ಆ ಊರಿನಲ್ಲಿ ಅನೇಕ ಧರ್ಮಗಳಿಗೆ ಸೇರಿದ ಜನರಿದ್ದರು. ಅವರೆಲ್ಲರೂ ಮನುಷ್ಯರಾಗಿದ್ದರು. ಧರ್ಮದ ಆಚರಣೆಗಳನ್ನು ಶ್ರದ್ಧೆಯಿಂದಲೇ ಪಾಲಿಸುತ್ತಿದ್ದರು. ಅವೆಲ್ಲ ಅವರ ಮನೆಯ ಪರಿಧಿಗೆ ಸೀಮಿತಗೊಂಡಿದ್ದವು. ಹೊರಗೆ ಅವರೆಲ್ಲರೂ ಪರಸ್ಪರ ಪ್ರೀತಿಯಿಂದ ವ್ಯವಹರಿಸುತ್ತಿದ್ದರು. ಅವರ ಸಂಬಂಧ ತೀರ ಮಾನವೀಯವಾಗಿತ್ತು. ಒಂದೇ ಊರಿನವರು ಎಂಬ ಅಭಿಮಾನವಿತ್ತು. ಊರಿನ ಯಾವುದೇ ಕೆಲಸಗಳಲ್ಲಿ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಪಾಲ್ಗೊಳ್ಳುವರು. ಒಬ್ಬರಿಗೊಬ್ಬರು ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು.
ಶಾಂತಿ, ನೆಮ್ಮದಿಯ ಆ ಊರಿನ ದುರಾದೃಷ್ಟವೊ ಎಂಬಂತೆ ಒಂದಿನ ಅಲ್ಲಿ ಯಾರೋ ಬಂದು ಕೇಸರಿ ಧ್ವಜ ನೆಟ್ಟರು. ಸ್ವಲ್ಪ ದಿನಕ್ಕೆ ಹಸಿರು ಧ್ವಜ ಹಾರಾಡಿತು. ಮತ್ತೆ ಎಂಟು ದಿನಕ್ಕೆ ಬಿಳಿ ಧ್ವಜ ಕಂಡಿತು. ಜನರು ಧ್ವಜಗಳನ್ನು ಅಚ್ಚರಿಯಿಂದ ನೋಡಿದರೆ ಹೊರತು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಧ್ವಜ ನೆಟ್ಟವರು ಸುಮ್ಮನೆ ಕೂಡಲಿಲ್ಲ. ಹಗಲೆಂಬೊ ಹಗಲು, ರಾತ್ರಿಯೊಂಬೊ ರಾತ್ರಿ ಊರಿನ ಮನೆ, ಮಠ, ಮಂದಿರ, ಮಸೀದಿ, ಚರ್ಚು, ಬಸದಿ, ವಿಹಾರ, ಮರ, ಗೋಪುರ, ಅಂಗಡಿ, ಗಲ್ಲಿಗಲ್ಲಿ ರಸ್ತೆಗಳ ಚೌಕುಗಳಲ್ಲಿ ಹಸಿರು, ಕೇಸರಿ, ಬಿಳಿ ಧ್ವಜಗಳು ಪೈಪೋಟಿಯಲ್ಲಿ ಹಾರತೊಡಗಿದವು.
ಸಾವಕಾಶವಾಗಿ ಅವುಗಳ ಹೆಸರಲ್ಲಿ ವಾದ-ವಿವಾದ ಶುರುಗೊಂಡವು. ಅಂಥದ್ದನ್ನೇ ತಮ್ಮ ಜೀವನಕ್ಕೆ ಆಧಾರ ಮಾಡಿಕೊಂಡ ದರಿದ್ರ ಜನ ಸಮಸ್ಯೆಗಳನ್ನು ಹುಟ್ಟುಹಾಕಿ ಕೋಮುಕೋಮುಗಳ ನಡುವೆ ಬಿರುಕು ಮೂಡಿಸಿದರು. ಕಾಲು ಕೆದರಿ ಜಗಳ ತೆಗೆಯುವಂತೆ ಉತ್ಸವ, ಮೆರವಣಿಗೆ, ಜುಲೂಸು ಹೊರಡಿಸಿ ಪರಸ್ಪರ ಜಿಂದಾಬಾದ್, ಮುರ್ದಾಬಾದ್ ಎಂದು ಗಂಟಲು ಹರಿದುಕೊಳ್ಳುತ್ತ ಕಿಡಿಗೇಡಿಗಳು ಕಲ್ಲು ಎಸೆದಾಡಿದರು. ಮಂದಿರದಲ್ಲಿ ಆಕಳ ಮಾಂಸ, ಮಸೀದಿಯಲ್ಲಿ ಹಂದಿಯ ಮಾಂಸ ಬಿದ್ದಿರುವುದೆಂದು ಗುಲ್ಲು ಎಬ್ಬಿಸಿದರು. ಗೋಡೆಗಳ ಮೇಲೆ ರಕ್ತ ಕುದಿಸುವ, ಕಿಚ್ಚು ಹಬ್ಬಿಸುವ ಬರಹಗಳನ್ನು ಬರೆಸಿದರು. ಮಾರಕಾಸ್ತ್ರಗಳು ಜನರ ಕೈಗಳಿಗೆ ಬಂದವು. ಊರೆಂಬೊ ಊರು ರಣರಂಗವಾಗುತ್ತಿದ್ದಂತೆ ಹಿಂಡುಗಟ್ಟಲೇ ಪೋಲಿಸರು ವ್ಯಾನ್ ಇಳಿದರು. ಕರ್ಫ್ಯೂ ಸಾರಿದರು. ಓಡಾಡುವ ಜನರಿಗೆ ಲಾಠಿಯ ರುಚಿ ತೋರಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರು.
