ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ
ಹಸಿದು ಮೌನವಾದ ಜಗಕೆ ಮಾತು ಕಲಿಸಿತು
ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ
ಸಲಿಲ ಸೋಂಪು ವೀಣೆ ಮಿಡಿಯಿತು
ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು
ಹಸಿ ಚಿಮ್ಮಿ ಹರ್ಷ ಹೊಮ್ಮಿ ಹೋಂಪುಳಿ ಮಾಡಿತು
ಸೃಷ್ಟಿ ಸವಿಯು ವೃಷ್ಟಿ ಕರೆಗೆ ಕೈಯ ಬೀಸಿತು
ಗಾಳಿ ಓಡಿ ಜಗದೊಳಾಡಿ ಈಜು ಬಿದ್ದಿತು
ವರ್ಷಕಾಲ ಕೊಳಲ ಗಾನ ಹರ್ಷಕಂಠ ಕೂಗಿತು
ರವಿಯು ಬಾಡಿ; ಸಂಜೆ ಮೂಡಿ; ಎಲ್ಲಿಗೋ ಓಡಿ
ಮಿಂಚು ಮಿನುಗು, ನಾದ ಗುಡುಗು, ಹನಿಯು ಕುಣಿಯಿತು
ಕಾಡು ನಾಡು ಗಗನಬೀಡು ಸಗ್ಗವನೇ ಮಾಡಿತು
ಲತೆಯು ಉಬ್ಬಿ ತರುವ ತಬ್ಬಿ ಹೂವು ಕಾಯಿ ಸುರಿಸಿತು
ಮುಗಿಲದಾನ ಹಸಿರು ಶಾಲು ಸೃಷ್ಟಿ ಎಲ್ಲ ಹೊಚ್ಚಿತು
ಬೀಜ ಒಡೆದು, ಕುಡಿಗೆ ನೆಗೆದು ಚಲ್ವ ಚಿಗುರು ಕಂಡಿತು
ವಿಶ್ವವೆಲ್ಲ ನಲಿದು ನಿಂತು ಯೌವನವು ಹೊಮ್ಮಿತು
*****