚಿತ್ರರಂಗ, ಅದರಲ್ಲಿ ತೊಡಗಿಸಿಕೊಂಡ ನಿರ್ಮಾಪಕ, ನಿರ್ದೇಶಕ, ನಾಯಕ ನಟ ನಟಿಯರು, ಬರಿ ಬಣ್ಣದ ಆಕರ್ಷಣೆ, ಅಗ್ಗದ ಜನಪ್ರಿಯತೆಗಳ ಬೆನ್ನಟ್ಟಿ, ಮನುಷ್ಯನ ಬದುಕು ಸೃಜನಶೀಲ ಸಾಹಿತ್ಯ, ಭವಿಷ್ಯದಲ್ಲಿ ನಾಗರೀಕತೆ, ಮಕ್ಕಳ ಮೇಲಾಗುವ ಪರಿಣಾಮ, ಇವುಗಳ ಬಗ್ಗೆ ಗಮನ ಹರಿಸದೆ, ಬರಿ ದುಡ್ಡು, ಜನಪ್ರಿಯತೆ ಎನ್ನುತ್ತಾ ಸಮಾಜಕ್ಕೆ, ಭವಿಷ್ಯದ ಬದುಕಿಗೆ, ನಾಗರೀಕತೆಗೆ ತುಂಬಲಾರದ ನಷ್ಟ, ಹಾನಿಯಾಗುತ್ತಿದ್ದರೂ ಹಾನಿ ಮಾಡುತ್ತಿರುವವರ ಕಡೆ ಗಮನ, ಎಚ್ಚರ ವಹಿಸದಿದ್ದರೆ ಬರಲಿರುವ ನವಪೀಳಿಗೆಗೆ, ಸಮಾಜಕ್ಕೆ ಅಪಾಯ ಕಾದಿದೆ ಎಂದು ಇಂದಿನ ಚಿತ್ರರಂಗದ ದುಃಸ್ಥಿತಿಯ ಬಗ್ಗೆ ನೊಂದು ಮಾತಾಡಿದರು.
ಮನುಷ್ಯ ಬೆಳೆದಂತೆ, ದೊಡ್ಡವನಾದಂತೆ ಮಗುವಿನ ಮನಸ್ಸು, ಅಳವಡಿಸಿಕೊಂಡು ಮಗುವಾದಾಗಲೇ ಮನುಷ್ಯನ ಬದುಕಿಗೆ ದೊಡ್ಡತನಕ್ಕೆ ಸಾರ್ಥಕ ಎಂದು ಆಶಯ ವ್ಯಕ್ತಪಡಿಸಿದರು.
ಅಭಿನಂದನೆಗೊಂಡು ಮಾತಾಡಿದ ಖ್ಯಾತ ನಟ ನಿರ್ಮಾಪಕ, ಶ್ರೀ ಬಿ.ಸಿ.ಪಾಟೀಲ ಅವರು ಬರಗೂರ ಅವರು ಚಿಂತನಶೀಲ, ಪ್ರತಿಭೆಯ ಖಣಿ ಎನ್ನುತ್ತಾ ಅವರ ಬಗ್ಗೆ ಅಪಾರ ಗೌರವವಿರುವುದಾಗಿ ಹೇಳಿದರು. ಅವರ ಕರಡಿಪುರದಲ್ಲಿ ಅಭಿನಯಿಸಿರುವುದು ನನಗೆ ಎಲ್ಲಿಲ್ಲದ ಖುಷಿಯಾಗಿದೆ ಎನ್ನುತ್ತಾ, ಬರಗೂರವರ ‘ಕರಡಿಪುರ’ ಇಂಗ್ಲೆಂಡಿನ ಲಿಡ್ಸ್‌ದಲ್ಲಿ ನಡೆದ ಪ್ರತಿಷ್ಟಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರದರ್ಶನ ಗೊಂಡಂತಹದು ಇಡೀ ನಮ್ಮ ದೇಶದ ಒಂದೇ ಒಂದು ಚಿತ್ರವಾಗಿದ್ದರೂ, ಅದರಲ್ಲಿ ನಮ್ಮ ರಾಜ್ಯದ ಕನ್ನಡ ಚಿತ್ರವೆಂಬ ಹೆಗ್ಗಳಿಕೆಯು ಹೆಮ್ಮೆಯ ವಿಷಯವಾಗಿದ್ದರೂ, ನಮ್ಮ ಸರ್ಕಾರ ಮಟ್ಟದಲ್ಲಿ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲವೆಂಬುದು ಕನ್ನಡಿಗರಿಗೆಲ್ಲಾ ನಾಚಿಕೆಪಡುವಂತಹದೆಂದು ವಿಷಾದಿಸಿದರು.
ಚಿತ್ರತಾರೆಯರಾದ ಕುಮಾರಿ ತಾರಾ, ಕರಿಬಸವಯ್ಯ, ಬಿ.ಸಿ.ಪಾಟೀಲ, ಶ್ರೀಮತಿ ರಾಧಾ ರಾಮಚಂದ್ರ ತಮ್ಮ ಚಿತ್ರಗಳಲ್ಲಿನ ಅಭಿನಯ ಹಾಗೂ ಹಾಡುಗಳನ್ನು ಹಾಡಿ ಅಲ್ಲಿ ನೆರೆದ ಪ್ರೇಕ್ಷಕ-ಜನಸಮೂಹವನ್ನು ಮನರಂಜಿಸಿದರೂ ಅವರ ಅಭಿನಯ ಹಾಡಿಗೆ ಜನ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಭರತಖಂಡದಿಂದ ಲೀಡ್ಸ್‌ದವರೆಗಿನ ಬರಗೂರರ ಹಬ್ಬದ ಉತ್ಸಾಹ, ಮಧುಗಿರಿಯ ಉಮೇಶರವರ ಚಾಲನೆಯಲ್ಲಿ ಮಧುಗಿರಿಯ ಆಕಾಶಚುಂಬಿಸುವ ಕರಿಕಲ್ಲಿನ ಬೆಟ್ಟಗಳಿಂದ ಸಂತಸದ ಅಲೆಗಳು ತೇಲುತ್ತಿದ್ದವು.
*****