ನನ್ನ ಕಾರೀಗ ಟೀಪಾಟ್ ಆಗಿದೆ
ಇಲ್ಲದಿದ್ದರೆ ನೀನದನ್ನ ಉಪಯೋಸಬಹುದಿತ್ತು
-ಎಂದಳು ಏಂಬರ್
ನಾನು ಭಾರತ ಬಿಡುವ ಮೊದಲು
ಹೇಗೆ?
ಹೇಗೆಂದರೆ ಹೇಗೆ-
ಸಾರೋಟಾಗಲಿಲ್ಲವೆ
ಕುಂಬಳ ಕಾಯಿ!
ಏಂಬರಿನ ಕಾರಿಗೆ ದುಂಡನೆ ಹೊಟ್ಟೆ
ಕೈಬಾಯಿ ಹಿತ್ತಾಳೆಯ ಮೈ
ಬರುವುದನ್ನ ಊಹಿಸಿಕೊಂಡೆ
ಕಾರು ಟೀಪಾಟ್ ಆದ್ದು ನಿಜ
ಅಗಿ ಬ್ರಿಸ್ಟಲಿನ ಒಂದು
ಆಂಟೀಕ್ ಶಾಪಿನಲ್ಲಿ ಕುಳಿತಿದೆ
ಪೌಂಡಿನ ಬೆಲೆಯೇರಿದಂತೆ
ಅದರ ಬೆಲೆಯೂ ಏರುತ್ತಿದೆ
ಅಮೇರಿಕಾದಿಂದ ಬಂದ
ಬೇಸಿಗೆಯ ಪ್ರವಾಸಿ
ಕುತೂಹಲದಿಂದ
ಅದರ ಮೈ ತಡವುತ್ತಾನೆ
ಅಲ್ಲಿಲ್ಲಿ ಹಿಡಿದ ಜಿಡ್ಡಿನಲ್ಲಿ
ತನ್ನ ಪೂರ್ವದ ಸಂಸ್ಕಾರ
ಹುಡುಕುತ್ತಾನೆ
ಮುದುಡುತ್ತದೆ ಟೀ-ಪಾಟ್
ಎಲ್ಲಿ ತನ್ನ ನಿಜ
ಹೊರ ಬೀಳುತ್ತದೋ ಎಂದು
ಅಮೇರಿಕದ ಹೆದ್ದಾರಿಗಳಲ್ಲಿ
ಬ್ರಿಟಿಷ್ ಕಾರಿನ ಪಾಡು
ಯಾರಿಗೆ ಬೇಕು ?
ಯಾಕೆಂದರೆ ಸರಿ ರಾತ್ರಿ ಹೊತ್ತಿಗೆ
ಟೀಪಾಟಿಗೆ ಕಾರಿನ ರೂಪ ಬರುತ್ತದೆ
ಮುಂಜಾವದ ತನಕ
ರೋಡಿನಲ್ಲಿ ಓಡುತ್ತಿರುತ್ತದೆ
ಏಂಬರ್ ಬರುವ ತನಕ
ಈ ಗತಿ ಅದಕ್ಕೆ
ಏಂಬರ್ ಮಾತ್ರ ಈಗ ಹೈದರಾಬಾದಿನಲ್ಲಿ
ಟೀಪಾಟ್ ಬ್ರಿಸ್ಟಲಿನಲ್ಲಿ
ಆಕೆ ಬರದಿದ್ದರೆ?
ಭಾರತದಲ್ಲಿ ತನ್ನ ನೆಲೆ
ಕಂಡಿದ್ದರೆ?
ಇತ್ತ ಅಮೇರಿಕದ ಪ್ರವಾಸಿಯ ಅನಾಥ ಪ್ರಜ್ಞೆ
ತಟ್ಟನೆ ಕೆರಳಿದರೆ ?
ಒಂದು ಕಾರಿನ (ಅಥವ ಟೀಪಾಟಿನ)
ಗತಿಯೇನು?
ಇವೆಲ್ಲ ಡಾಲರಿನ ಪ್ರಶ್ನೆಗಳು!
*****