ಇಳಕಲ್ಲಿನ ಭವ್ಯ ದರ್ಗಾ ನನ್ನ ಪ್ರೀತಿಯ ಪ್ರಶಾಂತ ವಿಹಾರ ಸ್ಥಾನ. ಇಂದು ಹೈವೇ ರಾಕ್ಷಸನ ಹಾವಳಿಗೆ ತುತ್ತಾಗಿ ಆ ದರ್ಗಾದ ಅಖಂಡ ಶಾಂತಿಗೆ ಭಂಗ ಬಂದಿದೆ. ಆದರೆ ಆ ಕಾಲದಲ್ಲಿ ಅದೇ ದರ್ಗಾ ಸುಂದರ ಸುಖದ ಶಾಂತಿಯ ಪರಿಸರವಾಗಿತ್ತು.
ನನಗೆ ಭಾರಿ ಖುಷಿ ಕೊಟ್ಟ ಸಂಗತಿಯೆಂದರೆ ಈ ದರ್ಗಾದ ಮೇಲೆ ಕುಳಿತುಕೊಳ್ಳುವ ಸಾವಿರಾರು ಪಾರಿವಾಳಗಳು. ಅದೊಂದು ಪಾರಿವಾಳಗಳ ಪರಿಸೆ, ಎಷ್ಟು ನೋಡಿದರೂ ಮನ ತಣಿಯದು. ಈ ಪಾರಿವಾಳಗಳಿಗೆ ಕಾಳು ಹಾಕುವ ಭಕ್ತರೂ ಸಾಕಷ್ಟು ಜನ.
ಇಂಥ ಸಮಯದಲ್ಲಿ ಒಂದು ಅತ್ಯಗಾಧ ಅತ್ಯದ್ಭುತ ಸಂಗತಿ ನಡೆದದ್ದನ್ನು ಹೇಗೆ ಮರೆಯಲಿ? ಆಗಸದಿಂದ ಹಾರಿಬಂದ ಒಂದು ಪಾರಿವಾಳದ ಕಾಲಿಗೆ ಸುತ್ತುಹಾಕಿದ್ದ ಒಂದು ಕಾಲುಂಗುರವನ್ನು ಯಾರು ನೋಡಿದರು. ಹರಸಾಹಸ ಮಾಡಿ ಆ ಪಾರಿವಾಳ ಹಿಡಿದರು. ಆ ಪಾರಿವಾಳದ ಕಾಲಿಗೆ ಕಟ್ಟಿದ ದೇವಲೋಕದ ಆ ಉಂಗುರ ಬಿಚ್ಚಿದರು. ಅದು ಯಾರಿಗೂ ಅರ್ಥವಾಗದ ಚಿತ್ರಲಿಪಿ! ವಿಚಿತ್ರ ಲಿಪಿ! ಸುದ್ದಿ ಸಿಡಿಲಾಗಿ ಹಬ್ಬಿತು. ಅಸಂಖ್ಯ ಜನರು ತಂಡೋಪತಂಡವಾಗಿ ಬಂದು ಆ ದೇವ ಲೋಕದ ಅತಿಥಿಯನ್ನು ನೋಡಿ, ಧನ್ಯತೆಯಿಂದ ಕೈ ಮುಗಿಯ ತೊಡಗಿದರು. ಅನೇಕ ಭಕ್ತರು ದೇವರ ಈ ಪವಾಡಕ್ಕೆ ತಬ್ಬಿಬ್ಬಾಗಿ ಕಾಣಿಕೆಯನ್ನು ಸಲ್ಲಿಸು ತೊಡಗಿದರು. ಆ ಮುದ್ದು ಪಾರಿವಾಳ ಮಾನವ ಲೋಕಕ್ಕೆ ಮುಗಿಲ ಲೋಕದಿಂದ ಹಾರಿಬಂದ ಜನ ದೇವತೆ ಯಾಯಿತು!