ಜನಜೀವನ ಅಸ್ತವ್ಯಸ್ತಗೊಮಡಿತು, ತಮ್ಮ ಊರು ಹೀಗೇಕೆ ರಾಕ್ಷಸವಾಯಿತು? ಮನೆಯೊಳಗೆ ಕುಳಿತು ತಹತಹಿಸಿದರು ಪ್ರಜ್ಞಾವಂತ ಜನ. ಅವರಿಗೆ ಕೇಸರಿ, ಹಸಿರು, ಬಿಳಿಯ ಧ್ವಜಗಳು ನೆನಪಾದವು.
ನಾಲ್ಕಾರು ದಿನಗಳ ಬಳಿಕ ಕರ್ಫ್ಯೂ ಸಡಿಲುಗೊಂಡಿತು.
ಒಬ್ಬೊಬ್ಬರಾಗಿ ಜನ ಹೊರಗೆ ಬಂದರು.
ಸ್ಮಶಾನದಂತೆ ಗೋಚರಿಸುತ್ತಿದ್ದ ಊರನ್ನು ನೋಡಲಾಗಲಿಲ್ಲ ಅವರಿಗೆ.
ಎತ್ತರೆತ್ತರವಾಗಿ ಹಾರಾಡುತ್ತಿರುವ ಧ್ವಜಗಳು ಅನಾಥಪ್ರಜ್ಞೆಯ ಸಂಕೇತದಂತೆ, ಜನರ ಬದುಕನ್ನು ನಾಶ ಮಾಡುವ ಪ್ರತೀಕದಂತೆ ಕಂಡವು.
ಮೊದಲಿನಂತೆ ಸುಮ್ಮನೆ ಕೂಡಲಿಲ್ಲ ಜನ. ಗುಂಪುಗುಂಪಾಗಿ ನೆರೆದು ಹಾರುತ್ತಿರುವ ಧ್ವಜಗಳನ್ನು ನಿರ್ಭಾವುಕರಾಗಿ ಇಳಿಸಿದರು. “ನಮಗೆ ಬೇಕಾಗಿದ್ದು ಬರಿ ಕೇಸರಿ ಧ್ವಜವಲ್ಲ, ಹಸಿರು, ಬಿಳಿ ಧ್ವಜಗಳಲ್ಲ. ಈ ಮೂರು ಬಣ್ಣಗಳ ಸಂಗಮದ ನಡುವೆ ಅಶೋಕ ಚಕ್ರದ ರಾಷ್ಟ್ರಧ್ವಜ ಬೇಕು. ಅದು ಯಾವಾಗಲೂ ಅರಳಿ ಕೊಂಡಿರಬೆಕು. ಮುಗಿಲೆತ್ತರಕ್ಕೆ ಹಾರಬೇಕು. ನಮ್ಮ ಅಭಿಮಾನದ, ಪ್ರೀತಿ, ಸಂತೋಷದ ಸಂದೇಶ ಸಾರಬೇಕು” ಎಂದು ಒಕ್ಕೊರಲಲ್ಲಿ ಉಲಿದರು.
“ಭಾರತ ಮಾತಾಕಿ ಜೈ” “ಮೇರಾ ಭಾರತ್ ಮಹಾನ್” ಅವರ ಜಯಘೋಷ ಆಕಾಶದಲ್ಲಿ ಮೊಳಗಿತ್ತು. ಧ್ವಜ ನೆಟ್ಟವರು ಅಲ್ಲಿಂದ ಕಿಮಿಕ್ ಎನ್ನದೆ ಕಾಲ್ದೆಗೆದಿದ್ದರು.
*****