ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ?
ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ
ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ?
ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ
ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು
ಮಣ್ಣು ಕೊಟ್ಟಿಹ ದೇಹ ಮಣ್ಣಿಗರ್ಪಿತವಹುದು
ಮಣ್ಣಿಗೆ ಮರೆತು ಅನ್ನುವೆವು ‘ನಾವು’ ಎಂದು
ದೇಹ ನಾವಲ್ಲ; ಮಣ್ಣಹುದು, ಮಣ್ಣು ಮಣ್ಣಿಗಾಗಿಹುದು
ನೀವು ಗಳಿಸಿದ ದೀಪ ಮೂರುಸಾವಿರ ದೀಪ
ಆ ದೀಪ ಕಿರಿಯಹುದೇ? ಕೊನೆಯಹುದೇ? ಹೇಳಿ
ಆರದಾ ದೀಪ ಗುರುಸಿದ್ಧ ನಂದಾದೀಪ
ಗುರುಸಿದ್ಧದೇವರಳಿದಿಲ್ಲ; ಅಳಿದುದವರ ದೇಹ ಕೇಳಿ
ಗಂಗಾಧರ ವಾಣಿಜ್ಯ ವಿದ್ಯಾಲಯದ ವಾಣಿಯವರು
ಶಾರದೆಯ ವೀಣೆಯದೋ ನುಡಿಸಿತವರ ಕೃಪಾ ಸುಧೆ
ಕಾಡಸಿದ್ಧೇಶ್ವರನ ಗುರುಸಿದ್ಧನಾಶ್ರಯಿಸಿಹನು
ಅತನು ಬೆಳೆಯುತೆ; ಆಶ್ರಯದಾತನಳಿಯಬಹುದೇ?
ಕಿರಿಯರಿಗೆ ಹಿರಿಯರಿಗೆ ನೀಡಿತವರ ಕಾಮಧೇನು ಕರವು
ವಿದ್ಯೆಯನು, ಬುದ್ಧಿಯನು, ಪುಣ್ಯವನ್ನು ಧರೆಯೊಳು
ನಾವುಂಡ ಅಂಮೃತದಲಿ ಅವರಾತ್ಮ ಕಾಣುವೆವು
ಅವರ ತತ್ವ ಕಳೆ ಏರಿ ಬೆಳೆಯುತ್ತಿದೆ ಭುವಿಯೊಳು
ಶಿವಯೋಗ ದಿನದಂದು ಗುರುಸಿದ್ಧ ಶಿವಯೋಗಿ
ಶಿವನೊಳೊಂದಾಗಿ ಗಂಗಾಧರ ಶಿವಯೋಗಿ ರೂಪತಾಳಿದರು
ಮೂರುಸಾವಿರ ಮಠದ ಸರ್ವಭಕ್ತರಿಗೆ ಆಶೀರ್ವದಿಸಿ
ರಾಜೇಂದ್ರಯೋಗಿಯದೋ ನಿಜಸಾಕ್ಷಾತ್ಕಾರ ತೋರುತಿಹರು
*****