ಆ ಕಾಲಕ್ಕಾಗಲೇ ನಾನು ಹೊರದೇಶಗಳಿಂದ ವಲಸೆ ಬರುವ ಹಕ್ಕಿಗಳ ಕುರಿತು ಅನೇಕ ಲೇಖನಗಳನ್ನು ಆಸಕ್ತಿಯಿಂದ ಓದಿದ್ದೆ. ನನಗೇನೋ ಸಂಶಯ ಬಂತು! ನಾನು ಭಕ್ತಿಯಿಂದ ಆ ಮುಲ್ಲಾಸಾಬನ ಬಳಿಗೆ ಕೈ ಮುಗಿದು ಹೋದೆ. ಆತ ನನ್ನ ಮೇಲೆ ತುಂಬಾ ತುಂಬಾ ಪ್ರೀತಿ ಇರಿಸಿದ್ದ. ಪಕ್ಷಿಯ ಕಾಲಿನ ಉಂಗುರ ಅವನೇ ನನ್ನ ಮುಂದೆ ಮೆಲ್ಲನೆ ಬಿಚ್ಚಿದ. ಆ ಉಂಗುರ ಪ್ಲಾಸ್ಟಿಕ್ ಥರ ಸುರುಳಿಯಾಗಿತ್ತು. ಆ ಸುರುಳಿ ಮೆಲ್ಲನೆ ತೆರೆದ. ಅದರಲ್ಲಿದ್ದ ಚಿತ್ರಲಿಪಿ ಕಂಡು ನಾನು ದಂಗು ದಕ್ಕಾಗಿ ಹೋದೆ! ನನ್ನ ಪುಣ್ಯಕ್ಕೆ ಆ ಲಿಪಿಯ ಕೆಳಗೆ ಟೋಕಿಯೋ ೭೦ ಎಂದು ಇಂಗ್ಲೀಷಿನಲ್ಲಿ ಬರೆದದ್ದು ಕಂಡಿತು! ನನ್ನ ಅನುಮಾನಕ್ಕೆ ಜಾಗವೇ ಉಳಿಯಲಿಲ್ಲ. ಅದು ಜಪಾನಿ ಚಿತ್ರಲಿಪಿ ಅಂತ ಖಾತ್ರಿ ಮಾಡಿಕೊಂಡೆ. ತಕ್ಷಣ ಆ ಚಿತ್ರಲಿಪಿಯನ್ನು ಅದರಂತೆಯೇ ನನ್ನ ನೋಟ್ ಬುಕ್ಕಿನಲ್ಲಿ ಕಾಪಿ ಮಾಡಿಕೊಂಡೆ. ಅಂದೆ ಆ ಲಿಪಿಯ ಬರಹವನ್ನು ಪಕ್ಷಿ ಸಮಾಚಾರದೊಂದಿಗೆ ಸೇರಿಸಿ ದಿಲ್ಲಿಯ ಜಪಾನಿ ಎಂಬಸಿಯ ಅಂಬ್ಯಾಸಿಡರನಿಗೆ ಪತ್ರ ಬರೆದು ಅಂಚೆ ಡಬ್ಬಿಗೆ ಹಾಕಿದೆ. ನನ್ನ ಕೆಲಸ ಮುಗಿಯಿತೆಂದು ಬೆಚ್ಚಗೆ ಕುಂತೆ!
ಅದ್ಭುತ! ಆಶ್ಚರ್ಯ! ಕೆಲವೇ ದಿನಗಳಲ್ಲಿ ಟೋಕಿಯೋದಿಂದ ಒಂದು ಪತ್ರ ನನಗೆ ಬಂತು. ಅದೊಂದು ವ್ಯಾಕರಣ ಸರಿ ಇಲ್ಲದ ಇಂಗ್ಲಿಷ್ ಪತ್ರ. ಪತ್ರ ಬರೆದವಳು ಜಪಾನಿನ ಸುಂದರಿ! ಅಬ್ಬಬ್ಬಾ! ನನಗೆ ತೇಕು ಹತ್ತಿತು!
ಆ ಹುಡುಗಿಯ ಪತ್ರದಿಂದ ನನಗೆ ಗೊತ್ತಾದ ಸಂಗತಿಯೆಂದರೆ…. ನಾನು ದಿಲ್ಲಿಯ ಜಪಾನ ಎಂಬೆಸಿಗೆ ಬರೆದ ಪತ್ರವನ್ನು ಜಪಾನ ತುಂಬಾ ರೇಡಿಯೋ, ಟಿವಿ, ಪತ್ರಿಕೆ, ಸೈನ್ಸ್ ಮ್ಯಾಗ್ಜಿನ್ ಗಳಲ್ಲೆಲ್ಲಾ ಹೈಲೈಟ್ ಆಗಿ ಪ್ರಸಾರ ಮಾಡಿದ್ದರಂತೆ. ಆ ಅಡ್ರೆಸ್ ಹಿಡಿದು ಆ ಹುಡುಗಿ ಆ ಪತ್ರ ನನಗೆ ಬರೆದಿದ್ದಳು. ಅದರೊಂದಿಗೆ ಪಕ್ಷಿಯ ಖರ್ಚಿಗಾಗಿ ಒಂದು ಡಾಲರ್ ನೋಟು ಇಟ್ಟಿದ್ದಳು. ಅದನ್ನು ದರ್ಗಾ ಕಮೀಟಿಯವರಿಗೆ ಕೊಟ್ಟೆ. ಅವರು ಆ ಡಾಲರ್ ನೋಟನ್ನು ಕನ್ನಡಿ ಹಾಕಿಸಿ ಎಲ್ಲಾ ಜನರ ಪ್ರದರ್ಶನಕ್ಕೆ ಇಟ್ಟುಬಿಟ್ಟರು!
