ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್ ಭೇಟಿಯಾದರು. ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು. ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ ಆರ್ಡರ್ ಕೊಟ್ಟು ಪಾಟೀಲರನ್ನು ಕೇಳಿದೆ:
“ನಿಮ್ಮ ಶಿಕ್ಷಕ ವೃತಿ ಹೇಗೆ ನಡೆದಿದೆ?”
“ಬಹಳ ಆರಾಮಾಗಿದೆ” ಎಂದರು ಪಾಟೀಲ ಸರ್.
“ನಿಮ್ಮ ಶಾಲೆಯಲ್ಲಿ ಎಷ್ಟು ತರಗತಿಗಳಿವೆ?”
“ಒಂದರಿಂದ ಐದು”
“ಸ್ಟಾಫ್?”
“ಫುಲ್ ಇದೆ”.
“ಕಟ್ಟಡ?”
“ಬಾಗಿಲು, ಕಿಟಕಿ, ಸೂರಿನ ಹಂಚು ಪೂರ್ತಿ ಇಲ್ಲದಿದ್ದರೂ ಸ್ವಂತ ಕಟ್ಟಡ ಇದೆ.”
“ಮಕ್ಕಳ ಸಂಖ್ಯೆ?”
“ಸಾಕಷ್ಟಿದೆ.”
“ದಾಖಲಾತಿ…. ಹಾಜರಾತಿ?”
“ಹಾಜರಾತಿಯದೇ ಸಮಸ್ಯೆ.”
“ಉಚಿತ ಪುಸ್ತಕ, ಬಟ್ಟೆ, ಬಿಸಿಯೂಟ ವ್ಯವಸ್ಥೆ ಇಲ್ಲವೆ?”
“ಎಲ್ಲ ಅನುಕೂಲವೂ ಇದೆ.”
“ಹಾಗಾದರೆ ಮಕ್ಕಳ ಹಾಜರಾತಿ ಕಮ್ಮಿ ಏಕೆ?”
“ಊಟದ ವೇಳೆಯಲ್ಲಿ ಹಾಜರಾತಿ ಹೆಚ್ಚಿಗಿರುವುದು.”
“ಮಕ್ಕಳ ಕಲಿಕೆಯ ಮಟ್ಟ.”
“ಆರಕ್ಕೇರದು ಮೂರಕ್ಕಿಳಿಯದು.”
“ಈ ಬಗ್ಗೆ ಸಹೇಬರು ಗಮನ ಹರಿಸುವುದಿಲ್ಲವೆ?”
“ಮಕ್ಕಳು ಶಾಲೆಗೆ ಬರಲಿ ಬಿಡಲಿ ವಾರ್ಷಿಕ ಪರೀಕ್ಷೆಯಲ್ಲಿ ಅವರೆಲ್ಲ ಪಾಸು.”
“ಓದು – ಬರಹ ಇಲ್ಲದೆ ಪಾಸಾಗುತ್ತಾರೆಯೇ ಅವರು?”
“ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು. ಅವರನ್ನು ನಪಾಸೂ ಮಾಡಬಾರದು.”
“ಅವರ ಪ್ರಗತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲವೆ ನೀವು?”
“ಹೆಡ್‌ಮಾಸ್ಟರ್ ಆ ಕಾಗದ ಈ ಕಾಗದ ಎಂದು ಆಫೀಸಿಗೆ ಅಲೆದಾಡುವರು. ನಮ್ಮಲ್ಲಿ ಕೆಲವರು ತರಬೇತಿಗೆ ಹೋಗುವರು. ಕೆಲವರಿಗೆ ಗಣತಿ ಕಾರ್ಯ ಅದು-ಇದು ಎಂದಿರುವುದು ಮಕ್ಕಳಿಗೆ ಕಲಿಸಲು ಪುರುಸೊತ್ತೇ ಸಿಗುವುದಿಲ್ಲ”
“ಸಾಹೇಬರು ನಿಮ್ಮ ಶಾಲೆಯ ತಪಾಸಣೆಗೆ ಬರುವುದಿಲ್ಲವೆ?”
“ಹಿರಿಯ ಸಾಹೇಬರು ವರ್ಷಕ್ಕೊಮ್ಮೆ ಬರುತ್ತಾರೆ, ಕಿರಿಯ ಸಾಹೇಬರು ಬೇಕೆನಿಸಿದಾಗ ದಿಢೀರನೆ ಪ್ರತ್ಯಕ್ಷರಾಗುತ್ತಾರೆ.”
“ಅವರಿಗೆ ಸಮಸ್ಯೆ ಅರ್ಥವಾಗುವುದಿಲ್ಲವೆ?”
“ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಪೂರೈಸಿಕೊಂಡು ಹೋಗುವ ಅವರು ಕಲಿಸುವುದರ ಬಗ್ಗೆ ಚಕಾರವೆತ್ತುವುದಿಲ್ಲ. ವಿಜಿಟ್ ಪುಸ್ತಕದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ನಮ್ಮ ಶಾಲೆ ಬಹಳ ನೆಮ್ಮದಿಯಾಗಿದೆ.”
“ಊರಿನವರು ಲಕ್ಷ್ಯ ಕೊಡುವುದಿಲ್ಲವೆ?”
“ನಮ್ಮದು ಸರಕಾರಿ ಶಾಲೆ, ಅದರ ಮೇಲೆ ಅವರ ಹಕ್ಕು ಇಲ್ಲ.”
“ಇದೆಲ್ಲ ವಿಚಿತ್ರವಲ್ಲವೇ?”
“ಅದೆಲ್ಲ ಕವರಿನ ಮಹಿಮೆ!”
“ಕವರು … ಏನದು?”
“ಸಾಹೇಬರಿಗೆ ನಾವು ಕವರು ಮುಟ್ಟಿಸುತ್ತೇವೆ.”
“ಏಕೆ?”
“ಕವರಿನಲ್ಲಿ ನಮ್ಮ ದುಡ್ಡಿರುವುದು.”
“ಸಾಹೇಬರಿಗೆ ಹಣ ಏಕೆ? ಅವರಿಗೆ ಪಗಾರ ಇರುವುದಿಲ್ಲವೆ?”
“ಪಗಾರ ಅವರ ಸಂಸಾರಕ್ಕೆ ನಮ್ಮ ದುಡ್ಡು ಅವರ ಇತರೆ ಖರ್ಚಿಗೆ.”
‘ಇದೆಂಥ ವ್ಯವಸ್ಥೆ?”
“ನಮ್ಮ ದೋಷಗಳನ್ನು ಸಾಹೇಬರು ಮುಚ್ಚಿಕೊಳ್ಳುತ್ತಾರೆ. ಸಾಹೇಬರ ದೋಷಗಳನ್ನು ದೊಡ್ಡ ಸಾಹೇಬರು. ಅವರ ಮೇಲಿನವರ ದೋಷಗಳನ್ನು ಅದಕ್ಕೂ ಮೇಲಿನವರು ಬೇರಿನಿಂದ ಟೊಂಗೆಯ ತುದಿತನಕ ಇದೇ ವ್ಯವಸ್ಥೆ ಇರುವುದು.”
“ಶಾಲೆ ಮತ್ತು ಮಕ್ಕಳ ಗತಿ?”
“ದೇವರಿಗೇ ಬಿಟ್ಟದ್ದು!”