ಮುಂದೆ ಎರಡೇ ದಿನದಲ್ಲಿ ನನಗೆ ಟೋಕಿಯೋದ ಒಂದು ಪಕ್ಷಿ ಸಂಸ್ಥೆಯಿಂದ ಪತ್ರ ಬಂತು! ಆ ಪಾರಿವಾಳ ತಾವೇ ಬಿಟ್ಟಿದ್ದೆಂದು… ಅದಕ್ಕೆ ಯೋಗ್ಯ ರಕ್ಷಣೆ ಕೊಡಬೇಕೆಂದು ನನಗೆ ಹುಕುಂ ಮಾಡಿ ಬರೆದ ಪತ್ರ!
‘ಅಯ್ಯಯ್ಯೋ… ಎಂಥಾ ಪೇಚಿಗೆ ಸಿಕ್ಕಿಕೊಂಡೆನಪ್ಪಾ!’ ಎಂದು ನನಗೆ ನಾನೇ ವಿಲಿ ವಿಲಿ ಒದ್ದಾಡುತ್ತಾ. ಕುಳಿತ ಅದೇ ದಿನ ಸಂಜೆ ಇನ್ನೊಂದು ಭಯಾನಕ ಹೊಸ ಅನುಭವ! ಕೋಟಿಗೆ ಸೈನಿಕರು ಮುತ್ತಿಗೆ ಹಾಕಿದಂತೆ… ನಮ್ಮ ಮನೆಗೆ ಹತ್ತು ಜನ ಫಾರೆಸ್ಟ್ ಗಾರ್ಡ್ ಗಳು ಮುತ್ತಿಗೆ ಹಾಕಿದರು.
ಬಾಗಲಕೋಟೆಯಿಂದ ಚೀಫ್ ಫಾರೆಸ್ಟ್ ಆಫೀಸರ ನನ್ನ ಮುಂದೆ ಪ್ರತ್ಯಕ್ಷ ಆದರು. ಎಲ್ಲಿ ಎಲ್ಲಿ… ಆ ಪಾರಿವಾಳ ಎಲ್ಲಿ… ನಾನು ಫಾರೆಸ್ಟ್ ಆಫೀಸರ… ನನಗೆ ದಿಲ್ಲಿಯಿಂದ ಅರ್ಜೆಂಟ ವಯರ್ಲೆಸ್ ಮೆಸೇಜ್ ಬಂದಿದೆ. ಏರಿಯಾದಲ್ಲಿ ಏನೇ ಬಂದರೂ ಅದು ನನ್ನ ಬಳಿಯೇ ಬರತಕ್ಕದ್ದು… ಇದು ಕಾನೂನು… ಎಂದರು. ನನ್ನ ಗಂಟಲು ಒಣಗಿತು. ಅವರ ಜೀಪಿನಲ್ಲೇ ಕುಂತು ದರ್ಗಾಕ್ಕೆ ಹೋದೆ. ಆ ನನ್ನ ಮುದ್ದು ಗೆಳೆಯ ಜಪಾನಿನ ಪಾರಿವಾಳ ತೋರಿಸಿದೆ. ಆ ಪಾರಿವಾಳದ ಕಾಲಲ್ಲಿದ್ದ ಕಾಲುಂಗುರ ತೋರಿಸಿದೆ.
ತಕ್ಷಣ ಅವರು ನಮಗೆಲ್ಲಾ ಆಜ್ಞೆ ಮಾಡಿ… ಆ ಪಕ್ಷಿಗೆ ಸಂಪೂರ್ಣ ರಕ್ಷಣೆ ಕೊಡಲು ಹೇಳಿದರು. ಆ ಪಕ್ಷಿಯ ಕಾವಲಿಗೆ ಆ ಫಾರೆಸ್ಟ್ ಗಾರ್ಡ್ ಗಳನ್ನು ನೇಮಿಸಿದರು.
‘ನಾನು ನಾಳೆ ವಿಜಾಪುರದಿಂದ ಒಬ್ಬ ಪಕ್ಷಿ ತಜ್ಞ ಡಾಕ್ಟರರನ್ನು ಕರೆ ತರುತ್ತೇನೆ. ನಾಳೆ ಈ ಪಕ್ಷಿಯ ಹಿಕ್ಕಿ ಮೂತ್ರ, ರಕ್ತ ತಪಾಸಣೆ ಮಾಡಬೇಕು. ಒಂದು ಪಂಜರದಲ್ಲಿ ಈ ಪಕ್ಷಿಯನ್ನು ಬೆಂಗಳೂರಿಗೆ ನಂತರ ವಿಮಾನದಲ್ಲಿ ದಿಲ್ಲಿಗೆ ಕಳಿಸಬೇಕೆಂದು ನನಗೆ ಮೆಸೇಜ್ ಬಂದಿದೆ’ ಎಂದರು. ದರ್ಗಾದ ಮುಖಂಡರು ಆ ಪಕ್ಷಿಯ ಮೇಲಿನ ಅಭಿಮಾನದಿಂದ… ನಾವು ಪಕ್ಷಿಯನ್ನು ಕೊಡುವುದಿಲ್ಲ ಎಂದರು. ಆ ಆಫೀಸರ… ಕೂಡದು… ನಾನು ಫಾರೆಸ್ಟ್ ಆಫೀಸರ್… ಅದು ನನ್ನ ಅಡ್ಮಿನಿಸ್ಟ್ರೇಷನ್ ವಲಯಕ್ಕೆ ಸಂಬಂಧಿಸಿದ್ದು… ಇದು ಕಾನೂನು ಎಂದರು. ನಾನು ದರ್ಗಾದ ಯಜಮಾನರಿಗೆ ತಿಳಿಸಿ ಹೇಳಿ ಒಪ್ಪಿಸಿದೆ. ಈಗ ಆ ಪಕ್ಷಿ ದೇವಲೋಕದಿಂದ ಬಂದದ್ದಲ್ಲವೆಂದೂ… ಜಪಾನ ಲೋಕದಿಂದ ಬಂದದ್ದೆಂದೂ ಅವರಿಗೂ ಅರ್ಥ ಆಗಿತ್ತು!
ಮರುದಿನ ಮತ್ತೆ ಫಾರೆಸ್ಟ್ ಆಫೀಸರ್ ಪಕ್ಷಿ ತಜ್ಞ ಸರ್ಜನ್ ಒಬ್ಬರೊಂದಿಗೆ ಮತ್ತೆ ಮನೆಗೆ ಬಂದ. ಕ್ಯಾಮರಾಮೆನ್ ಜೊತೆಗಿದ್ದ.
ನಾವೆಲ್ಲರೂ ಕಣ್ಣೀರು ಇಡುತ್ತಾ ನಮ್ಮ ಮುದ್ದು ಪಾರಿವಾಳವನ್ನು ಬೀಳ್ಕೊಟ್ಟೆವು! ಲೇಖಿಯಲ್ಲಿ ಆ ಪಾರಿವಾಳದ ಹಸ್ತಾಂತರಕ್ಕೆ ಸಹಿ ಹಾಕಿದೆವು. ಪಕ್ಷಿಯ ಹಸ್ತಾಂತರದ ಚಿತ್ರ ಕನ್ನಡ ಇಂಗ್ಲಿಷ್ ಪ್ರಮುಖ ದಿನಪತ್ರಿಕೆಗಳಲ್ಲಿ ಗೋಚರಿಸಿತು. ಸಂಯುಕ್ತ ಕರ್ನಾಟಕ, ಡೆಕ್ಕನ್ ಹೆರಾಲ್ಡ್ ಗಳಲ್ಲಿ ಸುದ್ದಿ ಪ್ರಕಟವಾಯಿತು.
ಅಂದೆ ಆ ಪಾರಿವಾಳ ಬೆಂಗಳೂರಿಗೆ ಸಾಗಿಸಿ, ವಿಮಾನ ಮೂಲಕ ದಿಲ್ಲಿ ತಲುಪಿತು. ಇನ್ನೊಂದು ಅಂತರಾಷ್ಟ್ರೀಯ ವಿಮಾನ ಮೂಲಕ ಆ ಪಕ್ಷಿ ನನ್ನ ದೇಶ ಜಪಾನಿಗೆ ಸುರಕ್ಷಿತವಾಗಿ ತಲುಪಿತು! ನನಗೆ ಯಾರು ಕಿವಿಯಲ್ಲಿ ಹೇಳಿದರು.
ನೋಡ್ರಿ… ನಮ್ಮ ದೇಶದಲ್ಲಿ ಯಾರಾದರೂ ದಾರಿಯಲ್ಲಿ ಸತ್ತು ಬಿದ್ದರೆ ಹೊರಳಿ ಕೂಡ ನೋಡುವುದಿಲ್ಲ… ಆ ದೇಶದವರು ತಮ್ಮ ದೇಶದ ಒಂದು ಪಕ್ಷಿ ಗಾಗಿ ಎಂಥ ಶ್ರದ್ಧೆ ನಿಷ್ಠೆ ತೋರಿಸುತ್ತಾರೆ ನೋಡಿ.
*****